ದಿನದ ಸುದ್ದಿ
ಮೀಸಲಾತಿ ಅಂದ್ರೆ ನೌಕರಿ, ಸೌಲಭ್ಯ, ಸವಲತ್ತು ಅಲ್ಲ : ಹರ್ಷಕುಮಾರ್ ಕುಗ್ವೆ
ಒಂದು ದೇಶದಲ್ಲಿ ಸೃಷ್ಟಿಯಾಗುವ ಎಲ್ಲಾ ಬಗೆಯ ಶೈಕ್ಷಣಿಕ ಹಾಗೂ ಉದ್ಯೋಗದ ಅವಕಾಶಗಳಲ್ಲಿ ದೇಶದ ಜನಸಂಖ್ಯೆಯ ವಿವಿಧ ಸ್ತರಗಳ, ವಿವಿಧ ವರ್ಗಗಳ ಜನರೂ ಪ್ರಾತಿನಿಧ್ಯ (representation) ಪಡೆಯಬೇಕು ಎಂಬ ಪ್ರಜಾತಾಂತ್ರಿಕ ಆಶಯ ಇಟ್ಟುಕೊಂಡಾಗ ನಮಗೆ ಅದನ್ನು ಸಾಧಿಸಲು ಕೆಲವು ಮಾನದಂಡಗಳು ಬೇಕಾಗುತ್ತವೆ.
ಸಾವಿರಾರು ವರ್ಷಗಳ ಕಾಲ ಈ ದೇಶದಲ್ಲಿ ಸೃಷ್ಟಿಯಾಗುವ ಎಲ್ಲಾ ಶೈಕ್ಷಣಿಕ ಮತ್ತು ಉದ್ಯೋಗದ ಅವಕಾಶಗಳು ಕೆಲವೇ ವರ್ಗಗಳ ಸೊತ್ತಾಗಿದ್ದವು. ಆ ವರ್ಗಗಳು ಯಾವೆಂದು ನೋಡಿದಾಗ ಅವು ದೇಶದ ಸಾಮಾಜಿಕ ವ್ಯವಸ್ಥೆಯ ಮೇಲುಸ್ತರದಲ್ಲಿದ್ದ “ಜಾತಿ” ಗಳೇ ಆಗಿದ್ದವು. ಅಂದರೆ ತಳಸ್ತರದಲ್ಲಿದ್ದ ಬಹುತೇಕ ಜಾತಿಗಳ ಜನರು ಶೈಕ್ಷಣಿಕ ಮತ್ತು ಉದ್ಯೋಗದ ಅವಕಾಶಗಳಿಂದ ವಂಚಿತರಾಗಿದ್ದರು. ಇಂತಹ ಒಂದು ಪರಿಸ್ಥಿತಿಯಲ್ಲಿ ಅವಕಾಶಗಳನ್ನು ಎಲ್ಲರಿಗೂ ಹಂಚಬೇಕಾದರೆ, ಎಲ್ಲರಿಗೂ ಪ್ರಾತಿನಿಧ್ಯ ಒದಗಿಸಬೇಕಾದರೆ ಬಹಳ ಸೂಕ್ತ ಮಾನದಂಡ ಜಾತಿಯ ಮಾನದಂಡವೇ ಎಂಬುದು ಎಂತಹ ದಡ್ಡನಿಗೂ ಅರ್ಥವಾಗುತ್ತದೆ. ಜಾತಿಯನ್ನು ಹೊರತುಪಡಿಸಿ ಕೇವಲ ವರ್ಗವನ್ನು ಮಾನದಂಡವಾಗಿಸಿದರೆ ಮತ್ತೆ ಅವಕಾಶಗಳು ಕೆಲವೇ ಬಲಾಢ್ಯ ಜಾತಿಗಳ ಪಾಲಾಗುವುದು ಖಚಿತ. ಹೀಗಾಗಿಯೇ ದೇಶದಲ್ಲಿ ಜಾತಿ ಆಧಾರಿತ ಪ್ರಾತಿನಿಧ್ಯವನ್ನು ಜಾರಿಗೊಳಿಸಲಾಗಿದೆ.
ಹೀಗಾಗಿ ಮೀಸಲಾತಿ ಅಂದರೆ ಸರ್ವರಿಗೂ ಪ್ರಾತಿನಿಧ್ಯ ಎಂದು ತಿಳಿಯಬೇಕೇ ಹೊರತು ಸೌಲಭ್ಯ ನೀಡಿಕೆ ಎಂದಲ್ಲ. ಈ ದೇಶ ಪ್ರಜಾಪ್ರಭುತ್ವ ದೇಶ ಆಗಿರಬೇಕು ಎಂದು ಬಯಸುವವರೆಲ್ಲರೂ ಜಾತಿ ಆಧಾರಿತ ಪ್ರಾತಿನಿಧ್ಯವನ್ನು ಮರು ಮಾತಿಲ್ಲದೇ ಒಪ್ಪಿಕೊಳ್ಳುತ್ತಾರೆ. ಕೆಲವೇ ಜಾತಿ ವರ್ಗಗಳ ಜನರೇ ದೇಶವನ್ನು ನಡೆಸಲಿ ಎಂದು ಬಯಸುವವರು ಜಾತಿ ಆಧಾರಿತ ಮೀಸಲಾತಿ ಬೇಡ ಎನ್ನುತ್ತಾರೆ.
ಇಷ್ಟು ಹೇಳಿದ ಮೇಲೆ ಈ ಜಾತಿ ಆಧಾರಿತ ಮೀಸಲಾತಿಯೇ ಸಾಮಾಜಿಕ ಆರ್ಥಿಕ ಸಮಾನತೆಗೆ ರಾಮಬಾಣವಲ್ಲ. ಆದರೆ ಇದು ಅಟ್ಟ ಹತ್ತಲು ಬೇಕಾದ ಏಣಿಯಂತೆ. ಖಾಸಗಿ ಕ್ಷೇತ್ರಕ್ಕೂ ಈ ಏಣಿ ಹಾಕಬೇಕಾದ ಜರೂರಿದೆ. ಅದಕ್ಕೆ ಮೊದಲು ಅಟ್ಟ ಹತ್ತಿಕೊಂಡು ಏಣಿ ಒದೆಯಲು ಮುಂದಾಗಿರುವವರ ಕಾಲಿಗೆ ಕೊಕ್ಕೆ ಹಾಕಬೇಕಿದೆ.