ದಿನದ ಸುದ್ದಿ
ಮುಂಗಾರಿನಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ : ಹವಾಮಾನ ಇಲಾಖೆ
ಸುದ್ದಿದಿನ ಡೆಸ್ಕ್ : ಈ ಬಾರಿಯ ಮುಂಗಾರಿನಲ್ಲಿ ದೇಶದಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ ಎಂದು ಎಂದು ಹವಾಮಾನ ಇಲಾಖೆ ಹೇಳಿದೆ. ಈ ಮಾನ್ಸೂನ್ ಋತುವಿನ ಸರಾಸರಿ ಮಳೆಯ ಅವಧಿ ಸರಾಸರಿಯ ಸಾಮಾನ್ಯಕ್ಕಿಂತ ಹೆಚ್ಚಾಗಿರಲಿದೆ ಎಂದು ಅಂದಾಜಿಸಲಾಗಿದೆ.
ಎಂದು ಭಾರತೀಯ ಹವಾಮಾನ ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಶೇಕಡ 100ರಷ್ಟು ಧೀರ್ಘ ಅವಧಿಯ ಸರಾಸರಿಯೊಂದಿಗೆ ದೇಶವು ಸಾಮಾನ್ಯ ಮಳೆಯನ್ನು ಪಡೆಯಲಿದೆ ಎಂದು ಕಳೆದ ಏಪ್ರಿಲ್‌ನಲ್ಲಿ ಹವಾಮಾನ ಇಲಾಖೆ ಹೇಳಿತ್ತು. ದೇಶದ ಬಹುತೇಕ ಕಡೆಗಳಲ್ಲಿ ಉತ್ತಮವಾದ ಮಳೆಯ ಚಟುವಟಿಕೆ ಕಾಣಿಸುತ್ತಿದೆ ಎಂದು ಪ್ರಸ್ತುತ ಮಾನ್ಸೂನ್ ಋತುವಿನ ಮಳೆಯ ಮುನ್ಸೂಚನೆಯನ್ನು ಅಧಿಕಾರಿಗಳು ನೀಡಿದ್ದಾರೆ.
ಈಶಾನ್ಯ ಪ್ರದೇಶವು ಸಾಮಾನ್ಯಕ್ಕಿಂತ ಕಡಿಮೆ ಮಳೆಯನ್ನು ಪಡೆಯಬಹುದು ಎಂದು ಹೇಳಿದ್ದಾರೆ. ಕೇರಳದಲ್ಲಿ ಈಗಾಗಲೇ ಮುಂಗಾರು ಅಪ್ಪಳಿಸಿದೆ. ಇದು ಸಾಮಾನ್ಯ ಆರಂಭದ ದಿನಾಂಕಕ್ಕಿಂತ ಮೂರು ದಿನ ಮುಂಚಿತವಾಗಿ ಪ್ರವೇಶಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಈ ನಡುವೆ ಮುಂಗಾರು ಅಬ್ಬರ ಕರ್ನಾಟಕದಲ್ಲಿಯೂ ಹೆಚ್ಚಾಗಲಿದೆ. ಅವಧಿಗೆ ಮುನ್ನವೇ ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಉತ್ತರ, ದಕ್ಷಿಣ ಒಳನಾಡು ಪ್ರದೇಶಗಳಿಗೆ ಮುಂಗಾರು ಪ್ರವೇಶಿಸಿದೆ. ನೈರುತ್ಯ ಮುಂಗಾರು ಕರ್ನಾಟಕ ರಾಜ್ಯದ ಕೆಲವು ಭಾಗಗಳಿಗೆ ಪ್ರವೇಶಿಸಿದೆ. ಮುಂದಿನ ಎರಡು, ಮೂರು ದಿನಗಳ ಅವಧಿಯಲ್ಲಿ ಮತ್ತಷ್ಟು ಪ್ರದೇಶಗಳಿಗೆ ವಿಸ್ತರಣೆಯಾಗಲಿದೆ. ಕರಾವಳಿ ದಕ್ಷಿಣ ಒಳನಾಡಿನ ಹಲವೆಡೆ ಮಳೆಯಾಗಿದೆ. ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಕಳೆದ ೨೪ ಗಂಟೆಗಳಿಂದ ಭಾರಿ ಮಳೆಯಾಗಿದೆ.
ಈ ನಡುವೆ ಕಲಬುರಗಿಯಲ್ಲಿ ದಿನದ ಗರಿಷ್ಠ ತಾಪಮಾನ29.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಮುನ್ಸೂಚನೆಯಂತೆ ಮುಂದಿನ 24 ಗಂಟೆಗಳ ಅವಧಿಯಲ್ಲಿ ಕರಾವಳಿ, ಒಳನಾಡಿನ ಕೆಲವೆಡೆ ಗುಡುಗು ಸಹಿತ ಮಳೆಯಾಗಲಿದೆ. ಕರ್ನಾಟಕ ರಾಜಧಾನಿ ಬೆಂಗಳೂರು ಸುತ್ತಮುತ್ತ ಸಾಮಾನ್ಯ ಮೋಡಕವಿದ ವಾತಾವರಣ ಹಾಗೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243