ದಿನದ ಸುದ್ದಿ

ಅಮರನಾಥ ಯಾತ್ರೆ, ರಾಜ್ಯದ ಯಾತ್ರಾರ್ಥಿಗಳು ಸುರಕ್ಷಿತ : ಸಿಎಂ ಬೊಮ್ಮಾಯಿ

Published

on

ಸುದ್ದಿದಿನ ಡೆಸ್ಕ್ :ಅಮರನಾಥ ಯಾತ್ರೆಯಲ್ಲಿ ರಾಜ್ಯದಿಂದ ಪಾಲ್ಗೊಂಡಿರುವ ಬಹುತೇಕ ಎಲ್ಲಾ ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದ ಯಾತ್ರಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಕೇಂದ್ರದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಇದಕ್ಕಾಗಿ ಪ್ರತ್ಯೇಕ ಸಹಾಯವಾಣಿ ತೆರೆಯಲಾಗಿದೆ. ಬಿಎಸ್‌ಎಫ್, ಐಟಿಬಿಪಿ, ವಿಪತ್ತು ನಿರ್ವಹಣಾ ತಂಡಗಳನ್ನು ನಿಯೋಜಿಸಲಾಗಿದೆ. ಅಗತ್ಯ ನೆರವು ಯಾಚಿಸಿದವರಿಗೆ ತಕ್ಷಣ ಸ್ಪಂದಿಸುವಂತೆ ವ್ಯವಸ್ಥೆ ಮಾಡಲಾಗಿದೆ ಎಂದರು.

ಸಹಾಯವಾಣಿ

ಅಮರನಾಥ ಗುಹೆ ಬಳಿ ನಿನ್ನೆ ಸಂಭವಿಸಿದ ಮೇಘಸ್ಪೋಟದಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಕರ್ನಾಟಕದಿಂದ ತೆರಳಿದ್ದ ಸುಮಾರು 250 ಯಾತ್ರಿಗಳು ಅಲ್ಲಿ ಸಿಲುಕಿರುವುದಾಗಿ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ತಿಳಿಸಿದೆ.

ಇವರೆಲ್ಲರೂ ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಮೈಸೂರು, ಮಂಡ್ಯ, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದವರಾಗಿದ್ದು ಅವರನ್ನು ರಾಜ್ಯಕ್ಕೆ ಸುರಕ್ಷಿತವಾಗಿ ಕರೆತರುವ ಪ್ರಯತ್ನ ನಡೆಸಲಾಗುತ್ತಿದೆ.

ಈ ಯಾತ್ರಿಗಳ ವಿವರಗಳನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸಹಾಯವಾಣಿ, ಅಮರನಾಥ ದೇವಾಲಯ ಆಡಳಿತ ಮಂಡಳಿಗೆ ಕಳುಹಿಸಿದ್ದು, ಅಗತ್ಯ ನೆರವು ನೀಡುವಂತೆ ಕೋರಲಾಗಿದೆ. ಅಮರನಾಥ ಗುಹೆ ಬಳಿ ಸಿಲುಕಿರುವ ಕರ್ನಾಟಕದ ಯಾತ್ರಿಗಳು ನೆರವಿಗಾಗಿ ಎನ್‌ಡಿಆರ್‌ಎಫ್ ಸಹಾಯವಾಣಿ ಸಂಖ್ಯೆ

011-23438252,23438253 ಕಾಶ್ಮೀರ ವಿಭಾಗೀಯ ಸಹಾಯವಾಣಿ ಸಂಖ್ಯೆ 0194-2496240,2313149ರಾಜ್ಯ ತುರ್ತು ನಿರ್ವಹಣಾ ಕೇಂದ್ರದ ಸಹಾಯವಾಣಿ ಸಂಖ್ಯೆ 080-1070,22340676 ಸಂಪರ್ಕಿಸುವಂತೆ ತಿಳಿಸಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version