ದಿನದ ಸುದ್ದಿ
ನೋಟು ರದ್ದು ಸುದ್ದಿಯಲ್ಲಿ ಅಮಿತ್ ಶಾ ಹೆಸರು ಡಿಲಿಟ್!
ಸುದ್ದಿದಿನ ಡೆಸ್ಕ್: ನೋಟು ರದ್ದತಿ ಸಮಯದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ನಿರ್ದೇಶಕರಾಗಿರುವ ಅಹಮದಾಬಾದ್‍ನ ಬ್ಯಾಂಕ್‍ವೊಂದರಲ್ಲಿಅತಿ ಹೆಚ್ಚು ನೋಟುಗಳು ಹೊಸ ನೋಟುಗಳಿಗೆ ಬದಲಾವಣೆಯಾಗಿರುವ ಸುದ್ದಿಯನ್ನು ದೇಶದ ಪ್ರಮುಖ ಪತ್ರಿಕೆಗಳ ವೆಬ್ ಪೋರ್ಟಲ್‍ಗಳು ಈಗ ಅದನ್ನು ಡಿಲಿಟ್ ಮಾಡಿವೆ.
ಈ ಕುರಿತು ಬೂಮ್ ನ್ಯೂಸ್ ಪೋರ್ಟಲ್ ವರದಿಮಾಡಿದ್ದು, ಈಗ ಆ ಪೋಸ್ಟ್ ವೈರಲ್ ಆಗುತ್ತಿದೆ.
ಫಸ್ಟ್ ಪೋಸ್ಟ್, ನ್ಯೂಸ್ 18 ಡಾಟ್ ಕಾಂ, ಟೈಮ್ಸ್ ನೌ ಹಾಗೂ ನ್ಯೂ ಇಂಡಿಯನ್ ಎಕ್ಸ್‍ಪ್ರೆಸ್ ವೆಬ್ ತಾಣಗಳು ಶಾ ಅವರ ಹೆಸರು ತಳಕುಹಾಕಿಕೊಂಡಿರುವ ಈ ಸುದ್ದಿಯನ್ನು ಡಿಲಿಟ್ ಮಾಡಿದ್ದು, ಎಕನಾಮಿಕ್ ಟೈಮ್ಸ್ ಸುದ್ದಿ ತಾಣವು ಒಂದು ಹೆಜ್ಜೆ ಮುಂದೆ ಹೋಗಿ ಅಮಿತ್ ಶಾ ಹೆಸರನ್ನು ಮಾತ್ರ ತೆಗೆದುಹಾಕಿದೆ.
ಇಟಿ ವೆಬ್ ಪೋರ್ಟಲ್‍ನಲ್ಲಿರುವ ಈ ಸುದ್ದಿಯಲ್ಲಿರುವ ರೀಡ್ ಮೋರ್ ಬಟನ್‍ಅನ್ನು ಕ್ಲಿಕ್ ಮಾಡಿದಾಗ ಅಲ್ಲಿ ಬಿಜೆಪಿ ನಾಯಕ ಎಂದಷ್ಟೇ ಉಲ್ಲೇಖವಾಗಿದೆ. ಮೊದಲ ಪ್ಯಾರಾದಲ್ಲಿ ದಾಖಲಾಗಿದ್ದ ಅಮಿತ್ ಶಾ ಅವರ ಹೆಸರನ್ನು ಉದ್ದೇಶಪೂರ್ವಕವಾಗಿಯೇ ಡಿಲಿಟ್ ಮಾಡಲಾಗಿದೆ ಎಂಬುದು ಇದರ ಅರ್ಥ.
ಈ ಕುರಿತು ಹೆಚ್ಚಿನ ಮಾಹಿತಿಪಡೆಯುವ ಸಲುವಾಗಿ ಬೂಮ್ ಪತ್ರಿಕೆ ವರದಿಗಾರ ಇಟಿ ವೆಬ್ ತಾಣದ ಮುಖ್ಯಸ್ಥ ದೀಪಕ್ ಅಜ್ವಾನಿ ಅವರನ್ನು ಸಂಪರ್ಕಿಸಿದ್ದು, ಇದರ ಬಗ್ಗೆ ಪ್ರತಿಕ್ರಿಯಿಸಲು ಅವರು ಒಪ್ಪಿಲ್ಲ.
ಇಂಡಿಯನ್ ಎಕ್ಸ್‍ಪ್ರೆಸ್ ವೆಬ್ ತಾಣದಲ್ಲಿ ಜೂ.21ರಂದು ಸುದ್ದಿ ಅಪ್‍ಲೋಡ್ ಮಾಡಲಾಗಿದ್ದು, ನಾಲ್ಕು ಗಂಟೆಗಳ ಕಾಲ ಇದು ಆನ್‍ಲೈನ್‍ನಲ್ಲಿ ಲಭ್ಯವಿತ್ತು ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.
“ಐಎಎನ್‍ಎಸ್ ಸುದ್ದಿಸಂಸ್ಥೆಯ ಸುದ್ದಿಗಳನ್ನು ಡೆಸ್ಕ್ ವಿಭಾಗದವರು ಪರಿಶೀಲಿಸಿ ಅಪ್‍ಲೋಡ್ ಮಾಡುತ್ತಾರೆ. ಹಿರಿಯರ ಸೂಚನೆ ಮೇರೆಗಷ್ಟೆ ಸುದ್ದಿಗಳನ್ನು ಡಿಲಿಟ್ ಮಾಡಲಾಗುತ್ತದೆ,’ ಎಂದು ಎಕ್ಸ್‍ಪ್ರೆಸ್ ಮೂಲಗಳು ಬೂಮ್ ಸುದ್ದಿತಾಣಕ್ಕೆ ತಿಳಿಸಿದ್ದಾರೆ.
ಬೂಮ್ ಸುದ್ದಿ ತಾಣವು ಎಕ್ಸ್‍ಪ್ರೆಸ್ ಸುದ್ದಿ ತಾಣದ ಮುಖ್ಯಸ್ಥ ಸುರೇಶ್ ಇವಾತುರಿ ಅವರನ್ನು ಸಂಪರ್ಕಿಸಿದ್ದು ಈ ಕುರಿತು ಸದ್ಯದಲ್ಲೇ ವಿವರಣೆ ನೀಡುವುದಾಗಿ ತಿಳಿಸಿದ್ದಾರೆ. ಫಸ್ಟ್‍ಪೋಸ್ಟ್ ಪ್ರಕಟಿಸಿದ್ದ ಸುದ್ದಿಯ ಆರ್ಕೈವ್‍ಅನ್ನು ಬೂಮ್ ತಾಣವು ಪತ್ತೆ ಮಾಡಿದ್ದು, ಈ ಸುದಿಯಲ್ಲಿ ಅಮಿತ್ ಶಾ ಅವರ ಹೆಸರಿರುವುದು ಪಕ್ಕಾ ಆಗಿದೆ. ಆದರೆ, ದೇಶದ ಬಹುತೇಕ ವಾಹಿನಿಗಳು, ಪತ್ರಿಕೆಗಳು ಈ ಸುದ್ದಿಯನ್ನು ಏಕೆ ಪ್ರಕಟಿಸಿಲ್ಲ. ಹಾಗೂ ವೆಬ್ ತಾಣದಲ್ಲಿ ಸುದ್ದಿಯನ್ನು ಡಿಲಿಟ್ ಮಾಡಿದ್ದು ಏಕೆ ಎಂಬುದು ಈವರೆಗೂ ಗೊತ್ತಾಗಿಲ್ಲ.
ಸುದ್ದಿಯಲ್ಲಿ ಏನಿತ್ತು?
ಅಮಿತ್ ಶಾ ಅವರು ನಿರ್ದೇಶಕರಾಗಿರುವ ಅಹಮದಾಬಾದ್ ಸಹಕಾರ ಬ್ಯಾಂಕ್‍ನಲ್ಲಿ 745.59 ಕೋಟಿ ರೂ. ಹಳೆಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾವಣೆ ಮಾಡಿಕೊಟ್ಟಿರುವುದು ಆರ್‍ಟಿಐ ಅರ್ಜಿ ಮೂಲಕ ಬೆಳಕಿಗೆ ಬಂದಿರುವುದು ಫಸ್ಟ್‍ಪೋಸ್ಟ್‍ನ ಆರ್ಕೈವ್ ವರ್ಷನ್‍ನಲ್ಲಿಸಿಕ್ಕಿದೆ.
ಈ ಕುರಿತು ಐಎಎನ್‍ಎಸ್ ಸುದ್ದಿಸಂಸ್ಥೆಯು ಜೂ.21ರಂದು ಸುದ್ದಿಯೊಂದನ್ನು ಪ್ರಕಟಿಸಿದೆ ಮನೋರಂಜನ್ ರೈ ಎಂಬುವವರು ಸಲ್ಲಿಸಿದ್ದ ಆರ್‍ಟಿಐ ಅರ್ಜಿಯೊಂದರಿಂದ ಈ ಮಾಹಿತಿ ಸ್ಪಷ್ಟವಾಗಿದೆ.
ಸಹಕಾರಿ ಬ್ಯಾಂಕ್‍ನ ವೆಬ್ ತಾಣದಲ್ಲಿರುವ ಮಾಹಿತಿಗಳ ಪ್ರಕಾರ ಹಲವು ವರ್ಷಗಳಿಂದ ಈ ಬ್ಯಾಂಕ್‍ನ ನಿರ್ದೇಶಕರಾಗಿ ಅಮಿತ್ ಶಾ ಕಾರ್ಯ ನಿರ್ವಹಿಸಿದ್ದಾರೆ. ಮಾರ್ಚ್ 31 , 2017ರ ಹೊತ್ತಿಗೆ ಈ ಬ್ಯಾಂಕ್‍ನ ಒಟ್ಟು ಡೆಪಾಸಿಟ್ 5,050 ಕೋಟಿ ರೂ ತಲುಪಿತ್ತು. 2016-17ನೇ ಸಾಲಿನಲ್ಲಿ ಈ ಬ್ಯಾಂಕ್‍ನ ನಿವ್ವಳ ಲಾಭ 14.31 ಕೋಟಿ ರೂ.ಗಳಾಗಿದ್ದವು ಎಂಬುದನ್ನು ಆರ್‍ಟಿಐ ಮಾಹಿತಿ ಸ್ಪಷ್ಟವಾಗಿ ಹೇಳಿದೆ.
ಸುದ್ದಿ ನಿಜ ಎಂದ ಐಎಎನ್‍ಎಸ್
ಐಎಎನ್‍ಎಸ್ ತಾನು ಈ ಸುದ್ದಿ ಪ್ರಕಟಿಸಿರುವುದಾಗಿ ಒಪ್ಪಿಕೊಂಡಿದೆ. ಬೂಮ್ ಸುದ್ದಿತಾಣವು ಐಎಎನ್‍ಎಸ್ ಸುದ್ದಿಸಂಸ್ಥೆ ಮುಖ್ಯಸ್ಥ ಹರ್‍ದೇವ್ ಸನೊತ್ರಾ ಅವರನ್ನು ಸಂಪರ್ಕಿಸಿದಾಗ, ಇಲ್ಲಿ ಮುಚ್ಚಿಡುವುದು ಏನೂ ಇಲ್ಲ. ಆರ್‍ಟಿಐ ಅರ್ಜಿಯೊಂದಕ್ಕೆ ಸಿಕ್ಕಿರುವ ಮಾಹಿತಿಯನ್ನು ನಾವು ಸುದ್ದಿ ರೂಪದಲ್ಲಿ ಕೊಟ್ಟಿದ್ದೆವೆ ಎಂದು ಪ್ರತಿಕ್ರಿಯಿಸಿದ್ದಾರೆ.