ದಿನದ ಸುದ್ದಿ
ಮುಂದಿನ 3 ವರ್ಷಗಳಲ್ಲಿ ಉಳಿದ ಎಲ್ಲಾ ಭರವಸೆಗಳ ಈಡೇರಿಕೆ : ಸಿಎಂ ಸಿದ್ದರಾಮಯ್ಯ
ಸುದ್ದಿದಿನ,ಹೊಸಪೇಟೆ:ಚುನಾವಣೆ ವೇಳೆ ಜನರಿಗೆ ನೀಡಿದ ಭರವಸೆಗಳಲ್ಲಿ 142 ಭರವಸೆಗಳನ್ನು ಎರಡು ವರ್ಷದಲ್ಲಿ ಪೂರೈಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸರ್ಕಾರ ಎರಡು ವರ್ಷ ಪೂರೈಸಿದ ಸಂದರ್ಭದಲ್ಲಿ ಕಂದಾಯ ಇಲಾಖೆ ಹೊಸಪೇಟೆಯಲ್ಲಿ ಆಯೋಜಿಸಿದ್ದ “ಸಮರ್ಪಣೆ ಸಂಕಲ್ಪ” ಸಮಾವೇಶದಲ್ಲಿ 1 ಲಕ್ಷದ 11 ಸಾವಿರದ 111 ಮಂದಿಗೆ ಹಕ್ಕುಪತ್ರ ವಿತರಣೆ ಮಾಡಿ ಮಾತನಾಡಿದ ಅವರು, ಮುಂದಿನ ಮೂರು ವರ್ಷಗಳಲ್ಲಿ ಉಳಿದ ಭರವಸೆ ಈಡೇರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಕೇಂದ್ರದ ಯೋಜನೆಗಳಿಗೆ ರಾಜ್ಯ ಸರ್ಕಾರ ರಾಜ್ಯದ ಪಾಲನ್ನು ಪೂರ್ತಿ ನೀಡಿದ್ದು, ಕೇಂದ್ರ ಸರ್ಕಾರ ತಮ್ನ ಪಾಲನ್ನು ಕೊಡದೆ ಅನ್ಯಾಯ ಮಾಡುತ್ತಿದೆ ಎಂದು ದೂರಿದ್ದಾರೆ.
ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಗ್ಯಾರಂಟಿ ಯೋಜನೆಗಳನ್ನು ರಾಜ್ಯದಲ್ಲಿ ಸರ್ಕಾರ ಸರಿಯಾದ ರೀತಿಯಲ್ಲಿ ಅನುಷ್ಠಾನಗೊಳಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಒಂದು ಲಕ್ಷದ 111 ಜನರಿಗೆ ಹಕ್ಕು ಪತ್ರಗಳ ವಿತರಣೆ ಮಾಡಲಾಯಿತು.
ನಂತರ ಸರ್ಕಾರದ ಎಲ್ಲ ಇಲಾಖೆಗಳ ಸಾಧನೆಯ ಕಿರು ಹೊತ್ತಿಗೆಗಳನ್ನು ಬಿಡುಗಡೆಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿಯವರ ಪುತ್ತಳಿಯನ್ನು ಅನಾವರಣಗೊಳಿಸಿದರು.