ಲೈಫ್ ಸ್ಟೈಲ್
ಪಕ್ಷಿ ಪರಿಚಯ | ನೀಲಿ ಕಿರು ಮಿಂಚುಳ್ಳಿ
- ಭಗವತಿ ಎಂ.ಆರ್
ಸಪೂರ ದೇಹ, ಬಲವಾದ ಕೊಕ್ಕು, ದಪ್ಪ ತಲೆ, ಮೋಟು ಬಾಲದ ನೀಲಿಯ ಬಣ್ಣದ ಪುಟ್ಟ ಹಕ್ಕಿ ನೀಲಿ ಕಿರು ಮಿಂಚುಳ್ಳಿ. ಮೀನು ಇದರ ಪ್ರಧಾನ ಆಹಾರವಾದ್ದರಿಂದ ನೀರಿರುವ ಸ್ಥಳದಲ್ಲೇ ಇವುಗಳ ವಾಸ. ಕರ್ನಾಟಕದಲ್ಲಿ ಏಳೆಂಟು ಜಾತಿಯ ಮಿಂಚುಳ್ಳಿ ಹಕ್ಕಿಗಳಿವೆ.
ನಗರ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಾಣ ಸಿಗುವುದು ಇದೇ ಬಳಗದ ಗದ್ದೆ ಮಿಂಚುಳ್ಳಿ (white-throated kingfisher), ಕಪ್ಪು-ಬಿಳಿ ಮಿಂಚುಳ್ಳಿ (Pied Kingfisher) ನೀಲಿ ಮಿಂಚುಳ್ಳಿಯಂತೆ ಕಾಣಸಿಗುವುದು ಸ್ವಲ್ಪ ಅಪರೂಪವೇ.
ನೀಲಿ ಮಿಂಚುಳ್ಳಿ ಮೀನು ಹಿಡಿಯಲು ಧ್ಯಾನ ಮಗ್ನವಾಗಿದ್ದಾಗ ಕೊಕ್ಕು ಕೆಳಗೆ ಬಾಗಿಸಿ, ಕೂತಲ್ಲೇ ಕುಪ್ಪಳಿಸುವಂತೆ ತಲೆಯನ್ನು ಮೇಲೆ ಕೆಳಗೆ ಆಡಿಸುತ್ತಿರುತ್ತದೆ. ನಿಮ್ಮನ್ನು ದೂರದಿಂದಲೇ ಗಮನಿಸಿ ವಾರೆನೋಟ ಬೀರುತ್ತದೆ. ಅದರ ಧ್ಯಾನವನ್ನು ಭಂಗ ಮಾಡಿದಿರೋ ಪುಟ್ಟ ತರಗೆಲೆಯೊಂದು ಗಾಳಿಯಲ್ಲಿ ಕುಪ್ಪಳಿಸಿ ಹಾರಿದಂತೆ ಹಾರಿ ಸ್ವಲ್ಪ ದೂರದಲ್ಲಿ ಹೋಗಿ ಕುಳಿತುಕೊಳ್ಳುತ್ತವೆ. ಧ್ಯಾನಕ್ಕೆ ಇನ್ನಷ್ಟು ಭಂಗವಾದರೆ ಬೇರೊಂದು ದೂರದ ಜಾಗಕ್ಕೆ ಹಾರುತ್ತವೆ.
ಮರಗಳ ನೆರಳಲ್ಲಿ, ಪುಟ್ಟ ಬಂಡೆಗಳ ಮೇಲೆ ಕೂತರೆ ತಕ್ಷಣಕ್ಕೆ ನಿಮಗೆ ಅವುಗಳ ಗುರುತು ಸಿಗುವುದು ಕಷ್ಟ. ಕ್ಷಿಪ್ರ ಗತಿಯಲ್ಲಿ ಹಾರುವಾಗ ಅದರ ದಟ್ಟ ನೀಲಿಯ ಬಣ್ಣ ಮಿರುಗುವುದನ್ನ ನೋಡುತ್ತೀರಿ. ಹಾರುವಾಗ ಚೀ ಚೀ ಕೂಗು ಮಾತ್ರ ಕೇಳಿಸುತ್ತದೆ.
ಬಲವಾದ, ಮತ್ತು ಮೀನು ಹಿಡಿಯಲು ಅನುಕೂಲವಾಗುವಂತ ಕೊಕ್ಕಿನಿಂದ ಪುಟ್ಟ ಮೀನುಗಳನ್ನು ಹಿಡಿದು ಕುಕ್ಕಿ ಕುಕ್ಕಿ ತಿನ್ನುತ್ತವೆ. ನಾಲ್ಕೈದು ಅಡಿ ನೀರಿನಲ್ಲಿ ಮುಳುಗೇಳುತ್ತವೆ. ಮೀನು ಹಿಡಿಯುವಾಗ ನೀರಿಂದ ಚಿಮ್ಮಿ ಬಂದಷ್ಟೇ ವೇಗವಾಗಿ ಹಿಂತಿರುಗುವಾಗ ಕಾಣುವ ದೃಶ್ಯಕಾವ್ಯವನ್ನು ನೋಡಿಯೇ ಸವಿಯಬೇಕು.
ಸುದ್ದಿದಿನ.ಕಾಂ|ವಾಟ್ಸಾಪ್|9980346243