ಬಹಿರಂಗ
ಅಕ್ಷಯ ತೃತೀಯ, ಇದೊಂದು ಸುಲಿಗೆಯ ಕುತಂತ್ರ..!
- ಸುರೇಶ ಎನ್ ಶಿಕಾರಿಪುರ
ಅಕ್ಷಯ ತೃತೀಯ ಎಂಬುದು ನಿರ್ವಿವಾದವಾಗಿ ಸುಲಿಯುವ ಜಾಣರ ಸೃಷ್ಟಿ. ಇದಕ್ಕೆ ಮಳ್ಳು ಹಿಡಿದವರ ತರ ಬಂಗಾರದ ಅಂಗಡಿಗಳ ಮುಂದೆ ನಿಲ್ಲುವ ಶೂದ್ರಗ್ರಾಹಕರನ್ನ ನೋಡಿದ್ರೆ ನಗು ಬರತ್ತೆ. ಎಷ್ಟೋ ಜನಕ್ಕೆ ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಹಣವಿಲ್ಲದಿದ್ದರೂ ಸಾಲ ಮಾಡಿ ಚಿನ್ನ ಕೊಳ್ಳುವ ಬೂಟೀಕ ತಿಕ್ಕಲುತನ. ಇಂತವಕ್ಕೆಲ್ಲ ನಮ್ಮ ಜನ ಎಷ್ಟು ಬೇಗ ಬಲಿಯಾಗ್ತಾರಲ್ಲ? ಇದು ವಿಸ್ಮಯವೋ ದುರಂತವೋ ಒಂದೂ ಅರ್ಥ ಆಗ್ತಾ ಇಲ್ಲ.
ನಾಳೆಯೇ ಯಾವುದಾದರೂ ಒಂದು ದಿನ ಗುರುತಿಸಿ ಆ ದಿನ ‘ಒಂದು ಗ್ರಾಮ್ ಚಿನ್ನವನ್ನಾದರೂ ನದಿಗೆ ಎಸೆಯಬೇಕು’ ಅಂತ ಯಾವನಾದರೂ ಪುರೋಹಿತ ಹೊಸದೊಂದು ಪದ್ಧತಿ ಸೃಷ್ಠಿಸಿದರೆ ಒಂದು ಸ್ವಲ್ಪವೂ ವಿವೇಚಿಸದೆ ಅತ್ಯಂತ ಪ್ರಾಮಾಣಿಕವಾಗಿ ಅತ್ಯಂತ ಶ್ರದ್ಧೆಯಿಂದ ಈ ಕೆಲಸ ಮಾಡುವ ಮೂಢರು ನಮ್ಮಲ್ಲಿ ಇದ್ದಾರೆ. ಅಕ್ಷಯ ತೃತೀಯ ಎಂಬ ಪಕ್ಕಾ ‘ಪಿಕ್ ಪಾಕೆಟ್’ ಮಾಡುವ ಈ ಸಂಪ್ರದಾಯದ ಹೆಸರಿನ ದಂಧೆ ನಮಗೆ ಗೊತ್ತೇ ಇರಲಿಲ್ಲ.
ಇತ್ತೀಚೆಗೆ ಹತ್ತು ಹದಿನೈದು ವರ್ಷದ ಹಿಂದೆ ಗೆಳೆಯನೊಬ್ಬ ಪರವೂರಿಗೆ ನನ್ನ ಕರೆದುಕೊಂಡು ಹೋಗಿ ಚಿನ್ನ ಖರೀದಿಸಿದಾಗಲೇ; ಇಂತದೊಂದು ಇದೆಯಾ ? ಇತ್ತಾ? ಹೊಸದಾಗಿ ಸೃಷ್ಠಿಯಾಯ್ತಾ? ಅಂತ ಪ್ರಶ್ನೆಗಳೆದ್ದಿದ್ದು. ಈಗ ಇದೊಂದು ಪ್ಯಾಂಡಮಿಕ್ ರೀತಿ ಹಬ್ಬತೊಡಗಿದೆ. ದುಡಿಯುವ ನಮ್ಮ ಜನ ಏನಾದರೂ ಕಷ್ಟಬಿದ್ದು ಅಕ್ಷಯ ತೃತೀಯದ ದಿನ ಚಿನ್ನದ ಕರೀದಿಗೆ ಮುಗಿ ಬೀಳುತ್ತಿದ್ದಾರೆ. ಪ್ರಮೋದ್ ಮುತಾಲಿಕನಂತಹಾ ನಾಗರಿಕತೆ ಮನುಷ್ಯ ಸಭ್ಯತೆ ಮರ್ಯಾದೆಯೇ ಇಲ್ಲದ ಮುದಿ ಪುಂಡರು ಟಾರ್ಗೆಟ್ ಮಾಡುವ ಮಟ್ಟಕ್ಕೆ ಅಕ್ಷಯ ತೃತೀಯದ ಹಾವಳಿ ಎದ್ದಿದೆ.
ಇವೆಲ್ಲಾ ನನ್ನ ಅವ್ವನ ಭಾಷೆಯಲ್ಲಿ ಹೇಳುವುದಾದರೆ ಬೂಟೀಕ (ಬೂಟಾಟಿಕೆ). ಲಕ್ಷ್ಮಿ ಪೂಜೆ, ಸತ್ಯನಾರಾಯಣ ಮಹಾತ್ಮೆ, ಶನಿಮಹಾತ್ಮೆ, ವರಮಹಾ ಲಕ್ಷ್ಮಿ ಪೂಜೆ, ಅಯ್ಯಪ್ಪನ ಮಾಲೆ ಧರಿಸುವುದು, ರಾಮನವಮಿ, ಕೃಷ್ಣ ಜನ್ಮಾಷ್ಠಮಿ, ಹನುಮಮಾಲೆ, ಶೋಭಾಯಾತ್ರೆ ಇಂಥವೆಲ್ಲಾ ಆರ್ಥಿಕ ಮತ್ತು ರಾಜಕೀಯ ಲಾಭದ ಸಲುವಾಗಿಯೇ ವ್ಯವಸ್ಥಿತವಾಗಿ ಹುಟ್ಟಿಸಿದ ಹೊಸ ಹೊಸ ಆಚರಣೆ ಪೂಜಾ ಪದ್ಧತಿಗಳು. ವೈದಿಕೀಕರಣದ ಹಿನ್ನೆಲೆ ಉಳ್ಳವು. ವ್ಯವಸ್ಥಿತವಾಗಿ, ನಾಜೂಕಾಗಿ, ನಯವಾದ ಮಾತು, ವಂಚನೀಯ ಪರಿಭಾಷೆಗಳು, ವಿಶ್ಲೇಷಣೆಗಳ ಮೂಲಕ ವ್ಯವಸ್ಥಿತವಾಗಿ ದುಡಿಯುವ ವರ್ಗದ ಮುಗ್ಧ ಜನತೆಯ ಮೆದುಳಿಗೆ ವೈರಲ್ ಮಾಡಲಾಗುತ್ತಿರುವ ಅಪಾಯಕಾರಿ ವೈರಸ್ ಗಳು.
ಬಂಗಾರ ಕೊಳ್ಳುವ ಅಕ್ಷಯ ತೃತೀಯಕ್ಕಿಂತ ‘ಹೊನ್ನ ಬಿತ್ತೇವು ಹೊಲಕ್ಕೆಲ್ಲ’ ಎಂಬ ನಮ್ಮ ನೆಲಮೂಲದ ಕೃಷಿ ಸಂಸ್ಕೃತಿಯೇ ಮೇಲು. ನೆಲಕ್ಕೆ ಧಾನ್ಯಗಳೆಂಬ ಹೊನ್ನಿನ ಮುತ್ತುಗಳನ್ನು ಬಿತ್ತಿ ಹೊನ್ನನ್ನೇ ಬೆಳೆವ ಶ್ರಮ ಸಂಸ್ಕೃತಿಯು ಸದಾ ಪ್ರಗತಿಶೀಲವಾದುದು. ವೈಜ್ಞಾನಿಕವಾದುದು, ಜೀವಪರವಾದುದು ಹಾಗೂ ಆರ್ಥಿಕ ಸ್ವಾವಲಂಬನೆ ಸ್ವಾಮ್ಯದಿಂದ ಕೂಡಿರುವಂತದು.
ನಗರ ಪ್ರದೇಶಗಳ ಉಳ್ಳವರ ಪ್ಯಾಷನ್ ಪೆಸ್ಟಿವಲ್ಲುಗಳು ಗ್ರಾಮ, ಪಟ್ಟಣಗಳಿಗೆ ಪ್ರವೇಷಿಸಿ ಜನರ ಬದುಕಿನಲ್ಲಿ ಅಲ್ಲೋಲಕಲ್ಲೋಲ ಎಬ್ಬಿಸುತ್ತಿವೆ. ವೈದಿಕ ಮೂಲದಿಂದ ಹುಟ್ಟುವ ಇಂತಹಾ ಯಾವುದೇ ಆಚರಣೆಗಳು ವಂಚನೆ ಲಾಭಕೋರತನ ಮತ್ತು ದುಡಿಯುವ ವರ್ಗದವರ ಚರ್ಮಸುಲಿದು ಸೂರೆಹೊಡೆಯುವ ಮೂಲ ಉದ್ದೇಶ ಇಟ್ಟುಕೊಂಡೇ ಹುಟ್ಟಿ ಬೆಳೆದಿರುತ್ತವೆ ಅನಿಸುತ್ತದೆ. ಅವುಗಳಿಗೆ ಸಹಜತೆ ಇರುವುದಿಲ್ಲ. ಕೃತಕ ಮತ್ತು ಉದ್ದೇಶಪೂರ್ವಕ ಸೃಷ್ಠಿಗಳಾಗಿರುತ್ತವೆ.
ದ್ರಾವಿಡ ದುಡಿಯುವ ಸಮುದಾಯಗಳ ಮಣ್ಣಿನ ಕಸುವಾಗಲೀ ನೈಸರ್ಗಿಕ ಗುಣವಾಗಲೀ, ಮಾನವೀಯ, ಜೀವಪರ, ಪ್ರಗತಿಪರ ಮತ್ತು ಆರ್ಥಿಕ ಸಮತೆಯ ಜೀವಸೆಲೆಯಾಗಲೀ ಅವಕ್ಕೆ ಇರುವುದಿಲ್ಲ. ಕಾಯಕ ಕೈಲಾಸವೆಂದ, ಧಾನ್ಯಗಳನ್ನೇ ಹೊನ್ನು ಹವಳ ಮುತ್ತು ರತುನವೆಂದು ನಂಬಿದ, ಭೂಮಣ್ಣಿಯ ಸೀಮಂತವನ್ನು ಸಂಭ್ರಮಿಸುವ, ಸುಗ್ಗಿಯ ಕಣಹಬ್ಬ ಮಾಡಿ; ಜೋಗಿಗೆ, ನಿರ್ಗತಿಕರಿಗೆ ಮೊರಗಟ್ಟಲೆ ಧಾನ್ಯ ತುಂಬಿ ಸುರಿಯುವ, ಉಣ್ಣುವಾಗ ಗದ್ದೆ ಹಾಳೆಗೆ ‘ಹೂಲ್ಗ್ಯಾ…..’ ಎನ್ನುತ್ತಾ ಅನ್ನದ ಅಗುಳುಗಳನ್ನು ತೂರುವ, ನೇಗಿಲ ಗೆರೆಯ ದಿವ್ಯದೇವಾಲಯದಲ್ಲಿ ಶಿವನ ಕಾಣುವ ನೆಲಮೂಲದ ನಮ್ಮ ಆಚರಣೆ ಪದ್ದತಿಗಳೇ ಶ್ರೇಷ್ಠ. ಏಕೆಂದರೆ, ಅವು ಸರಳ ಮತ್ತು ಮಾನವೀಯ.
“ರಟ್ಟೆ ಮುರಿದು ದುಡಿದು ಬದುಕು” ಎಂಬ ಕಾಯಕ ತತ್ವದ ಹಿನ್ನೆಲೆ ಉಳ್ಳವು. ಮಣ್ಣಿನ ಸತ್ವದಿಂದ ಕೂಡಿದವು. ದುಡಿಯುವ ಸಮುದಾಯಗಳ ಮನಸುಗಳನ್ನು ಹೊಸೆದು ಬೆಸೆದು ಬದುಕಿಸುವಂತವು. ಸುಲಿಯುವ ಭ್ರಷ್ಟಗುಣವನ್ನೇ ತುಂಬಿ ಯಾರೋ ವ್ಯವಸ್ಥಿತವಾಗಿ ಬೆಳೆಸಿದ ಕೃತಕ ಸೃಷ್ಠಿಗಳಲ್ಲ.
ಸುದ್ದಿದಿನ.ಕಾಂ|ವಾಟ್ಸಾಪ್|9980346243