ದಿನದ ಸುದ್ದಿ

ಹುತಾತ್ಮರನ್ನು ಅವಮಾನಿಸುವ ಬಿಜೆಪಿಗರು ದೇಶಪ್ರೇಮಿಗಳಾಗಲು ಹೇಗೆ ಸಾಧ್ಯ? : ಸಿದ್ದರಾಮಯ್ಯ ಆಕ್ರೋಶ

Published

on

ಸುದ್ದಿದಿನ, ಬಾಗಲಕೋಟೆ : ದೇಶದ ಗಡಿ ಕಾಯುವ ಸೈನಿಕರಂತೆಯೇ ದೇಶದೊಳಗೆ ಜನರ ಪ್ರಾಣ, ಆಸ್ತಿ-ಪಾಸ್ತಿ ಕಾಪಾಡುವ ಪೊಲೀಸರು ದೇಶ ಸೇವಕರಲ್ಲವೇ? ಹುತಾತ್ಮ ಪೊಲೀಸರನ್ನು ಅವಮಾನಿಸುವ ಬಿಜೆಪಿಗರು ಹೇಗೆ ದೇಶ ಪ್ರೇಮಿಗಳಾಗಲು ಸಾಧ್ಯ? ಇಂತಹ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಪ್ರಧಾನಿಗಳು ಮಾಧ್ಯಮಗಳ ಕಣ್ಣು ತಪ್ಪಿಸಿ ತಿರುಗಾಡುತ್ತಾರೆ. ಇಂಥವರಿಂದ ದೇಶಪ್ರೇಮದ ಪಾಠ ಅಗತ್ಯವಿದೆಯೇ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಬಾಗಲಕೋಟೆ ಲೋಕಸಭೆ ಕ್ಷೇತ್ರದ ಬಾದಾಮಿಯ ಕೆರೂರಿನಲ್ಲಿ ಇಂದು ಆಯೋಜಿಸಿದ್ದ ಬೃಹತ್ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು,
60 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಬಿಜೆಪಿಯವರು ಪ್ರಶ್ನಿಸುತ್ತಾರೆ. 60 ವರ್ಷಗಳಲ್ಲಿ ಕಾಂಗ್ರೆಸ್ ಸೌಹಾರ್ದ ಭಾರತ ಕಟ್ಟಿದೆ ಎಂದು ನಮ್ಮ ಪ್ರತಿ ಕಾರ್ಯಕರ್ತನು ಹೆಮ್ಮೆಯಿಂದ ಹೇಳಬೇಕು ಎಂದರು.

ನಮ್ಮ‌ ಆ 60 ವರ್ಷಗಳ ಶ್ರಮವನ್ನು ಕೇವಲ ಐದೇ ವರ್ಷಗಳಲ್ಲಿ ಬಿಜೆಪಿ ಸಾಕಷ್ಟು ಹಾಳುಗೆಡವಿದೆ. ಸಂವಿಧಾನ ಸುಡುವುದು, ದಲಿತರು, ಅಲ್ಪಸಂಖ್ಯಾತರ ಮೇಲೆ ಹಲ್ಲೆ, ಮಹಿಳೆಯರ ಶೋಷಣೆಯಂತಹ ಘಟನೆಗಳು ಕಳೆದ 5 ವರ್ಷಗಳಿಂದ ನಿರಂತರ ಏರುತ್ತಾ ಸಾಗಿದೆ. ಮತ್ತೈದು ವರ್ಷ ಬಿಜೆಪಿಗರ ಕೈಗೆ ಅಧಿಕಾರ ಸಿಕ್ಕರೆ ನಮ್ಮ 60 ವರ್ಷಗಳ ಶ್ರಮ ವ್ಯರ್ಥವಾಗಿಬಿಡುತ್ತದೆ ಎಂದು ಆತಂಕ ವ್ಯಕ್ತ ಪಡಿಸಿದರು.

ಧರ್ಮ-ಧರ್ಮಗಳ ನಡುವೆ, ಜಾತಿ-ಜಾತಿಗಳ ನಡುವೆ ದ್ವೇಷದ ವಿಷಬೀಜ ಬಿತ್ತಿ, ಅಮಾಯಕರನ್ನು ಬಲಿಕೊಟ್ಟು ಇವರು ಕಟ್ಟಲು ಹೊರಟಿರುವ ಸ್ವಾರ್ಥ ಸಾಮ್ರಾಜ್ಯ ಶಾಶ್ವತವಾಗಿ ಉಳಿಯುವುದೇ? ಮುಂದಿನ ಪೀಳಿಗೆಗೆ ಇವರು ಬಳುವಳಿಯಾಗಿ ನೀಡಲು ಹೊರಟಿರುವ ಸಮಾಜವಾದರೂ ಎಂತಹುದು? ಈ ಬಗ್ಗೆ ನಾವು ಈಗಲೇ ಎಚ್ಚೆತ್ತುಕೊಳ್ಳಲೇಬೇಕು ಎಂದು ಹೇಳಿದರು.

ಮಹಿಳೆಯರು, ದಲಿತರು, ಬಡವರು, ಅಲ್ಪಸಂಖ್ಯಾತರನ್ನು ಅಭಿವೃದ್ಧಿಯಿಂದ ಹೊರಗಿಟ್ಟು ಸದೃಢ ರಾಷ್ಟ್ರ ನಿರ್ಮಿಸಲು ಸಾಧ್ಯವೇ? ಉದ್ಯಮಿಗಳ ಸಹಸ್ರಾರು ಕೋಟಿ ಸಾಲ ಮನ್ನಾ ಮಾಡುವ ನರೇಂದ್ರ ಮೋದಿಯವರ ಕಣ್ಣಿಗೆ ದೇಶದ ಬಡ ರೈತರು, ಕೂಲಿ ಕಾರ್ಮಿಕರೇಕೆ ಕಾಣುವುದೇ ಇಲ್ಲ? ಇದನ್ನು ಪ್ರಶ್ನಿಸುವವರು ಹೇಗೆ ದೇಶದ್ರೋಹಿಗಳಾಗುತ್ತಾರೆ? ಎಂದು ಪ್ರಶ್ನಿಸಿದರು.

ಈ ಬಾರಿಯ ಚುನಾವಣೆ ಬಿಜೆಪಿಯ ಸುಳ್ಳುಗಳು ಮತ್ತು ದೇಶದ ಜನರ ನೈಜ ಸಮಸ್ಯೆಗಳ ನಡುವಿನ ಸಂಘರ್ಷ. 5 ವರ್ಷಗಳ ಹಿಂದೆ ಬಣ್ಣದ ಮಾತುಗಳನ್ನಾಡಿ ಅಧಿಕಾರ ಹಿಡಿದ ಬಿಜೆಪಿಗೆ ಈ ಬಾರಿಯ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಿ ಎಂದು ಮತದಾರರಲ್ಲಿ ಮನವಿ ಮಾಡುತ್ತೇನೆ. ಕಾಂಗ್ರೆಸ್‌ ಬೆಂಬಲಿಸೋಣ, ಸಮೃದ್ಧ ಭಾರತದ ಸಂಕಲ್ಪಕ್ಕೆ ಜೊತೆಯಾಗೋಣ ಎಂದು ಕರೆ ನೀಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version