ಲೈಫ್ ಸ್ಟೈಲ್

ಪಕ್ಷಿ ಪರಿಚಯ | ಕೆಂಪು ಕೊರಳಿನ ನೊಣಹಿಡುಕ

Published

on

  • ಭಗವತಿ ಎಂ.ಆರ್

ಒಂಟಿಯಾಗಿ ಕೊಂಬೆಯ ಮೇಲೆ ಕುಳಿತು, ಇಲ್ಲವೇ ನೆಲದಲ್ಲಿ ಹುಳು ಹೆರಕುತ್ತಾ ಕೂರುವ ಈ ನೀಲಿ ಮೈಯಿನ ಹಕ್ಕಿಯೇ ಕೆಂಪುಕೊರಳಿನ ನೊಣಹಿಡುಕ. ಕೀಟಗಳೇ ಪ್ರಧಾನ ಆಹಾರವಾಗಿರುವ ಇತರೆ ಹಕ್ಕಿಗಳ ಗುಂಪಿಗೆ  ಈ ಹಕ್ಕಿಯೂ ಸೇರಿದೆ. ಇದಕ್ಕೆ “ನೀಲಿ ರಾಜ ಪಕ್ಷಿ” ಎನ್ನುವ ಇನ್ನೊಂದು ಹೆಸರಿದೆ. ನೀಲಿ ಬಣ್ಣವೇ ಪ್ರಧಾನ ವಾಗಿರುವ ಇತರೆ ಹಕ್ಕಿಗಳಿದ್ದರೂ, ಬಾಲ ನಿಮಿರಿಸುತ್ತಾ ರಾಜ ಠೀವಿಯಲ್ಲಿ ಹೆಜ್ಜೆ ಹಾಕುತ್ತಾ ಓಡಾಡುವ ಇದಕ್ಕೆ ರಾಜಪಕ್ಷಿ ಎಂಬ ಹೆಸರು ಬಂದಿರಬಹುದು.

ಈ ಹಕ್ಕಿಯ ಕತ್ತು, ಎದೆಯ ಭಾಗ ಪೂರಾ ಕಿತ್ತಳೆ ಬಣ್ಣ, ಹೊಟ್ಟೆಯ ಭಾಗ ಬಿಳಿ. ಸಂತಾನ ಕಾಲದಲ್ಲಿ ಎದೆ, ಹೊಟ್ಟೆಯ ಭಾಗ ಪೂರಾ ಕಿತ್ತಳೆ ಬಣ್ಣದಾಗಿರುತ್ತದೆ. ಹೆಣ್ಣಿನದು ಸಾದಾ ನೀಲಿಯ ಬಣ್ಣ, ಸೌಮ್ಯ ಸ್ವಭಾವ. ಇತರೆ ಹೆಣ್ಣುಹಕ್ಕಿಗಳಂತೆ ಕಣ್ಣಿಗೆ ಬೀಳುವುದು ಕಡಿಮೆ. ಇವು ಮರದ ಹೊದರಿನಲ್ಲಿ, ಬೇಲಿಯ ಸಂದಿಯಲ್ಲಿ ಹೊಕ್ಕಿತೆಂದರೆ ಅದರ ಹಾಡಿನಿಂದಲೇ ಅವುಗಳ ಇರುವಿಕೆ ಗೊತ್ತಾಗುವುದು.

ಇವುಗಳ ಸಂತಾನಕಾಲ ಮಾರ್ಚ್ ನಿಂದ ಆಗಸ್ಟ್ ವರೆಗೆ. ಹುಲ್ಲು, ನಾರು, ಹಾವಸೆ, ಜರೀಗಿಡಗಳಂಥ ಪುಟ್ಟ ಸಸ್ಯಗಳನ್ನು ಕಿತ್ತು ತಂದು ಬಟ್ಟಲಿನಾಕಾರದ ಗೂಡು ಕಟ್ಟುತ್ತವೆ. ಹೆಣ್ಣು ಗೂಡುಕಟ್ಟುವ ಕೆಲಸದಲ್ಲಿ ನಿರತರಾದರೆ, ಗಂಡು ಹಕ್ಕಿ ಗೂಡಿನ ರಕ್ಷಣೆಗೆ ನಿಲ್ಲುತ್ತವೆ. ಮೂರರಿಂದ ಐದು ಮೊಟ್ಟೆಗಳನಿಡುತ್ತವೆ.

ಸಾಧಾರಣವಾಗಿ ಬೆಟ್ಟಗುಡ್ಡಗಳು, ಕಿರು ಅರಣ್ಯಗಳಂಥ ಜಾಗಗಳಲ್ಲಿ ಕಾಣಸಿಗುತ್ತಿದ್ದ ಈ ಹಕ್ಕಿಗಳು ಪಟ್ಟಣಗಳಲ್ಲೂ ಕಾಣಸಿಗುತ್ತಿವೆ.  ಕ್ಲಿಚ್ ಕ್ಲಿಚ್ ಸದ್ದು ಹೊರಡಿಸುವ ಇವು, ಅಪಾಯ ಎದುರಾದಾಗ ಚುರ್ ಚುರ್ ಸದ್ದು ಮಾಡುತ್ತವೆ. ನೋಡಲು ಮುದ್ದಾಗಿರುವ ಈ ಹಕ್ಕಿಗಳು ಪುಟುಪುಟು ಓಡಾಡಿಕೊಂಡು ಇರುವುದನ್ನು ನೋಡುವುದೇ ಚೆಂದ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version