ದಿನದ ಸುದ್ದಿ
ಕಾನೂನು ಸ್ವಯಂ ಸೇವಕರ ಆಯ್ಕೆಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ : ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ/ತಾಲ್ಲೂಕು ಕಾನೂನು ಸೇವಾ ಸಮಿತಿಗಳಿಗೆ ವಿವಿಧ ರೀತಿಯ ಸಂಸ್ಥೆಗಳಿಗೆ ಕಾನೂನು ನೆರವು/ಸೇವೆಗಳನ್ನು ನೀಡುವ ಸಲುವಾಗಿ ಅರೆ ಕಾನೂನು ಸ್ವಯಂ ಸೇವಕರನ್ನು ಆಯ್ಕೆ ಮಾಡಲಾಗುವುದು.
ಶಿಕ್ಷಕರು(ನಿವೃತ್ತ ಶಿಕ್ಷಕರು ಸೇರಿ), ನಿವೃತ್ತಿ ಸರ್ಕಾರಿ ನೌಕರರು ಮತ್ತು ಹಿರಿಯ ನಾಗರೀಕರು ಎಂ.ಎಸ್.ಡಬ್ಲ್ಯೂ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು, ಅಂಗನವಾಡಿ ಕಾರ್ಯಕರ್ತೆಯರು, ವೈದ್ಯರು, ವಿದ್ಯಾರ್ಥಿಗಳು, ಕಾನೂನು ವಿದ್ಯಾರ್ಥಿಗಳು (ವಕೀಲರಾಗಿ ನೋಂದಣಿಯಾಗುವವರೆಗೂ) ರಾಜಕೀಯವಲ್ಲದ ಸಂಘದ ಸದಸ್ಯರು, ಸೇವಾ ಮನೋಭಾವ ಇರುವ ಸರ್ಕಾರೇತರ ಸಂಘ ಸಂಸ್ಥೆಗಳು, ಮಹಿಳಾ ಸ್ವಸಹಾಯ ಸಂಘಗಳು, ಮೈತ್ರಿ ಸಂಘಗಳು, ವಿದ್ಯಾವಂತ ಉತ್ತಮ ನಡೆವುಳ್ಳ, ಹೆಚ್ಚಿನ ಅವಧಿ ಕಾರಾಗೃಹದಲ್ಲಿ ಕಳೆಯುತ್ತಿರುವ ಅಪರಾಧಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಪಿ.ಎಲ್.ವಿ ಆಗಿ ನಿರ್ಧರಿಸುವ ಇತರೆ ಯಾವುದೇ ವ್ಯಕ್ತಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ದಾವಣಗೆರೆಯಲ್ಲಿ 50, ಹರಿಹರ ತಾಲ್ಲೂಕಿನಲ್ಲಿ 25, ಚನ್ನಗಿರಿ ತಾಲ್ಲೂಕಿನಲ್ಲಿ 25, ಹೊನ್ನಾಳಿ 25 ಮತ್ತು ಜಗಳೂರಿನಲ್ಲಿ 25 ಹುದ್ದೆಗಳು ಖಾಲಿ ಇದ್ದು ಅರ್ಜಿದಾರರು ಅಕ್ಷರಸ್ಥರಾಗಿದ್ದು ಕನಿಷ್ಟ ಎಸ್‍ಎಸ್‍ಎಲ್‍ಸಿ ಪಾಸಾಗಿರಬೇಕು. ಯಾವುದೇ ಘಟನೆ, ಪರಿಸ್ಥಿತಿ ವಿಷಯಗಳನ್ನು ಉತ್ತಮವಾಗಿ ಗ್ರಹಿಸಬಲ್ಲವರಾಗಿರಬೇಕು. ಅರ್ಜಿಯೊಂದಿಗೆ ಇತ್ತೀಚಿನ ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ, ವಿದ್ಯಾರ್ಹತೆ ದಾಖಲೆಗಳು, ಕಾರ್ಯ ನಿರ್ವಹಿಸಲಿಚ್ಚಿಸುವ ಸ್ಥಳದ ಬಗ್ಗೆ ಸ್ವ-ಇಚ್ಚೆ ಪತ್ರ, ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು.
ಈ ನೇಮಕಾತಿಯು ತಾತ್ಕಾಲಿಕವಾಗಿದ್ದು ಯಾವುದೇ ಸಂಬಳ, ವೇತನಗಳು ಇರುವುದಿಲ್ಲ. ಕೇವಲ ಗೌರವಧನದ ಆಧಾರದ ಮೇಲೆ ಒಂದು ವರ್ಷದ ಅವಧಿಗೆ ಮಾತ್ರ ನೇಮಕಾತಿ/ನಿಯೋಜನೆ ಮಾಡಲಾಗುವುದು. ತಮ್ಮ ಸ್ವಂತ ಕೈಬರಹದದಲ್ಲಿ ಭರ್ತಿ ಮಾಡಿ ಅರ್ಜಿ ಮತ್ತು ದಾಖಲಾತಿಗಳೊಡನೆ ಅಂಚೆ ಮೂಲಕ ಅಥವಾ ಖುದ್ದಾಗಿ ಅಧ್ಯಕ್ಷರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಹಳೇ ನ್ಯಾಯಾಲಯದ ಆವರಣ, ಜನತಾ ಬಜಾರ್ ಪಕ್ಕ, ದಾವಣಗೆರೆ 577003 ಇಲ್ಲಿಗೆ ಆಗಸ್ಟ್ 19 ರೊಳಗೆ ‘ಅರೆಕಾಲಿಕ ಸ್ವಯಂ ಸೇವಕರ ನೇಮಕಾತಿಗಾಗಿ’ ಜಿಲ್ಲಾ/ತಾಲ್ಲೂಕು ಕಾನೂನು ಸೇವಾ ಸಮಿತಿಗೆ ಎಂದು ಶೀರ್ಷಿಕೆ ಬರೆದು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬೇಕು.
ಅಭ್ಯರ್ಥಿಗಳಿಗೆ ಸಂದರ್ಶನದ ದಿನಾಂಕ ಮತ್ತು ಸಮಯವನ್ನು ಎಸ್‍ಎಂಎಸ್ ಮೂಲಕ ತಿಳಿಸಲಾಗುವುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಗೀತಾ.ಕೆ.ಬಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243