ದಿನದ ಸುದ್ದಿ

ಭಾರತ ಭಾಗ್ಯವಿಧಾತರೊಟ್ಟಿಗೆ ಹಂಸಲೇಖರ ಅನುಸಂಧಾನ

Published

on

  • ಹಾರೋಹಳ್ಳಿ ರವೀಂದ್ರ

ಮರ್ತ್ಯ ಸೇನ್ ಅವರಿಗೆ ನೊಬೆಲ್ ಬಂದಾಗ ಅವರು “ನಾನು ಹೊಸತೇನನ್ನು ಮಾಡಿಲ್ಲ, ಬಾಬಾಸಾಹೇಬರ ಆರ್ಥಿಕ ಸಿದ್ಧಾಂತಗಳನ್ನು ವಿಸ್ತರಿಸಿದ್ದೇನಷ್ಟೆ ಎಂದು ಹೇಳಿದರು. ಅಮೇರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯವು ತನ್ನ 250 ವರ್ಷಗಳ ಚರಿತ್ರೆಯಲ್ಲಿ ಶ್ರೇಷ್ಠ ವಿದ್ಯಾರ್ಥಿ ಯಾರು? ಎಂದು ಹುಡುಕಿದಾಗ ಅವರ ಕಣ್ಣಿಗೆ ಕಂಡಿದ್ದು ಅಂಬೇಡ್ಕರ್”. ಹೀಗೆ ಡಾ. ಬಿ. ಆರ್. ಅಂಬೇಡ್ಕರ್ ಅವರನ್ನು ದಲಿತರಷ್ಟೆ ಅಲ್ಲದೆ, ದಲಿತೇತರರು ಹಾಗೂ ಭಾರತೀಯೇತರರು ಕೂಡ ಅತಿ ಹೆಚ್ಚು ಹುಡುಕಾಟ ನಡೆಸಿದ್ದಾರೆ.

2017 ರಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ಥಿತ್ವದಲ್ಲಿತ್ತು. ಆ ವರ್ಷ ಡಾ. ಬಿ. ಆರ. ಅಂಬೇಡ್ಕರ್ ಅವರಿಗೆ 125 ನೇ ಜನ್ಮದಿನ. ಅವರ ನೆನಪಿನಾರ್ಥಕವಾಗಿ ಸರ್ಕಾರವು ವಾರ್ತಾಇಲಾಖೆಯ ಮೂಲಕ ‘ಭಾರತ ಭಾಗ್ಯವಿಧಾತ’ ಎಂಬ ಶೀರ್ಷಿಕೆಯಡಿ ಅಂಬೇಡ್ಕರ್ ಅವರ ಜೀವನ ಸಾಧನೆ ಕುರಿತು 1 ಗಂಟೆ 29 ನಿಮಿಷಗಳ ಧ್ವನಿ ಬೆಳಕು ದೃಶ್ಯ ರೂಪವನ್ನು ನಿರ್ಮಾಣ ಮಾಡಲಾಯಿತು.

ಅಂದು ಆ ರಂಗ ರೂಪಕ್ಕೆ ಬಿ. ಎಂ. ಗಿರಿರಾಜ್ ಅವರು ನಿರ್ದೇಶಕರಾಗಿದರೆ, ಶೀರ್ಷಿಕೆ ಗೀತೆ ರಚನೆಯನ್ನು ಕೆ. ವೈ. ನಾರಾಯಣಸ್ವಾಮಿ ಮಾಡಿದ್ದರು. ಇದರೊಟ್ಟಿಗೆ ಒಟ್ಟು 80 ಮಂದಿ ರಂಗ ಕಲಾವಿದರು ಕೆಲಸ ಮಾಡಿದರು. ಈ ಭಾರತ ಭಾಗ್ಯವಿಧಾತ ಧ್ವನಿ ಮತ್ತು ಬೆಳಕು ದೃಶ್ಯ ರಂಗದಲ್ಲಿ ಅಂಬೇಡ್ಕರ್ ಅವರ ಹಲವು ಸಾಧನೆಗಳನ್ನು ಘನೀಕರಿಸಲಾಯಿತು. ಭಾಕ್ರಾನಂಗಲ್ ಅಣೆಕಟ್ಟು, ಹಿರಾಕುಡ್ ಯೋಜನೆ, ರಿಸರ್ವ್ ಬ್ಯಾಂಕ್ ಸ್ಥಾಪನೆ, ಅಸ್ಪೃಶ್ಯತೆ ವಿರುದ್ಧ ಹೋರಾಟ, ಹಿಂದೂ ಕೋಡ್ ಬಿಲ್, ಕಾರ್ಮಿಕ ಚಳವಳಿ ಹಾಗೂ ಕಾನೂನು ಮಂತ್ರಿ ಹೀಗೆ ಮುಂತಾದ ವಿಚಾರಗಳನ್ನು ಅಲ್ಲಿ ತರಲಾಯಿತು.

ಈ ದೃಶ್ಯ ರಂಗರೂಪಕವು ಕರ್ನಾಟಕದಾದ್ಯಂತ ನಡೆಯಿತು. ಅದರ ಹಿಂದೆ ದಲಿತರು, ದಲಿತೇತರರು ಎಲ್ಲರೂ ಒಗ್ಗೂಡಿ ಕೆಲಸ ಮಾಡಿದರು. ಅಂಬೇಡ್ಕರ್ ಅವರ ಜೀವಿತಾವಧಿಯಲ್ಲಿ ಅವರೊಟ್ಟಿಗೆ ದಲಿತೇತರರ ಪಾತ್ರ ಎಷ್ಟಿತ್ತೊ ಇಂದು ಅವರ ವಿಚಾರಗಳೊಟ್ಟಿಗೆ ದಲಿತರನ್ನು ಹೊರತುಪಡಿಸಿದ ಹಲವಾರು ಜನಾಂಗಗಳು ಇಂದಿಗೂ ಸಾಗುತ್ತಿವೆ.

ವಾರ್ತಾ ಇಲಾಖೆಯಿಂದ ಮಾಡಿದ ಭಾರತ ಭಾಗ್ಯವಿಧಾತಕ್ಕೆ ಕವಿ ಡಾ. ಸಿದ್ಧಲಿಂಗಯ್ಯ, ಎಲ್. ಹನುಮಂತಯ್ಯ ಹಾಗೂ ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕರಾಗಿದ್ದ ಎನ್. ಆರ್. ವಿಶು ಕುಮಾರ್ ರವರಂತವರು ಸಲಹಾ ಮಂಡಳಿಯಲ್ಲಿದ್ದರು. ಆದರೆ ಒಟ್ಟಾರೆ ಕಾರ್ಯಕ್ರಮದ ಗೌರವ ಸಲಹೆಗಾರರಾಗಿ ಹೆಸರಾಂತ ಸಂಗೀತಗಾರ ಡಾ. ಹಂಸಲೇಖ ಮತ್ತು ಸಿ. ಬಸವಲಿಂಗಯ್ಯನವರಿದ್ದರು.

ಕರ್ನಾಟಕದಲ್ಲಿ ಪ್ರತಿ ಜಿಲ್ಲೆ, ತಾಲ್ಲೂಕು ಮೂಲೆ ಮೂಲೆಗೆ ಭಾರತ ಭಾಗ್ಯವಿಧಾತ ತಲುಪುವುದರ ಹಿಂದೆ ಸಂಗೀತ ವಿದ್ವಾಂಸ ಹಂಸಲೇಖ ಅವರ ಶ್ರಮವನ್ನೂ ಕೂಡ ನೆನೆಯಬೇಕು. ಅಂಬೇಡ್ಕರ್ ಅವರು ಸಂಗೀತ, ಸಾಹಿತ್ಯ, ಚಲನಚಿತ್ರ, ರಂಗ ಪ್ರಯೋಗ ಹೀಗೆ ಹಲವು ಮಾಧ್ಯಮಗಳ ಮೂಲಕ ತಲುಪುತಿರುವುದಕ್ಕೆ ದಲಿತೇತರರ ಪಾತ್ರ ಮಹತ್ತರವಾದದ್ದು. ಬಹುತೇಕ ಇಂತಹ ಮಹಾನ್ ಕಾರ್ಯಗಳನ್ನು ದಲಿತರಿಗಿಂತ, ದಲಿತ ನಾಯಕರಿಗಿಂತ ದಲಿತೇತರರು ಮಾಡಿದ್ದೇ ಹೆಚ್ಚು. ಆದರೆ ನಾವು ಅವರನ್ನು ಕನಿಷ್ಠ ಸೌಜನ್ಯವನ್ನು ತೋರಿಸದೆ ದೂಷಿಸುತ್ತಲೇ ಕಾಲ ಕಳೆಯುತಿದ್ದೇವೆ.

ಹಂಸಲೇಖ ಅವರು ಅಂಬೇಡ್ಕರ್ ಅವರ ಬಗೆ ಒಂದೆರಡು ಮಾತನಾಡಿ ಪ್ರಚಾರಕ್ಕಾಗಿ ನಿಂತವರಲ್ಲ. ಗೌರವ ಸಲಹೆಗಾರರಾಗಿ ಮನೆ ಮನೆಗೆ ಅಂಬೇಡ್ಕರ್ ಅವರನ್ನು ತಲುಪಿಸಿದವರು. ಒಬ್ಬ ದಲಿತೇತರಾಗಿ ಹಂಸಲೇಖ ಅವರು ಭಾರತ ಭಾಗ್ಯವಿಧಾತರೊಂದಿಗೆ ನಡೆಸಿದ ರಂಗ ರೂಪಕ ಅನುಸಂಧಾನ. ಅವರ ಬಗ್ಗೆ ಹೇಳಲು ಸಾಕಷ್ಟಿದೆ, ಸದ್ಯಕ್ಕೆ ಇಷ್ಟು ಸಾಕು.

ಸೌಜನ್ಯ : ಫೇಸ್‌ಬುಕ್‌ (ಲೇಖರ ವಾಲ್ ನಿಂದ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version