ದಿನದ ಸುದ್ದಿ

ಬಿಜೆಪಿ ಐಟಿ ಇಲಾಖೆ ದುರುಪಯೋಗ : ರಾಜಕೀಯ ಪ್ರೇರಿತ ದಾಳಿಗೆ ಸಿದ್ದರಾಮಯ್ಯ ಕೆಂಡಾಂಮಡಲ

Published

on

ಸುದ್ದಿದಿನ ಡೆಸ್ಕ್: ಬಿಜೆಪಿಯ ಹಾಸನ ಜಿಲ್ಲಾ ಅಧ್ಯಕ್ಷರಾದ ಯೋಗಾ ರಮೇಶ್ ಅವರನ್ನು ಇಂದು ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥ್ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಬರ ಮಾಡಿಕೊಂಡೆನು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಕೆಲವು ದಿನಗಳ ಹಿಂದೆ ರಮೇಶ್ ಅವರು ನನ್ನನ್ನು ಭೇಟಿಮಾಡಿ ನಮ್ಮ‌ ಪಕ್ಷಕ್ಕೆ ಸೇರುವ ಇಚ್ಚೆ ವ್ಯಕ್ತಪಡಿಸಿದ್ದರು, ಅದರಂತೆ ಇಂದು ಅವರು ನಮ್ಮ ಪಕ್ಷವನ್ನು ಸೇರಿದ್ದಾರೆ‌ ಎಂದಿದ್ದಾರೆ.

ಕಳೆದ 5 ವರ್ಷಗಳಿಂದ ಬಿಜೆಪಿಯ ಒಬ್ಬ ನಾಯಕನ ಮನೆಯ ಮೇಲೆ ಐಟಿ ದಾಳಿಯಾಗಿಲ್ಲ, ಆದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರನ್ನು ಗುರಿಯಾಗಿಸಿಕೊಂಡು ಕರ್ನಾಟಕದಲ್ಲಿ ಮೇಲಿಂದ ಮೇಲೆ ದಾಳಿ ನಡೆಸಲಾಗುತ್ತಿದೆ. ಚುನಾವಣಾ ಸಮಯದಲ್ಲಿ ಐಟಿ ದಾಳಿ ನಡೆಸಿ ವಿರೋಧ ಪಕ್ಷಗಳಲ್ಲಿ ಭಯದ ವಾತಾವರಣ ಸೃಷ್ಟಿಸುವುದು ದಾಳಿಯ ಹಿಂದಿನ ಉದ್ದೇಶ‌ ಎಂದು ಹೇಳಿದ್ದಾರೆ.

ಐಟಿ ದಾಳಿಗಳ ಬಗ್ಗೆ ನಮ್ಮ ವಿರೋಧವಿಲ್ಲ, ಆದರೆ ಐಟಿ ಇಲಾಖೆಯನ್ನು ದುರುಪಯೋಗಪಡಿಸಿಕೊಂಡು ರಾಜಕೀಯ ವಿರೋಧಿಗಳ ಮೇಲೆ ಅಸ್ತ್ರವಾಗಿ ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ಮಾತ್ರ ನಮ್ಮ ವಿರೋಧವಿದೆ ಎಂದರು.

ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ಚುನಾವಣೆ ಗೆಲ್ಲಬಹುದೆಂಬ ಭ್ರಮೆಯಲ್ಲಿ ಬಿಜೆಪಿ ಪಕ್ಷವಿದೆ. ಇಂಥ ದಾಳಿಗಳಿಗೆ ನಾವು ಹೆದರುವವರಲ್ಲ. ಇಂಥ ರಾಜಕೀಯ ಪ್ರೇರಿತ ಐಟಿ ದಾಳಿಗಳನ್ನು ಖಂಡಿಸುತ್ತೇವೆ ಅಷ್ಟೇ ಅಲ್ಲದೆ ಇದರ ವಿರುದ್ಧ ಪ್ರತಿಭಟನೆಯನ್ನೂ ಮಾಡುತ್ತೇವೆ‌ ಎಂದು ಕೆಂಡಾಮಂಡಲವಾದರು.

ಯಡಿಯೂರಪ್ಪ, ಈಶ್ವರಪ್ಪ, ಜಗದೀಶ್ ಶೆಟ್ಟರ್, ಆರ್ ಅಶೋಕ್ ಇವರ ಮನೆ ಮೇಲೆ ದಾಳಿಗಳಾಗಿವೆಯೇ? ಹಾಗಾದರೆ ಇವರೆಲ್ಲ ಸತ್ಯ ಹರಿಶ್ಚಂದ್ರರೇ? ಇವರ ಮನೆಗಳ ಮೇಲೂ ದಾಳಿ ಮಾಡಿ ಐಟಿ ಇಲಾಖೆ ಸ್ವಾಯತ್ತ ಸಂಸ್ಥೆ ಎಂದು ಸಾಬೀತುಮಾಡಲಿ‌ ಎಂದು ಕಿಡಿಕಾರಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version