ದಿನದ ಸುದ್ದಿ
ನಕಲಿ ಟಿವಿಗಳು, ಸುಳ್ಳು ಸುದ್ದಿ ನೀಡುವ ಸ್ಥಳೀಯ ಟಿವಿ ಚಾನೆಲ್‍ಗಳ ಬಗ್ಗೆ ನಿಗಾ ವಹಿಸಿ
ಸುದ್ದಿದಿನ,ದಾವಣಗೆರೆ : ಕೇಬಲ್ ಟೆಲಿವಿಷನ್ ನೆಟ್‍ವರ್ಕ್, ದರ ಮತ್ತು ಪ್ರಸಾರಕ್ಕೆ ಸಂಬಂಧಿಸಿದಂತಹ ದೂರುಗಳಿದ್ದರೆ ಸಾರ್ವಜನಿಕರು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಜಿಲ್ಲಾ ಮಟ್ಟದ ಕೇಬಲ್ ಟೆಲಿವಿಷನ್ ನಿರ್ವಹಣಾ ಸಮಿತಿಗೆ ದೂರು ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಫೆ.28 ರಂದು ಏರ್ಪಡಿಸಲಾಗಿದ್ದ ದಾವಣಗೆರೆ ಜಿಲ್ಲಾ ಮಟ್ಟದ ಕೇಬಲ್ ಟೆಲಿವಿಷನ್ ನಿರ್ವಹಣಾ ಸಮಿತಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ಥಳೀಯ ಕೇಬಲ್ ಟಿವಿ ಪ್ರಸಾರ ಮಾಡುವ ಕಾರ್ಯಕ್ರಮಗಳ ಕುರಿತು ಕೇಬಲ್ ಟೆಲಿವಿಷನ್ ನಿರ್ವಹಣಾ ಸಮಿತಿಯು ನಿರಂತರ ನಿಗಾ ವಹಿಸಬೇಕು ನಕಲಿ ಚಾನೆಲ್‍ಗಳು ಕಾರ್ಯನಿರ್ವಹಿಸದಂತೆ ಕಟ್ಟುನಿಟ್ಟಾಗಿ ಗಮನ ಹರಿಸಬೇಕು ಹಾಗೂ ಸುಳ್ಳು ಸುದ್ದಿ ಪ್ರಸಾರ ಮಾಡಿದರೆ ತಕ್ಷಣ ನಿರ್ಬಂಧಿಸಲು ಕ್ರಮ ವಹಿಸಬೇಕು ಎಂದರು.
ಸ್ಥಳೀಯ ಕೇಬಲ್ ಟಿವಿಗಳು ಕಾಲ ಕಾಲಕ್ಕೆ ಯಾವೆಲ್ಲ ರೀತಿಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ ಎಂಬುದನ್ನು ನೋಡಬೇಕು. ಹಾಗೂ ಪ್ರಸಾರವಾಗುತ್ತಿರುವ ಕಾರ್ಯಕ್ರಮಗಳ ಕುರಿತು ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಬೇಕು. ವ್ಯಕ್ತಿ, ಧರ್ಮ, ಸಮುದಾಯಗಳ ಪರ ಅಥವಾ ವಿರುದ್ದವಾಗಿ ಏನಾದರೂ ಪ್ರಸಾರ ಆಗುತ್ತಿದೆಯೇ ಎಂಬ ಬಗ್ಗೆ ಸಮೀಕ್ಷೆ ನಡೆಸಬೇಕು ಎಂದರು.
ಉಚಿತ ಚಾನೆಲ್‍ಗಳು ಪ್ರಸಾರವಾಗುತ್ತಿವೆಯೇ ಎಂಬದನ್ನು ಖಾತ್ರಿಪಡಿಸಿಕೊಳ್ಳಬೇಕು. ಅಜ್ಞಾಪಕ ಕಾರ್ಯಕ್ರಮಗಳ ಪ್ರಸಾರದ ಬಗ್ಗೆ ನಿಗಾ ವಹಿಸಬೇಕು. ಹಾಗೂ ಜಿಲ್ಲೆಯ ಕೇಬಲ್ ಪ್ರಸಾರ ಮಾಡುವ ಎಂಎಸ್‍ಓ ಗಳ ಸಭೆಯನ್ನು ಕರೆದು ದರ ನಿಗದಿ ಬಗ್ಗೆ ಸೂಚನೆಗಳನ್ನು ನೀಡಬೇಕು ಎಂದರು.
ಶಿಕ್ಷಣ ತಜ್ಞ ರುದ್ರಮನಿ ಹಿರೇಮಠ್ ಮಾತನಾಡಿ, ಹಳ್ಳಿಯಲ್ಲಿ ಒಂದು ರೀತಿ ದರ, ನಗರ ಪ್ರದೇಶದ ವಿವಿಧ ಪ್ರದೇಶಗಳಲ್ಲಿ ಒಂದೊಂದು ರೀತಿಯ ದರ ಸಂಗ್ರಹಿಸುತ್ತಾರೆ. ಹಾಗೂ ಕೆಲವು ಚಾನೆಲ್‍ಗಳನ್ನು ಪ್ರಸಾರ ಮಾಡುವಲ್ಲಿಯೂ ಸಹ ಸಮಸ್ಯೆ ಇದ್ದು ಇದನ್ನು ಸರಿಪಡಿಸಬೇಕೆಂದರು.
ವಕೀಲೆ ಸುಜಾತ ಮಾತನಾಡಿ, ಕೇಬಲ್ ಟೆಲಿವಿಷನ್ ದರವು ಏರಿಯಾವಾರು ಹೆಚ್ಚು ಕಮ್ಮಿ ಇದ್ದು, ಸಾರ್ವತ್ರಿಕ ದರ ನಿಗದಿಗೊಳಿಸಿ ಅದನ್ನು ಪಾಲಿಸುವಂತೆ ನಿರ್ದೇಶನ ನೀಡಬೇಕೆಂದು ತಿಳಿಸಿದರು.
ವಾರ್ತಾಧಿಕಾರಿ ಅಶೋಕ್‍ಕುಮಾರ್.ಡಿ ಮಾತನಾಡಿ, ಕಳೆದ ವರ್ಷ ಹರಿಹರದಲ್ಲಿ ನಿಷೇಧಿತ ‘ಕ್ಯೂ’ ಟಿವಿ ಪ್ರಸಾರವಾಗುತ್ತಿದೆ ಎಂಬ ಬಗ್ಗೆ ದೂರು ಬಂದಿತ್ತು. ಎರಡು ಬಾರಿ ಅಲ್ಲಿಗೆ ಹೋಗಿ ಪರಿಶೀಲಿಸಲಾಗಿ ವರದಿ ನೀಡಲಾಗಿದೆ. ದೂರು ಬಂದ ತಕ್ಷಣ ‘ಕ್ಯೂ’ ಟಿವಿ ಪ್ರಸಾರ ನಿಲ್ಲಿಸಿದ್ದರು ಎಂದ ಅವರು ಕಳೆದ ಸಾಲಿನಲ್ಲಿ ಒಟ್ಟು ಮೂರು ದೂರುಗಳನ್ನು ವಿಲೇವಾರಿ ಮಾಡಲಾಗಿತ್ತು ಎಂದರು.
ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ಮತ್ತೊಮ್ಮೆ ಈ ವಿಷಯವಾಗಿ ದೂರು ನೀಡಿದ ಪ್ರದೇಶಕ್ಕೆ ತೆರೆಳಿ ಪರಿಶೀಲಿಸುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ವಾರ್ತಾಧಿಕಾರಿ ಅಶೋಕ್‍ಕುಮಾರ್.ಡಿ ಸ್ವಾಗತಿಸಿದರು. ಮಹಿಳಾ ಪದವಿ ಕಾಲೇಜಿನ ಪ್ರಾಚಾರ್ಯರಾದ ದಾದಾಪೀರ್ ನವಿಲೇಹಾಳ್, ಮನೋವೈದ್ಯ ಡಾ.ಗಂಗಂ ಸಿದ್ದು ರೆಡ್ಡಿ, ಸ್ಪೂರ್ತಿ ಮಕ್ಕಳ ಸಂಸ್ಥೆಯವರು ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243