ನೆಲದನಿ

ಸರ್ಕಾರದ ಎಲ್ಲಾ ಹಂತಗಳಲ್ಲಿ ಕನ್ನಡ ಭಾಷೆಯನ್ನು ಅಳವಡಿಸಿದ್ದ ‘ಧೀರ ಟಿಪ್ಪು ಸುಲ್ತಾನ್’..!

Published

on

  • ಡಾ.ವಡ್ಡಗೆರೆ ನಾಗರಾಜಯ್ಯ

ಮೈಸೂರು ರಾಜ್ಯ ಎಂದು ಆಗ ಕರೆಯಲಾಗುತ್ತಿದ್ದ ನಮ್ಮ (ಕರ್ನಾಟಕ) ಕನ್ನಡ ನಾಡಿನಲ್ಲಿ ದಲಿತರು ಮೊಟ್ಟ ಮೊದಲಿಗೆ ಭೂ ಒಡೆತನ ಅನುಭವಿಸಿದ್ದು ಟಿಪ್ಪು ಸುಲ್ತಾನನ ಕಾಲದಲ್ಲಿ. ದಲಿತರಿಗೆ ಭೂಮಿ ಮಂಜೂರು ಮಾಡಿದ ಟಿಪ್ಪು ಸುಲ್ತಾನನ ಆಡಳಿತದ ಕ್ರಮವನ್ನು ಮೆಚ್ಚಿಕೊಂಡಿರುವ ಎಡ್ಗರ್ ಥರ್ಸ್ಟನ್ ತನ್ನ The Castes and Tribes of Southern India ಕೃತಿ ಶ್ರೇಣಿಯಲ್ಲಿ ಮಾತನಾಡಿರುವಂತೆ ಹೇಳುವುದಾದರೆ “The Mysore system fully permits the Holeyas and Madigas to hold land in their own right, as subtenants they are to be found almost everywhere. The highest amount of land assessment paid by a single Holeya is Rs.279 in the Bangalore district”.

ಉತ್ತಮ ದಲಿತ ಸಿಪಾಯಿಗಳನ್ನು ಗುರುತಿಸಿ ತನ್ನ ಖಾಯಂ ಸೇನೆಯಲ್ಲಿ ಭರ್ತಿ ಮಾಡಿಕೊಂಡಿದ್ದ ಟಿಪ್ಪು, ಸೂರಪ್ಪ ಎಂಬ ಹೊಲೆಯ ಸಮುದಾಯದ ದಲಿತನಿಗೆ ತನ್ನ ಸೇನೆಯ ದಂಡನಾಯಕನ ಉನ್ನತ ಹುದ್ದೆಯನ್ನು ನೀಡಿದ್ದನು. ಟಿಪ್ಪು ಸೇನೆಯ ದಂಡನಾಯಕನಾಗಿದ್ದ ಸೂರಪ್ಪನನ್ನು ಕುರಿತು ಮ.ನ.ಜವರಯ್ಯ ಅವರು ಐತಿಹಾಸಿಕ ಕಾದಂಬರಿಯನ್ನು ಬರೆದಿದ್ದಾರೆ.

ಈಗಿನ ಸೀಮಾಂಧ್ರದಲ್ಲಿರುವ ಕಡಪ ಪಟ್ಟಣವು ಟಿಪ್ಪು ಸುಲ್ತಾನನ ಕಾಲದಲ್ಲಿ ಮೈಸೂರು ರಾಜ್ಯಕ್ಕೆ ಸೇರಿತ್ತು. ಕ್ರಿಶ.1784 ರಲ್ಲಿ ಮಾದಿಗರ ಸಾಂಸ್ಕೃತಿಕ ರಾಜಧಾನಿ ಎನ್ನಿಸಿದ್ದ ಕಡಪ ಪಟ್ಟಣದ ಆದಿಜಾಂಬವ ಮಾತಂಗ ಮಹಾ ಸಂಸ್ಥಾನದ ಅಭಿವೃದ್ಧಿಗಾಗಿ ದತ್ತಿಮಾನ್ಯಗಳನ್ನು ಒದಗಿಸಿದ್ದ ಟಿಪ್ಪು ಸುಲ್ತಾನ್, ದಲಿತರ ಧಾರ್ಮಿಕ ಘನತೆಯನ್ನು ಎತ್ತರಿಸಿದ್ದನು. ಆಗಿನ ಕಡಪ ಆದಿಜಾಂಬವ ಮಾತಂಗ ಮಹಾಸಂಸ್ಥಾನದ ಪೀಠಾಧ್ಯಕ್ಷರಾಗಿದ್ದ ಜಾಂಬವಗುರು ಚಂದಾಯಮುನಿಯವರಿಗೆ ತನ್ನ ರಾಜಮರ್ಯಾದೆಗಳ ಭಾಗವಾಗಿ ಪಲ್ಲಕಿ ಮೆರವಣಿಗೆ, ಕೆಂಪು ಛತ್ರಿ, ಕೆಂಪು ನಿಶಾನಿ (ಗಿಣಿವಸ್ತ್ರ, ಗರುಡ ನಿಶಾನಿ), ಅಫ್ತಾಗಿರಿ ರಕ್ಷಣೆ, ಚಾಮರ ಸೇವೆ, ತುರಾಯಿ ಪಾಗು ಮುಂತಾದ ಸೌಲಭ್ಯಗಳನ್ನು ಒದಗಿಸಿದ್ದನು.

ಪ್ರಗತಿಪರ ಭೂ ಸುಧಾರಣೆಗಳನ್ನು ವಾಣಿಜ್ಯ ಕಾಯ್ದೆಗಳನ್ನು ಜಾರಿಗೆ ತಂದ ಟಿಪ್ಪು ರೈತರ ಜಾತಿ, ಧರ್ಮ, ಪಂಥಗಳೇನೇ ಇದ್ದರೂ ಉಳುವವನಿಗೇ ಭೂಮಿ ಎಂದು ಸಾರಿದ ರೈತಪರ ಆಡಳಿತಗಾರ. ಕೃಷಿಕ್ಷೇತ್ರದ ಪ್ರಗತಿಗಾಗಿ ಕಾವೇರಿ ನದಿಗೆ ‘ಸದ್ದ್–ಇ-ಮೋಹಿ’ ಎಂಬ ನೀರಾವರಿ ಯೋಜನೆಯನ್ನು ರೂಪಿಸಿ ಅಡಿಗಲ್ಲು ಹಾಕಿದನು. ಇಲ್ಲಿಯೇ ಮುಂದೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕನ್ನಂಬಾಡಿ ಅಣೆಕಟ್ಟೆ ಕಟ್ಟಿಸಿದರು. ಇಲ್ಲಿಯ ಬೃಂದಾವನ ಗಾರ್ಡನ್ ನ ಮುಖ್ಯದ್ವಾರದ ಬಳಿ ಇರುವ ಶಿಲಾಶಾಸನದ ಬರೆಹವು ಪರ್ಷಿಯನ್ ಲಿಪಿಯಲ್ಲಿದ್ದು ಕನ್ನಂಬಾಡಿ ಅಣೆಕಟ್ಟೆ ಯೋಜನೆಯನ್ನು ಟಿಪ್ಪುವೇ ಪ್ರಾರಂಭಿಸಿದನೆಂಬುದಕ್ಕೆ ಈಗಲೂ ಸಾಕ್ಷಿಯಾಗಿ ನಿಂತಿದೆ.

ಜನಸಾಮಾನ್ಯರ ವ್ಯವಹಾರ ಭಾಷೆಯಾಗಿ ಸರ್ಕಾರದ ಎಲ್ಲಾ ಹಂತಗಳಲ್ಲಿ ಕನ್ನಡ ಭಾಷೆಯನ್ನು ಅಳವಡಿಸಿದ್ದ ಟಿಪ್ಪು ಸುಲ್ತಾನ್, ಅಂತರಾಷ್ಟ್ರೀಯ ಮಟ್ಟದ ಆಡಳಿತ ಭಾಷೆಯನ್ನಾಗಿ ಪರ್ಷಿಯನ್ ಭಾಷೆಯನ್ನು ಅಳವಡಿಸಿಕೊಂಡಿದ್ದನು. ಅಂದಹಾಗೆ ಭಾರತೀಯ ಸನಾತನಿಗಳಿಗೆ ತಮ್ಮ ಧರ್ಮದ ಹೆಸರಿಲ್ಲದಿರುವಾಗ ‘ಹಿಂದೂ’ ಎಂಬ ಹೆಸರು ಪರ್ಷಿಯನ್ ಭಾಷಿಕರು ಕೊಟ್ಟ ಕೊಡುಗೆ ಎಂಬುದನ್ನು ಮರೆಯಬಾರದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version