ರಾಜಕೀಯ
ಬಿಜೆಪಿಯಿಂದ ಲೋಕಸಭಾ ಚುನಾವಣಾ ಅಭ್ಯರ್ಥಿಯಾಗಿ ನಟಿ ಮಾಧುರಿ ದೀಕ್ಷಿತ್..!?
ಸುದ್ದಿದಿನ,ಮುಂಬೈ : ಬಾಲಿವುಡ್ ನಟಿ ಮಾಧುರಿ ದಿಕ್ಷಿತ್ ಅವರನ್ನು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪುಣೆ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಸಲು ಬಿಜೆಪಿ ನಿರ್ಧರಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕಳೆದ ಜೂನ್‍ನಲ್ಲಿ ಪಕ್ಷದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಮುಂಬೈಗೆ ಆಗಮಿಸಿದ್ದ ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರು ಮಾಧುರಿ ದಿಕ್ಷಿತ್ ಅವರನ್ನು ಭೇಟಿ ಮಾತುಕತೆ ನಡೆಸಿದ್ದರು. ಪ್ರಧಾನಿ ಮೋದಿ ಅವರ ಸಾಧನೆಗಳನ್ನು ಅವರಿಗೆ ವಿವರಿಸಿದ್ದರು.
ಪುಣೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವವರ ಪಟ್ಟಿಯಲ್ಲಿ ಮಾಧುರಿ ದಿಕ್ಷಿತ್ ಅವರ ಹೆಸರೂ ಇದೆ ಎಂದು ಹಿರಿಯ ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆಯನ್ನು ಉಲ್ಲೇಖಿಸಿ ಎನ್‍ಡಿಟಿವಿ ವರದಿ ಮಾಡಿದೆ.
ಹಮ್ ಆಪ್ ಕೆ ಹೈ ಕೌನ್, ದಿಲ್ ತೋ ಪಾಗಲ್ ಹೈ, ಸಾಜನ್ ಮತ್ತು ದೇವದಾಸ್ ಸೇರಿದಂತೆ ಅನೇಕ ಬಾಲಿವುಡ್ ಚಿತ್ರಗಳಲ್ಲಿ ನಟಿ ಮಾಧುರಿ ದಿಕ್ಷಿತ್ ಅವರು ಅದ್ಭುತ ಅಭಿನಯ ನೀಡಿದ್ದಾರೆ.
2014ರ ಚುನಾವಣೆಯಲ್ಲಿ ಬಿಜೆಪಿ ಪುಣೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ವಿರುದ್ಧ ಜಯಿಸಿತ್ತು. ಬಿಜೆಪಿ ಅಭ್ಯರ್ಥಿ ಅನಿಲ್ ಶಿರೋಳೆ ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಮೂರು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401