ಬಹಿರಂಗ

ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವಗಳ ಆಧಾರದ ಮೇಲೆ ಸಮಾಜ ನಿರ್ಮಾಣವಾಗಬೇಕು : ಡಾ.ಬಿ.ಆರ್. ಅಂಬೇಡ್ಕರ್ ಈ ಬರಹ ನೀವು ಓದಲೇ ಬೇಕು..!

Published

on

ಜಾತಿ ಬೇಡವೆಂದರೆ ನೀವು ಕಲಿಸುವ ಆದರ್ಶ ಸಮಾಜ ಯಾವುದು ? ಈ ಪ್ರಶ್ನೆ ಅನಿವಾರ್ಯವಾಗುತ್ತದೆ. ನನ್ನ ಮಟ್ಟಿಗೆ ಹೇಳುವುದಾದರೆ ಈ ಹೊಸ ಸಮಾಜವು ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವಗಳ ಆಧಾರದ ಮೇಲೆ ನಿರ್ಮಾಣವಾಗಬೇಕು. ಯಾಕೆ ಬೇಡ ? ಭ್ರಾತೃತ್ವಕ್ಕೆ ಯಾಕೆ ಆಕ್ಷೇಪಗಳಿರಬೇಕು ? ನನಗೆ ಒಂದೂ ಹೊಳೆಯುವುದಿಲ್ಲ. ಆದರ್ಶ ಸಮಾಜದಲ್ಲಿ ಚಲನಶೀಲ ಸ್ವಾತಂತ್ರ್ಯ, ಅಂದರೆ ಬದಲಾಗುವವರಿಗೆ ಮುಕ್ತ ಅವಕಾಶಗಳು, ಇರಬೇಕು.

ಒಂದು ಭಾಗದಲ್ಲುಂಟಾದ ಪರಿವರ್ತನೆಯನ್ನು ಇತರ ಭಾಗಗಳಿಗೆ ಸಾಗಿಸುವುದಕ್ಕೆ ಹೇರಳವಾದ ಮಾರ್ಗಗಳಿರಬೇಕು. ಆದರ್ಶ ಸಮಾಜದಲ್ಲಿ ಪರಸ್ಪರ ತಿಳಿದುಕೊಂಡು ಪಾಲ್ಗೊಳ್ಳುವಂತಹ ಹಿತಾಸಕ್ತಿ ಅನೇಕವಾಗಿರಬೇಕು. ಸಂಪರ್ಕಕ್ಕೆ ಬಹುವಿಧವಾದ ಹಾಗೂ ಸಂಪೂರ್ಣ ಮುಕ್ತವಾದ ಸಾಧನಗಳೂ, ಸದವಕಾಶಗಳೂ ಇರಬೇಕು. ಬೇರೆ ಮಾತುಗಳಲ್ಲಿ ಹೇಳುವುದಾದರೆ ಸಾಮಾಜಿಕ ಒಳಸೇರ್ಪಡೆ ಇರಬೇಕು. ಇದೇ ಭ್ರಾತೃತ್ವ , ಪ್ರಜಾಪ್ರಭುತ್ವದ ಇನ್ನೊಂದು ಹೆಸರೇ ಇದು. ಪ್ರಜಾಪ್ರಭುತ್ವ ಒಂದು ಬಗೆಯ ಆಡಳಿತ ವಿಧಾನ ಮಾತ್ರವಲ್ಲ . ಅದೊಂದು ಸಾಮಾಜಿಕ ಜೀವನಪದ್ಧತಿ ; ಸಂಯುಕ್ತ ಸಂಪರ್ಕವುಳ್ಳ ಅನುಭವ.

ದೇಶಬಾಂಧವರಲ್ಲಿ ಪರಸ್ಪರರನ್ನು ಗೌರವದಿಂದ ಕಾಣುವ ಮನೋವೃತ್ತಿ ಪ್ರಜಾಪ್ರಭುತ್ವದ ಮೂಲ ಲಕ್ಷಣವಾಗಿದೆ. ಸ್ವಾತಂತ್ರ್ಯಕ್ಕೇನಾದರೂ ಆಕ್ಷೇಪಣೆಗಳಿವೆಯೇ ? ಜೀವಕ್ಕೆ ಮತ್ತು ಅವಯವಗಳಿಗೆ ಇರುವ ಹಕ್ಕುಗಳಿಗೆ , ನಿರ್ಬಂಧಗಳಿಲ್ಲದೆ ಸಂಚರಿಸುವ ಹಕ್ಕುಗಳಿಗೆ ಯಾವ ಆಕ್ಷೇಪಣೆಯೂ ಇಲ್ಲ. ಉದರ ನಿರ್ವಹಣೆಗಾಗಿ ಅವಶ್ಯಕವಾದ ಆಸ್ತಿಯ ಹಕ್ಕು , ಸಾಧನ ಸಾಮಾಗ್ರಿಗಳ ಹಕ್ಕು , ಆರೋಗ್ಯ ರಕ್ಷಣೆಯ ಹಕ್ಕು, ಈ ದೃಷ್ಟಿಯಿಂದಲೂ ಆಕ್ಷೇಪಣೆಯಿಲ್ಲ. ಹಾಗಾದರೆ ಒಬ್ಬ ವ್ಯಕ್ತಿಯ ಶಕ್ತಿಗಳ ಲಾಭವನ್ನು ಸಮರ್ಪಕವಾಗಿ ಮತ್ತು ದಕ್ಷ ರೀತಿಯಲ್ಲಿ ಯೋಜಿಸಿ ನಡೆದುಕೊಳ್ಳುವುದಕ್ಕೆ ಸ್ವಾತಂತ್ರ್ಯವೇಕಿರಬಾರದು ? ಜಾತಿಯನ್ನು ಬೆಂಬಲಿಸುವ ಜನ ಈ ಒಂದು ಸ್ವಾತಂತ್ರ್ಯವನ್ನು ಒಪ್ಪಲಾರದು ; ಯಾಕೆಂದರೆ ಅದರಿಂದಾಗಿ ಜನರು ತಮಗೆ ಬೇಕಾದ ವೃತ್ತಿಯನ್ನು ಆಯ್ದುಕೊಳ್ಳಲು ಸ್ವಾತಂತ್ರ್ಯವಿತ್ತಂತಾಗುತ್ತದೆ. ಆದರೆ ಈ ಸ್ವಾತಂತ್ರ್ಯವನ್ನು ಅಲ್ಲಗೆಳೆಯುವುದೆಂದರೆ ನಿರಂತರ ಗುಲಾಮಗಿರಿಯನ್ನು ಒಪ್ಪಿಕೊಂಡಂತೆ ಗುಲಾಮಗಿರಿಯೆಂದರೆ ಕಾನೂನಿನ ಕ್ರಮದಿಂದ ಒಬ್ಬನನ್ನೋ, ಹಲವರನ್ನೋ ಅಧೀನದಲ್ಲಿಟ್ಟುಕೊಳ್ಳವುದೆಂದಷ್ಟೆ ಅರ್ಥವಲ್ಲ .

ತಮ್ಮ ನಡವಳಿಕೆಗೆ ನಿರ್ದಿಷ್ಟವಾದ ಉದ್ದೇಶಗಳನ್ನು ಹೆರವರು ತಮ್ಮ ಮೇಲೆ ಹೇರುವಂತಹ ಸ್ಥಿತಿ ಕೆಲವರಿಗೆ ಇದ್ದರೆ ಆ ಸಮಾಜದ ಸ್ಥಿತಿಯೂ ಗುಲಾಮಗಿರಿಯೇ ಆಗುತ್ತದೆ. ಕಾನೂನಿನ ಅರ್ಥದಲ್ಲಿ ಗುಲಾಮಗಿರಿ ಇಲ್ಲದಂತಹ ಪ್ರದೇಶದಲ್ಲಿ ಕೂಡ ಈ ಸ್ಥಿತಿ ಇರುತ್ತದೆ . ಜಾತಿಪದ್ಧತಿ ಮೇರೆಗೆ ಕೆಲವರು ತಮ್ಮ ಇಷ್ಟಕ್ಕೆ ವಿರುದ್ಧವಾದ ವೃತ್ತಿಗಳನ್ನು ಕೈಗೊಳ್ಳಲೇಬೇಕಾಗುತ್ತದೆ. ಅವರ ಮೇಲೆ ಆ ವೃತ್ತಿಗಳನ್ನು ಹೇರಲಾಗುತ್ತದೆ. ಇನ್ನು ಸಮಾನತೆಗೆ ಆಕ್ಷೇಪಣೆಗಳಿವೆಯೆ ? ಫ್ರೆಂಚ್ , ಧೈಯವಾಕ್ಯದಲ್ಲಿ ಈ ಪದವೇ ವಿವಾದಾಸ್ಪದವಾಗಿದೆ. ಸಮಾನತೆಯನ್ನು ಆಕ್ಷೇಪಿಸುವುದು ಸರಿಯಾಗಿರಬಹುದು, ಎಲ್ಲರೂ ಸಮಾನರಲ್ಲ ಎಂಬುದನ್ನು ನಾನು ಒಪ್ಪಬೇಕಾದೀತು. ಸಮಾನತೆ ಕೇವಲ ಭ್ರಾಂತಿಯಾಗಿರಬಹುದು. ಆದರೆ ಅದೇನಿದ್ದರೂ ವ್ಯವಹಾರದ ದೃಷ್ಟಿಯಿಂದ ಸಮಾನತೆಯನ್ನು ಸ್ವೀಕರಿಸಲೇಬೇಕಾಗುತ್ತದೆ. ಮನುಷ್ಯನ ಶಕ್ತಿ ಅವಲಂಬಿಸುವುದು ಈ ಕೆಳಗಿನ ಮೂರನ್ನು.

  1. ದೈಹಿಕ, ಅನುವಂಶೀಯತೆ
  2. ತಾಯ್ತಂದೆಯರ ಆರೈಕೆ , ಶಿಕ್ಷಣ , ವೈಜ್ಞಾನಿಕ ಸಂಪತ್ತಿನ ಲಾಭ ಇತ್ಯಾದಿಯಾ ಅನಾಗರಿಕನಿಗಿಂತ ಹೆಚ್ಚು ಚೆನ್ನಾಗಿ ಬದುಕಲು ಸಹಾಯಕವಾದ ಎಲ್ಲ ಸಾಧನ ಸಂಪತ್ತುಗಳ ರೂಪವಾಗಿ ದೊರೆತ ಸಾಮಾಜಿಕ ಬಳುವಳಿ , ಮತ್ತು ಕೊನೆಯದಾಗಿ.
  3. ಆ ವ್ಯಕ್ತಿಯ ಸ್ವಂತ ಪ್ರಯತ್ನಗಳು ಈ ಮೂರು ವಿಷಯಗಳಲ್ಲಿ ಮನುಷ್ಯರು ಸಮಾನರಾಗಿರುವುದಿಲ್ಲ.

ಆದರೆ ಈಗಿರುವ ಪ್ರಶ್ನೆಯೆಂದರೆ ಮನುಷ್ಯರೆಲ ಅಸಮಾನರಾಗಿರುವುದರಿಂದ ಅವರನ್ನು ಅಸಮರೆಂದೇ ನಡೆಸಿಕೊಳ್ಳಬೇಕೆ ? ವೈಯಕ್ತಿಕ ದೃಷ್ಟಿಯಿಂದ ವಿಚಾರಿಸಿದರೆ , ಪ್ರತಿಯೊಬ್ಬ ವ್ಯಕ್ತಿಯ ಪ್ರಯತ್ನವೂ ಬೇರೆಯಾಗಿರುವುದರಿಂದ ಎಲ್ಲರನ್ನೂ ಒಂದೇ ಸಮ ಎನ್ನಲಾಗದು. ವ್ಯಕ್ತಿಯ ಅಂತರ್‌ಶಕ್ತಿಗಳ ಸಂಪೂರ್ಣ ವಿಕಾಸಕ್ಕೆ ಸಂಪೂರ್ಣ ಪ್ರೋತ್ಸಾಹವೊದಗಿಸುವುದು ಅಪೇಕ್ಷಣೀಯ. ಆದರೆ ಮೊದಲೆರಡರ ದೃಷ್ಟಿಯಿಂದ ಮನುಷ್ಯರನ್ನು ಅಸಮರೆಂದು ಪರಿಗಣಿಸಿದರೆ ಆಗುವ ಪರಿಣಾಮವೇನು ? ಜನ್ಯ , ಶಿಕ್ಷಣ , ಮನೆತನದ ಹೆಸರು, ವ್ಯವಹಾರ, ಉದ್ಯೋಗಗಳ ಸಂಬಂಧ, ಪೂವಾರ್ಜಿತ ಶ್ರೀಮಂತಿಕೆ ಇವುಗಳನ್ನೆಲ್ಲಾ ಪಡೆದವರು ಸಹಜವಾಗಿ ಮೇಲ್ವೆಯಾಗುತ್ತಾರೆ. ಆದರೆ ಇಂತಹ ಸ್ಥಿತಿಯಲ್ಲಿ ಆಯ್ಕೆಯು ಅರ್ಹತೆಯ ಆಯ್ಕೆಯಾಗುವುದಿಲ್ಲ; ಅದು ಅನುಕೂಲತೆಯುಳ್ಳವರ ಆಯ್ಕೆಯಾಗುತ್ತದೆ . ಆದುದರಿಂದ ಇಲ್ಲಿ ಸಾಧ್ಯವಿದ್ದ ಮಟ್ಟಿಗೆ ಎಲ್ಲರೂ ಸಮಾನರೆಂದೇ ಪರಿಗಣಿಸಬೇಕಾಗುತ್ತದೆ .

ಸಮಾಜ ತನ್ನ ಸದಸ್ಯರಿಂದ ಅತ್ಯಧಿಕ ಲಾಭ ಪಡೆಯಬೇಕೆಂದಿದ್ದರೆ ಸದಸ್ಯರೆಲ್ಲರನ್ನೂ ಸಮಾನವಾಗಿ ಪರಿಗಣಿಸುವುದು ಅಗತ್ಯವಾಗುತ್ತದೆ. ಸಮಾನತೆಯು ಅನಿವಾರ್ಯವೆಂಬುದಕ್ಕೆ ಇನ್ನೊಂದು ಕಾರಣವೂ ಇದೆ. ಮುತ್ಸದ್ದಿಯೊಬ್ಬ ಏಕಕಾಲದಲ್ಲಿ ಹಲವರ ಬಗ್ಗೆ ಕಾಳಜಿ ವಹಿಸಬೇಕಿರುತ್ತದೆ. ಪ್ರತಿಯೊಬ್ಬನ ವಿಶಿಷ್ಟತೆಯನ್ನು ನ್ಯಾಯೋಚಿತವಾಗಿ ನೋಡಿ ಅಗತ್ಯಕ್ಕೆ ತಕ್ಕಂತೆ ಅಥವಾ ಅರ್ಹತೆಗೆ ತಕ್ಕಂತೆ ವರ್ಗೀಕರಣ ಮಾಡಲು ಆತನಿಗೆ ಸಮಯವಾಗಲೀ ತಿಳುವಳಿಕೆಯಾಗಲೀ ಇರುವುದಿಲ್ಲ. ಎಷ್ಟೇ ಅಗತ್ಯವಿದ್ದರೂ ಈ ರೀತಿ ಮನುಷ್ಯರನ್ನು ವಿಂಗಡಿಸಿ ವರ್ಗಿಕರಿಸುವುದು ಅಸಾಧ್ಯವಾದುದು. ಆದುದರಿಂದ ರಾಜಕೀಯ ಮುತ್ಸದ್ದಿ ಯಾವುದೋ ಒಂದು ಸ್ಕೂಲ ನಿಯಮವನ್ನು ಅನುಸರಿಸಬೇಕು. ಆ ಸ್ಕೂಲ ನಿಯಮವೆಂದರೆ ಇದೇ, ಎಲ್ಲರನ್ನೂ ಸಮಾನರೆಂದು ಪರಿಗಣಿಸುವುದು. ಹೀಗೆ ಪರಿಗಣಿಸುವುದು ಅವರೆಲ್ಲರೂ ಒಂದೇ ಬಗೆಯಾಗಿರುವರೆಂಬ ಕಾರಣಕ್ಕಾಗಿ ಅಲ್ಲ. ಅವರೆಲ್ಲರ ವಿಂಗಡಣೆ ಮತ್ತು ವರ್ಗಿಕರಣ ಅಸಾಧ್ಯವೆಂಬ ಕಾರಣಕ್ಕಾಗಿ, ಸಮಾನತೆ ತಾತ್ವಿಕವಾಗಿ ತಪ್ಪಾಗಿದ್ದರೂ ವ್ಯಾವಹಾರಿಕವಾಗಿ ಅವಶ್ಯಕವಾಗುತ್ತದೆ. ರಾಜಕಾರಣಿಯು ರಾಜಕೀಯದಲ್ಲಿ ಮುಂದುವರಿಯುವುದು ಇದೊಂದೇ ಹಾದಿಯಿಂದ, ತೀಕ್ಷ್ಮ ಪ್ರಾಯೋಗಿಕ ಪರೀಕ್ಷೆಯೂ ಅಗತ್ಯವಿರುವ ಅತ್ಯಂತ ಪ್ರಾಯೋಗಿಕವಾದ ಮಾರ್ಗ ಇದು .

-ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರಹಗಳು – ಭಾಷಣಗಳು : ಸಂಪುಟ – 1

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version