ಬಹಿರಂಗ

ಪುನರ್ಜನ್ಮ ಇದೆಯೇ ?

Published

on

  • ವಿ.ಎಸ್.ಬಾಬು

ಜೀವನವು ಮರಣದ ಕಡೆಗೆ ಹೊರಟ ದೀರ್ಘ ಪ್ರವಾಸ. ಮಾನವ ಮೋಕ್ಷ ಸಂಪಾದನೆ ಮಾಡುವ ಕಾರಣವಿಲ್ಲ. ಸತ್ತ ಬಳಿಕ ಎಲ್ಲರಿಗೂ ಮೋಕ್ಷವೇ ಗತಿ ಯಾಕೆಂದರೆ ನಾವು ಎಷ್ಟೇ ಬೇಡ ಬೇಡವೆಂದು ಭೋರಾಡಿ ಅತ್ತರೂ, ಕೊನೆಗೊಮ್ಮೆ ಆ ಮೋಕ್ಷವೇ ಬಂದು ನಮ್ಮನ್ನು ನುಂಗಿ ನೀರು ಕುಡಿಯುವುದು. ಇದು ಸತ್ಯ. ಇದು ಶಾಶ್ವತ.

ಸನ್ಯಾಸಿಗಳಿಗೇ, ಯೋಗಿಗಳಿಗೇ ಮೋಕ್ಷ ದೊರೆಯುವುದಾದರೆ, ಕೋಟಿ ಕೋಟಿ ಜನ, ಜನಸಾಮಾನ್ಯರು ಮಾಡುವ ಸದಾಚಾರ ದುರಾಚಾರ, ಪಾಪ ಪುಣ್ಯಗಳಿಗೆ ಅರ್ಥವೇನು? ಮಗುವಿನ ಆತ್ಮ ಮುದುಕನ ಆತ್ಮ, ಸನ್ಯಾಸಿಯ ಆತ್ಮ ಸಂಸಾರಿಯ ಆತ್ಮ, ಅಂತ್ಯಜನ ಆತ್ಮ ಅಗ್ರಜನ ಆತ್ಮ, ಪಂಡಿತನ ಆತ್ಮ ಪಾಮರನ ಆತ್ಮ, ಹೀಗೆ ಎಲ್ಲರ ಆತ್ಮಗಳೂ ಆದಿಯಲ್ಲಿ ಕೂಡಿ ಅನಂತವಾಗುವಾಗ, ಯಾರ ಆತ್ಮಕ್ಕೂ ಸತ್ತ ಬಳಿಕ ಪುನರ್ಜನ್ಮದ ಪ್ರಶ್ನೆಯೇ ಇಲ್ಲ. ಪ್ರಪಂಚಬಿಟ್ಟು ಪಾರಮಾರ್ಥವಿಲ್ಲ. ಸಂಸಾರ ಬಿಟ್ಟು ಸ್ವರ್ಗವಿಲ್ಲ. ಕಾಯಕ ಬಿಟ್ಟು ಕೈಲಾಸ ವಿಲ್ಲ. ದಯಬಿಟ್ಟು ಧರ್ಮವಿಲ್ಲ. ಶರೀರ ಬಿಟ್ಟು ಆತ್ಮವಿಲ್ಲ ಮರಣ ಬಿಟ್ಟು ಮೋಕ್ಷವಿಲ್ಲ. ಸತ್ತ ಬಳಿಕ, ಸ್ವರ್ಗ ನರಕ ಮೋಕ್ಷ ಪುನರ್ಜನ್ಮ ಇವೆಲ್ಲವುಗಳು ಬರೀ ಶಾಸ್ತ್ರ ಜಾಲ! ಪುರಾಣದ ಬದನೆಕಾಯಿ !!

ಬೌ ಬಂತು ಕರಡಿ ಬಂತು ಎಂದು ಮಕ್ಕಳಿಗೂ, ದೆವ್ವ ಭೂತ-ಪಿಶಾಚಿ ಎಂದು ಅಲ್ಪರಿಗೂ. ಆತ್ಮ ದೇವರು ಸ್ವರ್ಗ ನರಕ ಮೋಕ್ಷ ಪುನರ್ಜನ್ಮ ಎಂದು ಎಲ್ಲರಿಗೂ, ಕಥೆ ಕಟ್ಟಿ ಹೇಳುವುದು, ಮಾನವನ ಭೀತಿಗಾಗಿಯೆ ಹೊರತು, ಸೋಸಿ ನೋಡಿದರೆ, ಅದರಲ್ಲಿ ಅಂಥ ಯಾವುದೇ ಹುರುಳಿಲ್ಲ! ಅದಕ್ಕೆ ಅಂಥ ಯಾವುದೇ ಅರ್ಥವಿಲ್ಲ! ಹೀಗೆ ಆತ್ಮನಿಗೆ ತನ್ನದೇ ಆದ ಒಂದು ಪ್ರತ್ಯೇಕ ಅಸ್ತಿತ್ವವಿಲ್ಲದಾಗ, ಸಾಕ್ಷಾತ್ಕಾರ ಮಾಡಿಕೊಂಡು, ಮೋಕ್ಷ ಪಡೆಯುವುದೆಂದರೇನು? ಎಣ್ಣೆ ತೀರುವವರೆಗೆ ಜ್ಯೋತಿ ಬೆಳಗುವಂತೆ ಆತ್ಮ (ಚೇತನ) ಇರುವವರೆಗೆ ಶರೀರ ಬಾಳುವುದು. ಬೆಳಗುವ ದೀಪ ಆರಿದ ಬಳಿಕ ಆ ಜ್ಯೋತಿ, ಬಾಳುವ ಶರೀರ ಸತ್ತ ಬಳಿಕ ಈ ಆತ್ಮ ಶೂನ್ಯ ಸೇರುವವು. ಬಯಲಲ್ಲಿ, ಬಾಡಿ ಬಯಲಾಗುವವು!

“ಶರೀರ ನಶ್ವರ ಆತ್ಮ ಅಮರ, ಶರೀರ ಅಚರ ಆತ್ಮ ಚರ, ಶರೀರ ಜಡ ಆತ್ಮ ಕರ್ತೃ ಈ ಕರ್ತೃ ಆದ ಆತ್ಮ, ಜಡ ಶರೀರ ಬಿಟ್ಟು ಅಗಲಿದ ಬಳಿಕ ಆ ಶರೀರ ನಾಸ್ತಿ. ಮಾನವ ಜನನದಿಂದ ಮರಣದವರೆಗೆ ಮಾಡಿದ ಪಾಪ ಪುಣ್ಯ ಕೀರ್ತಿ ಅಪಕೀರ್ತಿ ಇತ್ಯಾದಿಗಳೆಲ್ಲವೂ, ಕರ್ತೃವಾದ ಆತ್ಮನಿಗೆ ಸಂಬಂಧವೇ ಹೊರತು ನಶ್ವರವಾದ ಈ ಶರೀರಕ್ಕೆ ಅಲ್ಲವೇ ಅಲ್ಲ” – ಹೀಗೆ ಇದು ಹಿಂದೂ ಧರ್ಮದ ತತ್ವ ಸಿದ್ಧಾಂತ.

ಆದರೆ ಇಲ್ಲೇ ವಿಚಾರ ಮಾಡುವ ಸಂಗತಿಯೆಂದರೆ, ಬ್ರಹ್ಮ ವಿಷ್ಣು ಮಹೇಶ್ವರ, ಗಾಂಧೀಜಿ ನೆಹರು ಸುಭಾಸ ಇತ್ಯಾದಿಯವರ, ಕರ್ತೃಗಳಾದ ಅವರ ಆತ್ಮಗಳನ್ನು ಬಿಟ್ಟು, ಅವರ ಜಡ ಶರೀರದ ಮೂರ್ತಿಗಳಿಗೇ, ಪೂಜೆ ಪುರಸ್ಕಾರ ಮಾಡುತ್ತಾರೆ. ಹಾರ ತುರಾಯಿ ಹಾಕಿ ಗೌರವಿಸುತ್ತಾರೆ. ಇದು ಹೀಗೇಕೆ? ಅವರ ಕರ್ತೃ ಅಥವಾ ಅವರ ಆತ್ಮಗಳನ್ನು ಬಿಟ್ಟು ನಶ್ವರ ಜಡದೇಹದ ಪ್ರತಿರೂಪಗಳನ್ನು ಆರಾಧಿಸುವುದೇಕೆ? ಶರೀರ ಬಿಟ್ಟು ಆತ್ಮವೆಂಬುದೊಂದು ಬೇರೆ ಇಲ್ಲವೇ ಇಲ್ಲ ಎಂಬುದಕ್ಕೆ ಹಿಂದೂಗಳು ಆರಾಧಿಸುವ, ಈ ಮೂರ್ತಿ ಪೂಜೆಗೇ ಇದಕ್ಕೆ ಜೀವಂತ ಸಾಕ್ಷಿ!

ಸೃಷ್ಟಿಯ ಪಂಚಭೂತಗಳಿಂದ ಆತ್ಮ (ಚೇತನ) ಗಳಾವವು ಮತ್ತೆ ಆ ಆತ್ಮ (ಚೇತನ) ಗಳು ಪಂಚಭೂತಗಳಲ್ಲಿ ಕೂಡಿಕೊಳ್ಳುವವು ಅರ್ಥಾತ ಆ ಬ್ರಹ್ಮಾಂಡದಲ್ಲಿದ್ದದ್ದೇ ಆ ಪಿಂಡಾಂಡದಲ್ಲುಂಟು. ಸತ್ತ ಬಳಿಕ, ಈ ಪಿಂಡಾಂಡ ಬ್ರಹ್ಮಾಂಡದಲ್ಲಿ ಲಯವಾಗುವುದು. ಹೀಗೆ ಪ್ರಕೃತಿಯಲ್ಲಿ ಪ್ರಾಣವಾಯು, ಜೀವಿಯ ಶರಿರದಲ್ಲಿ ಸೇರಿ ಪ್ರಾಣವೆನಿಸುವದು. ಸತ್ತ ಬಳಿಕ ಶರೀರದಲ್ಲಿಯ ಪ್ರಾಣವಾಯು ಪ್ರಕೃತಿಯಲ್ಲಿಯ ಲಯವಾಗುವುದು. ಆದ ಕಾರಣ, ಪ್ರಾಣ, ಪ್ರಾಣವಾಯು, ಪರಮಾತ್ಮ ಇವೆಲ್ಲವುಗಳಿಗೆ ಒಂದೇ ಅರ್ಥವು. ಹೀಗೆ ಮಾನವ ಅಥವಾ ಪ್ರಾಣಿ ಸತ್ತ ಬಳಿಕ, ಅವನ ಅಥವಾ ಅದರ ಆತ್ಮ (ಚೇತನ) ಕ್ಕೆ, ಅದರದೇ ಆದ ಒಂದು ಅಸ್ತಿತ್ವ ಅಥವಾ ಅದರದೇ ಆದ ಒಂದು ಸ್ಥಾನ ಅದಕ್ಕೆ ಇಲ್ಲವೇ ಇಲ್ಲ. ವಸ್ತುಸ್ಥಿತಿ ಹೀಗಿರುವಾಗ, ಅದಕ್ಕೆ ಮೋಕ್ಷ ಅಥವಾ ಪುನರ್ಜನ್ಮದ ಪ್ರಶ್ನೆ ಉದ್ಭವಿಸುವದೇ ಇಲ್ಲ.

ಬಾಳೆಯ ಗಿಡದ ಬೇರಿನಿಂದ ಬಾಳೆಯ ಮರಿ ಹುಟ್ಟಿ ಮತ್ತೆ ಸ್ವತಂತ್ರ ಬಾಳೆಯ ಗಿಡವಾಗುವುದು. ಗಿಡದಿಂದ ಹೂವಾಗಿ ಕಾಯಾಗಿ ಬೀಜವಾಗಿ ಮತ್ತೆ ಗಿಡವಾಗುವದು. ಮಗುವಿನಿಂದ ಮನುಷ್ಯನಾಗಿ, ಮನುಷ್ಯನಿಂದ ವೀರ್ಯವಾಗಿ, ವೀರ್ಯದಿಂದ ಮತ್ತೆ ಮಗುವಾಗುವದು.

ಪ್ರತಿಭಾರ್ಯಾಂ ಸಂಪ್ರಸಿಶ್ಯ ಗರ್ಭೋಭತ್ವೇಹ ಜಾಯತೇ |
ಜಾಯಾಸ್ತದ್ಧಿ ಜಾಯಾತ್ವಂ ಜಾಯತೇ ಪುನಃ ||

ಮನು–೯/೮

ಅಂದರೆ ಗಂಡನಾದವನು ಹೆಂಡತಿಯ ಹೊಟ್ಟೆಯಲ್ಲಿ, ತಾನೇ ಗರ್ಭವಾಗಿ ಮಗುವಾಗಿ ಹುಟ್ಟುತ್ತಾನೆ. ಆದ್ದರಿಂದ ಹೆಂಡತಿ, ಗಂಡನ ಜನ್ಮ ಭೂಮಿ ಎನಿಸುತ್ತಾಳೆ ಎಂದು ಹೇಳಿದೆ.

ಇಲ್ಲಿ ವಿಚಾರಮಾಡುವ ಸಂಗತಿಯೆಂದರೆ, ಹೆಂಡತಿಯ ಹೊಟ್ಟೆಯಲ್ಲೇ ತಾನೇ ಮಗುವಾಗಿ ಹುಟ್ಟುವುದರಿಂದಲೇ, ಮಾನವ ತನ್ನ ಔರಸ ಪುತ್ರ, ತನ್ನ ಸಂತತಿ, ತನ್ನ ವಂಶ ಎಂದು ಅಭಿಮಾನ ಪಡುತ್ತಾನೆ. ಒಂದು ವೇಳೆ ಮತ್ತಾರದೋ ಆತ್ಮ ಬಂದು, ತನ್ನ ಹೆಂಡತಿಯ ಗರ್ಭದಲ್ಲಿ, ರೂಪಧಾರಣ ಮಾಡಿ ಹುಟ್ಟಿ ಬರುತ್ತಿದ್ದುದೇ ಆಗಿದ್ದಲ್ಲಿ, ಮಾನವ ತನ್ನದೇ ಆದ ವಂಶಕ್ಕಾಗಿ, ತನ್ನದೇ ಆದ ಸಂತತಿಗಾಗಿ, ಇಷ್ಟೊಂದು ಮಹತ್ವ ಕೊಡುತ್ತಿರಲಿಲ್ಲ. ಇದಕ್ಕಾಗಿ ಮನುಷ್ಯ ತನ್ನ ಹೆಂಡತಿಯನ್ನು ಯಾಕೆ ಇಷ್ಟೊಂದು ಕಠಿಣ ಬಂಧನದಲ್ಲಿಟ್ಟಿದ್ದಾನೆ ಮತ್ತು ಒಂದು ವೇಳೆ ಅವಳು ಮತ್ತೊಬ್ಬನನ್ನು ಪ್ರೇಮಿಸಿದ್ದುದೇ ಆಗಿದ್ದಲ್ಲಿ, ಯಾಕೆ ಅಷ್ಟೊಂದು ಮರಣಾಂತಿಕ ಕಠಿಣ ಕ್ರಮಕೈಕೊಳ್ಳುತ್ತಾನೆ ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಬಾಳೆಯ ಬೇರಿನಿಂದ ಬಾಳೆಯಗಿಡ ಹುಟ್ಟುತ್ತದೆ. ಗಿಡದ ಬೀಜದಿಂದ ಗಿಡ ಹುಟ್ಟುತ್ತದೆ. ಮನುಷ್ಯನ ವೀರ್ಯದಿಂದ ಮನುಷ್ಯ ಹುಟ್ಟುತ್ತಾನೆ. ಒಂದು ವೇಳೆ ನಮ್ಮ ಧರ್ಮಗುರುಗಳು ಮತ್ತು ಧರ್ಮತತ್ವಗಳು ಪ್ರತಿಪಾದಿಸುವಂತೆ, ಸತ್ತ ಜೀವಿಗಳ ಆತ್ಮಕ್ಕೆ ಪುನರ್ಜನ್ಮ ಆಗುವುದೇ ಆಗಿದ್ದಲ್ಲಿ, ಈ ಬೇರುಗಳ, ಈ ಬೀಜಗಳ ವೀರ್ಯದ ಅವಶ್ಯಕತೆ ಏನಿತ್ತು? ಹೆಣ್ಣು ಗಂಡಿನ ಸಮಾಗಮದ ಅವಶ್ಯಕತೆ ಏನಿತ್ತು? ಸತ್ತವರ ಆತ್ಮಗಳೆಲ್ಲವೂ, ಗಂಡಿನ ಸಂಬಂಧ ಇಲ್ಲದೆ, ನೇರವಾಗಿ ಹೆಣ್ಣಿನ ಗರ್ಭಕೋಶದಲ್ಲಿ ಸೇರಿ ಅದೇಕೆ ಹುಟ್ಟಿ ಬರುವುದಿಲ್ಲ? ಇಂದಿನ ವಿಜ್ಞಾನ ಯುಗದಲ್ಲಿ ಪ್ರಣಾಳಿಕೆ ಶಿಶುಗಳು ಮುಟ್ಟಿ ಬರುತ್ತಿರುವಾಗ ಪಾನ ಪಟ್ಟಿ ಬೀಡಿ ಅಂಗಡಿಗಳಲ್ಲಿ ಗರ್ಭನಿರೋಧಗಳು ಮಾರಾಟ ಆಗುತ್ತಿರುವಾಗ, ಸತ್ತವರ ಆತ್ಮಕ್ಕೆ ಪುನರ್ಜನ್ಮ ಇದೆ ಎಂದು ಹೇಳುವುದೆಂದರೆ ಅದು ಅವರ ಮೂಡನಂಬಿಕೆ ಮತ್ತು ಅಜ್ಞಾನದ ಪ್ರದರ್ಶನವಾಗುವುದೇ ಹೊರತು ಅದಕ್ಕೆ ಯಾವುದೇ ಅರ್ಧ ಆಗದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version