ಬಹಿರಂಗ
ಜಾತಿಯಲ್ಲಿ ಕರಗಿಹೋದ ಮತ್ತೊಬ್ಬಳು ‘ಪ್ರಿಯಾಂಕ’
- ಸಿ.ಎಸ್.ದ್ವಾರಕಾನಾಥ್
ಹೈದರಾಬಾದಿನ ಪ್ರಿಯಾಂಕರೆಡ್ಡಿ ರೇಪ್ ಪ್ರಕರಣ ಬೆಳಕಿಗೆ ಬಂದ ದಿನವೇ ಮತ್ತೊಬ್ಬ ಪ್ರಿಯಾಂಕ(ಪಕ್ಕದಲ್ಲಿ ‘ರೆಡ್ಡಿ’ ಇರಲಿಲ್ಲ) ಎಂಬ ಹೆಸರಿನ ಹೆಣ್ಣು ಮಗಳೊಬ್ಬಳ ರೇಪ್ ಮತ್ತು ಕೊಲೆ ಕೇಸಿನಲ್ಲಿ ವಿವರ ಕಲೆಹಾಕಿ ಪೋಲಿಸ್ ಮಹಾ ನಿರ್ದೇಶಕರೇ ಮುಂತಾದವರಿಗೆ ಮನವಿಯೊಂದನ್ನು ನೀಡಲು ನಮ್ಮ ಕಛೇರಿಯಲ್ಲಿ ಕುಳಿತು ಡ್ರಾಪ್ಟ್ ಮಾಡುತಿದ್ದೆವು!?
ಈ ಪ್ರಿಯಾಂಕ ಪ್ರಕರಣ ನಡೆದದ್ದು ಜಮಖಂಡಿಯಲ್ಲಿ, ಈಕೆಯ ಅಪ್ಪ ಒಬ್ಬ ದೇವದಾಸಿಯ ಮಗ! ಈಕೆಯ ತಾಯಿ ಮಾದರ ಕುಲದ ಹೆಣ್ಣುಮಗಳು. ಹೈದರಾಬಾದಿನ ಪ್ರಿಯಾಂಕ ರೆಡ್ಡಿ ಪ್ರಕರಣದಲ್ಲಿ ಆರೋಪಿಗಳು ಸಣ್ಣಪುಟ್ಟ ಪೊರಕಿಗಳಾದರೆ, ನಮ್ಮ ಜಮಖಂಡಿಯ ಪ್ರಿಯಾಂಕ ಕೇಸಿನಲ್ಲಿ ಆರೋಪಿಗಳು ಪ್ರತಿಷ್ಟಿತರು, ಬಿಜೆಪಿ ಶಾಸಕರ ಸಂಭಂದಿಗಳು ಮತ್ತು ಒಂದು ದೊಡ್ಡ ವಿದ್ಯಾಸಂಸ್ಥೆಯ ಮುಖ್ಯಸ್ಥರು!!
ಆ ದಿನ ಇದ್ದಕ್ಕಿದ್ದಂತೆ ನಮ್ಮ ಬಾಸ್ಕರ್ ಪ್ರಸಾದ್ ಏಳೆಂಟು ಮಂದಿ ಉತ್ತರ ಕರ್ನಾಟಕದ ಗ್ರಾಮಸ್ಥರನ್ನು ಕರೆದುಕೊಂಡು ನಮ್ಮ ಕಛೇರಿಗೆ ಬಂದರು. “ಸರ್ ಇವರ ಮಗಳ ರೇಪ್ ಮತ್ತು ಕೊಲೆಯಾಗಿ ನಾಲ್ಕು ತಿಂಗಳಾಗಿದೆ.. ಈವರೆಗೂ ಯಾರನ್ನೂ ಅರೆಸ್ಟ್ ಮಾಡಿಲ್ಲ.. ವಿಚಾರಣೆ ಕೂಡ ನಡೆಸಿಲ್ಲ.. ಮಗಳನ್ನು ಕಳಕೊಂಡ ಈ ನತದೃಷ್ಟರು ನ್ಯಾಯಕ್ಕಾಗಿ ಕಂಬಕಂಬ ಅಲೆಯುತಿದ್ದಾರೆ.. ಇವರನ್ನು ಕೇಳುವವರಿಲ್ಲ.. ಅದಕ್ಕೇ ಇಲ್ಲಿಗೆ ಕರೆತಂದೆ..” ಎಂದರು. ನನಗೆ ತಕ್ಷಣ ಅನಿಸಿದ್ದು “ಬಾಸ್ಕರ್ ಪ್ರಸಾದ್ ಜಮಖಂಡಿಗೆ ಹೋಗಿ ಪ್ರತಿಭಟಿಸದೆ ಇಲ್ಲಿಗೇಕೆ ಬಂದರು..?” ಎಂಬುದು! ಮತ್ತೇ ಮರುಕ್ಷಣದಲ್ಲೇ ಅರ್ಥವಾಯಿತು!?
ವಿಜಾಪುರದ ದಾನಮ್ಮ ಎಂಬ ದಲಿತ ಹೆಣ್ಣುಮಗಳ ರೇಪ್ ಮತ್ತು ಕೊಲೆ ಪ್ರಕರಣದಲ್ಲಿ ಬಾಸ್ಕರ್ ಪ್ರಸಾದ್ ವಿಜಾಪುರಕ್ಕೇ ಹೋಗಿ ಆಗಿನ ಆರೋಪಿಗಳಾದ ಪ್ರತಿಷ್ಟಿತರ ವಿರುದ್ದ ಪ್ರತಿಭಟಿಸಿ ಜೈಲು ಸೇರಿದ್ದು! ಇಂದಿಗೂ ಆ ಕೇಸಿಗಾಗಿ ವಿಜಾಪುರಕ್ಕೆ ಅಲೆದಾಡುತ್ತಿರುವುದು ನೆನಪಾಯಿತು. ಕಡೆಗೆ ತಾನು ಒಬ್ಬಂಟಿಯಾಗಿಯೂ ಮತ್ತು ಲೇಖಕ ಕಾರ್ಪೆಂಟರ್ ಅವರೊಂದಿಗೆ ಜತೆಗೂಡಿಯೂ ಅನುಭವಿಸುತ್ತಿರುವ ಕಷ್ಟಕೋಟಲೆಗಳ ನೆನಪಾಯಿತು!
ಈಗಲೂ ರೇಪಿಗೆ ಒಳಗಾಗಿ ಸತ್ತಿರುವುದು ದಲಿತ ಹೆಣ್ಣುಮಗಳೇ ಈಗಲೂ ಆರೋಪಿ ಸ್ಥಾನದಲ್ಲಿರುವವರು ವಿಜಾಪುರದ ಆರೋಪಿಗಳಿಗಿಂತಲೂ ಪ್ರಭಾವಿತರೇ! ಈ ಕಾರಣಕ್ಕೆ ಈ ಪ್ರಕರಣದಲ್ಲಿ ಹಿಂದೆ ದುಡುಕಿದಂತೆ ದುಡುಕದೆ ಒಂದಷ್ಟು ಬುದ್ದವಂತಿಕೆಯಿಂದ ನಿಭಾಯಿಸಲು ಮತ್ತು ಕಾನೂನಾತ್ಮಕವಾಗಿ ಯೋಚಿಸಲು ನಮ್ಮ ಕಛೇರಿಗೆ ಬಂದಿದ್ದರು ಎನಿಸುತ್ತದೆ.
ಇಡೀ ಪ್ರಕರಣದ ವಿವರ ರೇಪ್ ಮತ್ತು ಕೊಲೆಯಾದ ಸಂತ್ರಸ್ಥೆಯ ಹೆತ್ತವರು ಹೇಳುವಂತೆ ಯತಾವತ್ತಾಗಿ, ಸಂಕ್ಷಿಪ್ತವಾಗಿ ಹೀಗಿದೆ…
ಪ್ರಿಯಾಂಕ, ಶಾಲಾ ದಿನಗಳಿಂದಲೂ ಚೂಟಿಯಿಂದಿದ್ದ ಹೆಣ್ಣುಮಗಳು, ಓದಿನಲ್ಲಿ ಸದಾ ಮೊದಲ ಸ್ಥಾನ. ಈಕೆ ಎಸ್.ಎಸ್.ಎಲ್.ಸಿ ಯಲ್ಲಿ ತೆಗೆದ ಉತ್ತಮ ಅಂಕ ನೋಡಿ ಇವಳ ತಾಯಿತಂದೆ ಇವಳ ಓದಿಗೆ ಇನ್ನಷ್ಟು ಪ್ರೋತ್ಸಾಹ ಕೊಡಲು ಚಿಮ್ಮಡ ಎಂಬ ಕುಗ್ರಾಮದಿಂದ ಜಮಖಂಡಿ ಎಂಬ ‘ಷಹರ’ಕ್ಕೆ ಕರೆತಂದು, ಕೂಲಿನಾಲಿ ಮಾಡಿ ಒಂದು ಲಕ್ಷ ರೂಗಳನ್ನು ಹೊಂದಿಸಿ “ರಾಯಲ್ ಪ್ಯಾಲೆಸ್ ಪಿ.ಯು.ಕಾಲೇಜು ಮತ್ತು ಹಾಸ್ಟೆಲ್, ಜಮಖಂಡಿ” ಗೆ ಸೇರಿಸಿದರು! ಈ ಪ್ರತಿಷ್ಟಿತ ವಿದ್ಯಾಸಂಸ್ಥೆ ಸ್ಥಳೀಯ ಬಿಜೆಪಿ ಶಾಸಕರಾದ ಆನಂದ ಸಿದ್ದು ನ್ಯಾಮಗೌಡರದು! ಇದರ ಛೇರ್ಮನ್ ಶಾಸಕರ ಸಹೋದರ ಬಸವರಾಜ ಸಿದ್ದು ನ್ಯಾಮಗೌಡರು.
ಪ್ರಿಯಾಂಕ ಹೊಸ ಕಲಿಕೆಯ ವಾತಾವರಣದಲ್ಲಿ ಕಲಿಯುತ್ತಾ ಅತ್ಯಂತ ಖುಷಿಯಿಂದಿದ್ದಳು, ಒಂದು ದಿನ ಅಪ್ಪನಿಗೆ ಪೋನ್ ಮಾಡಿ ತನಗೆ ಬಟ್ಟೆ ಕೊಂಡುಬರುವಂತೆ ಕೇಳಿದಳು. ಅಪ್ಪ ಅಮ್ಮ ಮಗಳಿಗೆ ಬಟ್ಟೆ ಕೊಡಲು ಹಾಸ್ಟೆಲ್ಲಿಗೆ ಬಂದರೆ ಹಾಸ್ಟೆಲ್ಲಿನ ದೊಡ್ಡ ಗೇಟ್ ತೆರೆಯಲು ವಾಚಮೆನ್ ಒಪ್ಪಲಿಲ್ಲ.
ಅಪ್ಪ ಅಮ್ಮ ಇಬ್ಬರೂ ವಾಚಮೆನ್ ಬಳಿ ಅಂಗಲಾಚುತಿದ್ದದ್ದನ್ನು ನೋಡಿ ಮಗಳು ಪ್ರಿಯಾಂಕ ಗೇಟಿನ ಬಳಿ ಓಡಿ ಬಂದು ಹೆತ್ತವರಿಂದ ಬಟ್ಟೆ ತೆಗೆದುಕೊಳ್ಳುತಿದ್ದಾಗ ಅದ್ಯಾಪಕರೊಬ್ಬರು ಗೇಟಿನ ಬಳಿ ಬಂದು ಅನಾವಶ್ಯಕವಾಗಿ ಕ್ಯಾತೆ ತೆಗೆದು ಪ್ರಿಯಾಂಕಳ ಅಪ್ಪ ಅಮ್ಮನೊಂದಿಗೆ ಪ್ರಿಯಾಂಕಳನ್ನೂ ಜಾತಿ ನಿಂದನೆಯ ಅವಾಚ್ಯ ಶಬ್ದಗಳಿಂದ ನಿಂದಿಸತೊಡಗಿದರು!
ಈ ಮದ್ಯೆ ಸದರಿ ಅದ್ಯಾಪಕ ಮತ್ತು ಪ್ರಿಯಾಂಕಳ ಪೋಷಕರ ನಡುವೆ ಒಂದಷ್ಟು ಮಾತಿನ ಚಕಮಖಿ ಕೂಡ ಲಘುವಾಗಿ ನಡೆದು ಹೋಯಿತು. ಕಡೆಗೆ ಪ್ರಿಯಾಂಕ ಅದ್ಯಾಪಕರ ಕ್ಷಮೆ ಕೇಳಿ ಅದ್ಯಾಪಕರೊಂದಿಗೇ ಒಳ ನಡೆದಳು, ಅಪ್ಪ ಅಮ್ಮ ಊರಿಗೆ ಹಿಂದಿರುಗಿದರು.
ಅದೇ ದಿನ ಸಂಜೆ ಪ್ರಿಯಾಂಕಳ ಅಪ್ಪನಿಗೆ ಹಾಸ್ಟೆಲ್ಲಿನ ವಾಚಮೆನ್ ಪೋನ್ ಮಾಡಿ ” ನಿಮ್ಮ ಮಗಳು ಆಸ್ಪತ್ರೆಗೆ ದಾಖಲಾಗಿದ್ದಾಳೆ ಹೊರಟು ಬನ್ನಿ..” ಎಂದಿದ್ದ! ಪ್ರಿಯಾಂಕಳ ಹೆತ್ತವರು ಗಾಬರಿಗೊಂಡು ಓಡಿಬಂದು ಆಸ್ಪತ್ರೆ ತಲುಪವಷ್ಟರಲ್ಲಿ ಪ್ರಿಯಾಂಕಳನ್ನು ಡಿಸಾರ್ಜ್ ಮಾಡಿಸಿಕೊಂಡು ಆಸ್ಪತ್ರೆಯಿಂದ ಹಾಸ್ಟೆಲ್ಲಿಗೆ ಕರೆದುಕೊಂಡು ಹೊರಟುಹೋಗಿದ್ದರು!?
ಪ್ರಿಯಾಂಕಾಳ ಪೋಷಕರು ಹಾಸ್ಟೆಲ್ಲಿಗೆ ಹೋದಾಗ ತಿಳಿದ ವಿಷಯವೇನೆಂದರೆ ತಮ್ಮ ಜತೆ ಅಂದು ಬೆಳಿಗ್ಗೆ ಜಗಳವಾಡಿದ್ದ ಆದ್ಯಾಪಕ ಪ್ರಿಯಾಂಕಳ ಕಪಾಳಕ್ಕೆ ಬಲವಾಗಿ ಹೊಡೆದ ಪರಿಣಾಮ ಪ್ರಿಯಾಂಕ ಪ್ರಜ್ನೆ ತಪ್ಪಿ ಬಿದ್ದಿದ್ದಳು! ನಂತರ ಆಸ್ಪತ್ರೆ ಸೇರಿಸಿ ಚಿಕಿತ್ಸೆ ಕೊಡಿಸಿ ಹಾಸ್ಟೆಲ್ಲಿಗೆ ವಾಪಸ್ಸು ಕರೆದೊಯ್ದಿದ್ದರು.
ಈ ವಿಷಯ ತಿಳಿದಾಕ್ಷಣ ಪ್ರಿಯಾಂಕಳನ್ನು ಹಾಸ್ಟೆಲ್ಲಿನಿಂದ ಕರೆದೊಯ್ಯಲು ಅವಳ ಪೋಷಕರು ತೀರ್ಮಾನಿಸಿದರು. ಅಷ್ಟರಲ್ಲಿ ರೀತಾ ಜೈನರ್ ಎಂಬ ಪ್ರಿನ್ಸಿಪಾಲರು ಇವರನ್ನು ಸಮಾದಾನಪಡಿಸಿ ಮುಂದೆ ಈ ರೀತಿಯ ಅನಾಹುತ ಆಗದಂತೆ ಎಚ್ಚರವಹಿಸುವುದಾಗಿ ದೈರ್ಯ ಹೇಳಿ ಕಳಿಸಿದರು.
ಈ ಘಟನೆಯ ನಂತರ ದಿನಾಂಕ 9ನೇ ಜುಲೈ 2019 ರಂದು ರಾತ್ರಿ 11 ಗಂಟೆಗೆ ಹಾಸ್ಟೆಲ್ಲಿನಿಂದ ಪ್ರಿಯಾಂಕ ತಂದೆಗೆ ಪೋನ್ ಮಾಡಿ “ನಿಮ್ಮ ಮಗಳು ಪ್ರಿಯಾಂಕ ಕಾಲೇಜು ಕಟ್ಟಡದ ನಾಲ್ಕನೇ ಮಹಡಿಯಿಂದ ಬಿದ್ದು ಸತ್ತಿದ್ದಾಳೆ..” ಎಂದರು! ಪ್ರಿಯಾಂಕಳ ಹೆತ್ತವರು ಎದೆಎದೆ ಬಡಕೊಂಡು ಗೋಳಾಡುತ್ತಾ ಅಲ್ಲಿಗೆ ಹೋದರೆ, ಹದಿನೇಳು ವಯಸ್ಸಿನ ಮಗು ಪ್ರಿಯಾಂಕಳನ್ನು ಪಕ್ಕಕ್ಕೆ ತಿರುಗಿಸಿ ಮಲಗಿಸಿದಂತೆ ವ್ಯವಸ್ಥೆ ಮಾಡಿದ್ದರು!
ಆಕೆಯ ಚಪ್ಪಲಿಗಳನ್ನು ಟೆರೇಸಿನ ಮೇಲೆ ಜೋಡಿಸಿ ಇಡಲಾಗಿತ್ತು!! ಅಲ್ಲಿಂದ ಆಚೆ ಜಮಖಂಡಿಯ ಗ್ರಾಮಾಂತರ ಠಾಣೆಯ ಪಿ.ಎಸ್.ಐ, ಸಿ.ಐ.ಪಿ ಮತ್ತು ಡಿ.ವೈ.ಎಸ್.ಪಿ ಗಳು ಈ ಕೇಸನ್ನು ಮುಚ್ಚಲು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಎಲ್ಲಾ ರೀತಿಯ ಕೆಲಸಗಳನ್ನೂ ಮಾಡತೊಡಗಿದರು! ಅಂದು ಪ್ರಿಯಾಂಕಳನ್ನು ಹೊಡೆದ ಅದ್ಯಾಪಕನಾದಿಯಾಗಿ ಆ ವಿದ್ಯಾಸಂಸ್ಥೆಯಲ್ಲಿನ ಯಾರ ಹೆಸರುಗಳನ್ನೂ ಹೊರಬಾರದಂತೆ ಎಚ್ಚರ ವಹಿಸಿದರು! ದೇಹವನ್ನು ಬೇಗ ಸುಡುವಂತೆ ಹೆತ್ತವರನ್ನು ಒತ್ತಾಯಿಸಿದರು!
ತಮಗೆ ಬೇಕಾದಂತೆ ಪೋಸ್ಟ್ ಮಾರ್ಟಂ ಮಾಡಿಸಿಕೊಂಡರು! ಮೊದಲಿಗೆ ಹೆತ್ತವರು ಕೊಟ್ಟ ‘ರೇಪ್ ಅಂಡ್ ಮರ್ಡರ್’ ದೂರನ್ನು ಕೂಡ ದಾಖಲಿಸಲಿಲ್ಲ! ಆ ಸಂಧರ್ಭದಲ್ಲಿ ಒಂದಷ್ಟು ದಲಿತ ಸಂಘಟನೆಗಳು ಬಂದಿದ್ದರಿಂದ ನಂತರ ದಾಖಲಿಸಿಕೊಂಡರು! ಅದರ ನಂತರ ದಲಿತ ಸಂಘಟನೆಗಳು ‘ಕಾರಣಾಂತರ’ದಿಂದ ನಿಷ್ಕ್ರಿಯವಾದವು!? ಪ್ರಿಯಾಂಕಳ ಹೆತ್ತವರು ದಿಕ್ಕಿಲ್ಲದವರಾದರು!
ಆಶ್ಚರ್ಯವೆಂದರೆ ಪೋಲಿಸರೇನೋ F.I.R (0102/2019)ದಾಖಲಿಸಿಕೊಂಡಿದ್ದಾರೆ. I.P.C ಸೆಕ್ಷನ್ 376, 302, 34 (ರೇಪ್ ಮತ್ತು ಕೊಲೆ) ಮತ್ತು ‘ಪೋಕ್ಸೊ ಕಾಯಿದೆ’ಯಲ್ಲೂ ದೂರು ದಾಖಲಿಸಿದ್ದಾರೆ! ಆದರೆ ಅಪಾದಿತರು ಮಾತ್ರ ವ್ಯಕ್ತಿಗಳಲ್ಲ ಬದಲಿಗೆ ‘ಜಮಖಂಡಿ ರಾಯಲ್ ಪ್ಯಾಲೆಸ್ ಕಾಲೇಜ್ ಅಡ್ಮಿನಿಸ್ಟ್ರೇಶನ್’ ಎಂಬ ಸಂಸ್ಥೆ!! ಈ ದೇಶದಲ್ಲಿ ಒಂದು ಸಂಸ್ಥೆ ಕೂಡ ರೇಪ್ ಅಂಡ್ ಮರ್ಡರ್ ಮಾಡುತ್ತದೆ!!
ಈ ಘಟನೆ ಆಗಿ ನಾಲ್ಕು ತಿಂಗಳಾದರೂ ಯಾರನ್ನೂ ಈವರೆಗೆ ಅರೆಸ್ಟ್ ಮಾಡುವುದಿರಲಿ ವಿವಾರಣೆಯನ್ನೂ ಮಾಡಿಲ್ಲ! ಪ್ರಿಯಾಂಕರೆಡ್ಡಿಯ ಪ್ರಕರಣ ದೇಶಾದ್ಯಂತ ಪ್ರತಿಭಟನೆಗೆ ಕಾರಣವಾದಂತೆ ಪ್ರಿಯಾಂಕ ಪ್ರಕರಣ ಆಗಲಿಲ್ಲ. ಪ್ರಿಯಾಂಕರೆಡ್ಡಿ ಕೇಸಿನ ತಪ್ಪಿತಸ್ಥರನ್ನು ಬೀದಿಯಲ್ಲೇ ಸುಡಬೇಕು, ನಡುಬೀದಿಯಲ್ಲಿ ನೇಣುಹಾಕಬೇಕು ಎಂಬಂತೆ ಯಾವ ಮಾದ್ಯಮವೂ ಜಮಖಂಡಿ ಪ್ರಿಯಾಂಕ ಕೇಸಿನಲ್ಲಿ ಒತ್ತಡ ತರಲಿಲ್ಲ!
ಯಾರೂ ಮೇಣದ ಬತ್ತಿ ಹಚ್ಚಲಿಲ್ಲ, ಪಾರ್ಲಿಮೆಂಟಿನಲ್ಲೂ ಚರ್ಚೆಯಾಗಲಿಲ್ಲ!! ಯಾಕೆಂದರೆ ಇವೆಲ್ಲಾ ಆಗುವಷ್ಟು ಪ್ರಿಯಾಂಕ ಪ್ರತಿಷ್ಟಿತ ಜಾತಿಗೆ ಸೇರಿದವಳಲ್ಲ, ಇವೆಲ್ಲಾ ಬೇಡ ಬಿಡಿ.. ಪ್ರಿಯಾಂಕಳನ್ನು ಹೆತ್ತವರು ಅಂಗಲಾಚಿ ಬೇಡುತಿದ್ದಾರೆ.. ಅವರ ಮಗಳಿನ ಅನ್ಯಾಯದ ಸಾವಿಗೆ ಕನಿಷ್ಟ ನ್ಯಾಯಕೊಡಿಸಿ, ಅಷ್ಟು ಸಾಕು…?
ಸುದ್ದಿದಿನ.ಕಾಂ|ವಾಟ್ಸಾಪ್|9980346243