ದಿನದ ಸುದ್ದಿ
ನಾಳೆ ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ಕ್ವಿಜೇಬಲ್ಡ್ – ವಿಶೇಷ ಕ್ವಿಜ಼್ ಕಾರ್ಯಕ್ರಮ
ಸುದ್ದಿದಿನ, ಬೆಂಗಳೂರು : ವಿಶ್ವ ಅಂಗವಿಕಲರ ದಿನಾಚರಣೆಯ ಅಂಗವಾಗಿ ಕ್ವಿಜೇಬಲ್ಡ್ – ವಿಶೇಷ ಕ್ವಿಜ಼್ ಕಾರ್ಯಕ್ರಮವನ್ನು ಸೇವಾ-ಇನ್-ಆಕ್ಷನ್(SiA) ಸಂಸ್ಥೆಯು ನಾಳೆ (ಡಿಸೆಂಬರ್.3ರಂದು) ಬೆಂಗಳೂರಿನ ಬಿ ಎಂ ಎಸ್ ಇಂಜಿನಿಯರಿಂಗ್ ಕಾಲೇಜ್, ಬುಲ್ ಟೆಂಪಲ್ ರೋಡ್, ಬಸವನಗುಡಿಯ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸೇವಾ-ಇನ್-ಆಕ್ಷನ್ ನ ನಿರ್ದೇಶಕರಾದ ಮಂಜುಳ ನಂಜುಂಡಯ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಭಾರತ ಸರ್ಕಾರದ ಸಚಿವರಾದ ಶ್ರೀ ನಾರಾಯಣಸ್ವಾಮಿಯವರು ಕಾರ್ಯಕ್ರಮವನ್ನು ಉದ್ಗಾಟಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅಂಗವಿಕಲ ಮಕ್ಕಳು ಮತ್ತು ವಯಸ್ಕರಿಗಾಗಿ ನಡೆಸುತ್ತಿರುವ ಈ ಕಾರ್ಯಕ್ರಮಕ್ಕೆ ಎಲ್‌ಟಿಐಮೈಂಡ್‌ಟ್ರೀ (LTIMindtree) ಸಂಸ್ಥೆಯ ಸಹಕಾರ ಮತ್ತು ಬೆಂಬಲವಿದೆ. ಅಂಗವಿಕಲರ ಸಾಧನಾ-ಸಾಧ್ಯತೆಗಳನ್ನು ಪ್ರದರ್ಶಿಸಲು ಅನುವು ಮಾಡಿಕೊಡುವಂತಹ ಜ್ಞಾನ-ವೇದಿಕೆಯನ್ನು ಅವರಿಗೆ ನೀಡುವ ಅನನ್ಯ ಕಾರ್ಯಕ್ರಮವಿದು. ಸೇವಾ-ಇನ್-ಆಕ್ಷನ್ ಸ್ವಯಂ ಸೇವಾ ಸಂಸ್ಥೆಯು ಮೂರು ದಶಕಗಳಿಗಿಂತಲೂ ಹೆಚ್ಚು ಸಮಯ (1985 ರಿಂದ) ಅಂಗವಿಕಲತೆಯ ಕ್ಷೇತ್ರದಲ್ಲಿ ಬಹಳಷ್ಟು ಕೆಲಸಗಳನ್ನು ಮಾಡುತ್ತಿದೆ.
ಕ್ವಿಜೇ಼ಬಲ್ಡ್ 2022-23 ಕಾರ್ಯಕ್ರಮವನ್ನು ಮಿಶ್ರ ವಿಧಾನದಲ್ಲಿ ಆಯೋಜಿಸಲಾಗಿದೆ.
ಕರ್ನಾಟಕದ ಶಾಲೆಗಳ ವಿಶೇಷ ಮತ್ತು ಸಾಮಾನ್ಯ ಶಾಲೆಗಳ ಎಲ್ಲ ಅಂಗವಿಕಲ ಮಕ್ಕಳ ಮೊದಲ ಸುತ್ತು ಮತ್ತು ಸೆಮಿ-ಫೈನಲ್ ಹಂತವು ಆನಲೈನ್ ನಲ್ಲಿ ನಡೆಯುವುದು ಹಾಗೂ ಫೈನಲ್ ಹಂತವು ಮುಖಾಮುಖಿ ನಡೆಯುವುದು. ಐದು ವಿಭಿನ್ನ ಪ್ರಕಾರದ ಅಂಗವಿಕಲತೆಯುಳ್ಳವರನ್ನು ಒಳಗೊಳ್ಳುವಂತೆ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ಅವುಗಳು: ಬೌದ್ಧಿಕ ವಿಕಲತೆ (ID), ಸೆರಿಬ್ರಲ್ ಪಾಲ್ಸಿ (CP), ಆಟಿಸಂ ಸ್ಪೆಕ್ಟ್ರಂ ಡಿಸಾರ್ಡರ್ (ASD), ದೃಷ್ಟಿದೋಷ (VI) ಮತ್ತು ಶ್ರವಣ ದೋಷ (HI). ಈ ಕ್ವಿಜ಼್ ಕಾರ್ಯಕ್ರಮದ ಎಲ್ಲ ಹಂತಗಳನ್ನೂ, 4 ಎಡ್ಜ್ ಕ್ವಿಜ್ಜಿಂಗ್ ಸಲ್ಯೂಷನ್ಸ್ ಸಂಸ್ಥೆಯ ವೃತ್ತಿಪರ ಕ್ವಿಜ಼್ ಮಾಸ್ಟರ್‌ಗಳು ನಡೆಸಿಕೊಡುತ್ತಾರೆ. ಕರ್ನಾಟಕದಲ್ಲಿ ಈ ಕ್ವಿಜ಼್ ಕಾರ್ಯಕ್ರಮವು ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ನಡೆಯುತ್ತದೆ.
ಭಾಗವಹಿಸುವ ಎಲ್ಲ ಮಕ್ಕಳಿಗೂ ಭಾಗವಹಿಸುವಿಕೆಯ ಪ್ರಮಾಣ ಪತ್ರವನ್ನು ನೀಡಲಾಗುವುದು. ವಿಜೇತರು ಮತ್ತು ಎರಡನೇ ಸ್ಥಾನ ಪಡೆದವರಿಗೆ ನಗದು ಬಹುಮಾನ ನೀಡಲಾಗುವುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243