ದಿನದ ಸುದ್ದಿ

‘ಅಲಾಯನ್ಸ್ ಏರ್’ ನಿಂದ ವಿಮಾನಯಾನ ಸಂಚಾರ ಪುನರಾರಂಭ

Published

on

ಸುದ್ದಿದಿನ,ಕಲಬುರಗಿ: ಲಾಕ್ ಡೌನ್ ಕಾರಣ ಕಳೆದ ಎರಡು ತಿಂಗಳನಿಂದ ತನ್ನ ವಿಮಾನ ಸಂಚಾರ ಸೇವೆ ನಿಲ್ಲಿಸಿದ ಅಲಾಯನ್ಸ್ ಏರ್ ವಿಮಾನ ಸಂಸ್ಥೆಯು ಲಾಕ್‍ಡೌನ್ 4.0 ಸಡಿಲಿಕೆಯ ಕಾರಣ ಗುರುವಾರ ಬೆಂಗಳೂರು-ಕಲಬುರಗಿ ಮಧ್ಯೆ ತನ್ನ ಸೇವೆ ಮತ್ತೆ ಆರಂಭಿಸಿದೆ.

ಗುರುವಾರ ಬೆಂಗಳೂರಿನಿಂದ 19 ಜನ ಯಾತ್ರಿಕರನ್ನು ಹೊತ್ತುಕೊಂಡು ಹೊರಟ ವಿಮಾನ ಬೆಳಿಗ್ಗೆ 11-45 ಗಂಟೆಗೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದು ತಲುಪಿತು. ಮರಳಿ ಮಧ್ಯಾಹ್ನ 12-25 ಗಂಟೆಗೆ ಇಲ್ಲಿಂದ 19 ಪ್ರಯಾಣಿಕರನ್ನು ಕರೆದುಕೊಂಡು ಬೆಂಗಳೂರಿಗೆ ಮರು ಪ್ರಯಾಣ ಬೆಳೆಸಿತು.

ಕಳೆದ ಮೇ-25 ರಂದು ಸ್ಟಾರ್ ಏರ್ ಸಂಸ್ಥೆಯು ಸಹ ಬೆಂಗಳೂರು-ಕಲಬುರಗಿ ನಡುವೆ ತನ್ನ ಸೇವೆ ಆರಂಭಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಭಾರತೀಯ ವಿಮಾನಯಾನ ಪ್ರಾಧಿಕಾರದ ಮಾರ್ಗಸೂಚಿಯಂತೆ ಕಲಬುರಗಿ ವಿಮಾನ ನಿಲ್ದಾಣದಿಂದ ಹೋಗುವ ಎಲ್ಲಾ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಪ್ರತಿ ಪ್ರಯಾಣಿಕನಿಂದ ಅರೋಗ್ಯದ ಬಗ್ಗೆ ಸ್ವಯಂ ದೃಢೀಕರಣ ಪಡೆದುಕೊಳ್ಳಲಾಗುತ್ತಿದೆ. ಆರೋಗ್ಯ ಸೇತು ಆ್ಯಪ್ ಪ್ರದರ್ಶಿಸುವುದು ಕಡ್ಡಾಯವಾಗಿದೆ.

ಪ್ರಯಾಣಿಕರ ಲಗೇಜ್‍ಗಳನ್ನು ಡಿಸಿನ್ಫೆಕ್ಟ್ ಮಾಡಿಯೆ ವಿಮಾನಕ್ಕೆ ಹತ್ತಿಸಲಾಗುತ್ತದೆ. ಇನ್ನು ಬೆಂಗಳೂರಿನಿಂದ ಬರುವ ಪ್ರಯಾಣಿಕರಿಗೂ ಸ್ಕ್ರೀನಿಂಗ್ ಮಾಡಲಾಗುವುದಲ್ಲದೆ ಎಲ್ಲರ ವಿವರವನ್ನು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮಾಹಿತಿ ಪಡೆಯುತ್ತಿದ್ದಾರೆ ಎಂದು ಕಲಬುರಗಿ ವಿಮಾನ ನಿಲ್ದಾಣದ ಎ.ಎ.ಐ. ನಿರ್ದೇಶಕ ಜ್ಣಾನೇಶ್ವರ ರಾವ್ ತಿಳಿಸಿದರು.

ಜೂನ್-1 ರಿಂದ ಅಲಾಯನ್ಸ್ ಏರ್ ವಿಮಾನ ಸಂಚಾರ ಸಮಯದಲ್ಲಿ ಬದಲಾವಣೆ: ಅಲಾಯನ್ಸ್ ಏರ್ ಸಂಸ್ಥೆಯ ವಿಮಾನವು ಜೂನ್-1 ರಿಂದ ಸೋಮವಾರ ಮತ್ತು ಮಂಗಳವಾರ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬೆಳಿಗ್ಗೆ 8-45 ಗಂಟೆಗೆ ಆಗಮಿಸಿ 9-25ಕ್ಕೆ ಬೆಂಗಳೂರಿನತ್ತ ಮರು ಪ್ರಯಾಣ ಬೆಳಸಲಿದೆ. ಬುಧವಾರದಿಂದ ರವಿವಾರ ವರೆಗೆ ಬೆಳಿಗ್ಗೆ 11-45 ಗಂಟೆಗೆ ಆಗಮಿಸಿ 12-25ಕ್ಕೆ ಬೆಂಗಳೂರಿಗೆ ಟೇಕ್ ಆಫ್ ಆಗಲಿದೆ ಎಂದು ಜ್ಞಾನೇಶ್ವರರಾವ್ ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version