ಬಹಿರಂಗ
ಮೈಸೂರಿನ ಬೌದ್ಧ ಸಾಹಿತ್ಯ ಸಂಘ ರೂಪಿಸಿರುವ ‘ಬೌದ್ಧ ಪ್ರಾರ್ಥನಾ ಪದ್ಧತಿ’ ಇದು
ಮೈಸೂರಿನ ಬೌದ್ಧ ಸಾಹಿತ್ಯ ಸಂಘವು ಬುದ್ಧನನ್ನು ಪ್ರಾರ್ಥಿಸುವ ಬಗೆ ಹೇಗೆ ಎಂಬ ಕೆಲವು ಕ್ರಮಗಳನ್ನು ರೂಪಿಸಿಕೊಟ್ಟಿದೆ. ಬೌದ್ಧ ಧರ್ಮದಲ್ಲಿ ಆಸಕ್ತಿ ಉಳ್ಳವರು ಈ ಪ್ರಾರ್ಥನಾ ಪದ್ಧತಿಯನ್ನು ಅನುಸರಿಸುವುದರ ಮೂಲಕ ಬುದ್ಧನನ್ನು ಅರಿಯುವ ಪ್ರಯತ್ನ ಮಾಡಬಹುದು.
ಬೌದ್ಧ ಪ್ರಾರ್ಥನಾ ಪದ್ದತಿ
1. ಪ್ರತಿ ಭಾನುವಾರ ಬೌದ್ಧ ಧರ್ಮದೆಡೆ ಒಲವುಳ್ಳವರು ಒಂದೆಡೆ ಒಂದು ಪಾರ್ಕ್ ಅಥವಾ ಒಂದು ಹಾಲ್ ಅಥವಾ ಯಾವುದಾದರೂ ಒಂದು ಭವನದಲ್ಲಿ ಸಮಾವೇಶಗೊಳ್ಳಬೇಕು. ಕನಿಷ್ಠ 3 ಮಂದಿಯಿಂದ ಗರಿಷ್ಠ ಎಷ್ಟು ಮಂದಿಯಾದರೂ ಸೇರಬಹುದು. ಕಾರ್ಯಕ್ರಮವನ್ನು ಬೆಳಿಗ್ಗೆ 8 ಅಥವಾ 8-30ಕ್ಕೆ ಪ್ರಾರಂಭಿಸಬೇಕು.
2. ಕಾರ್ಯಕ್ರಮದಲ್ಲಿ ಮೊದಲಿಗೆ ಬುದ್ಧನ ಮೂರ್ತಿ ಇಟ್ಟು ಅದಕ್ಕೆ ಹೂವು, ಗಂಧದ ಕಡ್ಡಿ ಅರ್ಪಿಸಬೇಕು. ನಂತರ ಬುದ್ಧನ ಕುರಿತು ಒಂದೆರಡು ಹಾಡು ಸಾಮೂಹಿಕವಾಗಿ ಹಾಡುವುದು, ತದನಂತರ ತಿಸರಣ ಮತ್ತು ಪಂಚಶೀಲ ಹೇಳುವುದು. ಇದಕ್ಕಾಗಿ ಮಹಾಬೋಧಿ ಸೊಸೈಟಿಯವರು ಪ್ರಕಟಿಸಿರುವ ಬೌದ್ಧ ನಿತ್ಯಾಚರಣೆಗಳು ಕೃತಿ ಬಳಸಬಹುದು. ತಿಸರಣ ಮತ್ತು ಪಂಚಶೀಲಗಳನ್ನು ಯಾರಾದರೊಬ್ಬರು ಧಮ್ಮಬೋಧಕರು ಹೇಳಿದರೆ ಉಳಿದವರು ಅದನ್ನು ರಿಪೀಟ್ ಮಾಡಬೇಕು.
3. ತಿಸರಣ ಮತ್ತು ಪಂಚಶೀಲ ಪಠಣ ನಂತರ ಧಮ್ಮ ಬೋಧಕರು ಅದರ ಅರ್ಥ ತಿಳಿಸಿ ಪಾಳಿ ಭಾಷೆಯ ಇನ್ನಷ್ಟು ಶ್ಲೋಕಗಳನ್ನು ಓದಿ ಅದರ ಅರ್ಥ ತಿಳಿಸುವುದು. ಈ ನಡುವೆ ಬುದ್ಧನ ಕುರಿತು ಮತ್ತೊಂದು ಹಾಡು ಹಾಡುವುದು.
4. ಮುಂದುವರೆದು ತಿಸರಣ ಮತ್ತು ಪಂಚಶೀಲದ ನಂತರ ಬುದ್ಧನ ಕುರಿತು ಕನ್ನಡದಲ್ಲಿ ಇರುವ ಯಾವುದಾದರೊಂದು ಕೃತಿಯಿಂದ ಆರಿಸಿದ ಒಂದು ಕತೆ ಅಥವಾ ಬೋಧನೆ. ಇದನ್ನು ಪ್ರತಿ ವಾರ ಉಪಾಸಕರೊಬ್ಬರು ಮಾಡುವುದು. ಇದರ ನಂತರ ಮತ್ತೊಂದು ಬುದ್ಧನ ಕುರಿತ ಹಾಡು ಹಾಡುವುದು
5. ಹಾಗೆಯೇ ಕನ್ನಡ ಬೋಧನೆ ನಂತರ ಅಂಬೇಡ್ಕರರ ಬುದ್ಧ ಅಂಡ್ ಹಿಸ್ ಧಮ್ಮ ಕೃತಿಯ ಒಂದು ಪುಟ ಅಥವಾ ಅಧ್ಯಾಯದ ಬೋಧನೆ. ಇಂಗ್ಲಿಷ್ ಆವೃತ್ತಿ ಲಭ್ಯವುಲ್ಲದಿದ್ದರೆ ಈ ಕೃತಿಯ ಕನ್ನಡ ಅನುವಾದಿತ ಆವೃತ್ತಿಯನ್ನು ಕೂಡ ಉಪಾಸಕರು ಬಳಸಬಹುದು. ಇದನ್ನು ಕೂಡ ಯಾರಾದರೊಬ್ಬರು ಪ್ರತಿ ವಾರ ಜವಾಬ್ದಾರಿ ತೆಗೆದುಕೊಂಡು ನಿರ್ವಹಿಸುವುದು.
6. ಈ ಬೋಧನೆಗಳ ನಂತರ ಮತ್ತೆರಡು ಬುದ್ಧರ ಕುರಿತ ಹಾಡುಗಳು. ಇದಕ್ಕಾಗಿ ಹನಸೋಗೆ ಸೋಮಶೇಖರ್ ಮತ್ತು ಸೋಸಲೆ ಗಂಗಾಧರರವರು ಬರೆದಿರುವ ಹಾಡುಗಳನ್ನು ಬಳಸಬಹುದು. ಸ್ಥಳೀಯವಾಗಿ ಲಭ್ಯವಿರುವ ಇತರರ ಹಾಡುಗಳನ್ನು ಕೂಡ ಹಾಡಬಹುದು.
7. ಅಂತಿಮವಾಗಿ ಬಾಬಾಸಾಹೇಬ್ ಅಂಬೇಡ್ಕರರ 22 ಬೌದ್ಧ ಪ್ರತಿಜ್ಞೆಗಳನ್ನು ಧಮ್ಮ ಬೋಧಕರು ಎಲ್ಲರಿಗೂ ಹೇಳಿಕೊಡುವುದು ಎಲ್ಲರೂ ಅದನ್ನು ರಿಪೀಟ್ ಮಾಡುವುದು. ಇದರ ನಂತರ ಸಾಧು ಸಾದು ಸಾಧು ಎಂದು ಪ್ರಾರ್ಥನಾ ಕಾರ್ಯಕ್ರಮ ಕೊನೆಗೊಳಿಸುವುದು.
ಪ್ರಾರ್ಥನಾ ಕಾರ್ಯಕ್ರಮದ ನಂತರ ಕಡ್ಡಾಯವಾಗಿ ಉಪಾಹಾರ ವ್ಯವಸ್ಥೆ ಮಾಡುವುದು. ಉಪಾಹಾರದ ನಂತರ ಪ್ರತಿಯೊಬ್ಬರೂ ಒಂದೆಡೆ ಸಮಾವೇಶಗೊಂಡು ಉಪಾಹಾರ ಪ್ರಾಯೋಜಿಸಿದವರಿಗೆ ಕೃತಜ್ಞತೆ ತಿಳಿಸಿ, ಯಾವುದಾದರೂ ಪ್ರಕಟಣೆಗಳಿದ್ದರೆ ತಿಳಿಸಿ ಜೈಭೀಮ್ ಹೇಳಿ ಕಾರ್ಯಕ್ರಮ ಮುಗಿಸುವುದು.
ಸೂಚನೆಗಳು
1. ಈ ಪ್ರಾರ್ಥನಾ ಕಾರ್ಯಕ್ರಮದಲ್ಲಿ ಯಾವುದೇ ರಾಜಕೀಯ ಪಕ್ಷದ ಚರ್ಚೆ ಬೇಡ. ಪ್ರಾರ್ಥನಾ ಕಾರ್ಯಕ್ರಮದ ಉದ್ದಕ್ಕೂ ಯಾವುದೇ ಗಲಾಟೆ, ಅನ್ಯ ಮಾತುಗಳಿಗೆ ಅವಕಾಶ ನೀಡಬಾರದು. ಎಲ್ಲರೂ ಧಮ್ಮ ಬೋಧಕರ ಸೂಚನೆಗಳನ್ನು ಪಾಲಿಸುವುದು.
2. ಪ್ರತಿಯೊಬ್ಬರೂ ಶಿಸ್ತಿನಿಂದ ಶುಚಿಯಾಗಿ ಚರ್ಚ್ಗಳಿಗೆ ಕ್ರೈಸ್ತರು ತೆರಳುವಂತೆ ಪ್ರಾರ್ಥನಾ ಸಭೆಯಲ್ಲಿ ಸೇರುವುದು. ಹಾಗೆಯೇ ಯಾರಿಗೂ ಸ್ವಾಗತ , ವಂದನಾರ್ಪಣೆ ಇತ್ಯಾದಿ ಬೇಡ. ಪ್ರಾರ್ಥನೆಯ ಮಧ್ಯೆ ಯಾರಾದರೂ ಬಂದರೆ ಬಂದವರು ಖಾಲಿ ಇರುವ ಸ್ಥಳಗಳಲ್ಲಿ ಕುಳಿತು ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಬೇಕು.
3. ಯಾವುದೇ ಗಲಾಟೆ ವಾದ ವಿವಾದ ಸಲ್ಲದು. ಧಮ್ಮ ಬೋಧಕರು ಈ ಕಾರ್ಯಕ್ರಮದ ಸಂಪೂರ್ಣ ನಿರೂಪಣೆ ಮಾಡಬೇಕು. ಯಾವುದೇ ಭಾಷಣ ಮಾಡಬಾರದು.
3. ದಾನ ಪೆಟ್ಟಿಗೆ ಇಡಬೇಕು. ಆಸಕ್ತರು ಅಲ್ಲಿ ಧಮ್ಮ ದಾನ ನೀಡಬಹುದು ಅದನ್ನು ಯಾರಾದರೊಬ್ಬರು ನಿರ್ವಹಿಸುವುದು.
4. ಯಾವುದಾದರೂ ಒಂದು ವಾರ ಜನರು ಬರುವುದು ಕಡಿಮೆಯಾದರೆ ಕನಿಷ್ಠ 3 ಮಂದಿಯಾದರೂ ಕಾರ್ಯಕ್ರಮ ನಡೆಸುವುದು. ಅನಿವಾರ್ಯ ಕಾರಣಗಳಿಗಾಗಿ ಒಂದು ವಾರ ಕಾರ್ಯಕ್ರಮ ನಿಂತರೂ ಅದರ ಮುಂದಿನ ವಾರ ಕಾರ್ಯಕ್ರಮ ನಡೆಸುವುದು. ಈ ಬಗ್ಗೆ ವ್ಯಾಟ್ಸಪ್ ಸಂದೇಶಗಳ ಮೂಲಕ ಯಾರಾದರೊಬ್ಬರು ಮಾಹಿತಿ ನೀಡುವುದು.
4. ಹಾಡು ಹೇಳಲು ಧಮ್ಮ ಬೋಧಕರು ಪ್ರತಿಯೊಬ್ಬರಿಗೂ ಹಾಡಿನ ಪುಸ್ತಕ ಒದಗಿಸುವುದು. ಕನ್ನಡ ಬೋಧನೆ ಮತ್ತು ಅಂಬೇಡ್ಕರರ ಬುದ್ಧ ಅಂಡ್ ಹಿಸ್ ಧಮ್ಮ ಬೋಧಿಸುವ ಆಸಕ್ತರನ್ನು ಅವರೇ ಗುರುತಿಸುವುದು.
5. ಒಟ್ಟಾರೆ ಸಂಪೂರ್ಣ ಧಮ್ಮ ಬೋಧನೆ ಈ ಪ್ರಾರ್ಥನಾ ಕಾರ್ಯಕ್ರಮದ ಉದ್ದೇಶ ಆಗಬೇಕು.
ವಂದನೆಗಳೊಂದಿಗೆ,
- ಬೌದ್ಧ ಸಾಹಿತ್ಯ ಸಂಘದ ಪರವಾಗಿ
ರಘೋತ್ತಮ ಹೊ.ಬ
ಸುದ್ದಿದಿನ.ಕಾಂ|ವಾಟ್ಸಾಪ್|9980346243