ದಿನದ ಸುದ್ದಿ

ನಡೆದು ಬರುತ್ತಿರುವ ಸಹೋದರಿಯರೊಂದಿಗೆ ಕೈಜೋಡಿಸುವ ಅಗತ್ಯವಿದೆ

Published

on

ತ್ಮೀಯರೆ, ಕಳೆದ 10 ದಿನಗಳಿಂದ ನಿರಂತರವಾಗಿ ಮದ್ಯ ನಿಷೇಧ ಆಂದೋಲನದ ಪಾದಯಾತ್ರೆಯಲ್ಲಿ ನಡೆದು ಬರುತ್ತಿರುವ ಕೂಲಿ ತಾಯಂದಿರು ಮತ್ತು ಅವರ ಜೊತೆಗೆ ಹೆಜ್ಜೆ ಹಾಕುತ್ತಿರುವ ಸಾಮಾಜಿಕ ಕಾರ್ಯಕರ್ತರು ನಾಡಿದ್ದು ಅಂದರೆ ಜನವರಿ 30ರಂದು ಬೆಂಗಳೂರು ತಲುಪುತ್ತಾರೆ. ನಿನ್ನೆ ಆ ತಂಡದಲ್ಲಿ ಆರಂಭದಿಂದ ನಡೆದು ಬಂದಿದ್ದ ರಾಯಚೂರಿನ ರೇಣುಕಮ್ಮ ಎಂಬ ಮಹಿಳೆ ಸರ್ಕಾರದ ನಿಷ್ಕಾಳಜಿಯ ಪರಿಣಾಮವಾಗಿ ಸಾವಿಗೀಡಾದರು.

ಅಷ್ಟಾದರೂ ಆಕೆಯ ವಯೋವೃದ್ಧ ಅತ್ತೆ (ಗಂಡನ ತಾಯಿ-ಈಕೆಯೂ ಮೊದಲ ದಿನದಿಂದ ನಡೆದು ಬರುತ್ತಿದ್ದಾರೆ) ತನ್ನ‌ ಸೊಸೆ ಯಾವ ಹೋರಾಟಕ್ಕಾಗಿ ಪ್ರಾಣಕೊಟ್ಟಿದ್ದಾಳೋ, ಅದನ್ನು ಗುರಿಮುಟ್ಟಿಸಿಯೇ ಸಿದ್ಧ ಎಂದು ನೋವಿನಲ್ಲೂ ಕೆಚ್ಚೆದೆಯ ಮಾತುಗಳನ್ನಾಡಿದ್ದು ನಿಜಕ್ಕೂ ನಮ್ಮ ಮನಸ್ಸನ್ನು ತಟ್ಟಿ ಆತ್ಮವನ್ನು ಅಲುಗಾಡಿಸಿತು. ಇಷ್ಟು ದಿನಗ‌ಳ ಸುದೀರ್ಘ ನಡಿಗೆ, ಆಯಾಸ ಅಷ್ಟು ಸಾಲದೆಂದು ಒಡನಾಡಿಯೊಬ್ಬರ ದುರ್ಮರಣ- ಇವ್ಯಾವುವೂ ಪಾದಯಾತ್ರೆಯ ದಿಟ್ಟ ಮಹಿಳೆಯರ ಮನೋಬಲವನ್ನು ಕುಗ್ಗಿಸಿಲ್ಲ!!! ಅವರ ಚೈತನ್ಯ ನಿಜವಾಗಿಯೂ ಈ ಸಮಾಜಕ್ಕೆ ಚಿಕಿತ್ಸೆ ನೀಡುವಷ್ಟು ಶಕ್ತಿಶಾಲಿಯಾಗಿದೆ ಎಂಬುದು ಅವರ ಹತ್ತಿರ‌ ಸುಳಿದ ಯಾರಿಗಾದರೂ ಅನುಭವಕ್ಕೆ ಬಂದೀತು.

ಆದರೆ, ದುರಂತವೆಂದರೆ ಅವರ ನೋವಿನ ಮಾತುಗಳು ಇನ್ನೂ ಸರ್ಕಾರದ ಚುಕ್ಕಾಣಿ‌ ಹಿಡಿದವರನ್ನು ಅಲುಗಿಸಿಲ್ಲ; ಸರ್ಕಾರದ ಮುಂದಾಳುಗಳಿಗೆ ಇವರ ಬದುಕು-ಬವಣೆಗಳು ಉಡಾಫೆಯ ಸಂಗತಿಗಳಾಗಿವೆ ಎಂಬುದನ್ನು ಇಂದು ಕಣ್ಣಾರೆ ನೋಡಿದೆ.

ಇದೀಗ, ತಮ್ಮ ಮತ್ತು ತಮ್ಮಂತಹ ಅಸಂಖ್ಯಾತ ಹೆಣ್ಮಕ್ಕಳ ಬದುಕು ಹಸನಾಗಬೇಕೆಂಬ ಆಶಯದೊಂದಿಗೆ ಪಾದಯಾತ್ರೆ ಹೊರಟ ಈ ಸಹೋದರಿಯರು ತಮ್ಮ ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಿದ್ದಾರೆ. ಅವರ ಒಡಲ‌ ಸಂಕಟದ ದನಿಗೆ ನಮ್ಮೆಲ್ಲರ ದನಿಗಳು ಸೇರಿದರಾದರೂ ಆ ಕಲ್ಲುಕಟ್ಟಡದ ಭ್ರಷ್ಟ ಕೊಠಡಿಗಳೊಳಗೆ ಸೇರಿ ಮಲಗಿರುವ ಸರ್ಕಾರ ಕಣ್ತೆರೆಯಬಹುದೇ? ಅವರ ಅದಮ್ಯ ಮನೋಬಲಕ್ಕೆ ಬನ್ನಿ ಇನ್ನೊಂದಷ್ಟು ಆಶಾವಾದ ಸೇರಿಸೋಣ.

ಈಗಾಗಲೇ ಕರ್ನಾಟಕದ ಸಂವೇದನಾಶೀಲರು ಅನೇಕ ರೀತಿಗಳಲ್ಲಿ ಆಂದೋಲನಕ್ಕೆ ಸ್ಪಂದಿಸಿದ್ದಾರೆ‌. ಇದನ್ನು ಇನ್ನಷ್ಟು ಹೆಚ್ಚುಮಾಡಿ, ನಮ್ಮಿಂದಾಗುವ ಎಲ್ಲ ರೀತಿಗಳಲ್ಲಿ ಮದ್ಯನಿಷೇಧ ಆಂದೋಲನದಲ್ಲಿ ಬರುತ್ತಿರುವ ಹೋರಾಟದ ಕಿಡಿಗಳಿಗೆ ನೆರವಾಗೋಣ.

ನಾವು ಮಾಡಬಹುದಾದುದೇನು? ಕೆಲವು ಆಲೋಚನೆಗಳು

  1. ಸಾಧ್ಯವಿರುವ ಎಲ್ಲರೂ ಜ.30ರಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಖುದ್ದಾಗಿ ಬಂದು ಪಾಲ್ಗೊಳ್ಳುವುದು.
  2. ಮಾಧ್ಯಮಗಳಲ್ಲಿ ಕೆಲಸ ಮಾಡುವವರು/ ಸಂಪರ್ಕ ಹೊಂದಿರುವವರು ಈ ಆಂದೋಲನಕ್ಕೆ ಸಾಧ್ಯವಾದಷ್ಟು ಹೆಚ್ಚು ಪ್ರಚಾರ ಒದಗಿಸುವುದು- ದೃಶ್ಯ ಮಾಧ್ಯಮಗಳಲ್ಲಿ ಇರುವವರು ಈ ಮಹಿಳೆಯರೊಂದಿಗೆ ಸಣ್ಣ ಮಾತುಕತೆ ಕಾರ್ಯಕ್ರಮ ನಡೆಸಲು ಸಾಧ್ಯವೆ ಪ್ರಯತ್ನಿಸುವುದು
  3. ಸರ್ಕಾರದ ಮೇಲೆ ಒತ್ತಡ ಹೇರಲು ಸಾಧ್ಯವಿರುವ, ನಮ್ಮ ನಮ್ಮ ಸ್ನೇಹಿತರ ಬಳಗದಲ್ಲಿರುವ ಪ್ರಭಾವಿಗಳನ್ನು ಸಂಪರ್ಕಿಸಿ, ಅವರ ಮೂಲಕ ಸರ್ಕಾರದ ಮೇಲೆ ಒತ್ತಡ ಹೆಚ್ಚುವಂತೆ‌ ಮಾಡುವುದು- ಒಂದು ತಪಸ್ಸಿನಂತೆ ನಡೆದು ಬಂದಿರುವ ಈ ತಾಯಂದಿರನ್ನು ಕನಿಷ್ಠ ಸಭೆ ಕರೆದು ಚರ್ಚೆ‌ ನಡೆಸುವಂತೆ ಒಪ್ಪಿಸಲು ಆಗ್ರಹಿಸುವುದು.
  4. ಸ್ವತಃ ಬರೆಯುವವರು, ಪತ್ರಿಕೆಗಳು, magazineಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲದ ಬರಹಗಳು ಪ್ರಕಟವಾಗುವಂತೆ ಪ್ರಯತ್ನಿಸುವುದು
  5. ಆಂದೋಲನ ಖರ್ಚಿಗೆ ಹಣಕಾಸಿನ ನೆರವು ನೀಡುವುದು.
  6. ನಮ್ಮ ಸ್ನೇಹಿತರ ಬಳಗದ ಎಲ್ಲರನ್ನು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಾಹಿತಿ ರವಾನಿಸುವುದು.

ಇವೇ ಮೊದಲಾದ ಹಲವು ಬಗೆಗಳಲ್ಲಿ ನಾವು ಅವರೊಂದಿಗಿದ್ದೇವೆಂಬುದನ್ನು ತೋರಿಸಲು ಸಾಧ್ಯವಿದೆ. ಬನ್ನಿ, ನಡೆದು ದಣಿದು ಬರುತ್ತಿರುವ ನಮ್ಮ ಸಹೋದರಿಯರಿಗೆ ‘ನಿಮ್ಮೊಂದಿಗೆ ನಾವಿದ್ದೇವೆ’ ಎಂದು ಹೇಳಲು ಸಜ್ಜಾಗೋಣ.

ಕಾಲ್ನಡಿಗೆ ನಿರತ ಮಹಿಳೆಯರ ಪರವಾಗಿ

-ಮಲ್ಲಿಗೆ ಸಿರಿಮನೆ
ಹೋರಾಟಗಾರ್ತಿ

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version