ದಿನದ ಸುದ್ದಿ
ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ 2 ಸಾವಿರ 993 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳಿಗೆ ಅನುಮೋದನೆ : ಸಚಿವ ಎಂ.ಟಿ.ಬಿ.ನಾಗರಾಜ್
ಸುದ್ದಿದಿನ ಡೆಸ್ಕ್ : ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ 2ಸಾವಿರ 993 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಯಿತು ಎಂದು ಪೌರಾಡಳಿತ ಖಾತೆ ಸಚಿವ ಎಂ.ಟಿ.ಬಿ.ನಾಗರಾಜ್ ಹೇಳಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ನಂತರ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 291 ನಗರ ಸ್ಥಳಿಯ ಸಂಸ್ಥೆಗಳಲ್ಲಿ ಅಮೃತ ನಗರೋತ್ಥಾನ ಯೋಜನೆಯಡಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಸರ್ಕಾರ ತೀರ್ಮಾನಿಸಿದೆ ಎಂದರು.
9 ಜಿಲ್ಲೆಗಳ 503 ಕೋಟಿ ರೂಪಾಯಿ ವೆಚ್ಚದ ಕ್ರಿಯಾಯೋಜನೆಗೂ ಮುಖ್ಯಮಂತ್ರಿಯವರು ಅನುಮೋದನೆ ನೀಡಿದರು ಎಂದು ಸಚಿವ ನಾಗರಾಜ್ ವಿವಿರ ನೀಡಿದರು.
ಈ ಯೋಜನೆಯಡಿ 117 ಪಟ್ಟಣ ಪಂಚಾಯಿತಿಗಳಿಗೆ ತಲಾ 5ಕೋಟಿ ರೂಪಾಯಿ, 124 ಪುರಸಭೆಗಳಿಗೆ ತಲಾ 10 ಕೋಟಿ ರೂಪಾಯಿ ಮತ್ತು 38 ನಗರಸಭೆಗಳಿಗೆ ತಲಾ 30 ಕೋಟಿ ರೂಪಾಯಿ ಕ್ರಿಯಾಯೋಜನೆಗೆ ಮುಖ್ಯಮಂತ್ರಿಯವರು ಅನುಮೋದನೆ ನೀಡಿದರು ಎಂದು ಅವರು ತಿಳಿಸಿದರು. ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243