ದಿನದ ಸುದ್ದಿ

ದೇಶದೆಲ್ಲೆಡೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಸಜ್ಜು

Published

on

ಸುದ್ದಿದಿನ ಡೆಸ್ಕ್ : ದೇಶದ ವಿವಿಧ ಪಾರಂಪರಿಕ ಮತ್ತು ಐತಿಹಾಸಿಕ ತಾಣಗಳಲ್ಲಿ ನಾಳೆ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ.

ಕರ್ನಾಟಕದ ಮೈಸೂರಿನಲ್ಲಿ ಪ್ರಧಾನ ಕಾರ್ಯಕ್ರಮ ನಡೆಯಲಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಅಜಾದಿ ಕಾ ಅಮೃತ ಮಹೋತ್ಸವ ವರ್ಷಾಚರಣೆ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ನಡೆಯುತ್ತಿದ್ದು, ದೇಶದ 75 ಐತಿಹಾಸಿಕ ಸ್ಥಳಗಳಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದೆ.

ಮೈಸೂರು ಅರಮನೆ ಆವರಣದಲ್ಲಿ 10 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಪ್ರಧಾನಿ ಅವರು ಪಾಲ್ಗೊಳ್ಳುತ್ತಿರುವ ಈ ಸಮಾರಂಭದಲ್ಲಿ ವಿದ್ಯಾರ್ಥಿಗಳು, ದಿನಗೂಲಿ ನೌಕರರು, ವಿಶೇಷ ಚೇತನರು ಸಹ ಭಾಗಿಯಾಗುತ್ತಿದ್ದಾರೆ.

ನರೇಂದ್ರ ಮೋದಿ ಅವರು ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿರುವ ಹಿನ್ನೆಲೆಯಲ್ಲಿ ನಗರದಾದ್ಯಂತ ದಸರಾ ಮಾದರಿಯಲ್ಲಿ ದೀಪಾಲಂಕಾರ ಮಾಡಲಾಗಿದೆ. ಯೋಗ ವಿದ್ಯೆಯನ್ನು ರಕ್ಷಿಸುವಲ್ಲಿ ಮೈಸೂರು ಮಹತ್ವದ ಪಾತ್ರವಹಿಸಿದೆ. ಮೈಸೂರು ಯೋಗದ ರಾಜಧಾನಿಯೆಂದೇ ಕರೆಯಲ್ಪಡುತ್ತಿದ್ದು, ಮೈಸೂರು ಅರಮನೆಯ ದಾಖಲೆಗಳ ಪ್ರಕಾರ ಎರಡು ಶತಮಾನಕ್ಕೂ ಮೀರಿದ ಯೋಗದ ಇತಿಹಾಸವನ್ನು ಈ ನಗರ ಹೊಂದಿದೆ.

ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ವಿದ್ವತ್ ಪೂರ್ಣ ಪುಸ್ತಕ ಶ್ರೀತತ್ವ ನಿಧಿಯಲ್ಲಿ ಯೋಗದ ೧೨೨ ಆಸನಗಳ ವಿವರಣೆಯನ್ನು ನೀಡಿದ್ದರು. ೧೯೩೦ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ರಾಜಮನೆತದ ಸದಸ್ಯರು ಮತ್ತು ಸಾರ್ವಜನಿಕರಿಗೆ ಯೋಗ ಕಲಿಸಲು ಪ್ರಪ್ರಥಮ ಯೋಗ ಶಾಲೆ ಆರಂಭಿಸಿದ್ದರು.

ತಿರುಮಲೈ ಕೃಷ್ಣಮಾಚಾರ್ಯ ಅವರು ಮೈಸೂರಿನವರಾಗಿದ್ದು, ಅವರನ್ನು ಆಧುನಿಕ ಯೋಗದ ಪಿತಾಮಹ ಎಂದು ಪರಿಗಣಿಸಲಾಗಿದೆ. ಇವರು ಹಠಯೋಗವನ್ನು ಪರಿಚಯಿಸಿದ್ದಲ್ಲದೇ ಮೊದಲ ಹಠಯೋಗ ಶಾಲೆಯನ್ನು ಪ್ರಾರಂಭಿಸಿದ ಹೆಗ್ಗಳಿಕೆ ಹೊಂದಿದ್ದಾರೆ.

ಪ್ರಸಿದ್ಧ ಯೋಗಪಟು ಬಿ.ಕೆ.ಎಸ್.ಅಯ್ಯಂಗಾರ್, ಅಷ್ಟಾಂಗ ಯೋಗದ ಪಟ್ಟಾಭಿಜೋಯಿಸ್ ಮತ್ತಿತರರು ಮೈಸೂರಿನ ಯೋಗ ಪರಂಪರೆಯನ್ನು ಶ್ರೀಮಂತಗೊಳಿಸಿದ್ದಾರೆ. ಜಗತ್ತಿನ ಪ್ರಮುಖ ಯೋಗ ಶಿಕ್ಷಕರು ಈಗಲೂ ಮೈಸೂರಿನಲ್ಲಿ ಯೋಗ ತರಬೇತಿ ನೀಡುತ್ತಿದ್ದಾರೆ. ಯೋಗ ಕಲಿಯಲು ಮೈಸೂರು ಆಹ್ಲಾದಕರ ವಾತಾವರಣ ಹೊಂದಿದ್ದು, ಇಂತಹ ನಗರದಲ್ಲಿ ಯೋಗ ದಿನಾಚರಣೆಯನ್ನು ಈ ಬಾರಿ ಅತ್ಯಂತ ವೈಭವದಿಂದ ಆಚರಿಸಲಾಗುತ್ತಿದೆ.

ವಿದೇಶಗಳಲ್ಲಿ ಭಾರತೀಯ ಮಿಷನ್‌ಗಳು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಯೋಜಿಸಿವೆ. ದೇಶದ ವಿವಿಧ ಪಾರಂಪರಿಕ ತಾಣಗಳಲ್ಲಿ ನಡೆಯಲಿರುವ ಯೋಗ ಪ್ರದರ್ಶನಗಳಲ್ಲಿ ಕೇಂದ್ರದ ಹಲವಾರು ಸಚಿವರು ಭಾಗಿಯಾಗಲಿದ್ದಾರೆ.

ಅನುರಾಗ್ ಸಿಂಗ್ ಠಾಕೂರ್ ಅವರು ಹಿಮಾಚಲ ಪ್ರದೇಶದ ನಲಗಢ್ ಅರಮನೆ ಆವರಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ ಧರ್ಮೇಂದ್ರ ಪ್ರಧಾನ್ ಕಾಂಗ್ರಾ ಕೋಟೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಕೊನಾರ್ಕ್ ಸೂರ್ಯ ದೇವಸ್ಥಾನದ ಆವರಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಒಡಿಶಾದ ಪುರಿ ಜಗನ್ನಾಥ ದೇವಾಲಯದಲ್ಲಿನ ಕಾರ್ಯಕ್ರಮದಲ್ಲಿ ಮಹೇಂದ್ರ ಪಾಂಡೆ, ಗುಜರಾತ್‌ನ ಐಕ್ಯತ ಪ್ರತಿಮೆ ಬಳಿ ನಡೆಯುವ ಕಾರ್ಯಕ್ರಮದಲ್ಲಿ ಮನ್ಸೂಖ್ ಮಾಂಡವೀಯ, ಹರಿದ್ವಾರದ ಹರ್ ಕೀ ಪೌರಿಯಲ್ಲಿ ಗಿರಿರಾಜ ಸಿಂಗ್, ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಜ್ಯೋತಿರಾಧಿತ್ಯ ಸಿಂಧ್ಯಾ ಭಾಗಿಯಾಗಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version