ದಿನದ ಸುದ್ದಿ

ರಾಜ್ಯದಲ್ಲಿ 100 ಅಂಬೇಡ್ಕರ್ ವಸತಿ ನಿಲಯ ನಿರ್ಮಿಸಲು ತೀರ್ಮಾನ : ಸಿಎಂ ಬಸವರಾಜ ಬೊಮ್ಮಾಯಿ

Published

on

ಸುದ್ದಿದಿನ, ಮೈಸೂರು : ರಾಜ್ಯದಲ್ಲಿ 100 ಡಾ. ಬಿ.ಆರ್. ಅಂಬೇಡ್ಕರ್ ( Dr. B.R. Ambedkar) ವಸತಿ ನಿಲಯಗಳನ್ನು ಒಂದೇ ವರ್ಷದಲ್ಲಿ ನಿರ್ಮಿಸುವ ತೀರ್ಮಾನ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( chief minister Basavaraja Bimmai ) ಹೇಳಿದ್ದಾರೆ.

ಮೈಸೂರು ಜಿಲ್ಲೆ ನಂಜನಗೂಡಿನಲ್ಲಿಂದು ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, 50 ಕನಕದಾಸ ಹಾಸ್ಟೆಲ್, 5 ಬೃಹತ್ ವಸತಿ ನಿಲಯಗಳನ್ನು ಈ ವರ್ಷ ಪ್ರಾರಂಭ ಮಾಡಲಾಗುತ್ತಿದೆ ಎಂದು ಹೇಳಿದರು.

ರಾಜ್ಯದ ಪ್ರಮುಖ ಶಿಕ್ಷಣ ಕೇಂದ್ರಗಳಾದ ಬೆಂಗಳೂರು, ಮಂಗಳೂರು, ಕಲಬುರಗಿ, ಹುಬ್ಬಳ್ಳಿ, ಮೈಸೂರಿನಲ್ಲಿ ಮೆಗಾ ಹಾಸ್ಟೆಲ್‌ನ್ನು ನಿರ್ಮಿಸಲಾಗುವುದು. ಮುಂದಿನ 5 ವರ್ಷಗಳಲ್ಲಿ ಒಟ್ಟು 5 ಸಾವಿರ ಮಕ್ಕಳಿಗೆ ಮೆಗಾ ವಸತಿ ನಿಲಯ ಕಲ್ಪಿಸಲಾಗುವುದು ಎಂದರು.

ಮಹಿಳೆಯರ ಹಾಗೂ ಯುವಜನರ ಸ್ವಯಂ ಉದ್ಯೋಗಕ್ಕಾಗಿ ಸ್ತ್ರೀ ಸಾಮರ್ಥ್ಯ ಯೋಜನೆ ಹಾಗೂ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ ಆರಂಭಿಸಲಾಗುತ್ತಿದೆ. ಈ ಯೋಜನೆಗಳಲ್ಲಿ ಪ್ರತಿ ಗ್ರಾಮದಲ್ಲಿ ಎರಡು ಸಂಘಗಳಿಗೆ 5 ಲಕ್ಷ ರೂಪಾಯಿ ಆರ್ಥಿಕ ಸಹಾಯ ಮಾಡಿ, ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯವನ್ನು ಒದಗಿಸುವ ಮೂಲಕ ಆರ್ಥಿಕವಾಗಿ ಸಬಲಗೊಳಿಸಲಾಗುತ್ತಿದೆ ಎಂದು ಅವರು ಹೇಳಿದರು.

ಮುಂದಿನ ದಿನಗಳಲ್ಲಿ ನಂಜನಗೂಡು ಕ್ಷೇತ್ರ ಧಾರ್ಮಿಕ ಹಾಗೂ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಗೊಳಿಸಲು ಯೋಜನೆಗಳನ್ನು ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version