ನೆಲದನಿ

ಕೋಟೆ ನಾಡಿನಲ್ಲೊಂದು ಬಂಡಾಯ ದನಿ: ಡಾ.ಸಿ.ಶಿವಲಿಂಗಪ್ಪ ಮೀರಾಸಾಬಿಹಳ್ಳಿ

Published

on

  • ಡಾ.ಕೆ.ಎ.ಓಬಳೇಶ್

ಮಾನವನ ಬದುಕಿನ ಚಾರಿತ್ರಿಕ ಹಿನ್ನೆಲೆಯನ್ನು ಸೂಕ್ಷ್ಮವಾಗಿ ಗಮನಿಸುತ್ತ ಬಂದರೆ ಪ್ರತಿಯೊಬ್ಬ ವ್ಯಕ್ತಿಯು ಒಂದಿಲ್ಲೊಂದು ಕಾರಣಕ್ಕಾಗಿ ಪ್ರತಿಭಟನೆ ಮತ್ತು ಹೋರಾಟಗಳನ್ನು ಮುಂದುವರೆಸಿಕೊಂಡು ಬಂದಿದ್ದಾನೆ. ಈ ಪ್ರತಿಭಟನೆ ಮತ್ತು ಹೋರಾಟಗಳ ಸ್ವರೂಪ ಭಿನ್ನವಾಗಿರಬಹುದು. ಆದರೆ ಇವೆಲ್ಲ ಬಂಡಾಯ ಕೇಂದ್ರಿತವಾದವುಗಳೆ.

ಭಾರತದಂತಹ ಬಹುತ್ವದ ನಾಡಿನಲ್ಲಿ ಬಂಡಾಯವು ನಿರಂತರವಾದ ಪ್ರಕ್ರಿಯೆಯಾಗಿದೆ. ಇಲ್ಲಿನ ಅಸಮಾನತೆ, ಲಿಂಗತಾರತಮ್ಯ, ಅಸ್ಪೃಶ್ಯತೆಯಂತಹ ಅಮಾನವೀಯ ಆಚರಣೆಗಳ ವಿರುದ್ಧ ಹಲವಾರು ದಾರ್ಶನಿಕರು, ಚಿಂತಕರು ಹಾಗೂ ಪ್ರಗತಿಪರರು ನಿರಂತರವಾದ ಬಂಡಾಯದ ಮೂಲಕವಾಗಿ ಹೋರಾಟಗಳನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಕರ್ನಾಟಕದಲ್ಲಿ ಎಪ್ಪತ್ತರ ದಶಕದ ವೇಳೆಗೆ ತಳಸಮುದಾಯದಿಂದ ಬಂದ ಶಿಕ್ಷಿತ ಸಮುದಾಯವು ಇಂತಹ ಸಾಮಾಜಿಕ ಅಸಮಾನತೆಯ ವಿರುದ್ಧ ಚಳವಳಿಯನ್ನು ರೂಪಿಸುವ ಮೂಲಕ ಸಮಸಮಾಜಕ್ಕಾಗಿ ತುಡಿಯುತ್ತ ಬಂದಿದ್ದಾರೆ.

ಈ ಸಂದರ್ಭದಲ್ಲಿಯೇ ಬಂಡಾಯ ಸಾಹಿತ್ಯ ಸಂಘಟನೆ ಜನ್ಮತಳೆದು ‘ಖಡ್ಗವಾಗಲಿ ಕಾವ್ಯ ಜನರ ನೋವಿಗೆ ಮಿಡಿವ ಪ್ರಾಣಮಿತ್ರ’ ಎಂಬ ಘೋಷವಾಕ್ಯದ ಮೂಲಕ ಸಮತೆಯ ಭಾರತಕ್ಕಾಗಿ ಮಿಡಿದಿದೆ. ಎಂಬತ್ತರ ದಶಕದ ವೇಳೆಗೆ ಜನ್ಮತಳೆದ ಬಂಡಾಯ ಸಾಹಿತ್ಯ ಮತ್ತು ಚಳವಳಿಯನ್ನು ಮುನ್ನಡೆಸುವಲ್ಲಿ ಕರ್ನಾಟಕದ ಮೂಲೆ ಮೂಲೆಯಿಂದಲೂ ಪ್ರಜ್ಞಾವಂತ ಮನಸ್ಸುಗಳು ಶ್ರಮಿಸಿವೆ. ಇಂತಹ ಪ್ರಜ್ಞಾವಂತ ಮನಸ್ಸುಗಳಲ್ಲಿ ಕೋಟೆನಾಡಿನ ಪ್ರೊ.ಸಿ.ಶಿವಲಿಂಗಪ್ಪನವರು ಒಬ್ಬರಾಗಿದ್ದಾರೆ.

ಶ್ರೀಯುತ ಸಿ.ಶಿವಲಿಂಗಪ್ಪನವರು1955 ರಲ್ಲಿ ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲ್ಲೂಕಿನ ಮೀರಾಸಾಬಿಹಳ್ಳಿಯಲ್ಲಿ ಶ್ರೀ ಚಿಕ್ಕೀರಪ್ಪ ಮತ್ತು ಶ್ರೀಮತಿ ಹನುಮಕ್ಕ ದಂಪತಿಗಳ ಹಿರಿಯ ಮಗನಾಗಿ ಜನಿಸಿದರು. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮವಾದ ಮೀರಾಸಾಬಿಹಳ್ಳಿಯಲ್ಲಿ, ಪ್ರೌಢ, ಪದವಿಪೂರ್ವ ಶಿಕ್ಷಣವನ್ನು ಚಳ್ಳಕೆರೆ ಮತ್ತು ಚಿತ್ರದುರ್ಗದಲ್ಲಿ, ಪದವಿ ಶಿಕ್ಷಣವನ್ನು ಚಳ್ಳಕೆರೆಯಲ್ಲಿ ಪೂರೈಸಿದರು.

ಪದವಿಪೂರ್ವ ಶಿಕ್ಷಣದಲ್ಲಿ ವಿಜ್ಞಾನ ವಿಷಯವನ್ನು ಆಯ್ದುಕೊಂಡು ಅಧ್ಯಯನ ಪೂರೈಸಿದ ನಂತರ ಮನೆಯಲ್ಲಿನ ಒತ್ತಡದ ಕಾರಣದಿಂದ ಒಂದು ವರ್ಷ ಶಿಕ್ಷಣವು ಮೊಟಕುಗೊಂಡಿತು. ನಂತರ ಪದವಿಯಲ್ಲಿ ಐಚ್ಚಿಕ ಕನ್ನಡವನ್ನು ಆಯ್ದುಕೊಂಡು ಅಧ್ಯಯನಕ್ಕೆ ಮುಂದಾದರು. ಓದಿನಲ್ಲಿ ವಿಶಿಷ್ಟವಾದ ಆಸಕ್ತಿಯನ್ನು ಹೊಂದಿದ್ದ ಇವರು ಪದವಿ ಹಂತದಲ್ಲಿಯೇ ಸಾಹಿತ್ಯದ ಅಭಿರುಚಿಯನ್ನು ಮೈಗೂಡಿಸಿಕೊಂಡಿದ್ದರು. ಇದರೊಂದಿಗೆ ಬಾಲ್ಯದ ದಿನಗಳಿಂದಲೂ ಗ್ರಾಮೀಣ ಪರಿಸರದಲ್ಲಿ ಬೆಳೆದ ಇವರು ಹಲವಾರು ಜನಪದ ಕಲೆಗಳನ್ನು ರೂಢಿಸಿಕೊಂಡಿದ್ದರು.

ಪದವಿ ಶಿಕ್ಷಣ ಪಡೆಯುವ ಹಂತಕ್ಕಾಗಲೇ ಸಾಮಾಜಿಕ ನಾಟಕಗಳಲ್ಲಿ ಅಭಿನಯಿಸುವ ಮೂಲಕ ಜನಪದ ಕಲೆಯಲ್ಲಿ ವಿಶಿಷ್ಟವಾದ ಅಭಿರುಚಿಯನ್ನು ಬೆಳೆಸಿಕೊಂಡಿದ್ದರು. ಪದವಿಯಲ್ಲಿ ಐಚ್ಚಿಕ ಕನ್ನಡವನ್ನು ಆಯ್ದುಕೊಂಡ ಕಾರಣದಿಂದಾಗಿ ತಮ್ಮ ಸುತ್ತಮುತ್ತಲಿನ ಜನಜೀವನ ಹಾಗೂ ಪ್ರಾಕೃತಿಕ ಪರಿಸರವನ್ನು ಆಪ್ತವಾಗಿ ಕಾಣುವ ಮತ್ತು ಇದು ನಮ್ಮದೆಂದು ಅರಿಯುವ ಸಂವೇದನೆ ಮೂಡಿತ್ತು.

ಗುರುಗಳಾದ ಮೀರಾಸಾಬಿಹಳ್ಳಿ ಶಿವಣ್ಣ, ಬಿ.ಪಿ.ವೀರೇಂದ್ರಕುಮಾರ್ ಹಾಗೂ ಬಿ.ಬಿ.ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಬೆಳೆದು, ಪಠ್ಯ ಮತ್ತು ಪಠ್ಯೇತರ ಚಟುವಟಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾಹಿತ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದರು.

ಪದವಿ ಹಂತದಲ್ಲಿ ಮೂಡಿದ ಸಾಹಿತ್ಯದ ಅಭಿರುಚಿಯಿಂದಾಗಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯಲು ಮುಂದಾದರು. ಈ ಸಂದರ್ಭದಲ್ಲಿ ತನ್ನ ತವರು ಜಿಲ್ಲೆಯ ಒಡನಾಡಿಗಳಾದ ಪ್ರಹ್ಲಾದ್ ಅಗಸನಕಟ್ಟೆ, ಜಿ.ಎನ್.ಮಲ್ಲಿಕಾರ್ಜುನಪ್ಪ ಅವರೊಂದಿಗೆ ಆಪ್ತವಾದ ಒಡನಾಟ ಬೆಳೆಯಿತು. ಇವರ ಒಡನಾಟ ಮತ್ತಷ್ಟು ಗಟ್ಟಿಯಾಗಲು ಎಲ್ಲರ ಸಮಾನವಾದ ಬಡತನದ ಬದುಕು, ಸಂವೇದನೆ ಹಾಗೂ ಸಾಹಿತ್ಯಾಭಿರುಚಿಗಳು ಪ್ರಮುಖ ಕಾರಣವಾಗಿದ್ದವು.

ಇವರ ಒಡನಾಟದಿಂದಾಗಿ ಸಿ.ಶಿವಲಿಂಗಪ್ಪನವರಿಗೆ ಸಾಹಿತ್ಯದಲ್ಲಿ ಮತ್ತಷ್ಟು ಒಲವು ಮೂಡಿತು. ಪ್ರಹ್ಲಾದ್ ಅಗಸನಕಟ್ಟೆಯವರು ಅತ್ಯುತ್ತಮ ಕತೆಗಾರರಾಗಿದ್ದು, ಜಿ.ಎನ್.ಮಲ್ಲಿಕಾರ್ಜುನಪ್ಪನವರು ಸಾಹಿತ್ಯದ ಅಭಿರುಚಿಯನ್ನು ಹೊಂದಿದವರಾಗಿದ್ದರು. ಸ್ನಾತಕೋತ್ತರ ಅಧ್ಯಯನ ಮಾಡುವ ಹಂತದಲ್ಲಿಯೇ ಕನ್ನಡದ ಪ್ರಸಿದ್ಧ ಸಾಹಿತಿಗಳಾದ ಯು.ಆರ್.ಅನಂತಮೂರ್ತಿ, ದೇವನೂರು ಮಹಾದೇವ ಹಾಗೂ ಇತರೆ ಸಾಹಿತಿಗಳ ಸಂದರ್ಶನ, ಅವರೊಂದಿಗೆ ಸಾಹಿತ್ಯ ಮತ್ತು ಸಾಮಾಜಿಕ ಕಟ್ಟುಪಾಡುಗಳ ಕುರಿತು ಚರ್ಚೆಯಲ್ಲಿ ತಲ್ಲೀನರಾಗುತ್ತಿದ್ದರು.

ಇದೇ ಸಂದರ್ಭದಲ್ಲಿ ಆಗ ತಾನೇ ಸಮಸಮಾಜದ ಕನಸೊತ್ತು ಜನ್ಮತಳೆದಿದ್ದ ಲಂಕೇಶ್ ಪತ್ರಿಕೆಯ ಒಡನಾಟವನ್ನು ಬೆಳೆಸಿಕೊಂಡರು. ಹೀಗೆ ಆಪ್ತ ಸ್ನೇಹಿತರು ಹಾಗೂ ಕನ್ನಡದ ಹೆಸರಾಂತ ಸಾಹಿತಿಗಳ ಒಡನಾಟದಿಂದಾಗಿ ಇವರಿಗೆ ಸಾಹಿತ್ಯದಲ್ಲಿ ವಿಶೇಷವಾದ ಆಸಕ್ತಿ ಮೈಗೂಡಿತು. ಹಾಗೆಯೇ ಸಮಸಮಾಜದ ಆಶಯಗಳೊಂದಿಗೆ ಪಿ.ಲಂಕೇಶ್ ಅವರ ನೇತೃತ್ವದಲ್ಲಿ ಆರಂಭವಾದ ‘ಪ್ರಗತಿರಂಗ’ ಪಕ್ಷದ ಚಟುವಟಿಕೆಗಳಲ್ಲಿ ಒಲವುಳ್ಳ ಹಿನ್ನೆಯಲ್ಲಿ ಸ್ವಗ್ರಾಮವಾದ ಮೀರಸಾಬಿಹಳ್ಳಿಯಲ್ಲಿ ಸಮಾರಂಭವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮಕ್ಕೆ ಪಿ.ಲಂಕೇಶ್ ಅವರು ಆಗಮಿಸಿರುತ್ತಾರೆ.

ಶ್ರೀಯುತರು ಸ್ನಾತಕೋತ್ತರ ಪದವಿ ಪಡೆದ ನಂತರ 1981ರಲ್ಲಿ ಮೊದಲ ಬಾರಿಗೆ ತಾವು ಶಿಕ್ಷಣ ಪಡೆದ ಚಳ್ಳಕೆರೆ ಪ್ರಥಮ ದರ್ಜೆ ಕಾಲೇಜಿನಿಂದಲೇ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಹೀಗೆ ಚಳ್ಳಕೆರೆಯಿಂದ ಆರಂಭವಾದ ವೃತ್ತಿ ಜೀವನವು ಚಿತ್ರದುರ್ಗ, ಸಕಲೇಶಪುರ, ಪರಶುರಾಮಪುರ, ಹೊನ್ನಾಳಿ, ಹಿರಿಯೂರುಗಳಲ್ಲಿ ಮುಂದುವರೆಯಿತು. ಸುಮಾರು 35 ವರ್ಷಗಳ ನಿರಂತರವಾದ ಬೋಧನೆಯೊಂದಿಗೆ ಪ್ರಾಂಶುಪಾಲರಾಗಿ 2015ರಲ್ಲಿ ವೃತ್ತಿಯಿಂದ ನಿವೃತ್ತಿ ಹೊಂದಿರುತ್ತಾರೆ. ತಮ್ಮ ವೃತ್ತಿ ಜೀವನದ ಸಂದರ್ಭದಲ್ಲಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಗುರುಗಳಾಗಿದ್ದವರು.

ಇವರು ವಿದ್ಯಾರ್ಥಿಗಳನ್ನು ಕೇವಲ ಪಠ್ಯಕ್ಕೆ ಮಾತ್ರ ಸೀಮಿತಗೊಳಿಸದೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಕ್ರಿಯಾಶೀಲರಾಗುವಂತೆ ಮುನ್ನಡೆಸಿಕೊಂಡು ಬಂದಿರುತ್ತಾರೆ. ಹಾಗೆಯೇ ವಿದ್ಯಾರ್ಥಿಗಳಲ್ಲಿ ವೈಚಾರಿಕತೆ ಮತ್ತು ಸಾಮಾಜಿಕ ಅಸಮಾನತೆಯ ವಿರುದ್ಧ ಬಂಡಾಯ ಪ್ರಜ್ಞೆ ಮೂಡಿಸುವಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿರುತ್ತಾರೆ.

ಕಾಲೇಜಿನಲ್ಲಿ ನಡೆಸುವ ಪ್ರತಿಯೊಂದು ಕಾರ್ಯಕ್ರಮಗಳನ್ನು ಪ್ರಾರ್ಥನೆಯ ಮೂಲಕವೇ ಆರಂಭಿಸುವ ಸಾಂಪ್ರದಾಯಿಕ ಮಾದರಿಯನ್ನು ಬದಲಾಯಿಸಿ ‘ಬದುಕಿನ ಗೀತೆ’ಗಳ ಮೂಲಕ ಕಾರ್ಯಕ್ರಮವನ್ನು ಆರಂಭಿಸುವಲ್ಲಿ ಮಹತ್ವದ ಪಾತ್ರವಹಿಸಿರುತ್ತಾರೆ. ಹಾಗೆಯೇ ತಮ್ಮ ಪ್ರತಿಯೊಬ್ಬ ವಿದ್ಯಾರ್ಥಿಗೂ ಸಭಾವೇದಿಕೆ ಭಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರವಹಿಸಿರುತ್ತಾರೆ.

ಬಾಲ್ಯದ ದಿನಗಳಿಂದಲೂ ಬಡತನದ ಕಹಿಯುಂಡು ಬೆಳೆದ ಶ್ರೀಯುತ ಸಿ.ಶಿವಲಿಂಗಪ್ಪನವರು ಸಾಮಾಜಿಕ ಅಸಮಾನತೆಯ ವಿರುದ್ಧ ವೈಚಾರಿಕ ದೃಷ್ಟಿಕೋನ ಬೆಳೆಸಿಕೊಂಡವರು. ಕುವೆಂಪು ಹಾಗೂ ಎಡಪಂಥಿಯ ಧೋರಣೆಯುಳ್ಳ ದಲಿತ-ಬಂಡಾಯ ಸಾಹಿತ್ಯ, ಚಳವಳಿಗಳ ಸಂಘಟನಾತ್ಮಕ ನಾಯಕತ್ವ ವಹಿಸಿಕೊಂಡಿದ್ದ ಬರಗೂರು ರಾಮಚಂದ್ರಪ್ಪನವರ ವೈಚಾರಿಕ ಚಿಂತನೆಗಳಿಂದ ಪ್ರಭಾವಿತರಾದ ಇವರು, ಬಂಡಾಯ ಚಳವಳಿಯಲ್ಲಿ ಸಕ್ರಿಯ ಕಾರ್ಯಕರ್ತರಾಗಿ ದುಡಿಯುತ್ತ ಬಂದಿದ್ದಾರೆ.

ಚಿತ್ರದುರ್ಗ ಜಿಲ್ಲಾ ಬಂಡಾಯ ಸಾಹಿತ್ಯ ಸಂಘಟನೆಯ ಸಂಚಾಲಕರಾಗಿ, ಜಿಲ್ಲೆಯಾದ್ಯಂತ ಬಂಡಾಯದ ಪ್ರಜ್ಞೆಯನ್ನು ಪಸರಿಸುವಲ್ಲಿ ಇವರು ತೋರಿದ ಕ್ರಿಯಾಶೀಲತೆ ವಿಶಿಷ್ಟವಾಗಿದೆ. ತಾವು ಪಡೆದ ಶಿಕ್ಷಣ, ಸಾಹಿತ್ಯದ ಒಡನಾಟದಿಂದ ಪಡೆದುಕೊಂಡ ಸಂವೇದನೆ ಹಾಗೂ ಬಂಡಾಯ ಚಳವಳಿಯ ಪ್ರಭಾವದಿಂದ ಪಡೆದುಕೊಂಡ ವೈಚಾರಿಕ ಪ್ರಜ್ಞೆಯನ್ನು ಸ್ವತಃ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು, ಪ್ರಯೋಗಕ್ಕೂ ಒಳಪಡಿಸಿರುತ್ತಾರೆ.

1985ರಲ್ಲಿ ಇವರು ತಮ್ಮ ವಿವಾಹ ಸಂದರ್ಭದಲ್ಲಿ ಯಾವುದೇ ಪೌರೋಹಿತ್ಯ, ವರದಕ್ಷಿಣೆ, ಆಡಂಬರವಿಲ್ಲದೆ, ಕುವೆಂಪು ಅವರ ಮಂತ್ರ ಮಾಂಗಲ್ಯ ಮತ್ತು ತಾವೇ ಬರೆದ ಬರಹವನ್ನು ವಾಚನ ಮಾಡುವ ಮೂಲಕ ದಾಂಪತ್ಯದ ಬದುಕಿಗೆ ಕಾಲಿಟ್ಟಿದ್ದಾರೆ.
ಶ್ರೀಯುತ ಸಿ.ಶಿವಲಿಂಗಪ್ಪನವರು ಬಂಡಾಯ ಸಾಹಿತ್ಯ ಸಂಘಟನೆಯ ಜಿಲ್ಲಾ ಸಂಚಾಲಕರಾಗಿ ಹಲವಾರು ಮಹತ್ತರವಾದ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ.

1990ರಲ್ಲಿ ಚಳ್ಳಕೆರೆಯಲ್ಲಿ ರಾಜ್ಯಮಟ್ಟದ ಬಂಡಾಯ ಸಾಹಿತ್ಯ ಸಮಾವೇಶವನ್ನು ಗುಡಿಹಳ್ಳಿ ನಾಗರಾಜ್, ಎಂ.ಜಯಣ್ಣ, ಎಲ್.ರಮೇಶ್, ಸಿ.ಎಂ.ಮಹಾದೇವ, ಸಿ.ವಿ.ಪಾಟೀಲ್ ಇವರೊಂದಿಗೆ ಆಯೋಜಿಸುವಲ್ಲಿ ಮಹತ್ವದ ಪಾತ್ರವಹಿಸಿರುತ್ತಾರೆ. ಹಾಗೆಯೇ ಹಲವಾರು ಬಂಡಾಯ ಸಾಹಿತಿಗಳನ್ನು ಚಳ್ಳಕೆರೆ ಆಹ್ವಾನಿಸುವ ಮೂಲಕ ರಾಜ್ಯಕ್ಕೆ ಮಾದರಿಯಾದ ನೆಲೆಯಲ್ಲಿ ಬಿ.ಬಿ.ಪಾಟೀಲ್, ಮೀರಾಸಾಬಿಹಳ್ಳಿ ಶಿವಣ್ಣ, ಸಿ.ವೈ.ಶಿವರುದ್ರಪ್ಪ, ಪಿ.ಆರ್.ವೀರಭದ್ರ ನಾಯಕ, ಹೆಚ್.ಎಸ್.ಸಯ್ಯದ್ ಮುಂತಾದ ಸಂಗಾತಿಗಳೊಂದಿಗೆ ಇಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ.

ಇವುಗಳಲ್ಲಿ ‘ಬರಗೂರು ರಾಮಚಂದ್ರಪ್ಪನವರ ಬದುಕು-ಬರಹ’ ಎಂಬ ವಿಚಾರ ಗೋಷ್ಠಿಗಳಿಂದ ಆರಂಭಗೊಂಡು, ಬಿ.ಟಿ.ಲಲಿತಾನಾಯಕ್, ಸಾರಾ ಅಬೂಬಕರ್, ಕಾಳೇಗೌಡ ನಾಗವಾರ, ಚಂದ್ರಶೇಖರ್ ಪಾಟೀಲ್ ಮುಂತಾದ ಬಂಡಾಯ ಸಾಹಿತಿಗಳ ತಾತ್ವಿಕ ಧೋರಣೆಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ವಿಶಿಷ್ಟ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ.

ಇವರು ಬಂಡಾಯ ಸಾಹಿತ್ಯ ಸಂಘಟನೆಗೆ ಮಾತ್ರ ಸೀಮಿತವಾಗದೆ, ಹಲವಾರು ದಲಿತ-ಬಂಡಾಯ ಚಳವಳಿ ಮತ್ತು ಹೋರಾಟಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವುಗಳಲ್ಲಿ ಬೆಂಡಿಗೆರೆ ಪ್ರಕರಣ, ಅನಸೂಯಮ್ಮನ ಪ್ರಕರಣ ಹಾಗೂ ಹಲವಾರು ಜೀವಪರ ಹೋರಾಟಗಳಲ್ಲಿ ತಮ್ಮ ಸಹಭಾಗಿತ್ವವನ್ನು ವ್ಯಕ್ತಪಡಿಸಿರುತ್ತಾರೆ.

ಮೈಸೂರು ವಿಶ್ವವಿದ್ಯಾಲಯ, ಮಾನಸ ಗಂಗೋತ್ರಿಯಲ್ಲಿ ಅಧ್ಯಯನ ಮಾಡುವ ಸಂದರ್ಭದಲ್ಲಿಯೇ ಚಿತ್ರದುರ್ಗ ಭಾಗದ ವಿದ್ಯಾರ್ಥಿಗಳೆಲ್ಲ ಸೇರಿಕೊಂಡು ಸ್ಥಾಪಿಸಿಕೊಂಡಿದ್ದ ‘ಮದಕರಿ ಬಳಗ’ದ ಚುನಾವಣೆಗೆ ಸ್ಪರ್ಧಿಸಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ. ಹೀಗೆ ಸಂಘಟನೆ ಮತ್ತು ಹೋರಾಟದ ಹವ್ಯಾಸವನ್ನು ರೂಢಿಸಿಕೊಂಡು ಬಂದ ಶ್ರೀಯುತರು ದಲಿತ-ಬಂಡಾಯ ನೆಲೆಯ ಸಂಘಟನೆ, ಚಳವಳಿ ಹಾಗೂ ಹೋರಾಟಗಳ ಮುಖಾಂತರ ಅಸಮಾನತೆ, ಅನ್ಯಾಯ, ದೌರ್ಜನ್ಯದ ವಿರುದ್ಧ ದನಿ ಎತ್ತಿದವರಾಗಿದ್ದಾರೆ.

ನಂತರದ ದಿನಮಾನಗಳಲ್ಲಿ ಕುವೆಂಪು ವಿಶ್ವವಿದ್ಯಾಲಯದ ಸೆನೆಟ್ ಚುನಾವಣೆಗೆ ಸ್ಪರ್ಧಿಸಿ ಅತ್ಯಧಿಕ ಮತಗಳಿಂದ ಜಯಶೀಲರಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಲವಾರು ವಿಶಿಷ್ಟ ಯೋಜನೆಗಳನ್ನು ಅನುಷ್ಠಾನಗೊಳಿಸಿರುತ್ತಾರೆ. ಹಾಗೆಯೇ ಕುವೆಂಪು ವಿಶ್ವವಿದ್ಯಾಲಯ ಕನ್ನಡ ಅಧ್ಯಾಪಕರ ಸಂಘಕ್ಕೆ ಎರಡು ಬಾರಿ ಅಧ್ಯಕ್ಷರಾಗಿ ಹಲವಾರು ಮಹತ್ವದ ಕಾರ್ಯಯೋಜನೆಗಳನ್ನು ರೂಪಿಸಿದ್ದಾರೆ.

ಅಧ್ಯಾಪಕರ ಹಿತಕ್ಕಾಗಿ ಸಂವಿಧಾನಬದ್ಧ ನೆಲೆಯಲ್ಲಿ ಹಲವಾರು ಶಾಂತಿಯುತ ಹೋರಾಟ ಮತ್ತು ಪ್ರತಿಭಟನೆಗಳನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುತ್ತಾರೆ. ಹಾಗೆಯೇ ವಿದ್ಯಾರ್ಥಿಗಳು ಹಾಗೂ ಕನ್ನಡ ಅಧ್ಯಾಪಕರ ಅಭಿರುಚಿಗೆ ತಕ್ಕಂತೆ ಕನ್ನಡ ಭಾಷಾ ಮತ್ತು ಐಚ್ಛಿಕ ಪಠ್ಯಗಳನ್ನು ರೂಪಿಸುವಲ್ಲಿ ಇವರು ತೋರಿದ ಕಾಳಜಿ ಅನನ್ಯವಾದದು.

ಶ್ರೀಯುತರು ಬಾಲ್ಯದ ದಿನಗಳಿಂದಲೇ ರಂಗಕಲೆಗಳಲ್ಲಿ ವಿಶೇಷವಾದ ಆಸಕ್ತಿಯನ್ನು ಮೈಗೂಡಿಸಿಕೊಂಡವರು. ಹೈಸ್ಕೂಲ್ ಹಂತದಲ್ಲಿಯೇ ಮೊದಲ ಬಾರಿಗೆ ‘ಅಣ್ಣ-ತಂಗಿ’ ಎಂಬ ಸಾಮಾಜಿಕ ನಾಟಕದಲ್ಲಿ ತಂಗಿಯ ಪಾತ್ರ ನಿರ್ವಹಿಸುವ ಮೂಲಕ ಪ್ರೇಕ್ಷಕರ ಮನಸೂರೆಗೊಂಡಿದ್ದರು. ಇವರ ಈ ಹವ್ಯಾಸವು ನಿರಂತರವಾಗಿ ಮುಂದುವರೆದುಕೊಂಡು ಬಂದಿತ್ತು. ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಅಧ್ಯಯನ ಮಾಡುವ ಸಂದರ್ಭದಲ್ಲಿ ಪ್ರತಿಯೊಂದು ಕಾರ್ಯಕ್ರಮಗಳಲ್ಲಿಯೂ ಇವರು ನಾಟಕ ಹಾಗೂ ಏಕಪಾತ್ರಾಭಿನಯವನ್ನು ಪ್ರದರ್ಶಿಸುವ ಮೂಲಕ ತಮ್ಮೊಳಗೆ ಅಂತರ್ಗತವಾಗಿದ್ದ ಕಲೆಯನ್ನು ಅಭಿವ್ಯಕ್ತಿಸುತ್ತ ಬಂದವರು.

ಇವರ ಆಂತರ್ಯದಲ್ಲಿ ಮನೆ ಮಾಡಿಕೊಂಡಿದ್ದ ನಟನ ಕಲೆಯು ಇವರನ್ನು ಸಿನಿಮಾ ಕ್ಷೇತ್ರದತ್ತ ಸೆಳೆಯುತಿತ್ತು. ಮಾನಸ ಗಂಗೋತ್ರಿಯಲ್ಲಿ ಅಧ್ಯಯನ ಮಾಡುವ ಸಂದರ್ಭದಲ್ಲಿ ತಮ್ಮ ಸ್ನೇಹಿತರಾದ ಮೆದೆಹಳ್ಳಿ ಶಿವಕುಮಾರ್ ಅವರೊಂದಿಗೆ ಒಮ್ಮೆ ಹೆಸರಾಂತ ಸಿನಿಮಾ ನಿರ್ಮಾಪಕರಾದ ಎಂ.ಪಿ.ಶಂಕರ್ ಅವರನ್ನು ಭೇಟಿ ಮಾಡಿ, ತಮಗೂ ಒಂದು ಅವಕಾಶ ನೀಡುವಂತೆ ವಿನಂತಿಸಿಕೊಂಡಿದ್ದರು. ಆಗ ಎಂ.ಪಿ.ಶಂಕರ್ ಅವರು ಅಲ್ಲಿಯೇ ಇದ್ದ ಉದಯೋನ್ಮುಖ ಸಿನಿಮಾ ನಟರನ್ನು ತೋರಿಸಿ, ಇವರ ಸಂಭಾವನೆ ಕೇವಲ ಒಂದು ಸಾವಿರ ಮಾತ್ರ.

ನೀವು ಇಲ್ಲಿ ಬಂದು ಜೀವನ ಕಟ್ಟಿಕೊಳ್ಳುವುದು ತುಂಬಾ ಕಷ್ಟ ಎಂದು ಬುದ್ಧಿಮಾತು ಹೇಳಿ ಕಳುಹಿಸಿದ್ದರು. ಅಂದಿನಿಂದ ಸಿನಿಮಾ ಜಗತ್ತಿನಿಂದ ದೂರ ಉಳಿದು ವಿದ್ಯಾಭ್ಯಾಸದ ಕಡೆ ತಮ್ಮ ಗಮನವನ್ನು ಕೇಂದ್ರೀಕರಿಸಿ, ಮುಂದೆ ಅಧ್ಯಾಪಕ ವೃತ್ತಿಯಲ್ಲಿಯೇ ಬದುಕನ್ನು ಕಟ್ಟಿಕೊಂಡರು. ಈ ನಡುವೆ ಬರಗೂರು ಮೇಷ್ಟುç ಅವರೊಂದಿಗಿನ ಒಡನಾಟದಿಂದಾಗಿ ಬಂಡಾಯ ಸಾಹಿತ್ಯ ಮತ್ತು ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಹೀಗಾಗಿ ಇವರ ಬಹುದಿನ ಆಸೆಯನ್ನು ಬರಗೂರು ಮೇಷ್ಟ್ರು ಪೂರೈಸಿದಂತಾಯಿತು.

ಬರಗೂರು ರಾಮಚಂದ್ರಪ್ಪ ಅವರ ನಿರ್ದೇಶನದಲ್ಲಿ ಮೂಡಿಬಂದ ‘ತಾಯಿ’ ಸಿನಿಮಾದಲ್ಲಿ ಮೊದಲ ಬಾರಿಗೆ ಚಿಕ್ಕ ಪಾತ್ರವನ್ನು ನಿರ್ವಹಿಸುವ ಮೂಲಕ ಇವರ ಬಹುದಿನದ ಕನಸು ಈಡೇರಿದಂತಾಯಿತು. ನಂತರ ‘ಶಬರಿ’ ಚಿತ್ರದಲ್ಲಿ ರಾಜಕಾರಣಿಯಾಗಿ, ‘ಜನಪದ’ ಚಿತ್ರದಲ್ಲಿ ಕಲಾವಿದರಾಗಿ, ‘ಭೂತಾಯಿ’ ಚಿತ್ರದಲ್ಲಿ ಎ.ಸಿ.ಪಿ ಅಧಿಕಾರಿಯಾಗಿ ಪಾತ್ರನಿರ್ವಹಿಸಿದ್ದಾರೆ. ಹೀಗೆ ತಮ್ಮ ಆಂತರ್ಯದೊಳಗೆ ಬಹುದಿನಗಳಿಂದ ನೆಲೆಯೂರಿದ್ದ ಸಿನಿಮಾ ಎಂಬ ಮಾಯಲೋಕದ ಕನಸು ಬರಗೂರು ಮೇಷ್ಟ್ರು ಮೂಲಕ ನೆರವೇರಿತು.

ಈ ಮೂಲಕ ಕನ್ನಡದ ಹೆಸರಾಂತ ನಟರಾದ ಕುಮಾರ್ ಗೋವಿಂದ್, ಶ್ರೀನಿವಾಸ್‌ಮೂರ್ತಿ, ಕಿಶೋರ್, ಸುಧಾರಾಣಿ, ರಾಧಿಕಾ, ಅನುಶ್ರೀ ಮುಂತಾದ ನಟರೊಂದಿಗೆ ಬಣ್ಣದ ಲೋಕದ ಅನುಭವವನ್ನು ಪಡೆದುಕೊಂಡರು.
ಶ್ರೀಯುತ ಸಿ.ಶಿವಲಿಂಗಪ್ಪನವರು ತಮ್ಮ ಪದವಿ ಶಿಕ್ಷಣದ ಹಂತದಿಂದಲೂ ಸಾಹಿತ್ಯಲ್ಲಿ ವಿಶೇಷವಾದ ಆಸಕ್ತಿಯನ್ನು ಬೆಳೆಸಿಕೊಂಡವರು. ಇಲ್ಲಿನ ಗುರುಗಳಾದ ಬಿ.ಬಿ.ಪಾಟೀಲ್, ಮೀರಾಸಾಬಿಹಳ್ಳಿ ಶಿವಣ್ಣ ಹಾಗೂ ಬಿ.ಪಿ.ವೀರೇಂದ್ರಕುಮಾರ್ ಅವರಂತಹ ಸಾಹಿತ್ಯಾಸಕ್ತ ಅಧ್ಯಾಪಕರ ತತ್ವ-ಸಿದ್ಧಾಂತಗಳಿಂದ ಪ್ರಭಾವಿತರಾಗಿ ಪದವಿ ಹಂತದಲ್ಲಿಯೇ ಕವಿತೆಗಳನ್ನು ಬರೆಯುವ ಹವ್ಯಾಸವನ್ನು ರೂಢಿಸಿಕೊಂಡವರು.

ನಂತರ ಸ್ನಾತಕೋತ್ತರ ಪದವಿಯ ಅಧ್ಯಯನದ ಸಂದರ್ಭದಲ್ಲಿ ನಾಡಿನ ಹಲವಾರು ಸಾಹಿತಿಗಳು ಮತ್ತು ಆಪ್ತ ಸ್ನೇಹಿತರ ಒಡನಾಟದಿಂದಾಗಿ ಇದು ಮತ್ತಷ್ಟು ಗಟ್ಟಿಕೊಂಡು ಸಾಹಿತ್ಯ ಕೃತಿಗಳ ವಿಮರ್ಶೆ ಮತ್ತು ತಮ್ಮ ಸುತ್ತಮುತ್ತಲಿನ ವಿದ್ಯಮಾನಗಳ ಕುರಿತು ಲೇಖನ ಬರೆಯುವ ಹವ್ಯಾಸವನ್ನು ರೂಢಿಸಿಕೊಂಡರು. 1988ರ ಸುಮಾರಿಗೆ ನಾಡಿನಲ್ಲಿ ಬರಗಾಲ ಬಂದು ಜನಜೀವನ ತುಂಬ ಸಂಕಷ್ಟಕ್ಕೆ ಒಳಗಾಗಿತ್ತು.

ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಬರಗಾಲದ ತಲ್ಲಣಗಳನ್ನು ಅಭಿವ್ಯಕ್ತಿಸುವ ನೆಲೆಯಲ್ಲಿ ನಾಡಿನ ವಿವಿಧ ಭಾಗದ ಸಾಹಿತಿಗಳಿಂದ ಕವಿತೆಗಳನ್ನು ಸಂಪಾದಿಸಿ ‘ಬರ’ ಎಂಬ ಕವನ ಸಂಕಲನವನ್ನು ಕನ್ನಡ ಸಾರಸ್ವತ ಲೋಕಕ್ಕೆ ಸಮರ್ಪಿಸಿದ್ದಾರೆ. ಇದರಲ್ಲಿ ಕನ್ನಡ ನಾಡಿನ ಹೆಸರಾಂತ ಮೂವತ್ತೊಂಭತ್ತು ಪ್ರಗತಿಪರ ಚಿಂತಕರ ಕವಿತೆಗಳನ್ನು ಸಂಗ್ರಹಿಸಲಾಗಿದೆ. ‘ಬರ’ ಎಂಬುದು ವಿಶೇಷವಾಗಿ ಶೋಷಿತರ ಬದುಕಿಗೆ ಅತ್ಯಂತ ಅಪಾಯಕಾರಿಯಾದದ್ದು. ಶ್ರಮಿಕನ ಬದುಕನ್ನು ತಿಂದು ಹಾಕುವ ಮಹಾಮಾರಿಯಾದ ಬರವನ್ನು ಕುರಿತು ಪ್ರಗತಿಪರ ಚಿಂತಕರು ವ್ಯಕ್ತಪಡಿಸಿರುವ ಜೀವಪರ ಆಶಯಗಳು ಇಲ್ಲಿನ ಕವಿತೆಗಳ ಮೂಲಕ ಅಭಿವ್ಯಕ್ತವಾಗಿವೆ.

ಈ ಕಾರಣದಿಂದಾಗಿ ಈ ಕವನ ಸಂಕಲನವು ಮೌಲ್ಯಯುತವಾಗಿದೆ. ನಂತರ 1998ರಲ್ಲಿ ‘ಆಷಾಡದ ಮುಗಿಲು’ ಎಂಬ ಕವನ ಸಂಕಲನವನ್ನು ಪ್ರಕಟಿಸಿರುತ್ತಾರೆ. ಇದು ಶಿವಲಿಂಗಪ್ಪನವರ ಸ್ವರಚಿತ ಕವನ ಸಂಕಲನವಾಗಿದೆ. ಇದರಲ್ಲಿ ಒಟ್ಟು ಮೂವತೈದು ಕವನಗಳಿವೆ. ಇಲ್ಲಿನ ಬಹುತೇಕ ಕವಿತೆಗಳು ಬಂಡಾಯದ ಸೈದ್ಧಾಂತಿಕತೆಯಿಂದ ಕೂಡಿವೆ. ಇದರಲ್ಲಿ ವಿಶೇಷವಾಗಿ ‘ಕಾಲ ಹಂಡಿ’ ಎಂಬ ಕವಿತೆಯು ಸದಾ ಹಸಿವಿಗಾಗಿ ಪರಿತಪಿಸುವ ಬಿಹಾರದ ಕಾಲ ಹಂಡಿಯ ಕುರಿತಾಗಿ ಜೀವಪರ ನಿಲುವುಗಳನ್ನು ವ್ಯಕ್ತಪಡಿಸುತ್ತದೆ.

‘ಬಿರುಗಾಳಿ’ ಎಂಬ ಕವಿತೆಯು ಪಶ್ಚಿಮ ಬಂಗಾಳದಲ್ಲಿ ಅಪ್ಪಳಿಸಿದ ಬಿರುಗಾಳಿಗೆ ತತ್ತರಿಸಿದ ಜೀವಗಳ ಕುರಿತು ಮಿಡಿಯುತ್ತದೆ. ಹಾಗೆಯೇ ‘ತಿಪಟೂರಿನ ಶಶಿಕಲಾ’ ಎಂಬ ಕವಿತೆಯು ಗಂಡನ ಕ್ರೌರ್ಯಕ್ಕೆ ಬೆಂದು ಬಲಿಯಾದ ಶಶಿಕಲಾ ಎಂಬ ಮಹಿಳೆಯ ಸಂವೇದನೆಗಳನ್ನು ಜೀವಪರ ನೆಲೆಯಲ್ಲಿ ಪ್ರತಿಪಾದಿಸುತ್ತದೆ. ಬಂಡಾಯದ ಗರಡಿಯೊಳಗೆ ಪಳಗಿದ ಲೇಖಕರು ತಮ್ಮ ಕವಿತೆಗಳ ಮೂಲಕ ತಮ್ಮ ಬಂಡಾಯದ ಧೋರಣೆಗಳನ್ನು ಅಭಿವ್ಯಕ್ತಿಸಿದ್ದಾರೆ. 2009ರಲ್ಲಿ ‘ಸಹಸ್ಪಂದನ’ ಎಂಬ ವಿಮರ್ಶಾ ಲೇಖನ ಸಂಕಲನವನ್ನು ಪ್ರಕಟಿಸಿದ್ದಾರೆ. ಇದರಲ್ಲಿ ಒಟ್ಟು ಹನ್ನೆರಡು ಲೇಖನಗಳಿದ್ದು, ಇವುಗಳು ಚಿತ್ರದುರ್ಗ ಜಿಲ್ಲೆಯ ಪ್ರಾಚೀನತೆ, ಕನ್ನಡ ಸಾಹಿತ್ಯ ಹಾಗೂ ವೈಚಾರಿಕ ಚಿಂತನೆಗಳಿಂದ ಕೂಡಿವೆ. 2020ರಲ್ಲಿ ‘ಒಳದನಿ’ ಎಂಬ ಲೇಖನಗಳ ಸಂಕಲನ ಕೃತಿಯನ್ನು ಪ್ರಕಟಿಸಿರುತ್ತಾರೆ.

ಪ್ರಸ್ತುತ ಕೃತಿಯಲ್ಲಿ ಒಟ್ಟು ಇಪ್ಪತ್ತು ಲೇಖನಗಳಿದ್ದು, ಜಾನಪದ, ಸಮಕಾಲೀನ ವಿದ್ಯಮಾನ, ವೈಚಾರಿಕ ಚಿಂತನೆ ಹಾಗೂ ರೇಡಿಯೊ ಭಾಷಣಗಳಿಂದ ಕೂಡಿದ ಲೇಖನಗಳು ಇಲ್ಲಿ ವಿಶೇಷವಾಗಿವೆ. ಜಾನಪದ ವಿಷಯದಲ್ಲಿ ವಿಶೇಷವಾದ ಆಸಕ್ತಿಯನ್ನು ಹೊಂದಿರುವ ಇವರು ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಶ್ರೀಕಂಠ ಕೂಡಿಗೆ ಅವರ ಮಾರ್ಗದರ್ಶನದಲ್ಲಿ ‘ಕುಂಚಟಿಗ ಸಾಂಸ್ಕೃತಿಕ ವೀರರು- ಒಂದು ಜಾನಪದೀಯ ಅಧ್ಯಯನ’ ಎಂಬ ಮಹಾಪ್ರಬಂಧವನ್ನು ಸಲ್ಲಿಸಿ2006 ರಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿರುತ್ತಾರೆ.

ಶ್ರೀಯುತರ ಸಾಹಿತ್ಯ ಸೇವೆ ಹಾಗೂ ಸಮಸಮಾಜಕ್ಕಾಗಿ ಸಂಘಟನೆ ಮತ್ತು ಚಳವಳಿಗಳ ಮೂಲಕ ಅಭಿವ್ಯಕ್ತಿಸಿದ ಹೋರಾಟವನ್ನು ಗುರುತಿಸಿ ಹಲವಾರು ಪ್ರಶಸ್ತಿ, ಪುರಸ್ಕಾರ, ಗೌರವಗಳು ಇವರ ಮುಡಿಗೇರಿವೆ. ಅವುಗಳೆಂದರೆ; 2010ರಲ್ಲಿ ಚಿತ್ರದುರ್ಗ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, 2018ರಲ್ಲಿ ರಾಜ್ಯಮಟ್ಟದ ‘ಕನಕ ಪ್ರಶಸ್ತಿ’ ಪ್ರಮುಖವಾಗಿವೆ. ಹಾಗೆಯೇ ಇವರ ಸಾಹಿತ್ಯ ಸೇವೆಗಾಗಿ2013ರಲ್ಲಿ ನಡೆದ ಚಳ್ಳಕೆರೆ ತಾಲ್ಲೂಕಿನ ‘ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಗೌರವ’ ಲಭಿಸಿದೆ.

ಹೀಗೆ ಹಲವಾರು ಸಾಹಿತ್ಯ ಮತ್ತು ಸಂಘಟನಾತ್ಮಕ ಚಟುವಟಿಕೆಗಳ ಮೂಲಕ ಸದಾ ಕ್ರಿಯಾಶೀಲರಾದ ಶ್ರೀಯುತರು ಸಮತ ಭಾರತಕ್ಕಾಗಿ ಬಂಡಾಯದ ನೆಲೆಯಲ್ಲಿ ಹೋರಾಟವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಇಂದು ವೃತ್ತಿ ಬದುಕಿನಿಂದ ನಿವೃತ್ತಿ ಪಡೆದುಕೊಂಡರು ಕೂಡ ತಮ್ಮ ಕ್ರಿಯಾಶೀಲ ಚಟುವಟಿಕೆಗಳನ್ನು ನಿಲ್ಲಿಸದೆ, ಸಮಾನ ಮನಸ್ಕರೊಂದಿಗೆ ಬೆರೆತು ಮೊದಲಿಗಿಂತಲೂ ಚುರುಕಾಗಿ ಸಾಹಿತ್ಯ ಮತ್ತು ಸಂಘಟನಾತ್ಮಕ ಕಾರ್ಯಗಳಲ್ಲಿ ತಲ್ಲೀನರಾಗಿದ್ದಾರೆ. ಶ್ರೀಯುತರಿಂದ ಯುವ ಸಮುದಾಯವನ್ನು ಜಾಗೃತಗೊಳಿಸುವಂತಹ ಬಂಡಾಯದ ದನಿ ಮತ್ತಷ್ಟು ಗಟ್ಟಿಯಾಗಿ ಹೊರಹೊಮ್ಮಲಿ ಎಂದು ಆಶಿಸುತ್ತೇವೆ.

-ಡಾ.ಕೆ.ಎ.ಓಬಳೇಶ್ ಮೊ: 9591420216

ಸುದ್ದಿದಿನ|ವಾಟ್ಸಾಪ್|9980346243

Trending

Exit mobile version