ಸಿನಿ ಸುದ್ದಿ

ಸದ್ಯ ಎಲ್ಲರ ಗಮನವೂ ದಕ್ಷಿಣದತ್ತ..!

Published

on

  • ಚೇತನ್ ನಾಡಿಗೇರ್

ಳೆದ ಐದು ತಿಂಗಳಲ್ಲಿ ದಕ್ಷಿಣದ ಮೂರು ಚಿತ್ರಗಳು ಜಗತ್ತಿನಾದ್ಯಂತ ಸುದ್ದಿ ಮಾಡಿದ್ದೇ ಮಾಡಿದ್ದು, ಹಿಂದಿ ಮತ್ತು ದಕ್ಷಿಣ ಭಾರತದ ಚಿತ್ರರಂಗಗಳ ಕುರಿತು ದೊಡ್ಡ ಚರ್ಚೆ ನಡೆಯುತ್ತಿದೆ. ಬಾಲಿವುಡ್ನವರಿಗೆ ಚಿತ್ರ ಮಾಡುವುದಕ್ಕೆ ಬರುವುದಿಲ್ಲ, ಅಲ್ಲಿನ ಸ್ಟಾರ್ಗಳಿಗೆ ಅಹಂಕಾರ ಹೆಚ್ಚಿದೆ.

ಹಿಂದಿ ಚಿತ್ರಗಳು ಬಹಳ intellectual ಅಥವಾ class ಆಗುತ್ತಿರುವುದರಿಂದ ಎಲ್ಲರಿಗೂ ತಲುಪುತ್ತಿಲ್ಲ, ಅಲ್ಲಿ family values ಕಡಿಮೆಯಾಗಿ ಸಮಸ್ಯೆಗಳನ್ನು ಹೆಚ್ಚು ಬಿಂಬಿಸುತ್ತಿರುವುದರಿಂದ ಜನರಿಗೆ ಇಷ್ಟವಾಗುತ್ತಿಲ್ಲ, ಮಾಸ್ ಸಿನಿಮಾಗಳನ್ನು ಮಾಡುವುದಕ್ಕೆ ದಕ್ಷಿಣದವರೇ ಬೆಸ್ಟು, ಒಳ್ಳೆಯ ಸಿನಿಮಾಗಳನ್ನು ಕೊಡಲಿಕ್ಕಾಗದೇ ಬಾಲಿವುಡ್ ಮಂದಿ ದಕ್ಷಿಣದವರನ್ನು ಕಾಪಿ ಮಾಡುತ್ತಿದ್ದಾರೆ, ಹಿಂದಿಯಲ್ಲಿ ರೀಮೇಕ್ ಚಿತ್ರಗಳ ಸಂಖ್ಯೆ ಹೆಚ್ಚುತ್ತಿವೆ … ಹೀಗೆ ನಾನಾ ರೀತಿಯ ಅಭಿಪ್ರಾಯಗಳು ಕೇಳಿಬರುತ್ತಿವೆ. ಹಾಗಾದರೆ, ಬಾಲಿವುಡ್ ಅಥವಾ ಹಿಂದಿ ಚಿತ್ರರಂಗಕ್ಕೆ ಇನ್ನು ಉಳಿಗಾಲವಿಲ್ಲವಾ?

ಎರಡು ವರ್ಷಗಳ ಹಿಂದೆ ಮೊದಲ ಲಾಕ್ಡೌನ್ ಎದುರಾದಾಗ, ಎಲ್ಲ ಕಡೆ ಮಲಯಾಳಂ ಚಿತ್ರಗಳ ಚರ್ಚೆ ನಡೆಯಿತು. ಅಲ್ಲೆಷ್ಟು ಒಳ್ಳೆಯ ಚಿತ್ರಗಳು ಬರುತ್ತಿವೆ, ಅಲ್ಲಿನ ಸ್ಟಾರ್ ನಟರು ಎಂಥೆಂಥಾ ಸಿನಿಮಾಗಳನ್ನು ಮಾಡುತ್ತಿದ್ದಾರೆ, ಮಲಯಾಳಂನಲ್ಲಿ ಎಂತೆಂಥಾ ವೈವಿಧ್ಯಮಯ ಕಥೆಗಳು ಬರುತ್ತಿವೆ ಎಂದೆಲ್ಲಾ ಜನ ಮಾತಾಡಿಕೊಳ್ಳ ತೊಡಗಿದರು.

ಹಾಗೆ ನೋಡಿದರೆ, ಅದು ದಿಢೀರನೇ ಆದ ಬೆಳವಣಿಗೆಯಲ್ಲ. ಮಲಯಾಳಂನಲ್ಲಿ ಎಷ್ಟೋ ವರ್ಷಗಳಿಂದ ಒಳ್ಳೆಯ ಚಿತ್ರಗಳು ಬರುತ್ತಲೇ ಇವೆ. ಅದು ನಮಗೆ ಗೊತ್ತಿರಲಿಲ್ಲ ಅಷ್ಟೇ. ಯಾವುದೇ ಒಂದು ಚಿತ್ರರಂಗದಲ್ಲಿ ರಾತ್ರೋರಾತ್ರಿ ಬದಲಾವಣೆಗಳಾಗುವುದಿಲ್ಲ. ಅದಕ್ಕೆ ಸಾಕಷ್ಟು ವರ್ಷಗಳು ಬೇಕು. ನಿರಂತರ ಪ್ರಯತ್ನಗಳಾಗುತ್ತಲೇ ಇರಬೇಕು. ಯಾವತ್ತೋ, ಯಾವುದೋ ಒಂದು ಕಾರಣದಿಂದ ಅದು ಸುದ್ದಿಯಾಗುತ್ತದೆ ಅಷ್ಟೇ.

ಮಲಯಾಳಂ ಚಿತ್ರರಂಗಕ್ಕೆ ಆಗಿದ್ದೂ ಅದೇ. ಬಹುಶಃ ಅದಕ್ಕೊಂದು ವೇದಿಕೆ ಕಲ್ಪಿಸಿಕೊಟ್ಟಿದ್ದು ಕರೊನಾ ಸಮಯ. ಆಗ ಎಲ್ಲರೂ ಮನೆಯಲ್ಲಿದ್ದರು. ಓಟಿಟಿಗಳಲ್ಲಿ ಮಲಯಾಳಂ ಚಿತ್ರಗಳು ಸಿಗುತ್ತಿದ್ದವು. ಅದನ್ನು ನೋಡಿ ಮಲಯಾಳಂನಲ್ಲಿ ಅದ್ಭುತ ಚಿತ್ರಗಳು ಬರುತ್ತಿವೆ ಎಂದು ಆ ಚಿತ್ರಗಳ ಬಗ್ಗೆ ಗೌರವ ಹೆಚ್ಚಾಯಿತು. ಒಂದಿಷ್ಟು ಸಮಯ ಅದೊಂದು ಸಮೂಹ ಸನ್ನಿಯೇ ಆಗಿ ಹೋಯಿತು.

ಯಾರು ನೋಡಿದರೂ, ಮಲಯಾಳಂ ಚಿತ್ರಗಳ ಬಗ್ಗೆ ಮಾತನಾಡುವವರೇ. ಹಾಗಂತ ಈಗ ಮಲಯಾಳಂನಲ್ಲಿ ಚಿತ್ರಗಳು ಬರುತ್ತಿಲ್ಲವಾ? ‘ದೃಶ್ಯಂ 2’, ‘ಅಯ್ಯಪ್ಪನುಂ ಕೋಶಿಯುಂ’, ‘ಡ್ರೈವಿಂಗ್ ಲೈಸೆನ್ಸ್’ನ ಹೊರತಾಗಿ ಯಾವೊಂದು ಒಳ್ಳೆಯ ಚಿತ್ರ ಬಂದೇ ಇಲ್ಲವಾ? ಖಂಡಿತಾ ಬಂದಿದೆ. ಆದರೆ, ನಮ್ಮ ಗಮನ ಆ ಕಡೆ ಇಲ್ಲ ಅಷ್ಟೇ. ಏಕೆಂದರೆ, ಆಗೇನೋ ಎಲ್ಲರ ಬಳಿ ಸಮಯವಿತ್ತು. ಗಮನವೂ ಆ ಕಡೆ ಇದ್ದುದರಿಂದ, ಮಲಯಾಳಂ ಚಿತ್ರಗಳ ಬಗ್ಗೆ ಹೆಚ್ಚು ಚರ್ಚೆಯಾಯಿತು.

15 ವರ್ಷಗಳ ಹಿಂದೆ ಇರಾನ್ ಚಿತ್ರಗಳ ಬಗ್ಗೆಯೂ ಇದೇ ರೀತಿ ಚರ್ಚೆಯಾಗಿತ್ತು. ಎಲ್ಲರೂ ಇರಾನ್ ಚಿತ್ರಗಳ ಬಗ್ಗೆ ಮಾತನಾಡ ತೊಡಗಿದರು, ಅಲ್ಲಿನ ಚಿತ್ರಗಳು ಹೇಗೆ ವಿಭಿನ್ನವಾಗಿ ನಿಲ್ಲುತ್ತವೆ ಎಂದು ಚರ್ಚಿಸಿದರು, ಕಡಿಮೆ ಬಜೆಟ್ನಲ್ಲಿ ಅಂಥ ಸಿನಿಮಾಗಳನ್ನು ನಿರ್ಮಿಸುವುದಕ್ಕೆ ಹೇಗೆ ಸಾಧ್ಯ ಎಂದು ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದರು. ಅಬ್ಬಾಸ್ ಕಿರೋಸ್ತಾಮಿ, ಮೊಹ್ಸನ್ ಮಕ್ಮಲ್ಬಫ್, ಜಾಫರ್ ಪನಾಹಿ, ಮಜಿದ್ ಮಜೀದಿ ಮುಂತಾದವರು ಭಾರತದಲ್ಲೂ ದೊಡ್ಡ ಹೆಸರು ಮಾಡಿದರು.

ಹಾಗೆ ನೋಡಿದರೆ, ಅವರು ಭಾರತದಲ್ಲಿ ಸುದ್ದಿಯಾಗುವುದಕ್ಕಿಂತ ಅದೆಷ್ಟೋ ವರ್ಷಗಳ ಮುಂಚೆಯೇ ಸಕ್ರಿಯವಾಗಿದ್ದರು. ಒಂದಿಷ್ಟು ಅದ್ಭುತ ಚಿತ್ರಗಳನ್ನು ನಿಡಿದ್ದರು ‘ವೇರ್ ಈಸ್ ಮೈ ಫ್ರೆಂಡ್ಸ್ ಹೌಸ್’, ‘ಚಿಲ್ಡ್ರನ್ ಆಫ್ ಹೆವೆನ್’, ‘ದಿ ವೈಟ್ ಬಲೂನ್’, ‘ದಿ ಕಲರ್ ಆಫ್ ಪ್ಯಾರಡೈಸ್’, ‘ದಿ ಸರ್ಕಲ್’, ‘ಟೆನ್’, ‘ಕ್ಲೋಸ್ ಅಪ್’ನಂತಹ ಅದ್ಭುತ ಚಿತ್ರಗಳು ಬಂದಿದ್ದವು. ಆದರೆ, ಅದು ನಮಗೆ ಗೊತ್ತಿರಲಿಲ್ಲ ಅಷ್ಟೇ. ಅದು ಗೊತ್ತಾಗಿದ್ದು ಸಿಡಿ ಕ್ರಾಂತಿಯಿಂದ. 20 ವರ್ಷಗಳ ಹಿಂದೆ, ಸಿಡಿ ಮತ್ತು ಡಿವಿಡಿ ಕ್ರಾಂತಿಯಿಂದ ಇರಾನಿ ಚಿತ್ರಗಳು ಮನೆಮನೆ ತಲುಪಿದವು.

ಬರೀ ಇರಾನಿ ಚಿತ್ರಗಳಷ್ಟೇ ಅಲ್ಲ, ಕೊರಿಯನ್ ಸೇರಿದಂತೆ ಬೇರೆಬೇರೆ ಭಾಷೆಗಳ ಚಿತ್ರಗಳು ಸಹ ಇಲ್ಲಿ ನೋಡುವಂತಾಯಿತು. ಹಾಗಂತ, ಅಲ್ಲಿ ಇದು ಹೊಸದಲ್ಲ. ಎಷ್ಟೋ ವರ್ಷಗಳಿಂದ ಅಂತಹ ಚಿತ್ರಗಳು ಅಲ್ಲಿ ನಿರ್ಮಾಣವಾಗುತ್ತಿತ್ತು. ಅದು ನಮಗೆ ತಡವಾಗಿ ಗೊತ್ತಾಯಿತು ಅಷ್ಟೇ. ಹಾಗಾದರೆ, ಈಗ ಇರಾನ್ನಲ್ಲೋ ಅಥವಾ ಕೊರಿಯಾದಲ್ಲೋ ಒಳ್ಳೆಯ ಚಿತ್ರಗಳು ಬರುತ್ತಿಲ್ಲವೇ? ಖಂಡಿತಾ ಬರುತ್ತಿರಬಹುದು. ಆದರೆ, ನಮ್ಮ ಫೋಕಸ್ ಅಲ್ಲಿಲ್ಲ ಅಷ್ಟೇ.

ಈಗ ಆಗುತ್ತಿರುವುದು ಸಹ ಅದೇ. ಉತ್ತರ ಭಾರತದ ಜನರಿಗೆ ದಕ್ಷಿಣ ಭಾರತದ ಚಿತ್ರಗಳು ಮುಂಚೆ ಇಷ್ಟು ಸುಲಭವಾಗಿ ಸಿಗುತ್ತಿರಲಿಲ್ಲ. ಹಿಂದಿ ಚಿತ್ರಗಳೇನೋ ದೇಶದ ಎಲ್ಲ ರಾಜ್ಯಗಳ ಎಲ್ಲ ನಗರಗಳಲ್ಲೂ ನೇರವಾಗಿ ಬಿಡುಗಡೆಯಾಗುತ್ತಿತ್ತು. ಆದರೆ, ಕನ್ನಡದ, ತೆಲುಗು-ತಮಿಳಿನ ಅಥವಾ ಮಲಯಾಳಂನ ಚಿತ್ರಗಳು ಅಲ್ಲಿ ಬಿಹಾರದಲ್ಲೋ, ಅಸ್ಸಾಂನಲ್ಲೋ ಅಥವಾ ಉತ್ತರ ಪ್ರದೇಶದಲ್ಲೋ ಬಿಡುಗಡೆಯಾಗುವುದು ಅಷ್ಟು ಸುಲಭವಾಗಿರಲಿಲ್ಲ.

ಡಬ್ಬಿಂಗ್ನಿಂದಾಗಿ, ಓಟಿಟಿಗಳಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಆ ಅಂತರ ಕಡಿಮೆಯಾಗಿತ್ತು. ಈಗ ಅಲ್ಲಿನ ಚಿತ್ರಮಂದಿರಗಳಲ್ಲಿ, ಇಲ್ಲಿನ ಚಿತ್ರಗಳು ನೇರವಾಗಿ ಬಿಡುಗಡೆ ಆಗುತ್ತಿರುವುದರಿಂದ, ಇಲ್ಲಿನ ಚಿತ್ರಗಳ ಬಗ್ಗೆ ಅವರಿಗೆ ಗೊತ್ತಾಗುತ್ತಿದೆ. ಹಿಂದಿಯಲ್ಲಿ ಇತ್ತೀಚೆಗೆ ಗಂಭೀರ ಚಿತ್ರಗಳನ್ನು ನೋಡಿ ಸುಸ್ತಾಗಿದ್ದ ಅವರಿಗೆ, ಇಲ್ಲಿನ ಚಿತ್ರಗಳನ್ನು ನೋಡಿ ಇಲ್ಲೇನೋ ವಿಶೇಷವಾಗುತ್ತಿದೆ ಎಂದನಿಸತೊಡಗಿದೆ. ಈ ತರಹದ ಚಿತ್ರಗಳು ಅಲ್ಲೇಕೆ ಬರುತ್ತಿಲ್ಲ ಎಂದು ಚರ್ಚೆ ನಡೆಯುತ್ತಿವೆ.

ಹಾಗೆ ನೋಡಿದರೆ, ಇತ್ತೀಚೆಗೆ ದೊಡ್ಡ ಸುದ್ದಿಯಾಗುತ್ತಿರುವ (‘ಈಗ’, ‘ಬಾಹುಬಲಿ’, ‘ಎಂದಿರನ್’, ‘RRR’ನಂತಹ ಕೆಲವು ಚಿತ್ರಗಳನ್ನು ಹೊರತುಪಡಿಸಿ) ಚಿತ್ರಗಳ್ಯಾವುವೂ ನಮಗೆ ಹೊಸದಲ್ಲ. ಅವೆಲ್ಲವೂ ಉತ್ತರದವರಿಗೆ ವಿಶೇಷವಾಗಿ ಕಾಣಿಸುತ್ತಿವೆ. ಅದು ಬಜೆಟ್ ಇರಬಹುದು, ಮೇಕಿಂಗ್ ಇರಬಹುದು ಅಥವಾ ಕಾರಣ ಏನೇ ಇರಬಹುದು, ಇಲ್ಲಿನ ಚಿತ್ರಗಳು ಒಟ್ಟಾರೆ ಇಷ್ಟವಾಗುತ್ತಿವೆ ಅಷ್ಟೇ.

ಹಾಗಂತ ಮುಂದೆ ಸಹ ಇದೇ ಮುಂದುವರೆಯುತ್ತದಾ? ಹೇಳುವುದು ಕಷ್ಟ. ಈಗ ಇಷ್ಟವಾಗಿದ್ದು ಮುಂದೆಯೂ ಇಷ್ಟವಾಗುತ್ತದೆ ಎಂದು ಹೇಳುವುದು ಕಷ್ಟ. ಮೇಲಾಗಿ, ಮೇಲಿಂದ ಮೇಲೆ ಹೀಗೆ ಸದ್ದು ಮಾಡುವ ಚಿತ್ರಗಳು ಬಂದರೆ, ಆಗ ಗಮನ ಈ ಕಡೆಯೇ ಇರಬಹುದು. ಆದರೆ, ಮುಂದಿನ ದಿನಗಳಲ್ಲಿ ಬೆರಳಣಿಕೆಯಷ್ಟು ಚಿತ್ರಗಳನ್ನು ಹೊರತುಪಡಿಸಿದರೆ, ಇಡೀ ದೇಶವೇ ಕಾಯುವ ಚಿತ್ರಗಳ ಸಂಖ್ಯೆ ಕಡಿಮೆ ಎಂದು ಹೇಳಬಹುದು.

ಹಾಗಾಗಿ, ಮುಂದೆ ಸಹ ದಕ್ಷಿಣದ ಚಿತ್ರಗಳಿಗೆ ಇದೇ ರೀತಿಯ ಕ್ರೇಜ್ ಮುಂದುವರೆಯುತ್ತದೆ ಎಂದು ಹೇಳುವುದು ಕಷ್ಟ. ಅಷ್ಟರಲ್ಲಿ ಜನರ ಗಮನ ಬೇರೆ ಕಡೆ ಹೋಗಿದ್ದರೆ, ಆಗ ಎಷ್ಟೇ ದೊಡ್ಡ ಚಿತ್ರ ಬಿಡುಗಡೆಯಾದರೂ, ಆ ಬಗ್ಗೆ ಆಸಕ್ತಿ ಇಲ್ಲದಿರಬಹುದು. ಹಾಗಾಗಿ, ದಕ್ಷಿಣದಿಂದ ಬಾಲಿವುಡ್ಗೆ ಅಪಾಯ ಅಥವಾ ಹಿಂದಿ ಚಿತ್ರಗಳ ಕಥೆ ಮುಗಿಯಿತು ಎಂದೆಲ್ಲ ಹೇಳುವುದು ತಪ್ಪಾಗುತ್ತದೆ.

ಸದ್ಯ ಎಲ್ಲರ ಗಮನವೂ ದಕ್ಷಿಣದತ್ತ ಇದೆ. ಅದ್ಯಾವಾಗ ಬದಲಾಗುತ್ತದೋ?

ಮುಂದುವರೆಯುತ್ತದೆ …

(ಚೇತನ್ ನಾಡಿಗೇರ್ ಅವರ ಫೇಸ್‌ಬುಕ್‌ ನಿಂದ ಆಯ್ದುಕೊಂಡ ಬರಹ)

ಸುದ್ದಿದಿನ.ಕಾಂ|ವಾಟ್ಸಾಪ್|9980346243,

Trending

Exit mobile version