ದಿನದ ಸುದ್ದಿ

“ತವರು ಮನೆಯ ಸನ್ಮಾನ ಶ್ರೇಷ್ಠ” ಸಮ್ಮೇಳನಾಧ್ಯಕ್ಷ ಡಾ. ಚಂದ್ರಶೇಖರ್ ಕಂಬಾರರ ಅಭಿಮಾನದ ನುಡಿ

Published

on

ಸುದ್ದಿದಿನ,ಧಾರವಾಡ : ಹೊರರಾಜ್ಯಗಳ ಸನ್ಮಾನ, ಗೌರವಗಳು ಸಾಕಷ್ಟು ಸಿಕ್ಕರೂ ತವರು ಮನೆಯ ಸನ್ಮಾನ ಶ್ರೇಷ್ಠವಾದುದು ಎಂದು ಅಖಿಲಭಾರತ ೮೪ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ. ಚಂದ್ರಶೇಖರ್ ಕಂಬಾರ ಅಭಿಮಾನದಿಂದ ನುಡಿದರು.

ಅವರು ಇಂದು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲು ಆಗಮಿಸಿದ ನಿಮಿತ್ಯವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನೀಡಿದ ಸನ್ಮಾನ ಸ್ವೀಕರಿಸಿ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಮಾತನಾಡಿದರು.

ಕನ್ನಡ ನಾಡಿನ ಈ ಹಬ್ಬ ರಾಜ್ಯ, ಹೊರರಾಜ್ಯಗಳಲ್ಲಿ ಹಬ್ಬಿರುವ ಕನ್ನಡಿಗರ ಕಳ್ಳುಬಳ್ಳಿಯನ್ನು ಕೂಡಿಸುತ್ತದೆ. ಇದು ರಾಷ್ಟçದ ಬೇರೆ ಯಾವ ರಾಜ್ಯದಲ್ಲೂ ನಮಗೆ ಕಾಣಿಸುವುದಿಲ್ಲ. ಧಾರವಾಡ ನನ್ನ ಕರ್ಮಭೂಮಿ. ಶಿಕ್ಷಣ ಸೇರಿದಂತೆ ನನ್ನ ಜೀವನದ ಅನೇಕ ಕನಸುಗಳನ್ನು ಕಟ್ಟಿದ್ದು ಈ ನೆಲದಲ್ಲಿ. ಇದು ಪುಣ್ಯಭೂಮಿ, ತಪೋಭೂಮಿ. ಇಲ್ಲಿ ಕಳೆಯುವ ಮುಂದಿನ ಮೂರು ದಿನಗಳೂ ನನ್ನ ಜೀವನದ ಅಪರೂಪದ, ಅಪ್ರತಿಮ ಕ್ಷಣಗಳಾಗಿವೆ. ಈ ಪ್ರೀತಿ, ಗೌರವ ಆದರಗಳಿಗೆ ಚಿರಋಣಿಯಾಗಿದ್ದೇನೆ.

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ನೀಡುವ ಭಾಷಾ ನೀತಿಯನ್ನು ವಿಮರ್ಶಿಸಿ ಭಾಷೆಗಳಿಗೆ ಸರಿಯಾದ ಚೌಕಟ್ಟನ್ನು ರೂಪಿಸುವ ಜವಾಬ್ದಾರಿ ಇದೆ. ಈ ಕುರಿತು ಸಮ್ಮೇಳನದಲ್ಲಿ ತಜ್ಞರು ತಮ್ಮ ಅಭಿಪ್ರಾಯಗಳನ್ನು ಮಂಡಿಸಲಿದ್ದಾರೆ. ಅವು ನಮ್ಮ ಮುಂದಿನ ದಾರಿಗೆ ಮಾರ್ಗಸೂಚಿಗಳಾಗಲಿವೆ.

ರಾಷ್ಟçಕವಿ ಕುವಂಪು ಅವರ ಅಧ್ಯಕ್ಷತೆಯಲ್ಲಿ ಧಾರವಾಡದಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಾನು ಸಂಘಟಕನಾಗಿ ತೊಡಗಿಸಿಕೊಂಡಿದ್ದೆ. ಇಂದು ಇದೇ ನೆಲದಲ್ಲಿ ನಾನು ಸಮ್ಮೇಳನಾಧ್ಯಕ್ಷನಾಗಿ ಗೌರವ ಸ್ವೀಕರಿಸುತ್ತಿರುವುದು ನನ್ನ ಸೌಭಾಗ್ಯ, ಸುದೈವ ಮತ್ತು ನನ್ನ ಪುಣ್ಯ ಎಂದು ಹೇಳಿದರು.

ರಾಜ್ಯಾಧ್ಯಕ್ಷ ಮನು ಬಳಿಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾಧ್ಯಕ್ಷ ಲಿಂಗರಾಜ ಅಂಗಡಿ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಕೆ.ಎಸ್. ಕೌಜಲಗಿ ಕಾರ್ಯಕ್ರಮ ನಿರೂಪಿಸಿ ಡಾ:ಜಿನದತ್ತ ಹಡಗಲಿ ವಂದಿಸಿದರು.

ವೇದಿಕೆಯಲ್ಲಿ ಡಾ. ಚಂದ್ರಶೇಖರ್ ಕಂಬಾರ ಅವರ ಶ್ರೀಮತಿ ಸತ್ಯಭಾಮಾ ಕಂಬಾರ, ಜಿಲ್ಲಾಧಿಕಾರಿ ದೀಪಾ ಚೋಳನ್, ಜಿ.ಪಂ. ಸಿಇಓ ಡಾ. ಬಿ.ಸಿ. ಸತೀಶ್, ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್ ಹಾಗೂ ಇತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಡಾ. ಚಂದ್ರಶೇಖರ್ ಕಂಬಾರ ಅವರ ಪುತ್ರ ಡಾ. ರಾಜಶೇಖರ್ ಕಂಬಾರ, ಪುತ್ರಿಯರಾದ ಡಾ.ಚನ್ನಮ್ಮ ಕಂಬಾರ, ಡಾ. ಗೀತಾ ಸತೀಶ್ ಸೇರಿದಂತೆ ಕಸಾಪ ರಾಜ್ಯ, ಜಿಲ್ಲಾ ಹಾಗೂ ತಾಲೂಕಾ ಘಟಕಗಳ ಪದಾಧಿಕಾರಿಗಳು ಮತ್ತು ಕಂಬಾರರ ಅಭಿಮಾನಿಗಳು ಪಾಲ್ಗೊಂಡಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version