ದಿನದ ಸುದ್ದಿ
ದಾವಣಗೆರೆ | ಲಾಕ್ ಡೌನ್ ವೇಳೆ ತಹಸೀಲ್ದಾರ್ ವರ್ಗಾವಣೆ
ಸುದ್ದಿದಿನ, ದಾವಣಗೆರೆ : ಸರ್ವೋತ್ತಮ ಪ್ರಶಸ್ತಿ ಪುರಸ್ಕೃತ ತಹಶೀಲ್ದಾರ್ ಸಂತೋಷ್ ಕುಮಾರ್ ರನ್ನು ಸರಕಾರ ಲಾಕ್ ಡೌನ್ ವೇಳೆ ವರ್ಗಾವಣೆ ಮಾಡಿರುವುದಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ.
ಲಾಕ್ ಡೌನ್ ಸಮಯದಲ್ಲಿ ತಹಶೀಲ್ದಾರ್ ಸಂತೋಷ್ ಕುಮಾರ್ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಮಹಾನಗರ ಪಾಲಿಕೆ, ಪೌರ ಕಾರ್ಮಿಕರ ಜೊತೆ ಕೈ ಜೋಡಿಸಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರ ಮಾರ್ಗದರ್ಶನದಲ್ಲಿ ಹಗಲಿರುಳು ಸೇವೆ ಸಲ್ಲಿಸುತ್ತಿದ್ದರು.
ಲಾಕ್ ಡೌನ್ ಹಿನ್ನೆಲೆ ಬೆಳಗ್ಗೆ 6 ಗಂಟೆಯಿಂದಲೇ ಕೆಲಸ ಶುರು ಮಾಡುತ್ತಿದ್ದ ತಹಶೀಲ್ದಾರ್ ಸಂತೋಷ್ ಕುಮಾರ್ ಅವರು ಜನರಿಗೆ ಅರಿವು ಮೂಡಿಸಿ ಜಾಗೃತ ಪಡಿಸಿದ್ದರು. ಜನರು ಗುಂಪು ಗುಂಪಾಗಿ ಸೇರುವುದನ್ನ ತಪ್ಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಮಾರುಕಟ್ಟೆಯಲ್ಲಿ ಜನ ಜನಂಗುಳಿ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದರು.
ಅಂಗಡಿಗಳ ಮೇಲೆ ದಾಳಿ ಮಾಡಿ ನಿಷೇಧ ಹೇರಿದ್ದ ವಸ್ತುಗಳ ಮಾರಾಟಕ್ಕೆ ಬ್ರೇಕ್ ಹಾಕಿದ್ದು, ಜನರಿಂದ ಪ್ರಶಂಸೆ ಮಾತುಗಳು ವ್ಯಕ್ತವಾಗಿದ್ದವು. ಕಾರ್ಮಿಕರು,ಬಡವರು, ಅಲೆಮಾರಿಗಳು ಕೆಲಸವಿಲ್ಲದೇ ಊಟಕ್ಕೂ ಪರದಾಡುತ್ತಿದ್ದ ವೇಳೆ ತಹಶೀಲ್ದಾರ್ ಸಂತೋಷ್ ಕುಮಾರ್, ದಾವಣಗೆರೆ ನಗರ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಹಾಗೂ ಗೋಣಿವಾಡ ಕ್ರಾಸ್ ಗೆ ತೆರಳಿ ಅಲೆಮಾರಿಗಳಿಗೆ ಆಹಾರ ಸಾಮಾಗ್ರಿ ವಿತರಿಸಿದ್ದರು. ಅಲ್ಲದೇ ಸಾಮಾಜಿಕ ಕಾರ್ಯಕರ್ತರು, ಸಂಘ ಸಂಸ್ಥೆಗಳೊಂದಿಗೆ ಕೈ ಜೋಡಿಸಿ ಹತ್ತಾರು ಕುಟುಂಬಗಳಿಗೆ ನೆರವು ನೀಡಿದ್ದು, ಜನ ಮನ್ನಣೆಗಳಿಸಿದ್ದರು.
- ದಾವಣಗೆರೆ ತಾಲೂಕ್ ನಲ್ಲಿ ತಹಸೀಲ್ದಾರ್ ಸಂತೋಷ್ ಕುಮಾರ್ ಜನರ ಬಳಿಯೇ ಹೋಗಿ ಅವರ ಸಮಸ್ಯೆಗೆ ಸ್ಪಂದಿಸುತ್ತಿದ್ದರು. ಅವರ ವರ್ಗಾವಣೆಗೆ ನಮ್ಮ ವಿರೋಧ ಇದೆ. ಏಕಾಏಕಿ ಕಾರಣವಿಲ್ಲದೇ ಸ್ಥಳ ಕೂಡ ತೋರಿಸದೇ ವರ್ಗಾವಣೆ ಮಾಡಿದ್ದು ಎಷ್ಟು ಸರಿ. ಇನ್ನಾದರೂ ಪ್ರಾಮಾಣಿಕ ಅಧಿಕಾರಿಗಳನ್ನು ಸರಕಾರ ಜಿಲ್ಲೆಯಲ್ಲಿ ಉಳಿಸಲಿ.
| ಬಾಡಾದ ಆನಂದ್ ರಾಜ್, ಶೋಷಿತ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ
ಸುದ್ದಿದಿನ.ಕಾಂ|ವಾಟ್ಸಾಪ್|9980346243