ದಿನದ ಸುದ್ದಿ
ಕರ್ನಾಟಕದ 5 ಸೇರಿದಂತೆ ದೇಶದ 103 ಅಭಿವೃದ್ಧಿಪಡಿಸಿದ ರೈಲ್ವೆ ನಿಲ್ದಾಣಗಳ ಲೋಕಾರ್ಪಣೆ
ಸುದ್ದಿದಿನಡೆಸ್ಕ್:ದೇಶಾದ್ಯಂತ ರೈಲು ನಿಲ್ದಾಣಗಳ ಅಭಿವೃದ್ಧಿ ತ್ವರಿತವಾಗಿ ಪೂರ್ಣಗೊಳ್ಳುತ್ತಿದೆ. ಸದ್ಯ ಕಾಮಗಾರಿ ಪೂರ್ಣಗೊಂಡ ಕರ್ನಾಟಕದ 5 ರೈಲ್ವೆ ನಿಲ್ದಾಣಗಳು ಸೇರಿದಂತೆ ದೇಶದ 103 ರೈಲ್ವೆ ನಿಲ್ದಾಣಗಳನ್ನು ಪ್ರಧಾನಿ ನರೇಂದ್ರ ಮೋದಿ ಇಂದು ವರ್ಚುವಲ್ ಮೂಲಕ ಲೋಕಾರ್ಪಣೆ ಮಾಡಲಿದ್ದಾರೆ.
18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 86 ಜಿಲ್ಲೆಗಳಲ್ಲಿ ಈ ರೈಲ್ವೈ ನಿಲ್ದಾಣಗಳನ್ನು ಒಂದು ಸಾವಿರದ ನೂರು ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ರಾಜಸ್ಥಾನದ ಬಿಕೇನರ್ ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಅವರು ಅಭಿವೃದ್ಧಿಪಡಿಸಿದ ನೂತನ ರೈಲ್ವೈ ನಿಲ್ದಾಣಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಇದೇ ಸಂದರ್ಭದಲ್ಲಿ ಅವರು 26ಸಾವಿರ ಕೋಟಿ ರೂಪಾಯಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ನೈರುತ್ವ ರೈಲ್ವೆ ವಿಭಾಗದ ಧಾರವಾಡ, ಗದಗ, ಬಾಗಲಕೋಟೆ, ಗೋಕಾಕ ಮತ್ತು ಮುನಿರಾಬಾದ್ ಸೇರಿದಂತೆ ವಿವಿಧ ರೈಲ್ವೆ ನಿಲ್ದಾಣಗಳನ್ನು ಅಮೃತ ಭಾರತ ಸ್ಟೇಷನ್ ಯೋಜನೆಯಡಿ ಪುನಾರಾಭಿವೃದ್ಧಿಗೊಳಿಸಲಾಗಿದೆ.
ಸಮಯದ ಉಳಿತಾಯದ ಜೊತೆಗೆ ಪರಿಸರ ಸ್ನೇಹಿ ವಾತಾವರಣದ ಮೂಲಕ ಪ್ರಯಾಣಿಕರಿಗೆ ರೈಲು ನಿಲ್ದಾಣಗಳಲ್ಲಿ ಅತ್ಯಾಧುನಿಕ ಸೌಲಭ್ಯ ಲಭ್ಯವಾಗಲಿದೆ. ಪ್ರಯಾಣಿಕರ ಸುಗಮ ಸಂಚಾರಕ್ಕೆ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ.
ಈ ಅಮೃತ ಭಾರತ ರೈಲ್ವೆ ಯೋಜನೆಯಡಿ ದೇಶವ್ಯಾಪಿ ರೈಲು ನಿಲ್ದಾಣಗಳನ್ನು ಉನ್ನತೀಕರಣಗೊಳಿಸಲಾಗುತ್ತಿದೆ. ಅಮೃತ ಭಾರತ ರೈಲ್ವೆ ಯೋಜನೆಯಡಿ ಬಾಗಲಕೋಟೆ ರೈಲ್ವೆ ನಿಲ್ದಾಣವನ್ನು ಸುಮಾರು 16 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅತ್ಯಾಧುನಿಕವಾಗಿ ನವೀಕರಿಸಲಾಗಿದೆ. ರೈಲ್ವೆ ನಿಲ್ದಾಣದಲ್ಲಿ ಸುಸಜ್ಜಿತ ತಂಗುದಾಣ, ಶೌಚಾಲಯ ಹಾಗೂ ನೂತನ ಪ್ಲಾಟ್ ಫಾರ್ಮ್ ಮತ್ತು ಎಸ್ಕಲೇಟರ್ ನಿರ್ಮಾಣ ಸೇರಿದಂತೆ ಶುದ್ಧ ಕುಡಿಯುವ ನೀರು ವ್ಯವಸ್ಥೆ ಜೊತೆಗೆ ವಿವಿಧ ಸೌಲಭ್ಯ ಕಲ್ಪಿಸಲಾಗಿದೆ.
ಬಾಗಲೋಕೋಟೆ ವಿದ್ಯಾರ್ಥಿ ಭೈರೇಗೌಡ ಮಾತನಾಡಿ, ಕೇಂದ್ರ ಸರ್ಕಾರ ರೈಲ್ವೆ ನಿಲ್ದಾಣಗಳನ್ನು ಪುನರಾಭಿವೃದ್ಧಿಗೊಳಿಸುವ ಮೂಲಕ ಜನರಿಗೆ ಹೆಚ್ಚಿನ ಅನುಕೂಲ ಕಲ್ಪಿಸುತ್ತಿದೆ, ನವೀಕರಣಗೊಂಡ ನಿಲ್ದಾಣ ಪ್ರಯಾಣಿಕ ಸ್ನೇಹಿಯಾಗಿರುವುದು ಸಂತಸದ ಸಂಗತಿ ಎಂದರು.
ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಎ.ಎ ದಂಡಿಯಾ ಮಾತನಾಡಿ, ಬ್ರಿಟಿಷ್ ಕಾಲದಲ್ಲಿ ನಿರ್ಮಾಣಗೊಂಡ ನಿಲ್ದಾಣವನ್ನು ಕೇಂದ್ರ ಸರ್ಕಾರ ನವೀನ ಮಾದರಿಯಲ್ಲಿ ಅಭಿವೃದ್ಧಿಗೊಳಿಸಿರುವುದು ಹೆಮ್ಮೆಯ ಸಂಗತಿ ಎಂದು ಅಭಿಪ್ರಾಯಪಟ್ಟರು.
ಮುಖ್ಯ ರೈಲ್ವೆ ವಾಣಿಜ್ಯ ನಿರೀಕ್ಷಕ ಚಂದ್ರಶೇಖರ್ ಮಾತನಾಡಿ, ಅಮೃತ ಭಾರತ ರೈಲ್ವೆ ಯೋಜನೆಯಡಿ ಹೈಟೆಕ್ ಮಾದರಿಯಲ್ಲಿ ನಿಲ್ದಾಣವನ್ನು ನವೀಕರಿಸಲಾಗಿದೆ, ಆಧುನಿಕ ಸೌಲಭ್ಯಗಳೊಂದಿಗೆ ಸೋಲಾರ್ ವಿದ್ಯುತ್ ಘಟಕಗಳನ್ನು ಸಹ ನಿರ್ಮಿಸಲಾಗಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ಸ್ಥಳೀಯ ಉತ್ಪನ್ನಗಳ ಮಾರಾಟ ಮಳಿಗೆಗಳನ್ನು ಸಹ ನಿರ್ಮಿಸಿರುವುದು ವಿಶೇಷವಾಗಿದೆ ಎಂದು ಹೇಳಿದರು.
ಹುಬ್ಬಳಿ-ಧಾರವಾಡ ರೈಲ್ವೆ ನಿಲ್ದಾಣವನ್ನು ಆಧುನಿಕ ಸೌಲಭ್ಯಗಳನ್ನು ಒಳಗೊಂಡಂತೆ ನವೀಕರಿಸಿ, ಸುಮಾರು ೧೭ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಮೇಲ್ದರ್ಜೆರಿಸಲಾಗಿದೆ. ನೈರುತ್ಯ ರೈಲ್ವೆ ವಿಭಾಗದ ಐದು ಪ್ರಮುಖ ರೈಲ್ವೆ ನಿಲ್ದಾಣಗಳನ್ನು ಅತ್ಯಾಧುನಿಕ ಮಾದರಿಯಲ್ಲಿ ಪುನಾರಾಭಿವೃದ್ಧಿಗೊಳಿಸಲಾಗಿದೆ.
ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಗಣೇಶ ಸಿಂಗ ಬ್ಯಾಳಿ ಮಾತನಾಡಿ, ಹೈಟೆಕ್ ರೂಪದಲ್ಲಿ ರೈಲ್ವೆ ನಿಲ್ದಾಣವನ್ನು ನವೀಕರಿಸಲಾಗಿರುವುದು ಸಂತಸದ ಸಂಗತಿಯಾಗಿದ್ದು, ಶುದ್ಧ ಕುಡಿಯುವ ನೀರು, ಸುಸಜ್ಜಿತ ತಂಗುದಾಣದೊಂದಿಗೆ, ಎಕ್ಸಲೇಟರ್ ವ್ಯವಸ್ಥೆಯನ್ನು ನಿರ್ಮಿಸಲಾಗಿದ್ದು ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಹೇಳಿದರು.