ಬಹಿರಂಗ

ಭಾರತೀಯ ಮಹಿಳೆಯರಿಗೆ ಅಂಬೇಡ್ಕರ್ ನೀಡಿದ ಕೊಡುಗೆಗಳು

Published

on


ಒಂದು ಸಮಾಜದ ಅಭಿವೃದ್ಧಿಯು ಆ ಸಮಾಜದ ಮಹಿಳೆಯರು ಎಷ್ಟು ಪ್ರಗತಿ ಹೊಂದಿದ್ದಾರೆ ಎಂಬುದರ ಮೇಲೆ ನಿಂತಿದೆ”. | ಡಾ.ಬಾಬಾಸಾಹೇಬ್ ಅಂಬೇಡ್ಕರ್


  • ನಾಗವಂಶಿ ನಂದಾದೀಪ

ಹಿಳೆಯರ ಕಲ್ಯಾಣ ಮತ್ತು ಉದ್ಧಾರರಕ್ಕಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಎಷ್ಟು ಗಂಭಿರವಾಗಿದ್ದರು ಎಂಬುದಕ್ಕೆ ಈ ಹೇಳಿಕೆಯು ಸಾಕ್ಷಿಯಾಗಿದೆ. ಭಾರತದಲ್ಲಿ Feminism ಅಥವಾ ನಾರಿವಾದ ಎಂಬ ಹೆಸರೇ ಯಾರಿಗೂ ಗೊತ್ತಿರಲಾರದ ಕಾಲದಲ್ಲಿ ಅಂಬೇಡ್ಕರ್ ಅವರು ಮಹಿಳೆಯರ ಕಲ್ಯಾಣ ಹಾಗೂ ಪ್ರಗತಿಗಾಗಿ ಸಂಘರ್ಷವನ್ನು ಮಾಡುತ್ತಿದ್ದರು ಈ ಕಾರಣದಿಂದಲೇ ಇಂದು ಭಾರತೀಯ ಮಹಿಳೆಯರು ಸ್ವಾತಂತ್ರ್ಯ ಹಾಗೂ ಸ್ವಾಭಿಮಾನದಿಂದ ಬದುಕಲು ಸಾದ್ಯವಾಗಿದೆ.

20ನೇ ಶತಮಾನದಲ್ಲಿ ಪಿತ್ರಾರ್ಜಿತ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದ ಏಕೈಕ ವ್ಯಕ್ತಿ ಅಂಬೇಡ್ಕರವರಾಗಿದ್ದರು. ಮಹಿಳೆಯರ ವಿಮೋಚನೆಗಾಗಿ, ಅವರ ಹಕ್ಕುಗಳಿಗಾಗಿ ಹಾಗೂ ಅವರು ಸ್ವಾಭಿಮಾನದಿಂದ ಬದುಕಲು ಬಾಬಾಸಾಹೇಬ್ ಅಂಬೇಡ್ಕರ್ ಅವರು ಮಾಡಿದಷ್ಟು ಸಂಘರ್ಷ/ಹೋರಾಟಗಳು ಬೇರೆ ಯಾರೂ ಮಾಡಿಲ್ಲ. ಆದರೇ ವಿಡಂಬನೆ ಎಂದರೆ ಸ್ತ್ರೀಯರಿಗಾಗಿ ಇಷ್ಟೆಲ್ಲ  ಮಾಡಿದರೂ ಭಾರತದಲ್ಲಿ ಅಂಬೇಡ್ಕರ್ ಅವರನ್ನು  ಸ್ತ್ರೀ ಉದ್ಧಾರಕ ಎಂದು ಇಂದಿಗೂ ಗುರುತಿಸುವುದಿಲ್ಲ. ಜನರು ಅವರನ್ನು ಕೇವಲ ದಲಿತರ ನಾಯಕ ಸಂವಿಧಾನ ನಿರ್ಮಾತೃ ಎನ್ನುವಷ್ಟರಲ್ಲಿ ಸೀಮಿತ ಮಾಡಲಾಗಿದೆ.

ಅಂಬೇಡ್ಕರ್ ಅವರು ಮಹಿಳೆಯರಿಗಾಗಿ ನಿಡಿದ ಪ್ರಮುಖ ಕೊಡುಗೆಗಳು

1.ಮಹಿಳೆಯರಿಗಾಗಿ ಶಿಕ್ಷಣದ ವ್ಯವಸ್ಥೆ

ಅಂಬೇಡ್ಕರ್ ಅವರು ಪುರುಷರ ಶಿಕ್ಷಣದ ಜೊತೆಗೆ ಮಹಿಳೆಯರ ಶಿಕ್ಷಣವು ಅಷ್ಟೇ ಮುಖ್ಯ ಎಂದು ಹೇಳುತ್ತಿದ್ದರು. 1913 ರಲ್ಲಿ  ನ್ಯೂಯಾರ್ಕ್ ನಲ್ಲಿ ಒಂದು ಭಾಷಣದಲ್ಲಿ ಮಾತನಾಡುತ್ತಾ. ತಂದೆ-ತಾಯಿಗಳು ಮಕ್ಕಳನ್ನು ಜನ್ಮ ನೀಡುತ್ತಾರೆ, ಕರ್ಮ ನೀಡುವುದಿಲ್ಲ. ತಾಯಿಯು ಮಗುವಿನಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಿ ಮುಂದಿನ ಭವಿಷ್ಯಕ್ಕೆ ದಾರಿ ತೊರಿಸುತ್ತಾಳೆ. ಅದಕ್ಕಾಗಿ ಪುರುಷರ ಜೊತೆಗೆ ಮಹಿಳೆಯರನ್ನು ಕೂಡ ಶಾಲೆಗೆ ಕಳುಹಿಸಿ ಅವರನ್ನು ಶಿಕ್ಷಿತರನ್ನಾಗಿ ಮಾಡಿದರೆ ನಮ್ಮ ಸಮಾಜವು ಪ್ರಗತಿಯ ಪಥದಲ್ಲಿ ಸಾಗುವುದು ಎಂದು ಹೇಳುತ್ತಾರೆ. ಬಾಬಾಸಾಹೇಬರ ಈ ಹೇಳಿಕೆಯು ಇಂದು ನೈಜ ರೂಪ ಪಡೆದುಕೊಂಡಿದೆ. ಶಿಕ್ಷಿತ ಹೆಣ್ಣು ಇಂದು ವಿಮಾನವನ್ನು ಹಾರಿಸುತ್ತಿದ್ದಾಳೆ, ಗಗನಯಾತ್ರಿಯಾಗಿದ್ದಾಳೆ, ದೇಶದ ಪ್ರಧಾನಿ/ರಾಷ್ಟ್ರಪತಿಯಾಗಿ ಕಾಯ೯ನಿವ೯ಹಿಸುತಿದ್ದಾಳೆ.

18 ಜುಲೈ 1927 ರಲ್ಲಿ 3000 ಮಹಿಳೆಯರನ್ನು ಒಳಗೊಂಡ ಒಂದು ಬೃಹತ್ ಮಹಿಳಾ ಸಮಾವೇಶದಲ್ಲಿ ಬಾಬಾಸಾಹೇಬರು ಹೇಳುತ್ತಾರೆ “ನೀವು ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ ಶಿಕ್ಷಣವು ಪುರುಷರಿಗೆ ಎಷ್ಟು ಅವಶ್ಯಕತೆ ಇದೆಯೋ ಅಷ್ಟೇ ಅವಶ್ಯಕತೆ ಮಹಿಳೆಯರಿಗೂ ಇದೇ ನೀವು ಶಿಕ್ಷಿತರಾದಲ್ಲಿ ಸಮಾಜದ ಪ್ರಗತಿ ತಡೆಯಲು ಯಾರಿಂದಲೂ ಸಾಧ್ಯವಿಲ್ಲ.”

ಭಾರತದ ಮೊದಲ ಶಿಕ್ಷಕಿ ಮಾತೆ ಸಾವಿತ್ರಿಬಾಯಿ ಫುಲೆ ಮತ್ತು ಫಾತಿಮಾಶೇಖ್ ಅವರ ಕಾರ್ಯವನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮುಂದುವರಿಸಿದರು. ಹಾಗೂ ಮಹಿಳೆಯರ ಶಿಕ್ಷಣಕ್ಕಾಗಿ ಅನೇಕ ಹೋರಾಟ ಮತ್ತು ಸಂಘರ್ಷಗಳು ಮಾಡಿದರು. ಮನುಸ್ಮೃತಿಯಲ್ಲಿ ಮಹಿಳೆಯರಿಗೆ ಮೊಸಗಾತಿ೯, ಕಳ್ಳಿ, ನೀಚ ಯೋನಿ ಎಂದು ಕರೆಯಲಾಗಿದೆ ಹಾಗೂ ಶೂದ್ರರ ಹಾಗೆ ಸ್ರೀಯರಿಗೂ ಕೂಡ ವಿದ್ಯಾಭ್ಯಾಸದಿಂದ ವಂಚಿತರನ್ನಾಗಿ ಮಾಡಲಾಗಿದೆ. ಆದರೆ ಅಂಬೇಡ್ಕರ್ ಅವರು ಮಹಿಳೆಯರಿಗಾಗಿ ಶಿಕ್ಷಣದ ದ್ವಾರವನ್ನು ತೆರೆದು ಅವರಿಗೆ ಶಿಕ್ಷಿತರನ್ನಾಗಿ ಮಾಡಿ ಸ್ವಾಭಿಮಾನದಿಂದ ಬದುಕಲು ಕಲಿಸಿದರು.

2. ಮೆಟರ್ನಿಟಿ ರಜೆ

ಇಂದು ಪ್ರತಿಯೊಂದು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರು 26 ವಾರಗಳ ಮೆಟರ್ನಿಟಿ ರಜೆಯನ್ನು ಪಡೆಯಬಹುದಾಗಿದೆ ಇದಕ್ಕೆ ಮೂಲಕಾರಣ ಬಾಬಾಸಾಹೇಬ್ ಅಂಬೇಡ್ಕರ್ ಅವರು ಎಂದು ಹೇಳಬಹುದು. 10 ನವೆಂಬರ್ 1938 ರಲ್ಲಿ ಬಾಂಬೆ ಲೆಜಿಸ್ಲೇಟಿವ್ ಅಸೆಂಬ್ಲಿಯಲ್ಲಿ ಮಹಿಳೆಯರ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾರೆ. ಇದೆ ಸಂದರ್ಭದಲ್ಲಿ ಮಹಿಳೆಯರು ಋತುಸ್ರಾವದ ಸಮಯದಲ್ಲಿ ಅನುಭವಿಸುವ ಕಷ್ಟ ಹಾಗೂ ಅದರಿಂದ ಅನೇಕ ರೋಗಗಳಿಗೆ ಬಲಿಯಾಗುತ್ತಿರುವುದನ್ನು ಬ್ರಿಟಿಷರಲ್ಲಿ ಮನವರಿಕೆ ಮಾಡಿಸುತಾರೆ.

ಮುಂದೆ 1942 ರಲ್ಲಿ ಅಂಬೇಡ್ಕರ್ ಅವರು ‘ಮೆಟರ್ನಿಟಿ ಬಿಲ್’ ಅನ್ನು ತರುತ್ತಾರೆ.  1948 ರಲ್ಲಿ  “Employees state insurance act” ಮುಖಾಂತರ ಮಾತೃತ್ವದ ಅವಕಾಶವನ್ನು ಬಾಬಾಸಾಹೇಬರು ಕಲ್ಪಿಸಿಕೊಡುತ್ತಾರೆ. ವಿಶ್ವದ ಮುಂದುವರೆದ ದೇಶಗಳು ಕೂಡ ಈ ವಿಷಯದ ಮೇಲೆ ಚರ್ಚೆ ಮಾಡಲು ಹಿಂಜರಿಯುತ್ತಿದ್ದ ಸಮಯದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತದಲ್ಲಿ 1948 ರಲ್ಲಿ ಈ ಕೆಲಸವನ್ನು ಮಾಡಿ ತೋರಿಸಿದರು.  ಅಮೆರಿಕದಲ್ಲಿ 1980 ರಲ್ಲಿ ಅನೇಕ ಹೋರಾಟದ ನಂತರ ಕೊಟಿ೯ನ ಮುಖಾಂತರ ಮಹಿಳೆಯರಿಗೆ ಮೆಟರ್ನಿಟಿ ರಜೆಯನ್ನು ಲಭಿಸಿತು.

3. ಲೈಂಗಿಕ ಸಮಾನತೆ

ಬಾಬಾಸಾಹೇಬರು ಭಾರತದಲ್ಲಿ ಮಹಿಳೆಯರಿಗೆ ಪುರುಷರ ಸರಿ ಸಮಾನ ಅಧಿಕಾರವನ್ನು ನೀಡಿದ್ದಾರೆ. ಸಂವಿಧಾನದ ವಿಧಿ 14 ರಿಂದ 16 ವರೆಗಿನ ವಿಧಿಗಳಲ್ಲಿ ಮಹಿಳೆಯರಿಗೆ ಪುರುಷರ ಸರಿಸಮಾನ ಅಧಿಕಾರವನ್ನು ನೀಡುವ ವ್ಯವಸ್ಥೆಯನ್ನು ಅಂಬೇಡ್ಕರವರು ಮಾಡಿದ್ದಾರೆ. ಬಾಬಾಸಾಹೇಬರ ಪ್ರಕಾರ “ಭಾರತದಲ್ಲಿ ಮಹಿಳೆಯರಿಗೆ ಮಹಿಳೆ ಎನ್ನುವ ಕಾರಣದಿಂದ ಯಾವುದೇ ರೀತಿಯ ಅಧಿಕಾರದಿಂದ ವಂಚಿತರನ್ನಾಗಿ ಮಾಡುವುದಾಗಲಿ ಅಥವಾ ಮಹಿಳೆ ಎಂಬ ಕಾರಣದಿಂದ ಭೇದಭಾವ ಮಾಡುವುದು ಸಂವಿಧಾನದ ಪ್ರಕಾರ ಅಪರಾಧ” ಎಂದು ಹೇಳುತ್ತಾರೆ. ಅದಕ್ಕಾಗಿ ಸಂವಿಧಾನದಲ್ಲಿ ಮಹಿಳೆಯರ ಶೋಷಣೆಯ ವಿರುದ್ಧ ಅನೇಕ ಕಠಿಣ ಕಾನೂನುಗಳನ್ನು ಅಳವಡಿಸಿದ್ದಾರೆ.  ಜೊತೆಗೆ ಮಹಿಳೆ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸುವುದಕ್ಕಾಗಿ ರಾಜ್ಯಗಳಿಗೆ ವಿಶೇಷ ಸ್ವತಂತ್ರವನ್ನು ಸಂವಿಧಾನದಲ್ಲಿ ನೀಡಿದ್ದಾರೆ.

4. ಮತದಾನದ ಅಧಿಕಾರ

20ನೇ ಶತಮಾನದಲ್ಲಿ ಜಗತ್ತಿನಲ್ಲಿ ಮಹಿಳೆಯರ ಮತಾಧಿಕಾರದ ಸಲುವಾಗಿ ಅನೇಕ ಹೋರಾಟಗಳು ನಡೆಯುತ್ತಿದ್ದವು ಆದರೆ ಭಾರತದಲ್ಲಿ ಅಂತಹ ಯಾವುದೇ ಹೋರಾಟ ನಡೆಯುತ್ತಿರಲಿಲ್ಲ. ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಸಂವಿಧಾನ ಬರೆಯುವ ಅವಕಾಶ ಸಿಕ್ಕಾಗ ಮಹಿಳೆಯರಿಗಾಗಿ ಮತಾಧಿಕಾರದ ಅವಕಾಶವನ್ನು ಕಲ್ಪಿಸಿದರು. ಇಂದು 18 ವರ್ಷ ದಾಟಿದ ಪ್ರತಿಯೊಂದು ಮಹಿಳೆಯೂ ಮತದಾನವನ್ನು ಮಾಡುತ್ತಾಳೆ. ಮನುಸ್ಮೃತಿ ಯಿಂದ ಹಿಡಿದು ಹಿಂದೂಧರ್ಮದ ಕೆಲ ಗ್ರಂಥಗಳಲ್ಲಿ ಮಹಿಳೆಯರಿಗೆ ಎರಡನೇ ದರ್ಜೆಯ ಸ್ಥಾನವನ್ನು ನೀಡಲಾಗಿದೆ. ಮನುಸ್ಮೃತಿಯ ಒಂದು ಶ್ಲೋಕದಲ್ಲಿ ” ಬೆಳಗ್ಗೆ ಇರಲಿ ಮಧ್ಯಾಹ್ನ ಇರಲಿ ಸಾಯಂಕಾಲ ಇರಲಿ ಅಥವಾ ರಾತ್ರಿಯೇ ಆಗಿರಲಿ ಸ್ತ್ರೀಗೆ ಯಾವುದೇ ರೀತಿಯ ಸ್ವತಂತ್ರ ನೀಡಬಾರದು, ಅವಳಿಗೆ ಲೈಂಗಿಕ ಸಂಬಂಧದ ಮುಖಾಂತರ ತನ್ನ ವಶದಲ್ಲಿ ಇಡಬೇಕು.  ಬಾಲ್ಯದಲ್ಲಿ ತಂದೆ ಯೌವನಾವಸ್ಥೆಯಲ್ಲಿ ಗಂಡ ವೃದ್ಯಾಪ್ಯದಲ್ಲಿ ಮಗ ಅವಳನ್ನು ರಕ್ಷಣೆ ಮಾಡಬೇಕು ಏಕೆಂದರೆ ಸ್ತ್ರೀಯು ಸ್ವತಂತ್ರವಾಗುವ ಅಹ೯ತೆ ಹೊಂದಿಲ್ಲ ( ಅಧ್ಯಯ 9, 2:3)

ಆದರೆ ಅಂಬೇಡ್ಕರ್ ಅವರು ಈ ಎಲ್ಲಾ ಗುಲಾಮಗಿರಿಯ ಸಂಕೋಲೆಗಳನ್ನು ಮುರಿದು ಮಹಿಳೆಯರಿಗೆ ಸಮಾನ ಅಧಿಕಾರವನ್ನು ನೀಡಿದರು. ಸ್ವಿಜರ್ಲೆಂಡ್ ಅಂತಹ ದೇಶದಲ್ಲಿ ಮಹಿಳೆಯರಿಗೆ 1970 ರಲ್ಲಿ ಮತದಾನದ ಅಧಿಕಾರವನ್ನು ಸಿಕ್ಕಿತು. ಆದರೆ ಬಾಬಾಸಾಹೇಬರು 1950 ರಲ್ಲಿ ಸಂವಿಧಾನದ ಮೂಲಕ ಮಹಿಳೆಯರಿಗೆ ಮತದಾನದ ಹಕ್ಕನ್ನು ನಿಡಿದರು.

5. ವಿಚ್ಛೇದನ ಮತ್ತು ಆಸ್ತಿಯಲ್ಲಿ ಅಧಿಕಾರ

ಮನುಸ್ಮೃತಿಯಲ್ಲಿ ನಿರಾಕರಣೆ ಮಾಡಿದ ಎಲ್ಲಾ ಹಕ್ಕುಗಳನ್ನು ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಮಹಿಳೆಯರಿಗೆ ನೀಡಿದರು. ಜಾತಿ,ಲಿಂಗ,ಧಾರ್ಮಿಕ ನಿರಪೆಕ್ಷತೆಯನ್ನು ದಾಟಿ ಬಾಬಾಸಾಹೇಬರು ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಮಂಡಿಸಿದರು. ಹಿಂದೂ ಕೋಡ್ ಬಿಲ್ ಮುಖಾಂತರ ಮಹಿಳೆಯರ ಹಿತವನ್ನು ಕಾಪಾಡುವ ಪ್ರಯತ್ನವನ್ನು ಮಾಡಿದರು. ಈ ಹಿಂದೂ ಕೋಡ್ ಬಿಲ್ ನಲ್ಲಿ ಮಹಿಳೆಯರಿಗೆ ನಾಲ್ಕು ರೀತಿಯ ಪ್ರಮುಖ ಅವಕಾಶಗಳನ್ನು ನಿಡಿದ್ದರು.

  1. ಹಿಂದೂ ವಿವಾಹ ಪದ್ಧತಿಯಲ್ಲಿ ಇದ್ದ ಬಹು ವಿವಾಹ ಪದ್ಧತಿಯನ್ನು ಸಮಾಪ್ತಿಗೊಳಿಸಿ ಒಂದೆ ವಿವಾಹ ಪದ್ಧತಿಯನ್ನು ಜಾರಿಗೊಳಿಸುವುದು.
  2. ಮಹಿಳೆಯರಿಗೆ ತಂದೆಯ ಆಸ್ತಿಯಲ್ಲಿ ಅಧಿಕಾರವನ್ನು ನೀಡುವುದು ಮತ್ತು ಮಕ್ಕಳನ್ನು ದತ್ತು ಪಡೆಯುವ ಅಧಿಕಾರವನ್ನು ನೀಡುವುದು.
  3. ಪುರುಷರ ಹಾಗೆಯೇ ಮಹಿಳೆಯರಿಗೂ ವಿಚ್ಛೇದನ ನೀಡುವ ಅಧಿಕಾರ ನಿಡುವುದು. ಹಿಂದೆ ಸಮಾಜದಲ್ಲಿ ಮೊದಲು ಪುರುಷರಷ್ಟೇ ವಿಚ್ಛೇದನವನ್ನು ನೀಡುತ್ತಿದ್ದರು.
  4. ಆಧುನಿಕ ಮತ್ತು ಪ್ರಗತಿಶೀಲ ವಿಚಾರಧಾರೆ ಮುಖಾಂತರ ಸಮಾಜವನ್ನು ಏಕೀಕೃತಗೊಳಿಸಿ ಜಾರಿಗೆ ಸುಂದರ ಸಮಾಜವನ್ನು ಸ್ಥಾಪಿಸುವುದು.

ಆದರೆ ರಾಜೇಂದ್ರ ಪ್ರಸಾದರಂತಹ ಮಹಿಳಾ ವಿರೋಧಿ ವ್ಯಕ್ತಿಯಿಂದಾಗಿ ಹಿಂದೂ ಕೋಡ್ ಬಿಲ್ ಜಾರಿಗೆ ಬರಲಿಲ್ಲ.  ಹಾಗಾಗಿ ನಿರಾಶರಾದ ಅಂಬೇಡ್ಕರ್ ಅವರು 7 ಸೆಪ್ಟೆಂಬರ್ 1951 ರಲ್ಲಿ ತನ್ನ ಮಂತ್ರಿ ಪದವಿಗೆ ರಾಜೀನಾಮೆಯನ್ನು  ನೀಡಿದರು.

6. ಮಹಿಳಾ ವಿರೋಧಿ ಅನಿಷ್ಠ ಪದ್ಧತಿಗಳ ನಿರ್ಮೂಲನೆ

ಅಂಬೇಡ್ಕರ್ ಅವರು ಗುಲಾಮಗಿರಿಯಲ್ಲಿ ಬದುಕುತ್ತಿದ್ದ ಅಸಾಹಯಕ ಮಹಿಳೆಯರಲ್ಲಿ ಪ್ರೇರಣೆ ತುಂಬುವ ಉದ್ದೇಶದಿಂದ ಮಹಿಳೆಯರ  ಶೋಷಣೆಯ ಆಕರಗಳಾದ ಬಾಲ್ಯವಿವಾಹ, ದೇವದಾಸಿ ಪದ್ಧತಿ ಗಳಂಥಹ ಅನಿಷ್ಟ ಪದ್ದತಿಗಳ ವಿರುದ್ಧ ಧ್ವನಿಯೆತ್ತಿದರು. 1928 ರಲ್ಲಿ ಬಾಂಬೆಯಲ್ಲಿ ಮಹಿಳಾ ಕಲ್ಯಾಣಕಾರಿ ಸಂಸ್ಥೆಯನ್ನು ಸ್ಥಾಪಿಸಿದರು.

ಈ ಸಂಸ್ಥೆಯ ಅಧ್ಯಕ್ಷರು ಅಂಬೇಡ್ಕರ್ ಅವರ ಪತ್ನಿ ರಮಾಬಾಯಿಯವರು ಆಗಿದ್ದರು. 20 ಜನವರಿ 1942 ರಲ್ಲಿ ಅಂಬೇಡ್ಕರ್ ಅವರು ಅಖಿಲ ಭಾರತೀಯ ಮಹಿಳಾ ಸಮ್ಮೇಳನವನ್ನು ಆಯೋಜಿಸಿದರು ಈ ಸಮ್ಮೇಳನದಲ್ಲಿ ಸುಮಾರು 25 ಸಾವಿರ ಮಹಿಳೆಯರು ಭಾಗಿಯಾಗಿದ್ದರು. 25 ಡಿಸೆಂಬರ್ 1927 ರಲ್ಲಿ ಬಾಬಾ ಸಾಹೇಬರು ಮನುಸ್ಮೃತಿಯನ್ನು ಸುಟ್ಟಿ ಮಹಿಳಾ ಸ್ವಾಭಿಮಾನವನ್ನು ಪ್ರತಿಷ್ಠಾಪಿಸಿದರು.

(ನಾಗವಂಶಿ ನಂದಾದೀಪ, BAMCEF)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version