ದಿನದ ಸುದ್ದಿ
ಪರಿಶಿಷ್ಟ ಪಂಗಡದ ಪಟ್ಟಿಯಿಂದ ‘ನಾಯಕ’ ಪದ ಕೈಬಿಟ್ಟಿರುವುದನ್ನು ಖಂಡಿಸಿ ಚಿಗಟೇರಿಯಲ್ಲಿ ಪ್ರತಿಭಟನೆ
ಸುದ್ದಿದಿನ, ಹರಪನಹಳ್ಳಿ : ಪರಿಶಿಷ್ಟ ಪಂಗಡದ ಪಟ್ಟಿಯಿಂದ “ನಾಯಕ” ಪದ ಕೈಬಿಟ್ಟಿರುವುದನ್ನು ಕೂಡಲೇ ನಾಡ ಕಛೇರಿ (ಅಟಲ್ ಜೀ ಜನಸ್ನೇಹಿ) ಕೇಂದ್ರದ ಅಂತರ್ಜಾಲದಲ್ಲಿ ಸೇರಿಸಿ “ನಾಯಕ” (ಪರಿಶಿಷ್ಟ ಪಂಗಡ) ಪ್ರಮಾಣ ಪತ್ರ ನೀಡಲು ಒತ್ತಾಯಿಸಿ ಇಂದು ಹರಪನಹಳ್ಳಿ ತಾಲ್ಲೂಕಿನ,ಚಿಗಟೇರಿ ನಾಡ ಕಛೇರಿಯ ಉಪ-ತಹಶೀಲ್ದಾರರಿಗೆ ಪ್ರತಿಭಟನೆ ಮೂಲಕ ಸಲ್ಲಿಸುತ್ತಿರುವ ಮನವಿ ಸಲ್ಲಿಸಲಾಯಿತು.
ಕರ್ನಾಟಕದ ಬಳ್ಳಾರಿ, ವಿಜಯನಗರ, ಹಾಗೂ ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ನಾಯ್ಕಡ ಬುಡಕಟ್ಟಿಗೆ ಸೇರಿದ ನಾಯಕ ಅಥವಾ ನಾಯ್ಕ ಪಂಗಡದವರಾದ ಮ್ಯಾಸ ನಾಯಕ ಅಥವಾ ಮ್ಯಾಸ ಬೇಡರಿಗೆ 1976 ಮತ್ತು 1991 ನೇ ಸಾಲಿನಿಂದ 2021ನೇ ಸಾಲಿನವರೆಗೂ ಪರಿಶಿಷ್ಟ ಪಂಗಡದ “ನಾಯಕ” ಪ್ರಮಾಣ ಪತ್ರ ಕೋರಿ ಅರ್ಜಿ ಸಲ್ಲಿಸಿದರೆ ಪರಿಶಿಷ್ಟ ಪಂಗಡದ “ನಾಯಕ” ಪ್ರಮಾಣ ಪತ್ರವನ್ನು ನೀಡಲಾಗುತ್ತಿತ್ತು. ಆದರೆ ಈಗ್ಗೆ ಸುಮಾರು 5-6 ತಿಂಗಳಿಂದ ನಾಡ ಕಛೇರಿ (ಅಟಲ್ ಜಿ ಜನಸ್ನೇಹಿ) ಕೇಂದ್ರದ ಅಂತರ್ಜಾಲದಲ್ಲಿ ಪರಿಶಿಷ್ಟ ಪಂಗಡದ “ನಾಯಕ “ ಎಂಬ ಪದವನ್ನು ಕೈ ಬಿಡಲಾಗಿದೆ ಮತ್ತು ನಾಯಕ ಎಂದು ಎಸ್ ಟಿ ಪ್ರಮಾಣ ಪತ್ರವನ್ನು ನೀಡುತ್ತಿಲ್ಲ.
ನಾಯಕ Nayaka ಬದಲಾಗಿ (Nayaka (Including Parivara and Talawara)) (ನಾಯಕ(ಪರಿವಾರ ತಳವಾರ ಸೇರಿದಂತೆ)) ಅಥವಾ ನಾಯಕ(ಪರಿವಾರ) ಅಥವಾ ನಾಯಕ(ತಳವಾರ) ಎಂದು ನೀಡಲಾಗುತ್ತಿದೆ. ಸರ್ಕಾರದ ಈ ಸಂವಿಧಾನ ವಿರೋಧಿ ಕ್ರಮವು ನಿಜವಾದ ನಾಯ್ಕಡ-ನಾಯಕ ಪಂಗಡದವರಿಗೆ ಕಾನೂನಿನ ಹಾನಿಯುಂಟು ಮಾಡಿದೆ. 1976ನೇ ಸಾಲಿನಿಂದಲೂ ನಾಯ್ಕಡ,ನಾಯಕ ಎಂಬುದು ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಇರುತ್ತದೆ.
2020 ರಲ್ಲಿ ಭಾರತೀಯ ಸಂಸತ್ ಸೇರ್ಪಡೆ ಮಾಡಿರುವುದು ನಾಯಕ ಜೊತೆಯಲ್ಲಿ ಪರಿವಾರ ಮತ್ತು ತಳವಾರ ಸೇರಿರುತ್ತಾರೆ ಎಂದು ತಿದ್ದುಪಡಿ ಕಾಯ್ದೆ ಮಾಡಿರುತ್ತದೆ. ತಿದ್ದುಪಡಿ ಆದೇಶದ ಪ್ರಕಾರ ಸರ್ಕಾರ ಪರಿವಾರ ಮತ್ತು ತಳವಾರ ಎಂದು ನೀಡಬೇಕು. ನಾಯ್ಕಡ ನಾಯಕ ಪಂಗಡದ ಹೆಸರನ್ನು ಬದಲಾಯಿಸಲು ಸಂವಿಧಾನದಲ್ಲಿ ಅವಕಾಶವಿಲ್ಲ. 1991 ರಲ್ಲಿ ಭಾರತೀಯ ಸಂಸತ್ Naikda, Nayaka ಸಮಾನಾರ್ಥಕ ಪದಗಳಾಗಿ “Naik, Nayak, Beda, Bedar and Valmiki ಎಂಬ ಪದಗಳನ್ನು ಸೇರಿಸಿ ತಿದ್ದುಪಡಿ ಕಾಯ್ದೆಯನ್ನು ಮಾಡಿರುತ್ತದೆ. ಆ ಕಾಯ್ದೆ ಪ್ರಕಾರ ಮೂಲ ನಾಯ್ಕಡ,ನಾಯಕ ಎಂಬುದನ್ನು ಬದಲಾಯಿಸಿರುವುದಿಲ್ಲ.
ಆದರೆ ರಾಜ್ಯ ಸರ್ಕಾರವು ಕಾನೂನನ್ನು ತಪ್ಪಾಗಿ ಅರ್ಥೈಸಿ ತಳವಾರ ಮತ್ತು ಪರಿವಾರ ಜಾತಿಯವರಿಗೆ ನಾಯಕ ಎಂದು ಪ್ರಮಾಣ ಪತ್ರ ಕೊಡುತ್ತಿದ್ದಿರಿ ಇದು ಸಂವಿಧಾನ ಬಾಹಿರವಾಗಿರುತ್ತದೆ. ಮೂಲ ನಾಯಕ ಪಂಗಡದವರಾದ ನಮಗೆ ನಾಯಕ ಪ್ರಮಾಣ ಪತ್ರವನ್ನು ಕೊಡದೇ ಹೊಸ ಜಾತಿಯನ್ನು ಬರೆದುಕೊಳ್ಳುವಂತೆ ಮಾಡಿರುವುದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ ಎಂದರು.
ಕೂಡಲೇ ಸರ್ಕಾರ ನಾಯಕ (ಪರಿಶಿಷ್ಟ ಪಂಗಡ) ಎಂದು ಪ್ರಮಾಣ ಪತ್ರವನ್ನು ನೀಡುವಂತೆ ಕೋರುತ್ತೇವೆ. 1976 ರಿಂದ ಮ್ಯಾಸ ನಾಯಕರ ಬುಡಕಟ್ಟು ಲಕ್ಷಣಗಳನ್ನು ಆಧಾರಿಸಿ ಪರಿಶಿಷ್ಟ ಪಂಗಡಕ್ಕೆ ಸೇರಿದವರೆಂದು ಮ್ಯಾಸ ನಾಯಕರಿಗೆ “ನಾಯಕ” ಎಂದೇ ಎಸ್ ಟಿ ಪ್ರಮಾಣ ಪತ್ರ ಕೊಡಲಾಗುತ್ತಿತ್ತು. ಆದರೆ ನಮಗೆ ನಮ್ಮ ಪಂಗಡದ ಹೆಸರನ್ನೆ ಬದಲಾವಣೆ ಮಾಡಿ ನಾಯಕ (ಪರಿವಾರ ಮತ್ತು ತಳವಾರ) ಎಂದು ನಮೂದಿಸಿ ನಮ್ಮ ಬುಡಕಟ್ಟಿನ ಮೂಲ ಹೆಸರನ್ನೆ ಇಲ್ಲದಂತೆ ಮಾಡಿರುತ್ತೀರಿ ಎಂದು ಆರೋಪಿಸಿದರು.
ನಮಗೂ ಪರಿವಾರ ಮತ್ತು ತಳವಾರ ಜಾತಿಯವರಿಗೂ ಯಾವುದೇ ಸಂಬಂಧವಿರುವುದಿಲ್ಲ. ದುರುದ್ದೇಶದಿಂದ ಈ ರೀತಿ ಕಾನೂನನ್ನು ಮಾಡಿ ಮೂಲ ಬುಡಕಟ್ಟು ಜನರಿಗೆ ಕಾನೂನು ತೊಡಕನ್ನು ಉಂಟು ಮಾಡುತ್ತಿರುವುದಲ್ಲದೆ ನಮ್ಮ ಮೂಲ ಪಂಗಡದ ಹೆಸರನ್ನೆ ನಿರ್ನಾಮ ಮಾಡಲು ಹೊರಟಿರುತ್ತಿರಿ ಎಂದು ಕಿಡಿಕಾರಿದರು.
ಆದ್ದರಿಂದ ಮ್ಯಾಸ ನಾಯಕರಿಗೆ “ನಾಯಕ” ಎಂದೇ ಪರಿಶಿಷ್ಟ ಪಂಗಡದ ಪ್ರಮಾಣ ಪತ್ರವನ್ನು ಮಾತ್ರ ನೀಡಲು ಒತ್ತಾಯಪೂರ್ವಕವಾಗಿ ವಿನಂತಿಸುತ್ತಿದ್ದೇವೆ. ನಮ್ಮ ಪರಿಶಿಷ್ಟ ಪಂಗಡದ “ನಾಯಕ” ಪ್ರಮಾಣ ಪತ್ರಗಳಲ್ಲಿ ತಳವಾರ ಮತ್ತು ಪರಿವಾರ ಎಂಬ ಹೆಸರಗಳನ್ನು ನಮೂದಿಸುವಂತಿಲ್ಲ. ಇತ್ತೀಚೇಗೆ ಸಂಸತ್ ನಲ್ಲಿ ಮಾಡಿರುವ The Counstitution (Scheduled Tribes) Order (Amendment) Act,2020ರ ಪ್ರಕಾರ ನಮ್ಮ ಮೂಲ ನಾಯ್ಕಡ,ನಾಯಕ ಪಂಗಡದ ಹೆಸರನ್ನು ಬದಲಾವಣೆ ಮಾಡುವ ಬಗ್ಗೆ ಯಾವುದೇ ಕಾನೂನನ್ನು ಮಾಡಿರುವುದಿಲ್ಲ.
ಆದರೂ ಸಹ ತಪ್ಪು ತಪ್ಪಾಗಿ ಕಾನೂನನ್ನು ಅರ್ಥೈಸಿ ಬುಡಕಟ್ಟು ಜನರ ಅಸ್ತಿತ್ವವನ್ನು ನಿರ್ನಾಮ ಮಾಡುತ್ತಾ ಹಕ್ಕುಗಳನ್ನು ಅಪಹರಿಸಲು ಸಂಚನ್ನು ಮಾಡಲಾಗುತ್ತಿದೆ. ಆದ್ದರಿಂದ ಎಲ್ಲಾ ರೀತಿಯಿಂದ ರಾಜ್ಯ ಸರ್ಕಾರದ ಈ ನಡೆಯನ್ನು ಪರಿವಾರ ಮತ್ತು ತಳವಾರ ಜಾತಿಯವರ ಕುಯಿಕ್ತಿಯಂತೆ ಮಾಡುತ್ತಿರುವುದು ನಮ್ಮ ಮ್ಯಾಸ ನಾಯಕರಿಗೆ ಬಾರಿ ಅನ್ಯಾವಾಗುತ್ತಿದೆ. ಆದ್ದರಿಂದ ಈ ಕೂಡಲೇ ಮೊದಲಿನ ರೀತಿಯಲ್ಲಿ ನಾಯಕ (ಪರಿಶಿಷ್ಟ ಪಂಗಡ) ಎಂದು ಮಾತ್ರ ಪ್ರಮಾಣ ಪತ್ರ ನೀಡಬೇಕು ಎಂದು ಪ್ರತಿಭಟನೆಯ ಮೂಲಕ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸುತ್ತಿದ್ದೇವೆ ಎಂದರು.
ಬೇಡಿಕೆಗಳು
- ನಾಡ ಕಛೇರಿ ಅಂತರ್ಜಾಲದಲ್ಲಿ ಕೈಬಿಟ್ಟಿರುವ “ನಾಯಕ: ಪದವನ್ನು ಸೇರಿಸಿ ಈ ಕೂಡಲೇ ಮೊದಲಿನ ರೀತಿಯಲ್ಲಿ ನಾಯಕ (ಪರಿಶಿಷ್ಟ ಪಂಗಡ) ಎಂದು ಮಾತ್ರ ಪ್ರಮಾಣ ಪತ್ರ ನೀಡಬೇಕು.
- ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿರುವ “ನಾಯ್ಕಡ” “ನಾಯಕ” ಸಮಾನಾರ್ಥಕ ಪದಗಳಾಗಿ “ಮ್ಯಾಸ ನಾಯ್ಕ”, “ಮ್ಯಾಸ ನಾಯಕ”, “ಮ್ಯಾಸ ಬೇಡ”, “ಮ್ಯಾಸ ಬ್ಯಾಡ್ರು”, “ಮ್ಯಾಸ ಬೇಡರ”, “ಮ್ಯಾಸರು” ಎಂಬ ಪದಗಳನ್ನು ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಈ ಕೂಡಲೇ ಕ್ರಮ ಕೈಗೊಳ್ಳಬೇಕು.
- “ನಾಯಕ” ಪಂಗಡದ ನಿಜವಾದ ಸಮಾನಾರ್ಥಕ “ಮ್ಯಾಸ ನಾಯಕ” ಪದವನ್ನು ಸಂವಿಧಾನ ಬಾಹಿರವಾಗಿ ಓಬಿಸಿಪಟ್ಟಿಗೆ ಸೇರ್ಪಡೆ ಮಾಡಿರುವುದನ್ನು ಈ ಕೂಡಲೇ ತೆಗೆದುಹಾಕಿ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಸೇರ್ಪಡೆ ಮಾಡಬೇಕು.
- 1976 ನೇ ಸಾಲಿನಿಂದಲೂ “ನಾಯಕ” ಎಂಬುದು ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಇರುತ್ತದೆ. ಭಾರತೀಯ ಸಂಸತ್ ಸೇರ್ಪಡೆ ಮಾಡಿರುವುದು ನಾಯಕ ಜೊತೆಯಲ್ಲಿ ಪರಿವಾರ ಮತ್ತು ತಳವಾರ ಸೇರಿರುತ್ತಾರೆ ಎಂದು ತಿದ್ದುಪಡಿ ಕಾಯ್ದೆ ಮಾಡಿರುತ್ತದೆ. ತಿದ್ದುಪಡಿ ಆದೇಶದ ಪ್ರಕಾರ ರಾಜ್ಯ ಸರ್ಕಾರ ಪರಿವಾರ ಮತ್ತು ತಳವಾರ ಎಂದು ನೀಡಬೇಕು.
ನಾಯ್ಕಡ ನಾಯಕ ಪಂಗಡದ ಹೆಸರನ್ನು ಬದಲಾಯಿಸಲು ಸಂವಿಧಾನದಲ್ಲಿ ಅವಕಾಶವಿಲ್ಲ. ಆದರೆ ರಾಜ್ಯ ಸರ್ಕಾರವು ಕಾನೂನನ್ನು ತಪ್ಪಾಗಿ ಅರ್ಥೈಸಿ ತಳವಾರ ಮತ್ತು ಪರಿವಾರದವರಿಗೆ ನಾಯಕ ಎಂದು ಪ್ರಮಾಣ ಪತ್ರ ಕೊಡುತ್ತಿದ್ದಿರಿ ಇದು ಸಂವಿಧಾನ ಬಾಹಿರವಾಗಿರುತ್ತದೆ.
ಈ ಸಂದರ್ಭದಲ್ಲಿ ಮ್ಯಾಸ ನಾಯಕ ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿ(ರಿ)ಯ ಸಂಚಾಲಕರುಗಳಾದ ಜಿ ನಾಗರಾಜ, ಗಾಮ ಪಂಚಾಯಿತಿ ಉಪಾಧ್ಯಕ್ಷರು, ಕೋಟೆ ನಾಗರಾಜ, ಎಂ ದ್ವಾರಕೇಶ,ವಕೀಲರಾದ ಬಿ.ಕರಿಯಪ್ಪ, ಡಿ.ನಾಗರಾಜ್ ಚಿಗಟೇರಿ ಗ್ರಾಮದ ಮುಖಂಡರುಗಳಾದ ಎಂ.ರಾಜಪ್ಪ, ಎಂ.ತಿಪ್ಪೇಸ್ವಾಮಿ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಗ್ರಾಮ ಪಂಚಾಯತಿ ಸದಸ್ಯರುಗಳಾದ ಎ.ಬಸವರಾಜ್, ಎಂ.ದುರುಗಪ್ಪ, ಜಿ. ಅಡವಿಪ್ಪ, ಬಿ. ನಾಗರಾಜ, ಎಸ್ ನಾಗೇಂದ್ರಪ್ಪ, ಜಿ.ಬಸಪ್ಪ, ಶೇಖರಪ್ಪ, ಎಂ ಹಾಲಪ್ಪ, ದುರುಗಪ್ಪ,ಮಂಜುನಾಥ್, ಎಸ್ ದಿವಾಕರ, ಎಂ.ಹೇಮಪ್ಪ, ಎಂ.ಮಾರಪ್ಪ, ಸುಖವಪ್ಪ, ಎಂ.ಬಸವರಾಜ, ಬಿ. ಮನ್ನೇಪ್ಪ, ಎ.ದಾಸಪ್ಪ, ಭೀಮಪ್ಪ ನಿವೃತ್ತ ಶಿಕ್ಷಕರು, ಹೆಚ್.ಕಂಪಾಲೆಪ್ಪ, ಎಂ.ಹಳ್ಳೆಪ್ಪ, ಎಂ ಸೂರಪ್ಪ, ಎಸ್.ಬೊಮ್ಮಪ್ಪ, ಎಂ.ಡಿ.ನಾಗರಾಜಪ್ಪ ಇತರರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243