ಬಹಿರಂಗ

ಜಾನಪದ, ಪುರಾಣ, ಇತಿಹಾಸದಲ್ಲಾಗಲಿ ಯಾರಿಗೆ ಒಲಿದಿದ್ದಾನೆ ಶಿವ..?

Published

on

  • ಪರಶುರಾಮ್. ಎ

ಶಿವರಾತ್ರಿ ಹಬ್ಬ ಬಂತು ಎಲ್ಲೆಡೆ ಸಂಭ್ರಮದಿಂದ ಹಬ್ಬವನ್ನು ಆಚರಿಸಲಾಗುತ್ತಿದೆ. ಎಲ್ಲರೂ ಭಕ್ತಿಯಿಂದ ಶಿವನ ಆರಾಧನೆ ಮಾಡಿ ಕೊಂಡಾಡುತ್ತಾರೆ. ಶಿವ ನಮಗೆ ಒಲಿಯಲಿ, ನಮಗೆ ಒಲಿಯಲಿ ಎಂದು ನಾನ ವಿಧದ ಪೂಜೆ, ಅರ್ಚನೆ. ಅಭಿಷೇಕ ಎಲ್ಲವನ್ನೂ ಕೈಗೊಳ್ಳುತ್ತಾರೆ. ಆದರೆ ಈ ಶಿವ ನಿಜವಾಗಿಯೂ ಯಾರಿಗೆ ಹೆಚ್ಚು ಒಲಿದಿದ್ದಾನೆ ಎಂದು ಪುರಾಣ ಕಥೆಗಳು ಹಾಗೂ ಶೈವ ಕತೆಗಳನ್ನು ಗಮನಿಸೊದಾದರೆ ಶಿವ ಬಹಳ ಮಂದಿಗೆ ಒಲಿದಿರುವುದ ಕಾಣಬಹುದು.

ಈ ಬಹಳ ಮಂದಿಯೆಂದರೆ ಬಹುಜನರಿಗೂ ಎಂಬ ಕಲ್ಪನೆ ಹೊಂದಬಹುದು. ಯಾರು ಈ ಬಹು ಜನ? ಇದನ್ನು ಮೊದಲು ತಿಳಿಯೊಣ. ಶಿವ ತನ್ನ ಭಕ್ತರು ಯಾವುದೇ ನೀರು ಆಹಾರ ಅಭಿಷೇಕ ಪೂಜೆ ಕೊಡದಿದ್ದರು ಸಹ ನಿರ್ಮಲ ಭಕ್ತಿಯೊಂದಕ್ಕೆ ಸೋಲುವಂತಹ ಜಾಯಾಮಾನದವನು ಇದಕ್ಕೆ ಉದಾಹರಣೆ ರಾವಣನೇ ಸಾಕ್ಷಿ.

ರಾವಣ, ತನ್ನ ತಾಯಿಯ ಲಿಂಗ ಪೂಜೆ ಕೈಗೊಳ್ಳಲು ಶಿವನ ಆತ್ಮಲಿಂಗವನ್ನೆ ಹೊತ್ತು ತಂದ. ‌ಅದು ಕೇವಲ ತನ್ನ ಹಿಮಾಲಯ ರೂಪದ ಶಿವನ ನಾಮ ಜಪದಿಂದ ಮಾತ್ರ. ಬೇಡರ ದಿಣ್ಣನಿಗೆ ಶಿವ ಒಲಿದ ಬಗೆಯನ್ನು ಒಮ್ಮೆ ಗಮನಿಸಿ ಹಸಿದ ಹೊಟ್ಟೆಗೆ ಬೇಡಿದ ಮಾತ್ರಕ್ಕೆ ಬೇಟೆ ನೀಡಿದ.‌ ಶಿವನು ಈ ಬೇಡರ ದಿಣ್ಣನಿಗೆ ಒಲಿದು ಅವನನ್ನು “ಬೇಡರ ಕಣ್ಣಪ್ಪ” ಎಂದಾಗಿಸಿದ.

ಶರಣರ ಯುಗದಲ್ಲಿ ಕಾಯಕವೇ ಕೈಲಾಸ ಎಂದು ನಂಬಿದ್ದ ಅದೆಷ್ಟೋ ಮಹನೀಯರುಗಳಿಗೆ. ಅಷ್ಟೇ ಯಾಕೆ ಶರಣ ಯುಗದ ಕಾಲದಲ್ಲಿ ಶಿವಶರಣರಿಗೂ ಶಿವನು ಒಲಿದ ಸಾವಿರಾರು ಕತೆಗಳು ನಮಗೆ ಸಾಕ್ಷಿ ರೂಪದಲ್ಲಿ ಸಿಗುತ್ತವೆ. ಶರಣರು ಇಡೀ ಮುನ್ನೂರು ಮುಕ್ಕೋಟಿ ದೇವರುಗಳಲ್ಲಿ ಶಿವನನ್ನೆ ಆಯ್ದು ಕೊಂಡದ್ದಾದರೂ ಏಕೆ? “ಶಿವ ಮೂಲತಃ ದ್ರಾವಿಡರ ಮೂಲನಿವಾಸಿಗಳ ಆರಾಧ್ಯದೈವ”.

ಹೊರೆಯಾಲ ದೊರೈಸ್ವಾಮಿ ತಮ್ಮ ‘ಗೊಂಚಲು’ ಪುಸ್ತಕದಲ್ಲಿ ‘ಶಿವ ಮಹಿಮೆ’ಯೆಂಬ ಲೇಖನವೊಂದರಲ್ಲಿ “ಶಿವನು ದ್ರಾವಿಡರ ನಾಯಕ(ದೇವರು) ಆಗಿದ್ದನೆಂಬುದಕ್ಕೆ ಬೇರೆ ಬೇರೆ ಆಚರಣೆ ಕಥೆಗಳು ಸಾಕಷ್ಟು ಮಾಹಿತಿಯನ್ನು ನೀಡುತ್ತದೆ. ದ್ರಾವಿಡರ ಒಂದು ಗುಂಪಾದ ಕನ್ನಡಿಗರನ್ನೆ ತೆಗೆದುಕೊಳ್ಳಿ, ಕನ್ನಡಿಗರಲ್ಲಿ ತರಾವರಿ ಜಾತಿಗಳು ಇದ್ದೇ ಇವೆಯಲ್ಲ? ತರಾವರಿ ಜಾತಿಯ ಜನರು (ಬಹುಪಾಲು) ಇಂದಿಗೂ ಶಿವನ ಆರಾಧಕರೇ ಅಲ್ಲವೇ? ಅದೇ ವಿಷ್ಣು ಆರಾಧಕರು ಯಾವ ಪ್ರಮಾಣದಲ್ಲಿ ಇದ್ದಾರೆ?

ಇನ್ನೂ ಕೊಂಚ ಬಿಡಿಸಿ ಹೇಳುವುದಾದರೆ ಕನ್ನಡಿಗರಲ್ಲಿ ವಿಭೂತಿಯ ಲಾಂಛನವನ್ನು ಬಳಸುವವರು ಹೆಚ್ಚೊ ಅಥವಾ ನಾಮ,ಮುದ್ರೆಗಳನ್ನು ಬಳಸುವವವರು ಹೆಚ್ಚೊ? ಇನ್ನೂ ಜನಪದ ಕಥೆಗಳನ್ನು ತೆಗೆದುಕೊಳ್ಳಿ. ಅಲ್ಲೆಲ್ಲ ಕಾಣಿಸಿಕೊಳ್ಳುವ ದೇವರು ಯಾರು ?ದ್ರಾವಿಡರ ಶಿವ ಪಾರ್ವತಿ ಅಲ್ಲವೇ? ಹಾಗೆಯೇ ಪುರಾಣೇತಿಹಾಸಗಳನ್ನು ತೆಗೆದುಕೊಳ್ಳಿ. ಅಲ್ಲೆಲ್ಲ ರಾಕ್ಷಸ ಪಾತ್ರಧಾರಿಯಾದ ದ್ರಾವಿಡರು ಪೂಜಿಸುವುದು ಯಾರನ್ನು? ಅವರ ದೇವರಾದ ಶಿವನನ್ನೇ ತಾನೇ!!!!! ಹೀಗೆ ಹಲವು ಬಗೆಯಿಂದ ಪರೀಕ್ಷಿಸಿ ನೋಡಿದರೂ ದ್ರಾವಿಡರ ನಾಯಕನಾಗಿ(ದೇವರಾಗಿ) ಶಿವ ಕಾಣುತ್ತಾನೆ. ಹೀಗೆ ಶಿವನು ಒಲಿದ ಭಕ್ತರ ಒಬ್ಬೊಬ್ಬರನ್ನೆ ಹೆಸರಿಸಿದರು ಅದು ನೂರಾರು ಹೆಸರುಗಳನ್ನು ಒದಗಿಸಬಹುದು”.

ಉದಾಹರಣೆಗೆ ಗಮನಿಸೊಣ ರಾವಣ. ಬೇಡರ ಕಣ್ಣಪ್ಪ. ‌ಬಸವಣ್ಣ. ಒಕ್ಕಲಿಗರ ಮುದ್ದಪ್ಪ.ಕುಂಬಾರ ಗುಂಡಣ್ಣ. ಅಡಪದ ಅಪ್ಪಯ್ಯ.ಮಡಿವಾಳ ಮಾಚಯ್ಯ. ಕುರುಬರ ಬೀರಪ್ಪ.ಹೊಲೆಯರ ಹೊನ್ನಯ್ಯ. ಮಾದಿಗರ ಹರಳಯ್ಯ.ಮಾದಾರ ಚೆನ್ನಯ್ಯ.(ಜಾನಪದ ಗೀತೆಯೊಂದಿದೆ ಶಿವನೇ ನಿನ್ನಾಟ ಬಲ್ಲವರು ಯಾರ್ಯಾರೊ ಎಂದು ಅದನ್ನೇ ಒಮ್ಮೆ ಕೇಳಿ ಶಿವ ಇದುವರೆಗೆ ಒಲಿದ ಶರಣರುಗಳು ಯಾರ್ಯಾರು ಎಂದು ನಿಮಗೆ ತಿಳಿಯುತ್ತದೆ.ಇದು ಜಾನಪದದಿಂದ ಹಿಡಿದು ಪುರಾಣಗಳವರೆಗೆ ಸಾಕ್ಷಿ ನೀಡುತ್ತದೆ.

ಯಾವುದೇ ವಿಧ ವಿಧದ ಪೂಜೆ ಇತ್ಯಾದಿ ಮಾಡದೆ ಒಲಿದ ಶಿವ ಇದುವರೆಗೆ ಹೇಳಿದ ವ್ಯಕ್ತಿಗಳೆಲ್ಲರೂ ತಳಸಮುದಾಯಕ್ಕೆ ಸೇರಿದವರೆ. ಯಾರು ಉತ್ತಮ ಎಂದು ಹೇಳಿ ಕೊಳ್ಳುವ ಬ್ರಾಹ್ಮಣ ಜಾತಿಗೆ ಸೇರಿದವರಲ್ಲ. ಇಂದು ಅದೆಷ್ಟೋ ಶಿವಾಲಯ ನಾವು ಕಾಣಬಹುದು ಅಲ್ಲಿ ಪೂಜೆ,ಅರ್ಚನೆ, ಅಭಿಷೇಕ ಮಾಡಿದರೆನೆ ಶಿವ ನಮಗೆ ಒಲಿಯುವುದು ಎಂಬ ಭ್ರಮೆ ನಮಗೆ ಒಂದು ವಲಯವು ಅದನ್ನು ಸೃಷ್ಟಿಸಿದೆ. ಆ ವಲಯವೇ ಬ್ರಾಹ್ಮಣ್ಯ ವಲಯ.

ಇದುವರೆಗೆ ನಾ ಹೇಳಿದ ಸಾಕ್ಷಿಯನ್ನೆಲ್ಲ ಗಮನಿಸಿದ ನೀವುಗಳು ಅವರ ಸಾಲಿನಲ್ಲಿ ನಿಲ್ಲಬಹುದಾದ ಶಿವನು ಬ್ರಾಹ್ಮಣರಿಗೆ ಒಲಿದ ಅಥವಾ ಬ್ರಾಹ್ಮಣರು ಶಿವನ ಒಲಿಸಿಕೊಂಡ ಸಾಕ್ಷಿ ಒದಗಿಸಿ ನೋಡುವ!?. ಉಹೂಂ ಒಬ್ಬರು ನಮಗೆ ಕಾಣಲಾರರು! ಪೂಜೆ, ಅಭಿಷೇಕ, ಅರ್ಚನೆ ಇವು ಯಾವುದು ಶಿವ ಮೆಚ್ಚಲಾರ! ಆತನಿಗೆ ಬೇಕಾದ್ದು ಪ್ರದರ್ಶನದ ಅಹಂ,ಆಡಂವರ,ಡಾಂಭಿಕ ಭಕ್ತಿಯಲ್ಲ.‌ ನಿರ್ಮಲ ಮನಸ್ಸಿನ ನಿರ್ಲಿಪ್ತ ಭಕ್ತಿಯೊಂದೆ. ಶಿವನು ಹೀಗೆ ಕೇಳಲಾರರ ಆದರೆ ತನ್ನ ಭಕ್ತರಿಂದ ಬಯಸುವುದೊಂದೆ ನಿರ್ಲಿಪ್ತ ಭಕ್ತಿ. ಕಾಯಕವೇ ಕೈಲಾಸ ಎಂಬ ತತ್ವದಲ್ಲಿ ತನ್ನ ಕಾಣಿರೊ ಎಂಬ ವಚನದಂತೆ. ಕಾಯಕವೇ ಕೈಲಾಸ ಎಂದು ನಂಬಿದ್ದ ಶರಣರಿಗೆ ಶಿವ ಒಲಿದಿರುವುದು.

(1-ರಾವಣ ಒಬ್ಬ ಅಸಾಮಾನ್ಯ ಶಿವಭಕ್ತ. ಆತ ದ್ರಾವಿಡ ರಾಜ.
2-ಹೆಸರುಗಳ ತಿಳಿಯಲು ಲಕ್ಷ್ಮಣ್ ರವರ ಶರಣರ ಪವಾಡಗಳು ಪುಸ್ತಕ ಓದಿ.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version