ಬಹಿರಂಗ

ಯೋಗವೆಂದರೆ ಕೇವಲ ಆಸನ ಮತ್ತು ಪ್ರಾಣಾಯಾಮಗಳಷ್ಟೇ ಅಲ್ಲ..!

Published

on

ಮೋದಿಯವರೇ,

“ಯೋಗ ದ ಮೊದಲ ಹೆಜ್ಜೆ ಅಹಿಂಸೆ,ಸತ್ಯ, ಪರರ ವಸ್ತುಗಳನ್ನು ಪಡೆಯದಿರುವುದು, ಅಗತ್ಯಕ್ಕಿಂತ‌ ಹೆಚ್ಚು ಕೂಡಿಡದಿರುವುದು” ಇವುಗಳ ಬಗ್ಗೆ ನಿಮ್ಮ ಬಾಯಿಂದ ಒಂದು ವಾಕ್ಯವೂ ಏಕೆ ಬರುತ್ತಿಲ್ಲ.
“ಯೋಗದಲ್ಲಿ ವೈದಿಕ ಶೋಷಣೆಯ ಕುವಿಚಾರಗಳನ್ನು, ಕರ್ಮ , ಆಧ್ಯಾತ್ಮ ಎಲ್ಲವನ್ನು ತುರುಕಲು ಬಹಳ ಉತ್ಸುಕತೆ ತೋರಿಸುತ್ತಿರುವ ನೀವು ಅಹಿಂಸೆ, ಪರರ ವಸ್ತುಗಳನ್ನು ಕದಿಯದಿರುವುದು ಇವುಗಳನ್ನೇಕೆ ಕೈ ಬಿಟ್ಟಿರಿ?”

ಯೋಗ ಸೂತ್ರದ ಮೂಲಕ ಯೋಗವನ್ನು ಸಾಂಗವಾಗಿ ವಿವರಿಸಿದವನು ಪತಂಜಲಿ . ಆದ್ದರಿಂದ ಯೋಗಕ್ಕೆ ಪಾತಂಜಲ ದರ್ಶನವೆಂದು ಕರೆಯುತ್ತಾರೆ. ಭಾರತದಲ್ಲಿ ಉದಿಸಿದ ಷಡ್ದರ್ಶನಗಳಲ್ಲಿ ಯೋಗವೂ ಒಂದು. ಪತಂಜಲಿಯು ಯೋಗ ಎಂಬುದು ಅಷ್ಟಾಂಗದಿಂದ ಕೂಡಿದೆ ಎಂದು ಹೇಳುತ್ತಾನೆ.
ಇವು 8 ಹಂತಗಳು ಕೂಡ.

  1. ಯಮ
  2. ನಿಯಮ
  3. ಆಸನ
  4. ಪ್ರಾಣಾಯಾಮ
  5. ಪ್ರತ್ಯಾಹಾರ
  6. ಧಾರಣ
  7. ಧ್ಯಾನ
  8. ಸಮಾಧಿ

ಆಸನ, ಪ್ರಾಣಾಯಾಮಗಳನ್ನು ಮಾಡುವುದಕ್ಕೆ ಮೊದಲೇ ಮೊದಲಿನ ಹಂತವಾದ ಯಮವನ್ನೂ ಸಾಧಿಸಬೇಕು. ನಂತರ ನಿಯಮ. ಇವುಗಳನ್ನು ಆಸನ ಮಾಡುವುದಕ್ಕೆ ಪೂರ್ವಾವಶ್ಯಕತೆ ಎಂದು ವಿಧಿಸಿದ್ದಾರೆ ಪತಂಜಲಿ. ಆದರೆ ಇದನ್ನು ಪೂರ್ತಿಯಾಗಿ ಅಲಕ್ಷಿಸಿ ಯೋಗವೆಂದರೆ ಕೇವಲ ಆಸನ ಮತ್ತು ಪ್ರಾಣಾಯಾಮಗಳಷ್ಟೇ ಎಂದು ಬಿಜೆಪಿ ಸರ್ಕಾರ ದೇಶದ ಮುಂದೆ ಬಿಂಬಿಸುತ್ತಿದೆ. ಇದು ಪತಂಜಲಿಯ ಯೋಗ ದರ್ಶನದ ವಿರೂಪವಲ್ಲದೆ ಮತ್ತೇನು?

ಈ ಎರಡು ಅಂಗಗಳನ್ನು ಏಕೆ ಕೈಬಿಡಲಾಗಿದೆ ? ಈ ಪ್ರಶ್ನೆಯನ್ನು ನಾವೆಲ್ಲ ಕೇಳಬೇಕಾಗಿದೆ.
ಯಮ ಎಂಬುದರಲ್ಲಿ ಈ ಐದು ಅಂಶಗಳು ಸೇರಿವೆ.

  1. ಅಹಿಂಸೆ
  2. ಸತ್ಯ
  3. ಅಸ್ತೇಯ( ತಮ್ಮದಲ್ಲದ ವಸ್ತುಗಳನ್ನು ಕದಿಯದಿರುವುದು , ಪಡೆಯದಿರುವುದು )
  4. ಬ್ರಹ್ಮಚರ್ಯ
  5. ಅಪರಿಗ್ರಹ ( ಅಗತ್ಯಕ್ಕಿಂತ ಹೆಚ್ಚು ಸ್ವೀಕರಿಸದಿರುವುದು ಮತ್ತು ಸಂಗ್ರಹಿಸದಿರುವುದು)

ಇವು ಯೋಗ ದರ್ಶನ ಮನುಷ್ಯರಲ್ಲಿ ಬೆಳೆಸ ಬಯಸುವ ನೈತಿಕತೆ. ಇಂದು ದೇಶದ ಸಾಮಾಜಿಕ ಜೀವನದಲ್ಲಿ ಹಾಗೂ ರಾಜಕೀಯ ಜೀವನದಲ್ಲಿ ನೈತಿಕತೆ ಕುಸಿದಿರುವಾಗ ಈ ಮುಖ್ಯಅಂಗವನ್ನು ಏಕೆ ಕೈಬಿಡಲಾಗಿದೆ.? ಪೂರ್ವಾಶ್ಯಕತೆಯಾದ ಮೊದಲ ಹಂತವನನ್ನು ಎಗರಿಸಿ ಬಿಡಲಾಗಿದೆ ?

ಈ ಅಂಶಗಳನ್ನು ನೋಡಿದ ಕೂಡಲೇ ಅಲ್ಪ ಸ್ವಲ್ಪ ತಿಳುವಳಿಕೆಯುಳ್ಳವರಿಗೂ ಸ್ಪಷ್ಟವಾಗಿ ಬಿಡುತ್ತದೆ ಇವುಗಳನ್ನು ಏಕೆ ಕೈ ಬಿಡಲಾಗಿದೆಯೆಂದು.

ದಿನ ನಿತ್ಯವೂ ಹಿಂಸಾಕಾಂಡವನ್ನು -ಅಲ್ಪಸಂಖ್ಯಾತರ ಮೇಲೆ , ಬಹುಸಂಖ್ಯಾತ ಹಿಂದೂ ಧರ್ಮದ ಕೆಳಜಾತಿಗಳ ಮೇಲೆ ಹೇರುತ್ತಿರುವ ಮತ್ತಷ್ಟು ಉಲ್ಬಣಗೊಳಿಸ ಬಯಸುವ ಬಿಜೆಪಿಗೆ ದೇಶವೆಲ್ಲ ಅಹಿಂಸೆಯನ್ನು ಆಚರಿಸಿ ಎಂದು ಘೋಷಿಸುವುದು ಇಷ್ಟವಾಗುತ್ತದೆಯೇ?

ಇತಿಹಾಸದ ವಿಷಯದಲ್ಲಿ , ದೇಶದ ಆರ್ಥಿಕತೆಯ ವಿಷಯದಲ್ಲಿ ಜನರಿಗೆ ಭರವಸೆ ನೀಡುವುದರಲ್ಲಿ ದಿನ ನಿತ್ಯ ಸುಳ್ಳುಗಳ ಮಳೆಯನ್ನೇ ಸುರಿಸುವ ಬಿಜೆಪಿ ಪಕ್ಷ ಮತ್ತದರ ಅಪ್ರತಿಮ ಸುಳ್ಳುಗಾರ ನಾಯಕನಿಗೆ’ ಯಮ ‘ ದ ಈ ಅಂಶ ಮೆಚ್ಚಿಗೆಯಾಗಲುಂಟೇ?

ಇನ್ನು 3 ಮತ್ತು ಐದನೆಯ ಅಂಶಗಳು ಸದಾ ತನ್ನೊಡನೆ ಅದಾನಿ, ಅಂಬಾನಿ ಮೊದಲಾದವರನ್ನು ದೇಶ, ವಿದೇಶಗಳಿಗೆ ಕರೆದೊಯ್ಯುತ್ತಾ ಹತ್ತಾರು ಸಾವಿರ ಕೋಟಿ ಹಣವನ್ನು ಅವರ ಮೇಲೆ ಸುರಿಯುತ್ತಾ ಇರುವವರಿಗೆ , ಅದರಿಂದ ಹಿಂದಿನ ದಿನಗಳಲ್ಲಿ ಹಾಗೂ ಮುಂದಿನ ದಿನಗಳಲ್ಲಿ ತಕ್ಕ ಪ್ರತಿಫಲವನ್ನು ನಿರೀಕ್ಷಿಸುತ್ತಿರುವವರಿಗೆ, ದಶಲಕ್ಷ ಬೆಲೆ ಬಾಳುವ ಧಿರಿಸು ಇತ್ಯಾದಿಗಳನ್ನು ಧರಿಸುವವರಿಗೆ ಮತ್ತೊಬ್ಬರ ವಸ್ತುವನ್ನು ಆಶಿಸಬಾರದು , ಕದಿಯಬಾರದು ಮತ್ತು ತಮಗೆ ಅಗತ್ಯವಾದಷ್ಟಲ್ಲದೆ ಹೆಚ್ಚು ಸಂಗ್ರಹಿಸಬಾರದು ಎಂಬುದನ್ನು ದೇಶಕ್ಕೆ ಹೇಳಲು ಬಾಯಿ ಬರುವುದುಂಟೇ ?

ಇವೆಲ್ಲ ದೇಶ ಒಪ್ಪಿದ ಮೌಲ್ಯಗಳಾಗಿ ಬಿಟ್ಟರೆ ಬಿಜೆಪಿ ದರ್ಬಾರಿನ , ಅದನ್ನು ಪಟ್ಟಕ್ಕೇರಿಸಿದ ಕಾರ್ಪೋರೇಟ್ ದೊರೆಗಳ ಗತಿಯೇನು? ಲಲಿತ್ ಮೋದಿಗಳು ಏನಾಗಬೇಕು ? ಕರ್ನಾಟಕ ಮತ್ತು ಇತರ ರಾಜ್ಯ ಮಟ್ಟದ ಬಿಜೆಪಿ ನಾಯಕರಿರಲಿ ಸ್ವತಃ ಆರೆಸ್ಸೆಸ್ ನ ‘ಪ್ರಾಮಾಣಿಕ ನಾಯಕರ ಕಥೆಯೇನಾಗಬೇಡ?’
ಹೀಗೆ ಮೊದಲ ಮೆಟ್ಟಿಲನ್ನೇ ಮರೆಮಾಚಿ , ದೇಶದ ಮುಂದಿಡಲು ನಾಚಿ ಮಾಡುವ ಯೋಗ ಕೇವಲ ಕೈ ಕಾಲು ತಿರುಗಿಸುವ ವ್ಯಾಯಾಮ ಮಾತ್ರವಲ್ಲದೆ ಯೋಗ ಎಂದೆನಿಸಿಕೊಳ ಬಹುದೇ ?

– ಜಿ.ಎನ್. ನಾಗರಾಜ್

(ಕೃಪೆ :ಫೇಸ್ ಬುಕ್)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version