ದಿನದ ಸುದ್ದಿ

ಮಹಿಳೆಗೆ ಮೀಸಲಾತಿ ಬೇಡ, ಸಮಾನ ಪ್ರಾತಿನಿಧ್ಯ ಕೊಡಿ : ಡಾ.ಜ್ಯೋತಿ ಟಿ.ಬಿ

Published

on

ಸುದ್ದಿದಿನ, ಚನ್ನಗಿರಿ (ಬಸವಾಪಟ್ಟಣ) : ಭಾರತೀಯ ಸಮಾಜದಲ್ಲಿ ಮೀಸಲಾತಿಯಿಂದ ಮಾತ್ರ ಮಹಿಳಾ ಪ್ರಗತಿ ಸಾಧ್ಯವಿಲ್ಲ. ಅವಳಿಗೆ ಪುರುಷನಂತೆ ಸಮಾನವಾದ ಪ್ರಾತಿನಿಧ್ಯ ನೀಡಿದಲ್ಲಿ‌ ಮಾತ್ರವೇ ಮಹಿಳಾ ಪ್ರಗತಿ ಸಾಧ್ಯ. ಆಗ ಮಾತ್ರವೇ ಸದೃಢವಾದ ಭಾರತ ನಿರ್ಮಾಣವಾಗಲು ಸಾಧ್ಯ ಎಂದು ಸಂತೆಬೆನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ಜ್ಯೋತಿಯವರು ಅಭಿಪ್ರಾಯ ವ್ಯಕ್ತಪಡಿಸಿದರು.

ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ‌ಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಐಕ್ಯತ ಸಪ್ತಾಹದ ಅಡಿಯಲ್ಲಿ ‘ಭಾರತೀಯ ಸಮಾಜ ಹಾಗೂ ರಾಷ್ಟ್ರದ ಪ್ರಗತಿಯಲ್ಲಿ ಮಹಿಳೆಯರ ಪ್ರಾಮುಖ್ಯತೆ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಮಹಿಳೆಗೆ ಎಲ್ಲಿಯವರೆಗೆ ಮುಕ್ತವಾದ ಪ್ರಾತಿನಿಧ್ಯ ಲಭಿಸುವುದಿಲ್ಲವೋ ಅಲ್ಲಿಯವರೆಗೆ ಎಷ್ಟೇ ಕಾಯ್ದೆ, ಕಾನೂನುಗಳು ಜಾರಿಯಾದರೂ ಮಹಿಳೆಯರ ಬದುಕಿನಲ್ಲಿ ಸಮಗ್ರ ಬದಲಾವಣೆ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಪ್ರಾಂಶುಪಾಲರಾದ ಡಾ.ಎಂ.ಆರ್. ಲೋಕೇಶ್ ಅವರು ಮಾತನಾಡಿ ಭಾರತೀಯ ಸಮಾಜದಲ್ಲಿ ಹೆಣ್ಣು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳುವುದು ಕೇವಲ ಆರ್ಥಿಕತೆಯಿಂದ ಸಾಧ್ಯವಿಲ್ಲ ಎಂದರು.

ನೈತಿಕತೆ, ಸಂಸ್ಕಾರವು ಕೂಡ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಹೀಗಾಗಿಯೇ ಶರಣರು ಗಂಡು-ಹೆಣ್ಣು ಎಂಬ ಬೇಧವನ್ನು ಮೆಟ್ಟಿ ನಿಂತು ‘ಒಳಗೆ ಸುಳಿವ ಆತ್ಮ ಹೆಣ್ಣು ಅಲ್ಲ, ಗಂಡು ಅಲ್ಲ’ ಎಂಬ ತಾತ್ವಿಕತೆಯ ಮೂಲಕ ಸರ್ವರನ್ನು ಸಮಾನವಾಗಿ ಕಾಣುವಂತಹ ಸಮಾಜಕ್ಕಾಗಿ ಶ್ರಮಿಸಿದರು. ಭಾರತದ ನೆಲದಲ್ಲಿ ಶರಣರು, ದಾರ್ಶನಿಕರು ರೂಪಿಸಿಕೊಟ್ಟ ಮಾರ್ಗದಲ್ಲಿ ನಡೆದು ಇಂದಿನ ಮಹಿಳೆಯರು ಸಬಲರಾಗಬೇಕು ಎಂಬುದಾಗಿ ತಿಳಿಸಿದರು.

ಸಮಾಜಶಾಸ್ತ್ರದ ಮುಖ್ಯಸ್ಥರಾದ ಡಾ.ಎ.ಡಿ.ಬಸವರಾಜ್ ಅವರು ಪ್ರಾಸ್ತವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಬೋಧಕರಾದ ಹನುಮಂತಪ್ಪ, ಪ್ರಕಾಶ್, ಮಧುಸೂಧನ್, ರೆಹಮತ್ಬಿ, ಸಂದೀಪ್ ಮುಂತಾದವರು ಹಾಜರಿದ್ದರು. ಕಾರ್ಯಕ್ರಮವನ್ನು ಗೋವಿಂದರೆಡ್ಡಿ ಅವರು ನಿರೂಪಿಸಿದರು. ವಿದ್ಯಾರ್ಥಿನಿ ಸೌಂದರ್ಯ ಸ್ವಾಗತಿಸಿದರು, ಯಶೋಧ, ಸಹನಾ ಪ್ರಾರ್ಥಿಸಿದರು, ರಕ್ಷಿತ ವಂದಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version