ದಿನದ ಸುದ್ದಿ

ಮತದಾನ ಮಹತ್ವ ಸಾರಿದ ರಂಗೋಲಿ ಚಿತ್ತಾರಗಳು

Published

on

ಸುದ್ದಿದಿನ, ಧಾರವಾಡ : ಜಿಲ್ಲಾ ಸ್ವೀಪ್ ಸಮಿತಿಯಿಂದ ಧಾರವಾಡ ಹಳೆಬಸ್‌ನಿಲ್ದಾಣದಲ್ಲಿ ಬುಧವಾರ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯು ಮತದಾನದ ಮಹತ್ವ ಸಾರಿತು. ಮತದಾನ ಜಾಗೃತಿಗಾಗಿ ಅನೇಕ ರೀತಿಯ ರಂಗೋಲಿ ಚಿತ್ತಾರಗಳನ್ನು ವಿದ್ಯಾರ್ಥಿಗಳು ಶಿಕ್ಷಕರು, ಅಧಿಕಾರಿಗಳು ಬಿಡಿಸುವ ಮೂಲಕ ಸಾರ್ವಜನಿಕರ ಗಮನ ಸೆಳೆದರು.

ಜಿಲ್ಲಾಧಿಕಾರಿ ದೀಪಾ ಚೋಳನ್ ಹಾಗೂ ಸಿಇಓ ಡಾ. ಬಿ.ಸಿ. ಸತೀಶ್ ಅವರು ಸ್ವತ: ರಂಗೋಲಿ ಸ್ಪರ್ಧೆಗೆ ಕೈ ಜೋಡಿಸುವ ಮೂಲಕ ಸಾರ್ವಜನಿಕರಲ್ಲಿ ಮತದಾನ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು.

ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಅಧಿಕಾರಿಗಳು ಮತಯಂತ್ರ, ಚುನಾವಣಾ ಆಯೋಗ ಲಾಂಛನ, ಮತದಾನ ಮಾಡಿದ ತೋರುಬೆರಳು, ಹೂವು, ಮತದಾನ ಜಾಗೃತಿ, ಮದುವೆ ಆಮಂತ್ರಣ ಸೇರಿದಂತೆ ವಿವಿಧ ರೀತಿಯ ನವೀನ ರಂಗೋಲಿ ಚಿತ್ರ, ಮತಜಾಗೃತಿ ಛತ್ರಿ (ಕೊಡೆ) ಚಿತ್ರಗಳನ್ನು ಬಿಡಿಸಿ ಮತದಾನ ಜಾಗೃತಿಯ ಘೋಷವಾಕ್ಯಗಳನ್ನು ಬರೆದಿದ್ದರು.

ಗ್ರಾಮೀಣ ಪ್ರದೇಶಗಳ ನೂರಾರು ಪ್ರಯಾಣಿಕರು ಬಸ್ಸಿನಿಂದ ಇಳಿದು ನೇರವಾಗಿ ರಂಗೋಲಿ ಬಿಡಿಸಿದ ಸ್ಥಳಕ್ಕೆ ಬಂದು ನೋಡಿ ತಮ್ಮ ಸಂತಸ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಮಕ್ಕಳು ಕೇಕ್ ಕತ್ತರಿಸುವ ಮೂಲಕ ಸಿಹಿ ವಿತರಿಸಿದರು.

ಬಸ್‌ನಿಲ್ದಾಣಕ್ಕೆ ಬಂದು ಸಾರ್ವಜನಿಕ ಪ್ರಯಾಣಿಕರಿಗೆ ‘ಭಾರತಕ್ಕಾಗಿ ಮತ’, ‘ತಪ್ಪದೇ ಮತದಾನ ಮಾಡಿ’, ‘ಮತದಾನ ಹಕ್ಕು ಮತ್ತು ಕರ್ತವ್ಯ ಘೋಷವಾಕ್ಯಗಳನ್ನು ಅವರ ಅಂಗೈ ಮೇಲೆ ಮೆಹಂದಿ ಬಳಸಿ ಬರೆಯುವ ಕಾರ್ಯವನ್ನು ಅಂಜುಮನ್ ಕಾಲೇಜ್ ವಿದ್ಯಾರ್ಥಿಗಳು ಮಾಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ಶದೇಶಕ ಜಿ.ಬಿ. ಮನ್ನಿಕೇರಿ, ಬಿಇಓಗಳಾದ ಎಂ.ಲ್. ಹಂಚಾಟೆ, ಎ.ಎ. ಖಾಜಿ, ವಿದ್ಯಾ ನಾಡಿಗೇರ, ಕೆ.ಎಂ. ಶೇಖರ್ ಸೇರಿದಂತೆ ವಿವಿಧ ಅಧಿಕಾರಿಗಳು, ಶಿಕ್ಷಕರು ಪಾಲ್ಗೊಂಡಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version