ದಿನದ ಸುದ್ದಿ
ಪತನವಾಗೋದು ಮೋದಿ ಸರ್ಕಾರ : ಸಿದ್ದರಾಮಯ್ಯ ತಿರುಗೇಟು
ಸುದ್ದಿದಿನ, ದಾವಣಗೆರೆ : ಮೇ 23ರ ಬಳಿಕ ಮೈತ್ರಿ ಸರಕಾರ ಪತನವಾಗುತ್ತದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ, ಪತನವಾಗೋದು ರಾಜ್ಯ ಸರಕಾರ ಅಲ್ಲ. ಮೋದಿ ನೇತೃತ್ವದ ಕೇಂದ್ರ ಸರಕಾರವಾಗಿದ್ದು, ಅದನ್ನೇ ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಸರಕಾರ ಪತನವಾಗುತ್ತದೆ ಎಂದು ಯಡಿಯೂರಪ್ಪ ಹೇಳುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ತ್ಯಾವಣಿಗೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮೈತ್ರಿ ಅಭ್ಯರ್ಥಿ ಎಚ್.ಬಿ.ಮಂಜಪ್ಪ ಪರ ಪ್ರಚಾರ ನಡೆಸುವ ಸಂಬಂಧ ನಗರದ ಎಂಬಿಎ ಕಾಲೇಜ್ ಹೆಲಿಪ್ಯಾಡ್‌ನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ನಾನು ಸಿಎಂ ಆಗುತ್ತೇನೆ ಎಂದು ಹೇಳಿದ್ದೇ. ನಾನೇನೂ ರಾಜಕೀಯ ಸನ್ಯಾಸಿ ಅಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತದೆ. ಆಗ ನಾನು ಸಿಎಂ ಆಗಿ ಹತ್ತು ಕೆಜಿ ಅಕ್ಕಿ ಕೊಡುತ್ತೇನೆ ಎಂದಿದ್ದೇ. ಇದರಲ್ಲಿ ತಪ್ಪೇನಿದೆ?. ನಾನೇನು ನಾಳೆನೇ ಸಿಎಂ ಆಗುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಮುಂದೆ ಸಿಎಂ ಆಗುತ್ತೇನೆ ಎಂದಿದ್ದೇ ಅಷ್ಟೇ ಎಂದು ಸ್ಪಷ್ಟನೆ ನೀಡಿದರು.
ಎರಡು ದಿನ ಮಾತ್ರ ಯಡಿಯೂರಪ್ಪ ಸಿಎಂ ಆಗಿ ಅಧಿಕಾರದಿಂದ ಕೆಳಗಿಳಿದ್ರು. ಅಧಿಕಾರ ಹಿಡಿಯಲು ಏನೆಲ್ಲಾ ಮಾಡಿದ್ರೂ ವಿಫಲವಾಗಿದ್ದಾರೆ. ಮಾನ- ಮರ್ಯಾದೆ ಇಲ್ಲದೆ ಮಾತಾಡ್ತಿರೋ ಅವರಿಗೆ ಅಧಿಕಾರ ಹುಚ್ಚಿದೆ. ಇನ್ನು ಸಿಟಿ ರವಿ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ, ಅವರು ಸಿಟಿ ರವಿ ಅಲ್ಲ, ಲೂಟಿ ರವಿ. ಅವನ ಬಗ್ಗೆ ನಾನು ಮಾತಾಡಲ್ಲ. ಇನ್ನು ಕೆ. ಎಸ್. ಈಶ್ವರಪ್ಪ, ಶೋಭಾ ಕರಂದ್ಲಾಜೆ ಬುದ್ಧಿ ಇಲ್ಲದೇ ಮಾತಾಡ್ತಾರೆ. ಇವರ ಹೇಳಿಕೆಗೂ ನಾನು ಸ್ಪಂದಿಸಲ್ಲ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243