ಲೈಫ್ ಸ್ಟೈಲ್
ಪಕ್ಷಿ ಪರಿಚಯ | ಚುಕ್ಕೆ ಮುನಿಯ
- ಭಗವತಿ ಎಂ.ಆರ್
ಗುಬ್ಬಚ್ಚಿ ಜಾತಿಗೆ ಸೇರಿದ ಹಕ್ಕಿಗಳಲ್ಲಿ ಚುಕ್ಕೆ ಮುನಿಯಗಳೂ ಸೇರಿವೆ. ದೂರದಿಂದ ನೋಡಿದರೆ ಗುಬ್ಬಚ್ಚಿಯಂತೆಯೇ ಕಾಣುವ, ಗುಬ್ಬಚ್ಚಿಗಿಂತಲೂ ಪುಟ್ಟದಾದ ಪಕ್ಷಿ. ಇವುಗಳನ್ನು ’ರಾಟವಾಳ’ಗಳೆಂದೂ ಕರೆಯುತ್ತಾರೆ. ಚುಕ್ಕೆ ಮುನಿಯಗಳಿಗೆ (Scaly-breasted Munia) ಎದೆ, ಹೊಟ್ಟೆಯ ಭಾಗದಲ್ಲಿ ಹುರುಪೆ ಎದ್ದಂತೆ ಚುಕ್ಕೆಗಳಿರುತ್ತವೆ. ಕೆಲವು ಕಡೆ ಸ್ಥಳೀಯರು ಇವುಗಳನ್ನು “ಅಬ್ಬಲಕ್ಕಿ” ಎನ್ನುತ್ತಾರೆ.
ಇವು ಸಂಘಜೀವಿಗಳು. ಬತ್ತದ ಗದ್ದೆಗಳಿಗೆ ಗುಂಪಾಗಿ ಧಾಳಿಯಿಡುವ ಇವು ಕೆಲವೊಮ್ಮೆ ಎಳೆ ಪೈರುಗಳನ್ನು ತಿನ್ನುವುದರಿಂದ ರೈತರಿಗೆ ಉಪದ್ರಕಾರಿಯೂ ಆಗಿಬಿಡುತ್ತವೆ. ಹಾಗೂ ಕ್ರಿಮಿಕೀಟಗಳನ್ನು ತಿಂದು ಉಪಕಾರಿಯೂ ಆಗಿವೆ. ಮುನಿಯಗಳು ಬಟ್ಟಲಿನಾಕಾರದ ಗೂಡುಗಳನ್ನು ಕಟ್ಟುತ್ತವೆ.
ಒತ್ತೊತ್ತಾದ ಗಿಡಗಳ ಒಳಗೆ ಅವು ಇರುವ ಜಾಗವನ್ನು ಕಂಡುಹಿಡಿಯುವುದು ಕಷ್ಟ. ಗೂಡಿನ ಪಕ್ಕದಿಂದ ಒಳದಾರಿಗಳನ್ನೂ ಮಾಡಿರುತ್ತವಂತೆ. ಚುರುಕಿನ ಕಣ್ಣು ಇರದಿದ್ದರೆ ಅವು ಹಾರಿದ್ದೇ ಗೊತ್ತಾಗುವುದಿಲ್ಲ. ಗೂಡು ಕಟ್ಟಲು ಹಸಿರು ಹುಲ್ಲು ಕೊಕ್ಕೊಳಗೆ ಹಿಡಿದು ಹಾರುವ ಮುನಿಯಗಳನ್ನು ನೋಡುವುದೇ ಚೆಂದ.
ಮುನಿಯಗಳಲ್ಲಿ ಕರಿತಲೆ ಮುನಿಯ (Black-headed Munia), ಕೆಂಪು ಮುನಿಯ (Red munia), ಬಿಳಿಕತ್ತಿನ ರಾಟವಾಳ (white-throated Munia), ಬಿಳಿಪೃಷ್ಠದ-ರಾಟವಾಳ (white-rumped Munia) ನಮ್ಮಲ್ಲಿ ಸಾಮಾನ್ಯವಾಗಿ ಕಂಡುಬರುವಂಥವು.
ಇವು ಮನೆಗಳಲ್ಲಿದ್ದರೆ ಶುಭಶಕುನ ಎಂದು ಭಾವಿಸುವುದರಿಂದ ಹಲವಾರು ತರಹದ ಮುನಿಯಗಳನ್ನು ಪಂಜರದಲ್ಲಿಟ್ಟು ಸಾಕುವ ರೂಢಿ ಇನ್ನೂ ಇದೆ. ಹಾರುವ ಹಕ್ಕಿಗಳನ್ನು ಅವುಗಳ ಪಾಡಿಗೆ ಬಿಟ್ಟರೆ ಅದೇ ನಮ್ಮ ಹಕ್ಕಿಗಳಿಗೆ ಶುಭಶಕುನ.
| ಫೋಟೋ ಮತ್ತು ಬರಹ : ಭಗವತಿ ಎಂ.ಆರ್
ಸುದ್ದಿದಿನ.ಕಾಂ|ವಾಟ್ಸಾಪ್|9980346243