ನೆಲದನಿ
ರಂಗದ ಮೇಲೆ ಮಂಗಳಮುಖಿಯರ ಬದುಕಿನಾಟ ವಿಶೇಷ ಲೇಖನ : ಸಂಧ್ಯಾ ಸಿಹಿಮೊಗೆ
ಗಂಡು ಹೆಣ್ಣೆಂಬ ಚೌಕಟ್ಟಿನಾಚೆ ಭಿನ್ನ ಲಿಂಗಿಯಾಗಿ ತನ್ನ ಭಾವನೆ, ತುಮುಲಗಳನ್ನು ರಂಗದ ಮೇಲೆ ಪ್ರಸ್ತುತ ಪಡಿಸುತ್ತಿರುವ ರೇವತಿ ಅವರು ಲೈಂಗಿಕ ಅಲ್ಪಸಂಖ್ಯಾತರ ಆಶಾಕಿರಣವಾಗಿದ್ದಾರೆ. ಸಮಾಜದಲ್ಲಿ ಅವಮಾನ, ದೈಹಿಕ ಮತ್ತು ಮಾನಸಿಕ ಕಿರುಕುಳಗಳಿಗೆ ಒಳಗಾಗುವ ಮಂಗಳಮುಖಿಯರಿಗೆ ಬದುಕುವ ಆತ್ಮವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ರೇವತಿಯವರು ರಂಗಭೂಮಿಯಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸುತ್ತಿದ್ದಾರೆ.
ತಮಿಳುನಾಡಿನ ನಮಕ್ಕಲ್ ಜಿಲ್ಲೆಯಲ್ಲಿ ಜನಿಸಿದ ಸ್ವತ: ಮಂಗಳಮುಖಿಯಾದ ಇವರು ತಮ್ಮಂತೆಯೇ ಇರುವ ಲೈಂಗಿಕ ಅಲ್ಪಸಂಖ್ಯಾತರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಹಾಗೂ ಅವರಲ್ಲಿ ಆತ್ಮ ಸ್ಥೈರ್ಯ ತುಂಬುವ ನಿಟ್ಟಿನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಇವರು ರಚಿಸಿದ ಕನ್ನಡ ಅನುವಾದಿತ `ಬದುಕು ಬಯಲು’ ಎಂಬ ನಾಟಕವು ರಾಜ್ಯದ ಹಲವು ಜಿಲ್ಲೆಗಳಲ್ಲಿ ಯಶಸ್ವಿ ಪ್ರದರ್ಶನ ಕಂಡಿದೆ. ಇವರ ಜೀವನವನ್ನು ಆಧರಿಸಿದ `ಜನುಮದತ್ತ’ ಎಂಬ ನಾಟಕವು 50ಕ್ಕೂ ಹೆಚ್ಚು ಪ್ರದರ್ಶನ ಕಂಡು ಜನಮನ್ನಣೆ ಪಡೆದಿದೆ. ಈ ನಾಟಕದಲ್ಲಿ ತಾವೇ ಮುಖ್ಯ ಪಾತ್ರದಲ್ಲಿ ನಟಿಸಿದ್ದು ಕನ್ನಡ ರಂಗಭೂಮಿಗೊಂದು ಹೊಸ ಆಯಾಮ ಸಿಕ್ಕಂತಾಗಿದೆ. ರೇವತಿಯವರ ಜೀವನಾಧಾರಿತವಾಗಿ ರಚಿಸಿರುವ ಎನ್ನ ಕೊರಳ್ ತಮಿಳು ನಾಟಕವನ್ನು ಅವರೇ `ನನ್ನ ದನಿ’ ಎಂದು ಕನ್ನಡಕ್ಕೆ ತರ್ಜುಮೆ ಮಾಡಿದ್ದಾರೆ. ಗಂಡು ಹೆಣ್ಣುಗಳ ಚೌಕಟ್ಟಿನಾಚೆ ಭಿನ್ನ ಲಿಂಗಿಯಾಗಿ ಬದುಕುವುದು ಬಲು ಕಷ್ಟವಾಗಿರುವ ಬಗ್ಗೆ ನಾಟಕದಲ್ಲಿ ಎಳೆ- ಎಳೆಯಾಗಿ ಬಿಡಿಸಿದ್ದು ಸ್ವತಃ ಅವರೇ ಅಭಿನಯಿಸಿದ್ದಾರೆ. ಬೆಂಗಳೂರು, ಶಿವಮೊಗ್ಗ ಸೇರಿದಂತೆ ಹಲವಾರು ಕಡೆಗಳಲ್ಲಿ ನಾಟಕ ಯಶಸ್ವಿ ಪ್ರದರ್ಶನ ಕಂಡಿದೆ.
ಲೈಂಗಿಕ ಅಲ್ಪಸಂಖ್ಯಾತರ ಹೋರಾಟದ ಬಗ್ಗೆ ಹಲವಾರು ಲೇಖನಗಳನ್ನು ರೇವತಿ ಬರೆದು ಪ್ರಕಟಿಸಿದ್ದಾರೆ. ಇವರು ಬರೆದ ಹಲವಾರು ಲೇಖನಗಳು ದೇಶದ ವಿವಿಧ ಭಾಷೆಗಳಿಗೆ ತುರ್ಜುಮೆಯಾಗಿದೆ. ತಮ್ಮನ್ನು ಮಹಿಳೆಯೆಂದು ದೃಢೀಕರಿಸಿಕೊಂಡು ಪಾಸ್‍ಪೋರ್ಟ್‍ನಲ್ಲೂ ಮಹಿಳೆ ಎಂಬ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಇವರು ಯಶಸ್ವಿಯಾಗಿದ್ದಾರೆ. ಕನ್ನಡ, ತಮಿಳು ಹಾಗೂ ಹಿಂದಿ ಭಾಷೆಯನ್ನು ಬಲ್ಲ ಇವರು ಸಂಗಮ ಎಂಬ ಲೈಂಗಿಕ ಶೋಷಿತರ ಧ್ವನಿಯಾದ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದಾರೆ.
ಕರ್ನಾಟಕ ಸೇರಿದಂತೆ ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳ ರಾಜ್ಯದಲ್ಲೂ ಇವರು ಕಾರ್ಯನಿರ್ವಹಿಸಿರುತ್ತಾರೆ. ಲೈಂಕಿಕ ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಅಳವಾಗಿ ಅಧ್ಯಯನ ನಡೆಸುವ ಸಂಘಟನೆಗಳೊಂದಿಗೆ ಕೈ ಜೋಡಿಸಿರುತ್ತಾರೆ. ರಾಜ್ಯ ಸರಕಾರ ಹಿಂದುಳಿದ ವರ್ಗಗಳ ಆಯೋಗದೊಂದಿಗೆ ಹಲವು ವರ್ಷ ಕಾರ್ಯ ನಿರ್ವಹಿಸಿದ್ದರು.
ಇವರ ಇನ್ನಿತರ ಲೇಖನಗಳೆಂದರೆ `ಉನರುಮಂ ಉರುವವಂ’, `ದಿ ಟ್ರೂತ್ ಎಬೌಟ್ ಮಿ’ ಇವು ತಮಿಳು, ಮಲೆಯಾಳಂ ಮತ್ತು ತೆಲುಗಿಗೆ ಭಾಷಾಂತರವಾಗಿದೆ 20ಕ್ಕೂ ಹೆಚ್ಚು ಕಾಲೇಜು ಮತ್ತು ವಿಶ್ವವಿದ್ಯಾನಿಯಗಳಲ್ಲಿ ಪಠ್ಯಕ್ರಮವಾಗಿದೆ. 2010 ರಲ್ಲಿ ಹಮಾರಾ ಕಹಾನಿಯಾ ಹಮಾರಾ ಖಾಡೇ, ಹಿಜಡಾಕಾ ಜೀವನಯಾನ ಕಾ ಏಕ್ ಸಂಖನ್, 2016 ರಲ್ಲಿ ಎ ಲೈಫ್ ಇನ್ ಟ್ರಾನ್ಸ ಆಕ್ಟಿವಿಜಂ ಎಂಬ ಕೃತಿಗಳನ್ನು ರಚಿಸಿದ್ದಾರೆ.
ಮಂಗಳಮುಖಿಯರನ್ನು ಸಮಾಜದಲ್ಲಿ ಎಲ್ಲಾ ಕಡೆ ತಾತ್ಸಾರ ಭಾವದಿಂದ ನೋಡುತ್ತಾರೆ ಅವರನ್ನು ಮನುಷ್ಯರಂತೆ ಕಾಣೋರೆ ವಿರಳ. ಸಮಾಜದ ಮುಂದೆ ತಿರಸ್ಕ್ರತರಾಗಿ ಬದುಕುತ್ತಿದ್ದಾರೆ. ಸ್ವಾಭಿಮಾನದಿಂದ ಬದುಕುಬೇಕು ಮಂಗಳ ಮುಖಿಯರನ್ನು ಮಹಿಳೆಯರೆಂದು ಗುರುತಿಸಬೇಕು ಹಾಗೂ ಸಮಾಜ ಗೌವರಯುತವಾಗಿ ಕಾಣಬೇಕು ಈ ದಿಸೆಯಲ್ಲಿ ದೃಢನಿರ್ಧಾರ ತೆಗೆದುಕೊಂಡು ಮಂಗಳಮುಖಿಯರ ಶ್ರೇಯೋಭಿವೃದ್ಧಿಗೆ ಶ್ರಮಪಡುತ್ತಿರುವುದು ಯುವ ಪೀಳಿಗೆಗೆ ಉತ್ತಮ ಉದಾಹರಣೆ.
ಕೃಪೆ : ವಾರ್ತಾಭವನ ಶಿವಮೊಗ್ಗ
ಸುದ್ದಿದಿನ.ಕಾಂ|ವಾಟ್ಸಾಪ್|9980346243