ದಿನದ ಸುದ್ದಿ

ವಿಜಯನಗರ | ನಿಲ್ಲದ ಅಕ್ರಮ ಕಲ್ಲು ಗಣಿಗಾರಿಕೆ ; ಕಣ್ಣುಮುಚ್ಚಿಕುಳಿತ ಅಧಿಕಾರಿಗಳು

Published

on

  • ವಿಶೇಷ ವರದಿ | ಗಿರೀಶ್ ಕುಮಾರ್ ಗೌಡ, ಬಳ್ಳಾರಿ

ಸುದ್ದಿದಿನ,ವಿಜಯನಗರ:ತಾಲೂಕಿನ ಬುಕ್ಕಸಾಗರದಲ್ಲಿ ಅಕ್ರಮ ಗಣಿಗಾರಿಕೆ, ಹಲವು ವರ್ಷಗಳಿಂದ ನಿರಂತರವಾಗಿ ಬುಕ್ಕಸಾಗರ, ವೆಂಕಟಾಪುರ, ವೆಂಕಟಾಪುರ ಕ್ಯಾಂಪ್ , ರಾಮಸಾಗರದಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಆದರೆ ಜಿಲ್ಲೆಯ ಅಧಿಕಾರಿಗಳು ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕಣ್ಣುಮುಚ್ಚಿಕುಳಿತಿದ್ದಾರೆ.

ಹಲವು ಬಾರಿ ಜಿಲ್ಲಾಡಳಿತದ ಗಮನಕ್ಕೆ ತಂದರೂ ಪ್ರಯೋಜನವಿಲ್ಲ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ.ಸಂಬಂಧ ಪಟ್ಟ ಇಲಾಖೆ ಮತ್ತು ಅಧಿಕಾರಿಗಳಿಂದ ಪರವಾನಿಗೆ ಪಡೆಯದೇ ಅಕ್ರಮ ಗಣಿಗಾರಿಕೆ ಮಾಡುತ್ತಿದ್ದಾರೆ. ಇದರಿಂದ ಸರ್ಕಾರಕ್ಕೆ ಬರಬೇಕಾದ ರಾಯಲ್ಟಿ ನಷ್ಟ ಆಗುತ್ತಿದೆ. ನೈಸರ್ಗಿಕ ಸಂಪತ್ತಿನ ಮೇಲೆ ನಿರಂತರ ಅತ್ಯಾಚಾರ ನಡೆಯಿತ್ತಿದೆ ಎನ್ನುವ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ಸಂಬಂಧ ಪಟ್ಟ ಇಲಾಖೆ ಮತ್ತು ಅಧಿಕಾರಿಗಳಿಂದ ಪರವಾನಿಗೆ ಪಡೆಯದೇ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಕಡೇಬಾಗಿಲು ಬ್ರಿಡ್ಜ್ ಬಳಿಯ ಗುಡ್ಡದಲ್ಲಿ ನಿರಂತರ ಗಣಿಗಾರಿಕೆ ಮಾಡುತ್ತಿದ್ದಾರೆ. ಇನ್ನು 10 ವರ್ಷ ಕಳೆದರೆ ಅಲ್ಲಿನ ಗುಡ್ಡವನ್ನು ಸರ್ವನಾಶ ಮಾಡುತ್ತಾರೆ ಎನ್ನುವ ಆರೋಪ ಸಹ ಪರಿಸರ ಪ್ರೇಮಿಗಳ ಅಭಿಪ್ರಾಯವಾಗಿದೆ.

ಪ್ರಕೃತಿ ಹಾಗೂ ಪರಿಸರ ನಾಶ

ಈ ಕಲ್ಲು ಗಣಿಗಾರಿಕೆ ಮಾಡೋದರಿಂದ ಪರಿಸರ ಹಾಗೂ ಪ್ರಕೃತಿ ಸಂಪತ್ತು ಹಾಳಾಗಿ ನಾಶವಾಗುತ್ತಿದೆ. ಇದರಿಂದ ಪಕ್ಕದಲ್ಲಿಯೇ ತುಂಗಭದ್ರಾ ನದಿಯಲ್ಲಿನ ಜಲಚರಜೀವಿಗಳಿಗೆ ಸಮಸ್ಯೆ ಆಗುತ್ತಿದೆ. 2 ಕೀಲೋ ಮೀಟರ್ ಅಂತರದಲ್ಲಿ ಪುರಾತತ್ವ ಇಲಾಖೆಯ ದೇವಾಲಯಗಳು ಸಹ ಇವೆ. ಇವುಗಳ ನಾಶಕ್ಕೆ ಕಾರಣವಾಗುತ್ತದೆ ಎನ್ನುವುದು ಪರಿಸರ ಪ್ರೇಮಿಗಳ ಅಭಿಪ್ರಾಯವಾಗಿದೆ.

ದೊಡ್ಡ ದೊಡ್ಡ ಬಂಡೆಗಳ ಗಣಿಗಾರಿಕೆ

ಬುಕ್ಕಸಾಗರದ ಹೊರವಲಯದ ತುಂಗಭದ್ರಾ ನದಿಯ ಪಕ್ಕದಲ್ಲಿ ಬೃಹತ್ ಬಂಡೆಗಳನ್ನು ಟ್ರ್ಯಾಕ್ಟರ್ ಮತ್ತು ಲಾರಿಗಳ ಮೂಲಕ ಸಾಗಾಟ ಮಾಡುತ್ತಿರುವ ದೃಶ್ಯಗಳನ್ನು ಸಹ ಕಾಣಬಹುದಾಗಿದೆ. ಇನ್ನು ಈ ವಿಚಾರವಾಗಿ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದರಿಂದ ಕಲ್ಲಿನ ಗುಡ್ಡವನ್ನೇ ಸರ್ವನಾಶ ಮಾಡುತ್ತಾರೆ.

ಇನ್ನು ಈ ವಿಚಾರವಾಗಿ ಗಣಿಗಾರಿಕೆ ಮಾಡುತ್ತಿದ್ದವರನ್ನು ಮೌಖಿಕವಾಗಿ ಮಾತನಾಡಿಸಿದಾಗ ಇಲ್ಲ ಸರ್ ನಾವು ಸರ್ಕಾರಕ್ಕೆ ರಾಯಲ್ಟಿ ಕಟ್ಟುತ್ತೇವೆ, ನಮ್ಮ ತಾತ, ತಂದೆ ಕಾಲದಿಂದಲ್ಲೂ ಈ ಕಲ್ಲು ಹೊಡೆಯುವ ಕೆಲಸ ಮಾಡಿಕೊಂಡು ಬಂದಿದ್ದೇವೆ, ನಮಗೆ ಬೇರೆ ಕೆಲಸ ಬರೋಲ್ಲ ಎನ್ನುವ ಮಾತು ಅವರಿಂದ ಕೇಳಿಬರುತ್ತದೆ. ಈ‌ ಕಲ್ಲುಗಳನ್ನು ದೇವಸ್ಥಾನಗಳಿಗೆ ಕೊಡುತ್ತೇವೆ ಎನ್ನುವ ಮಾಹಿತಿ ನೀಡಿದರು. ದೇವಸ್ಥಾನ ಎಂದ ಕೂಡಲೇ ಸುಮ್ಮನೇ ಇರುತ್ತಾರೆ ಎನ್ನುವ ಭಾವನೆ ಅವರದ್ದಾಗಿದೆ.

ಬುಕ್ಕಸಾಗರ ವ್ಯಾಪ್ತಿಗೆ ಸಂಬಂಧಿಸಿದಂತೆ 35 ಎಕರೆ ಭೂಮಿಯಲ್ಲಿ ಐದು ಸಂಘದ ಸದಸ್ಯರು ಹಂಚಿಕೆ ಮಾಡಿಕೊಂಡು ಕಲ್ಲು ಹೊಡೆಯುವ ಕೆಲಸ ಮಾಡುತ್ತಿದ್ದೇವೆ ಎನ್ನುತ್ತಾರೆ. ಅದರಲ್ಲಿ ಕರಿ ಸಿದ್ದೇಶ್ವರ, ವೀರಭದ್ರೇಶ್ವರ, ವಡ್ಡಮ್ಮದೇವಿ, ಸಿದ್ದರಾಮೇಶ್ವರ, ಬೋವಿ ವಡ್ಡರ ಕಲ್ಲು ಕುಟುಕರ ಸಂಘ ಎಂದು ಮಾಡಿಕೊಂಡಿದ್ದೇವೆ ಎಂದರು.

ವಿಡಿಯೋ

ವಿವಿಧ ಇಲಾಖೆಗಳಿಗೆ ಉಚಿತ ಕಲ್ಲು ಹಾಕಿದ್ದೇವೆ

ಬುಕ್ಕಸಾಗರ ಕಲ್ಲು ಗಣಿಗಾರಿಕೆಯಲ್ಲಿ ವಿಜಯನಗರ ಹೊಸ ಜಿಲ್ಲೆ ಆದಾಗ ಕಮಲಾಪುರ ಪೊಲೀಸ್ ಠಾಣೆ, ಹೊಸ ಜಿಲ್ಲಾಧಿಕಾರಿ ಕಚೇರಿ ಹಾಗೂ ಎಸ್.ಪಿ. ಕಚೇರಿ ಅವರಿಗೆ ಕಲ್ಲುಗಳನ್ನು ಉಚಿತವಾಗಿ ಕೊಟ್ಟಿದ್ದೇವೆ ಎನ್ನುವ ಅಂಶವನ್ನು ಇಲ್ಲಿನ ಸಂಘದ ಸದಸ್ಯರು ತಿಳಿಸಿದರು.

ಆದ್ದರಿಂದ ವಿಜಯನಗರ ಜಿಲ್ಲಾಧಿಕಾರಿ ಹಾಗೂ ಗಣಿ ಮತ್ತ ಭೂಮಿ ವಿಜ್ಞಾನ ಇಲಾಖೆಯ ಜಿಲ್ಲಾಧಿಕಾರಿಗಳು ಮಾತ್ರ ಮೌನರಾಗಿದ್ದಾರೆ. ಇದರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಂಡು ಪರಿಸರ, ಪ್ರಕೃತಿ ಕಾಪಾಡಬೇಕು ಎನ್ನುವುದು ನಮ್ಮ ಆಶಯವಾಗಿದೆ.


  • ಸಂಪ್ರದಾಯವಾಗಿ ಕಲ್ಲು ಗಣಿಗಾರಿಕೆ ಮಾಡಿಕೊಂಡು ಬಂದಿದ್ದಾರೆ ಎನ್ನುವ ಮಾಹಿತಿ ಇದೆ. ವರದಿಗಾರರಾದ ಗಿರೀಶ್ ಕುಮಾರ್ ಗೌಡ ಅವರು ವಿಡಿಯೋಗಳನ್ನು ತೋರಿಸಿದಾಗ, ಅದರಲ್ಲಿ ಏನಾದ್ರೂ ಲೋಪದೋಷಗಳು ಉಂಟಾಗಿದ್ದರೆ, ನಿಯಮಗಳನ್ನು ಬಿಟ್ಟು ಗಣಿಗಾರಿಕೆ ಮಾಡುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಸಂಭಂದಪಟ್ಟ ಅಧಿಕಾರಿಗಳಿಂದ ತಿಳಿದುಕೊಳ್ಳುತ್ತೇನೆ ಎಂದರು.

| ಕೆ.ಎಸ್. ದಿವಾಕರ್ ಜಿಲ್ಲಾಧಿಕಾರಿಗಳು,ವಿಜಯನಗರ ಜಿಲ್ಲೆ


ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version