ಬಹಿರಂಗ
ಸಪ್ತಪದಿ ಎಂದರೆ ಏನು..?
- ವಿ. ಎಸ್. ಬಾಬು
‘ದೇವ’ ಎಂಬ ಶಬ್ದಕ್ಕೆ ದೇವರೆಂದು ತಪ್ಪು ಅನುವಾದ ಮಾಡಿದ್ದರಿಂದ ಆರ್ಯರ ಸಾಮಾಜಿಕ ಜೀವನವನ್ನುಅರ್ಥಮಾಡಿಕೊಳ್ಳಲು ಅಡ್ಡಿಯಾಗಿದೆ. ದೇವ ಎನ್ನುವುದು ಒಂದು ಸಮುದಾಯದ ಹೆಸರು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆರ್ಯ ಮತ್ತು ದಸ್ಯು ಎಂಬಂತೆ ರಾಕ್ಷಸರು, ದೈತ್ಯರು, ದಾನವರು, ಬೇರೆಬೇರೆ ಸಮುದಾಯಗಳ ಹೆಸರುಗಳು ಎಂಬುದು ಖಚಿತ.
ದೇವತೆಗಳದು ಲಂಗು ಲಗಾಮಿಲ್ಲದ ಜನಾಂಗ. ಅವರು ಆರ್ಯ ಹೆಂಗಸರ ಜೊತೆ ಸಂಪರ್ಕ ಇಟ್ಟುಕೊಳ್ಳುತ್ತಿದ್ದರು. ಇದರ ಬಗ್ಗೆ ಅವರ ಆರ್ಯ ಗಂಡಂದಿರು ಹೆಮ್ಮೆಪಟ್ಟುಕೊಳ್ಳುತ್ತಿದ್ದರು.
ಆರ್ಯರ ಯಜ್ಞಗಳನ್ನು ಕೆಡಿಸುತ್ತಿದ್ದ ದಾನವರನ್ನು ದಮನ ಮಾಡಿದ್ದಕ್ಕಾಗಿ ದೇವತೆಗಳು ಆರ್ಯರಿಂದ ಎರಡು ದಾನಗಳನ್ನು ಪಡೆದರು :
- ದೇವತೆಗಳನ್ನು ಸಂತೃಪ್ತಿಪಡಿಸಲು ಯಜ್ಞ.
- ಆರ್ಯ ಹೆಣ್ಣುಗಳನ್ನು ಭೋಗಿಸಲು ದೇವತೆಗಳಿಗೆ ನಿರಾತಂಕ ಅವಕಾಶ.
ಹಾಗಾಗಿ ಪ್ರತಿಯೊಬ್ಬ ಋತುಮತಿಯಾದ ಆರ್ಯ ಹೆಣ್ಣು ಒಬ್ಬೊಬ್ಬ ದೇವತೆಗೆ ಅಡಮಾನವಾಗುತ್ತಿದ್ದಳು. ಇದನ್ನು ಮೇಲೆ ವಿಶ್ಲೇಷಿಸಿದ. ‘ವಿವಾಹ ಸೂಕ್ತ’ದ ಸೋಮ, ಗಂಧರ್ವ, ಅಗ್ನಿ, ಪೂಷನ್ ಮುಂತಾದ ದೇವತೆಗಳನ್ನು ಹೆಸರಿಸುವುದರಲ್ಲಿ ಕಾಣಬಹುದು. ಅವಳನ್ನು ಆರ್ಯನಿಗೆ ಮದುವೆ ಮಾಡಿ ಕೊಡುವುದಕ್ಕೆ ಮುನ್ನ ಅವಳನ್ನು ಇಟ್ಟುಕೊಂಡಿದ್ದ ದೇವತೆಗೆ ಶುಲ್ಕ ತೆತ್ತು ಅವಳನ್ನು ಬಿಡಿಸಿಕೊಳ್ಳಬೇಕಾಗಿತ್ತು. ಇದರ ವಿವರ (ಅಶ್ವಲಾಯನ ಗೃಹ ಸೂತ್ರದ ಒಂದನೆಯ ಅಧ್ಯಾಯದ ಏಳನೇ ಖಂಡಿಕೆಯಲ್ಲಿ) ಬರುತ್ತದೆ. ಇದು ‘ಸಪ್ತಪದಿ’ಯನ್ನು ಕುರಿತದ್ದು.
ಸಪ್ತಪದಿ ಎಂದರೇನು? ಧಾರೆ ಮುಹೂರ್ತದಲ್ಲಿ ಮೂವರು ದೇವತೆಗಳು:ಅರ್ಯಮನ್, ವರುಣ ಮತ್ತು ಪೂಷನ್ ಇರುತ್ತಿದ್ದರು; ಕಾರಣ ಮದುವೆಯಾಗುವ ಹೆಣ್ಣಿನ ಮೇಲೆ ಅವರಿಗೆ ಒಡೆತನವಿರುತ್ತಿತ್ತು. ಅಂದರೆ ಆ ಹೆಣ್ಣು ಅವರಿಗೆ ಅರ್ಪಿತವಾಗಿರುತ್ತಿದ್ದಳು.
ಮೊದಲನೆಯದಾಗಿ ವರ ಆ ವಧುವನ್ನು ಒಂದು ಕಲ್ಲು ಚಪ್ಪಡಿಯ ಮೇಲೆ ನಿಲ್ಲಿಸಿ ಹೇಗೆ ಹೇಳುತ್ತಿದ್ದನು: “ಈ ಚಪ್ಪಡಿಯ ಮೇಲೆ ನಡೆ; ಕಲ್ಲಿನಂತೆ ದೃಢವಾಗಿರು; ಶತ್ರುಗಳನ್ನು ಜಯಿಸು; ಅವರನ್ನು ತುಳಿದು ಹಾಕು”. ಇದರರ್ಥ ವರನಾದವನು ತನ್ನ ಹೆಣ್ಣನ್ನು ದೇವತೆಗಳಿಂದ ಬಿಡಿಸಿಕೊಳ್ಳಬೇಕಾಗಿತ್ತು. ತಮ್ಮನ್ನು ಶತ್ರುಗಳೆಂದು ಪರಿಗಣಿಸುವ ವರನ ಮೇಲೆ ಅವರು ಬೀಳುತ್ತಾರೆ. ಹೆಣ್ಣಿನ ಅಣ್ಣ ಮಧ್ಯಪ್ರವೇಶಿಸಿ ಜಗಳವನ್ನು ಬಿಡಿಸಲು ಪ್ರಯತ್ನಿಸುತ್ತಾನೆ. ಕೋಪಿಷ್ಠರಾದ ದೇವತೆಗಳಿಗೆ ಹುರಿಗಾಳನ್ನು ಅರ್ಪಿಸಿ ತನ್ನ ಸಹೋದರಿಯ ಮೇಲೆ ಅವರಿಗಿರುವ ಹಕ್ಕುಗಳನ್ನು ವಾಪಸು ಪಡೆದುಕೊಳ್ಳುತ್ತಾನೆ.
ಆಮೇಲೆ ಹೆಣ್ಣಿಗೆ ತನ್ನೆರಡು ಹಸ್ತಗಳನ್ನು ಜೋಡಿಸಿ ಬೊಗಸೆ ಮಾಡುವಂತೆ ತಿಳಿಸುತ್ತಾನೆ. ಆ ಬೊಗಸೆಗೆ ಹುರಿಗಾಳನ್ನು, ಅದರ ಮೇಲೆ ತುಪ್ಪವನ್ನು ಹಾಕುತ್ತಾನೆ. ಇದನ್ನು ಅವದಾನ ಎಂದು ಕರೆಯುತ್ತಾರೆ. ಈ ಅವದಾನವನ್ನು ಮಾಡುವಾಗ ವಧುವಿನ ಅಣ್ಣ ಮುಂದಿನಂತೆ ಹೇಳುವುದು ತುಂಬಾ ಅರ್ಥಗರ್ಭಿತವಾಗಿದೆ: “ಈ ಹೆಣ್ಣು ಅಗ್ನಿಯ ಮುಖಾಂತರ ಅರ್ಯಮನ್ ದೇವತೆಗಳಿಗೆ ಅವದಾನವನ್ನು ಮಾಡುತ್ತಿದ್ದಾಳೆ. ಆದ್ದರಿಂದ ಈ ಹೆಣ್ಣಿನ ಮೇಲಿರುವ ಹಕ್ಕನ್ನು ಅರ್ಯಮನ್ ದೇವ ಪರಿತ್ಯಜಿಸಬೇಕು; ವರನ ವಸ್ತುವಾಗಿರುವ ಇವಳಿಗೆ ತೊಂದರೆ ಮಾಡಬಾರದು”. ಇನ್ನುಳಿದ ಇಬ್ಬರು ದೇವತೆಗಳ ವಿಷಯದಲ್ಲಿ ಅವಳ ಅಣ್ಣ ಈ ಸೂತ್ರವನ್ನು ಬದಲಾಯಿಸುತ್ತಾನೆ. ಅವದಾನ ಮುಗಿದಮೇಲೆ ಅಗ್ನಿಯನ್ನು ಪ್ರದಕ್ಷಿಣೆ ಮಾಡುತ್ತಾರೆ. ಇದನ್ನೇ ‘ಸಪ್ತಪದಿ’ ಎಂದು ಕರೆಯುವುದು.ಅವರ ಪ್ರಕಾರ ಸಪ್ತಪದಿಯ ನಂತರಮದುವೆಪೂರ್ಣವಾಗುತ್ತದೆ,ನ್ಯಾಯೋಚಿತವಾಗುತ್ತದೆ,ಮಂಗಳಕರವಾಗುತ್ತದೆ.
ಇದು ಆರ್ಯರ ದೇವತೆಗಳಿಗೆ ಸಂಪೂರ್ಣವಾಗಿ ಗುಲಾಮರಾಗಿದ್ದುದನ್ನೂ ದೇವತೆಗಳು ಮತ್ತು ಆರ್ಯರು ನೈತಿಕವಾಗಿ ಅಧೋಗತಿಗಿಲಿದಿದ್ದುದನ್ನೂ ಚೆನ್ನಾಗಿ ತೋರಿಸುತ್ತದೆ.
ಹಿಂದೂ ವಿವಾಹದಲ್ಲಿ ಸಪ್ತಪದಿ ಎಷ್ಟು ಅತ್ಯಗತ್ಯ ಮತ್ತು ಸಪ್ತಪದಿ ಇಲ್ಲದಿದ್ದರೆ ಮದುವೆ ಕಾನೂನು ಬದ್ಧವಲ್ಲ ಎಂಬುದನ್ನು ವಕೀಲರು ಬಲ್ಲರು. ಸಪ್ತಪದಿಗೆ ಏಕೆ ಅಷ್ಟೊಂದು ಪ್ರಧಾನ್ಯವೆಂದು ಅನೇಕರಿಗೆ ಗೊತ್ತಿಲ್ಲ. ಕಾರಣ ಸ್ಪಷ್ಟವಿದೆ: ಮದುವೆಗೆ ಮುನ್ನ ಹೆಣ್ಣಿನ ಮೇಲೆ ತನಗಿದ್ದ ಹಕ್ಕನ್ನು ದೇವತೆ ಬಿಟ್ಟುಕೊಟ್ಟಿದ್ದಾನೆಯೇ ಹಾಗೂ ಅವದಾನದಿಂದ ಅವನು ಸಂತೃಪ್ತನಾಗಿದ್ದಾನೆಯೇ ಎಂಬುದರ ಪರೀಕ್ಷೆ ಅದು.
ಏಳು ಹೆಜ್ಜೆ ಇಡುವ ತನಕ ದೇವತೆ ತಕರಾರು ಮಾಡದಿದ್ದರೆ ಕೊಟ್ಟ ಪರಿಹಾರದಿಂದ ಅವನು ಸಂತುಷ್ಟನಾಗಿದ್ದಾನೆಂತಲೂ, ಈ ಹೆಣ್ಣಿನ ಮೇಲೆ ತನಗಿದ್ದ ಹಕ್ಕನ್ನು ಬಿಟ್ಟುಕೊಟ್ಟಿದ್ದಾನೆಂತಲೂ ನಿವಿರ್ವಾದವಾಗಿ ತಿಳಿಯಬೇಕು. ಇದನ್ನು ಬಿಟ್ಟರೆ ಸಪ್ತಪದಿಗೆ ಬೇರಾವ ಅರ್ಥವೂ ಇಲ್ಲ. ಪ್ರತಿಯೊಂದು ಮದುವೆಯಲ್ಲಿಯೂ ಸಪ್ತಪದಿ ತೀರಾ ಅಗತ್ಯವಾಗಿದ್ದುದನ್ನು ನೋಡಿದರೆ ದೇವತೆಗಳು ಮತ್ತು ಆರ್ಯರ ನೈತಿಕ ಆಧಃಪತನ ಎಷ್ಟು ಸಾರ್ವತ್ರಿಕವಾಗಿ ಹರಡಿತ್ತೆಂಬುದು ಗೊತ್ತಾಗುತ್ತದೆ.
ಸಪ್ತಪದಿ ತೀರಾ ಅವಮಾನಕರವಾದ ಒಂದು ವಿಧಿ. ಇದರ ಬಗೆಗಿನ ಕಾನೂನು ಅವಿವೇಕದ ಪರಮಾವಧಿ ನಿಜ. ಇದನ್ನು ತೊಡೆದು ಹಾಕಿದಾಗಲೇ ಭಾರತೀಯರಿಗೆ ಪರಮ ಗೌರವ.
ಅಕರ ಗ್ರಂಥಗಳು
1. Dr. Babasaheb Ambedkar: Writings and Speeches, vol.4. RIDDLES IN HINDUISM – an Exposition to Enlighten the Masses, p. 301-303; Education Department, Maharashtra Government, Bombay, 1987.]
2. ಶಂಕರಾಚಾರ್ಯ ಮತ್ತು ಪ್ರತಿಗಾಮಿತನ : ಕೆ.ಎಸ್.ಭಗವಾನ್
ಸುದ್ದಿದಿನ.ಕಾಂ|ವಾಟ್ಸಾಪ್|9980346243