ನೆಲದನಿ

ಕಲಾ ಲೋಕದೊಳಗೊಬ್ಬ ಸಾಧಕ : ಡಾ.ಸಂತೋಷ್ ಅವರ ಬದುಕಿನ ಸಂಕಥನ

Published

on

ಕಲಾವಿದ ಡಾ.ಸಂತೋಷ್ ಅವರೊಂದಿಗೆ ಲೇಖಕ ಡಾ.ಓಬಳೇಶ್

ಲೆ ಮತ್ತು ಕಲಾವಿದ ಎಂದಾಕ್ಷಣ ನಮಗೆ ನೆನಪಾಗುವುದು ವಿಶಿಷ್ಟವಾದ ಚಿತ್ತಾರದ ಲೋಕ. ಆದರೆ ಈ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡ ಕಲಾವಿದರಿಗೆ ಈ ಕ್ಷೇತ್ರದ ಸಿದ್ಧಿ ಅಷ್ಟೊಂದು ಸುಲಭದ ಕೆಲಸವಲ್ಲ. ಇಲ್ಲಿ ತಮ್ಮದೇ ಆದ ಸಾಧನೆ ಮಾಡಿರುವ ಪ್ರತಿಯೊಬ್ಬ ಕಲಾವಿದರೂ ಕೂಡ ಹಲವಾರು ತೆರನಾದ ಏಳುಬೀಳುಗಳನ್ನು ಅನುಭವಿಸಿಯೇ ಮುಂದೆ ಬಂದಿರುತ್ತಾರೆ. ಹೀಗೆ ಕಲಾ ಲೋಕದೊಳಗೆ ತನ್ನದೇ ಆದ ಸಾಧನೆ ಮಾಡಿರುವ ಸಂತೋಷ್ ದಾವಣಗೆರೆ ಇವರು ಕೂಡ ಈ ಹಾದಿಯಲ್ಲಿ ಹಲವಾರು ಸಂಕಷ್ಟಗಳನ್ನು ಮೆಟ್ಟಿನಿಂತು ಕಲಾ ಮತ್ತು ಸಾಹಿತ್ಯ ಲೋಕಕ್ಕೆ ತನ್ನದೆ ಆದ ಕಾಣಿಕೆಯನ್ನು ನೀಡಿದ್ದಾರೆ. ಇಂತಹ ಸಾಧಕ ಕಲಾವಿದನ ಬದುಕಿನ ಸಂಕಥನವನ್ನು ಅನಾವರಣಗೊಳಿಸುವುದೆ ಪ್ರಸ್ತುತ ಲೇಖನದ ಉದ್ಧೇಶವಾಗಿದೆ.

ಶ್ರೀಯುತ ಸಂತೋಷ್ ದಾವಣಗೆರೆ ಅವರು 19ನೇ ಮೇ 1974ರಂದು ದಾವಣಗೆರೆ ತಾಲ್ಲೂಕಿನ ಕಬ್ಬೂರು ಗ್ರಾಮದಲ್ಲಿ ಶ್ರೀ ರುದ್ರಪ್ಪ ಹಾಗೂ ಶ್ರೀಮತಿ ಕೊಟ್ರಮ್ಮ ದಂಪತಿಗಳ ಪುತ್ರನಾಗಿ ಜನಿಸಿದರು. ಬಾಲ್ಯದ ದಿನಗಳಿಂದಲೂ ಕೌಟುಂಬಿಕ ಪರಿಸ್ಥಿತಿಯು ಉತ್ತಮವಾಗಿದ್ದ ಕಾರಣ ಯಾವುದೇ ಸಂಕಷ್ಟಗಳನ್ನು ಅನುಭವಿಸದೆ ಬೆಳೆದ ಇವರು, ಬಿ.ಎ ಪದವಿ ಶಿಕ್ಷಣವನ್ನು ಪಡೆದು ಕೆಲವೊಂದು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತ ತಮ್ಮ ಜೀವನವನ್ನು ನಿರ್ವಹಿಸುತ್ತಿದ್ದರು. ಆದರೆ ತಮ್ಮ ತಾಯಿಯವರ ಅಕಾಲಿಕ ಮರಣದಿಂದ ಮನನೊಂದು ಬೆಂಗಳೂರಿನತ್ತ ನಡೆದರು. ಬೆಂಗಳೂರಿನ ಪರಿಚಯವೇ ಇರದ ಇವರು ಇಲ್ಲಿಗೆ ಬಂದ ಆರಂಭದ ದಿನಗಳಲ್ಲಿ ತುಂಬ ಸಂಕಷ್ಟವನ್ನು ಅನುಭವಿಸಿದರು. ಕೆಲವು ತಿಂಗಳುಗಳು ಸಾರ್ವಜನಿಕ ಪಾರ್ಕುಗಳನ್ನೆ ಆಶ್ರಯಿಸಿ ಜೀವನ ನಡೆಸುವ ಹಂತವನ್ನು ತಲುಪಿ, ಕೊನೆ ಕೊನೆಗೆ ಒಂದೊತ್ತಿನ ಊಟಕ್ಕೂ ಭಿಕ್ಷೆ ಬೇಡುವ ಹಂತವನ್ನು ತಲುಪಿದರು. ಇಂತಹ ಸಂದರ್ಭದಲ್ಲಿ ಹೆಸರಾಂತ ರಂಗಕರ್ಮಿಗಳಾದ ಎ.ಎಸ್.ಮೂರ್ತಿಯವರು ನಡೆಸುತಿದ್ದ ಬೀದಿ ನಾಟಕಗಳನ್ನು ನೋಡಿ, ಇವರ ಜೊತೆ ತಿರುಗಾಡಿದರೆ ಆ ದಿನದ ಊಟವಾದರೂ ಸಿಗುತ್ತದೆ ಎಂದು ನಂಬಿ ಅವರ ತಂಡದೊಂದಿಗೆ ಪಾತ್ರ ಮಾಡುತ್ತ ಹಲವು ದಿನಗಳು ಕಳೆದರು.

ಶ್ರೀಯುತರು ಯಾವುದೇ ಗೊತ್ತು ಗುರಿ, ಉದ್ಧೇಶವಿಲ್ಲದೆ ಬೆಂಗಳೂರಿಗೆ ಪ್ರವೇಶ ಮಾಡಿದ್ದರು. ಈ ಸಂದರ್ಭದಲ್ಲಿ ಅನ್ನಕೆ ಆಸರೆಯಾಗಿದ್ದು ಈ ರಂಗಕಲೆ. ಹೀಗೆ ಆರಂಭವಾದ ಇವರ ಕಲಾ ಬದುಕು ವಿವಿಧ ಸ್ವರೂಪಗಳಲ್ಲಿ ಮಂದುವರೆಯಿತು. ಯಾವುದೇ ರಂಗ ತರಬೇತಿಯು ಇಲ್ಲದ ಇವರಿಗೆ ರಂಗಭೂಮಿಯ ಆಶಯಗಳೇನು, ಚಲನಚಿತ್ರಗಳಲ್ಲಿ ನಟಿಸಲು ಬೇಕಾದ ಮಾನದಂಡಗಳೇನು ಎಂಬುದರ ಯಾವುದೇ ಪರಿಚಯವಾಗಲಿ, ಅನುಭವವಾಗಲಿ ಇರಲಿಲ್ಲ. ಅನ್ನದ ಅನಿವಾರ್ಯತೆಗಾಗಿ ಮೊದಲು ಎ.ಎಸ್.ಮೂರ್ತಿಯವರ ಕಲಾ ತಂಡದೊಂದಿಗೆ ತನ್ನನ್ನು ತೊಡಗಿಸಿಕೊಂಡರು. ನಂತರದಲ್ಲಿ ಇವರ ಸ್ವಗ್ರಾಮದವರೇ ಆದ ನಿರ್ದೇಶಕ ಶರಣ್ ಕಬ್ಬೂರು ಅವರ ನಿರ್ಮಾಣದ ‘ಪೂಜಾರಿ’ ಸಿನಮಾದಲ್ಲಿ ಒಂದು ಕಿರುಪಾತ್ರವನ್ನು ಮಾಡಿ ಮೆಚ್ಚುಗೆಯನ್ನು ಪಡೆದುಕೊಂಡಿದ್ದರು. ಇದರಿಂದ ಪ್ರೇರಿತಗೊಂಡ ಇವರು ನಂತರದಲ್ಲಿ ಮುಕ್ತ ಧಾರವಾಯಿಯಲ್ಲಿ ನಟಿಸುವುದಕ್ಕೆ ಅವಕಾಶಗಳಿವೆ ಎಂದು ತಿಳಿದು ಅಲ್ಲಿಗೆ ಹೋದಾಗ, ಭಯದಿಂದ ಅಭಿನಯದಲ್ಲಿ ಏರುಪೇರು ಉಂಟಾಯಿತು. ಆಗ ಅಲ್ಲಿನ ಪ್ರೊಡಕ್ಷನ್ ಮ್ಯಾನೇಜರ್ ಅವರಿಂದ ಚೀಮಾರಿಯನ್ನು ಹಾಕಿಸಿಕೊಂಡು, ಅಳುತ್ತ ಹೊರಬಂದರು. ಆ ಸಂದರ್ಭದಲ್ಲಿ ಸತ್ಯ ಎಂಬ ಕಲಾವಿದರು ಈ ಹಿಂದೆ ನಟಿಸಿದ ಇವರೊಳಗಿನ ಕಲಾ ಚಾತುರ್ಯತೆಯನ್ನು ಅರಿತಿದ್ದರು. ಈ ಸಂದರ್ಭದಲ್ಲಿ ಸಂತೋಷ್ ಅವರನ್ನು ಮಾತನಾಡಿಸಿ, ಈ ಹಿಂದೆ ನೀವು ತುಂಬ ಚನ್ನಾಗಿ ನಟಿಸಿದ್ದನು ನಾನು ನೋಡಿದ್ದೇನೆ. ನಿಮ್ಮೊಳಗೊಬ್ಬ ಕಲಾವಿದನಿದ್ದಾನೆ. ಆ ಕಲಾವಿದನನ್ನು ಬೆಳೆಸುವುದಕ್ಕೆ ತರಬೇತಿಯ ಅಗತ್ಯವಿದೆ ಎಂದು ಧೈರ್ಯ ಹೇಳಿದರು. ಆಗ ಸಂತೋಷ್ ಅವರು ನನಗೆ ಇದೆಲ್ಲ ಗೊತ್ತೆ ಇಲ್ಲ. ಯಾರಾದರು ತೊರಿಸಿಕೊಟ್ಟರೆ ಮಾಡುತ್ತೇನೆ ಎಂದು ಹೇಳಿದಾಗ, ಎ.ಎಸ್.ಮೂರ್ತಿಯವರ ‘ಅಭಿನಯ ತರಂಗ’ದ ದಾರಿ ತೋರಿದರು. ಈ ಹಿಂದೆ ಎ.ಎಸ್.ಮೂರ್ತಿಯವರ ತಂಡದೊಂದಿಗೆ ಕೆಲಸ ಮಾಡಿದ ಅನುಭವ ಹೊಂದಿದ ಕಾರಣದಿಂದ ತನಗೆ ಅಲ್ಲಿಗೆ ಯಾವುದೇ ಅಡೆತಡೆ ಇಲ್ಲದೆ ತರಬೇತಿ ಸಿಗಬಹುದು ಎಂದು ಅಭಿನಯ ತರಂಗದತ್ತ ಮುಖ ಮಾಡಿದರು. ಇಲ್ಲಿಗೆ ಬಂದು ನಾನು ಸಿನಿಮಾ ಮಾಡಲಿಕ್ಕಾಗಿ ತರಬೇತಿ ಬೇಕಾಗಿದೆ ಎಂದಾಗ ಎ.ಎಸ್.ಮೂರ್ತಿಯವರ ಮಗಳಾದ ‘ಗೌರಿದತ್ತ್’ ಅವರಿಂದಲೂ ಚೀಮಾರಿ ಹಾಕಿಸಿಕೊಂಡರು. ರಂಗಭೂಮಿಯಲ್ಲಿ ಕೆಲಸ ಮಾಡುವ ಆಸಕ್ತಿ ಹೊಂದಿರುವವರು ಯಾವುದೇ ಕಾರಣಕ್ಕೂ ಸಿನಿಮಾ ಮಾಡುವ ಅವಕಾಶವಾದಿಗಳಾಗಿರಬಾರದು. ರಂಗಭೂಮಿಗೆ ತನ್ನದೇ ಆದ ಸಿದ್ಧಾಂತ, ಮೌಲ್ಯ, ಬದ್ಧತೆಗಳಿಗೆ ಎಂಬುದಾಗಿ ಅರಿವು ಮೂಡಿಸಿ, ಇಲ್ಲಿ ತರಬೇತಿ ಪಡೆಯುವುದಕ್ಕೆ ಹಣ ಕೊಡಬೇಕಾಗುತ್ತದೆ. ಇಂತಿಷ್ಟು ಹಣ ತೆಗೆದುಕೊಂಡು ಬರುವಂತೆ ತಿಳಿಸಿದರು. ಆಗ ಸಂತೋಷ್ ಅವರು ದಾವಣಗೆರೆಗೆ ಬಂದು ತಮ್ಮ ಆಪ್ತರಿಂದ ಒಂದಿಷ್ಟು ಹಣವನ್ನು ಸಂಗ್ರಹಿಸಿ ಅವರಿಗೆ ನೀಡಿ, ಉಳಿದ ಹಣವನ್ನು ಹೇಗಾದರು ಕೆಲಸ ಮಾಡಿ ಕೊಡುವುದಾಗಿ ತಿಳಿಸಿ ರಂಗ ತರಬೇತಿಗೆ ಸೇರಿಕೊಂಡರು.

ಶ್ರೀಯುತರು ‘ಅಭಿನಯ ತರಂಗ’ಕ್ಕೆ ಸೇರಿಕೊಂಡ ತರುವಾಯದಲ್ಲಿ ಇವರ ಬದುಕಿನ ದಿಕ್ಕೆ ಬದಲಾಯಿತು. ಈ ಸಂಸ್ಥೆಗೆ ಬರುತಿದ್ದ ಹಿರಿಯ ಕಲಾವಿದರು, ನಿರ್ದೇಶಕರುಗಳ ಎದುರಿಗೆ ಹಾಡುವುದಕ್ಕೆ ಅವಕಾಶಗಳು ಲಭಿಸಿದವು. ಸ್ವತಃ ನಾಟಕ ರಚನೆ, ನಿರ್ದೇಶನಕ್ಕೆ ಅವಕಾಶಗಳು ದೊರಕಿದವು. ಈ ಎಲ್ಲಾ ಸಂದರ್ಭಗಳಲ್ಲಿ ಗಿರೀಶ್ ಜತ್ತಿ ಎಂಬ ಗೆಳೆಯನ ಸಹಕಾರವು ದೊರೆಯಿತು. ಈ ಎಲ್ಲಾ ಅವಕಾಶಗಳಿಂದಾಗಿ 900ಕ್ಕೂ ಹೆಚ್ಚು ಬೀದಿ ನಾಟಕ, 300ಕ್ಕೂ ಹೆಚ್ಚು ನಾಟಕ, 45ಕ್ಕೂ ಹೆಚ್ಚು ಧಾರವಾಯಿ, 10 ಸಿನಿಮಾಗಳಲ್ಲಿ ಅಭಿನಯ, 6 ಕಿರುಚಿತ್ರಗಳಲ್ಲಿ ನಟನೆ ಮತ್ತು ನಿರ್ದೇಶನ, ಕಸ್ತೂರಿ ವಾಹಿನಿಯ ಕಾಮಿಡಿ ಷೋಗಳಾದ ‘ಕಾಮಿಡಿ ಕಿಲಾಡಿಗಳು’, ‘ಕಾಮಿಡಿ ದರ್ಬಾರ್’ ಹಾಗೂ ‘ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್’ ಕಾರ್ಯಕ್ರಮಗಳಲ್ಲಿ ತಮ್ಮ ಸಹಭಾಗಿತ್ವವನ್ನು ವ್ಯಕ್ತಪಡಿಸಿದ ಕೀರ್ತಿಯು ಶ್ರೀಯುತರಿಗೆ ಸಲ್ಲುತ್ತದೆ. ಇದೆಲ್ಲವೂ ನೆರವೇರಿದ್ದು ‘ಅಭಿನಯ ತರಂಗ’ವು ನೀಡಿದ ಅತ್ಯಮೂಲ್ಯವಾದ ಕೊಡುಗೆಯಾಗಿದ್ದು, ಇಲ್ಲಿ ಶ್ರೀಯುತ ಸಂತೋಷ್ ಅವರ ಪ್ರಾಮಾಣಿಕ ಪ್ರಯತ್ನ ಸಕ್ರಿಯವಾಗಿ ಕಾರ್ಯನಿರ್ವಹಿಸಿದೆ. ಈ ಅಭಿನಯ ತರಂಗದಲ್ಲಿ ಶ್ರೀಯುತರು ತಮ್ಮ ತಂದೆಯರಿಂದ ಕಲಿತಂತಹ ಹಲವಾರು ತತ್ವಪದಗಳು ಮತ್ತೇ ಮತ್ತೇ ಪ್ರದರ್ಶನವನ್ನು ಪಡೆದುಕೊಂಡವು. ಇವುಗಳು ಸಂತೋಷ್ ಅವರನ್ನು ಗುರುತಿಸುವುದಕ್ಕೆ ಅವಕಾಶವನ್ನು ಕಲ್ಪಿಸಿಕೊಟ್ಟವು.

ಶ್ರೀಯುತ ಸಂತೋಷ್ ಅವರು ಈ ವೇಳೆಗಾಗಲೆ ರಂಗಭೂಮಿ, ಕಿರುತೆರೆ, ಸಿನಿಮಾ ಲೋಕದಲ್ಲಿ ಸಾಕಷ್ಟು ಗುರುತಿಸಿಕೊಂಡಿದ್ದರು. ಆದರೆ ಈ ಹಂತದ ವೇಳೆಗೆ ತಮ್ಮ ತಂದೆಯವರನ್ನು ಕಳೆದುಕೊಂಡಿದ್ದರು. ನಂತರದಲ್ಲಿ ಮದುವೆಯಾಗಬೇಕೆಂದು ಹುಡುಕಾಡಿ, ತನಗೆ ಎಲ್ಲಿಯೂ ಹೆಣ್ಣು ಸಿಗಲಿಲ್ಲವೆಂದು ಬೇಸರಗೊಂಡು, ಮದುವೆಯ ವಿಷಯವನ್ನು ತಲೆಯಿಂದ ತೆಗೆದುಹಾಕಿ ತಂದೆಯವರು ಹಾಡುತಿದ್ದ ತತ್ವಪದಗಳ ಸಂಗ್ರಹದತ್ತ ಮುಖಮಾಡಿ ಹಲವು ದಿನಗಳ ಕಾಲ ಕ್ಷೇತ್ರಕಾರ್ಯ ಮಾಡಿ, ತನ್ನ ತಂದೆಯ ಶಿಷ್ಯಂದಿರ ಬಳಿ ಸುಮಾರು 55 ತತ್ವಪದ ಹಾಡುಗಳನ್ನು ಸಂಗ್ರಹಿಸಿ ‘ಅಪ್ಪನ ಸಂಗ್ರಹ’ ಎಂಬ ಕೃತಿಯನ್ನು ಬಿಡುಗಡೆ ಮಾಡುವ ಹಂತದಲ್ಲಿ ಕಂಕಣ ಭಾಗ್ಯವೂ ಕೂಡಿ ಬಂತು. ತಮ್ಮ ಮದುವೆಯ ದಿನದಂದೆ ‘ಅಪ್ಪನ ಸಂಗ್ರಹ’ ಕೃತಿಯು ಕೂಡ ಬಿಡುಗಡೆಯ ಭಾಗ್ಯವನ್ನು ಪಡೆದುಕೊಂಡಿತು. ನಂತರದಲ್ಲಿ ಇವರನ್ನು ಬಹು ಕಾಡಿದ ವಿಷಯವೆಂದರೆ ಕರ್ನಾಟಕದ ಮಠ ಮಾನ್ಯಗಳು. ತಮ್ಮ ಶ್ರೀಮತಿಯ ಮನವೊಲಿಸಿ, ಅವರು ಹೆರಿಗೆಗೆ ತಮ್ಮ ತವರಿಗೆ ತೆರಳಿದಾಗ ಪ್ರಯಾಣಕ್ಕೆ ಬೇಕಾದ ಸಕಲ ಸಿದ್ಧತೆ ಮಾಡಿಕೊಂಡು ಮಠಗಳ ಅಧ್ಯಯನಕ್ಕೆ ಸಿದ್ಧತೆಯನ್ನು ಕೈಗೊಂಡರು.

ಶ್ರೀಯುತರದು ಮಠ ಮಾನ್ಯಗಳ ಅಧ್ಯಯನವು ಅತ್ಯಂತ ಆಸಕ್ತಿದಾಯಕವಾದ ವಿಷಯವಾಗಿತ್ತು. ಅದಕ್ಕಿಂತ ಹೆಚ್ಚಾಗಿ ಈ ವಿಷಯವು ಅವರನ್ನು ಬಹುದಿನಗಳು ಕಾಡಿತ್ತು. ಇದಕ್ಕಾಗಿ ಕೆಲವು ದಿನಗಳ ಕಾಲ ಊಟ, ನಿದ್ರೆಯನ್ನು ಕಳೆದುಕೊಂಡಿದ್ದರು. ಕೊನೆಗೂ ಕೂಡಿಬಂದ ಅವಕಾಶದಿಂದಾಗಿ ದಾವಣಗೆರೆಯ ಹೆಬ್ಬಾಳು ಮಠದಿಂದ ಆರಂಭಗೊಂಡ ಇವರ ಮೊದಲ ಹಂತದ ಆಧ್ಯಯನವು ಸದರಿ ಜಿಲ್ಲೆಯನ್ನು ಸಂಪೂರ್ಣ ಅಧ್ಯಯನಕ್ಕೆ ಒಳಪಡಿಸಿತು. ಹೀಗೆ ಆರಂಭಗೊಂಡ ಕರ್ನಾಟಕದ 30 ಜಿಲ್ಲೆಗಳ ಪ್ರತಿಯೊಂದು ಮಠಗಳ ಅಧ್ಯಯನವು 39.000 ಕಿ.ಮಿ ಹಾದಿಯನ್ನು 19 ತಿಂಗಳುಗಳ ಕಾಲ 3000 ಸಾವಿರ ಹಳ್ಳಿಗಳನ್ನು ಸುತ್ತಿ, 2000 ಮಠಗಳಿಂದ ಮಾಹಿತಿಯನ್ನು ಸಂಗ್ರಹಿಸಿದ್ದರು. ನಂತರದಲ್ಲಿ ಸಮಗ್ರವಾದ ಮಾಹಿತಿಗಾಗಿ ಸಿದ್ಧತೆ ಮಾಡಿಕೊಂಡು ಎರಡನೇ ಹಂತದಲ್ಲಿ 56.000 ಕಿ.ಮಿ ಸಂಚರಿಸಿ ಸಮಗ್ರವಾದ ಮಾಹಿಯನ್ನು ಪಡೆದುಕೊಂಡು ಬಂದರು. ಈ ಸಂದರ್ಭದಲ್ಲಿ ಅವರು ಅನುಭವಿಸಿದ ಯಾತನೆಗಳನ್ನು ಕೇಳಿದರೆ ಎಂತಹ ಕಲ್ಲು ಮನಸು ಕೂಡ ಕರಗಿ ನೀರಾಗುವಂತಹ ಕರಾಳ ಅನುಭವಗಳು ಶ್ರೀಯುತರಿಗೆ ಲಭಿಸಿವೆ. ಈ ಎಲ್ಲಾ ನೋವುಗಳನ್ನು ತಡೆದುಕೊಂಡು ಸಮಗ್ರ ಮಾಹಿತಿಯನ್ನು ಶ್ರೀಯುತರು ಸಂಗ್ರಹಿಸಿರುವುದು ನಿಜಕ್ಕೂ ಅಭೂತಪೂರ್ವದ ಸಂಗತಿಯಾಗಿದೆ. ಹೀಗೆ ಸಂಗ್ರಹಿಸಿದ ಮಾಹಿತಿಯನ್ನು ಪ್ರಕಟಿಸುವುದಕ್ಕೆ ಬೇಕಾದ ಹಣಕಾಸಿನ ನೆರವು ಇಲ್ಲದೆ ಹಲವಾರು ದಿನಗಳ ಕಾಲ ನೋವು ಅನುಭವಿಸಿದ್ದಾರೆ. ಹಲವಾರು ದಾನಿಗಳ ಆಶ್ರಯವನ್ನು ಬೇಡಿದ್ದಾರೆ. ಆದರೆ ಇವರ ಬದುಕಲ್ಲಿ ಆತ್ಮೀಯರಾಗಿ ಬಂದ ಶ್ರೀಮತಿ ಶುಭ ಐನಳ್ಳಿ ವಿಶ್ವಪ್ರಕಾಶ್ ಹಾಗೂ ಶ್ರೀ ರವೀಂದ್ರ ಅರಳಗುಪ್ಪಿ ಅವರ ಸಹಕಾರದಿಂದ ಈ ಸಂಶೋಧನ ಕಾರ್ಯವು ಒಂದು ಮೂರ್ತ ಸ್ವರೂಪವನ್ನು ಪಡೆದುಕೊಂಡಿತು. ಹಾಗೆಯೇ ಪುಸ್ತಕ ಮುದ್ರಣಕ್ಕೆ ಆರ್ಥಿಕ ಸಹಕಾರ ನೀಡಿದ ಶ್ರೀ. ಗಂಗಾಧರ್ ಯಾವಗಲ್, ಮುದ್ರಣಕ್ಕೆ ಸಹಕರಿಸಿದ ಪ್ರೆಸ್ ಮಾಲಿಕರಾದ ಬಿ.ಸಿ.ಪಾಟೀಲ್ ಅವರ ಸಹಕಾರದಿಂದಾಗಿ ಜಿಲ್ಲಾವಾರು ಮಠಗಳ ದರ್ಶನದ ಕೃತಿಗಳು ಬಿಡುಗಡೆಯ ಭಾಗ್ಯವನ್ನು ಪಡೆದುಕೊಂಡಿವೆ.

ಶ್ರೀಯುತ ಸಂತೋಷ್ ಅವರು ಬವಣೆಯ ನಡುವೆಯೇ ಬದುಕು ರೂಪಿಸಿಕೊಂಡು ಬಂದ ಅಪರೂಪದ ಕಲಾವಿದ. ಕಲಾವಿದನಾಚೆ ಒಬ್ಬ ವಿದ್ವಾಂಸನಾಗಿ, ಸಂಶೋಧಕನಾಗಿ ತನ್ನ ಸೇವೆಯನ್ನು ಸಲ್ಲಿಸಿದವರು. ತನ್ನ ಸಾರ್ಥಕ್ಕಾಗಿ ದುಡಿಯದೆ, ಸಮಾಜಕ್ಕೊಂದು ಸಂದೇಶ, ಮಾರ್ಗದರ್ಶನ ನೀಡಬೇಕೆಂಬ ಇವರ ತುಡಿತ, ಹಂಬಲ ನಿಜಕ್ಕೂ ಶ್ಲಾಘನೀಯ. ಇಂತಹ ಅಪರೂಪದ ಕಲಾ ಪ್ರತಿಭೆಯನ್ನು ಗಮನಿಸಿ ಜರುಸಲೆಂ ವಿಶ್ವವಿದ್ಯಾಲಯವು ‘ಗೌರವ ಡಾಕ್ಟರೇಟ್’ ಪದವಿಯನ್ನು ನೀಡಿ ಗೌರವಿಸಿದೆ. ಹಾಗೆಯೇ ಶ್ರೀಯುತರಿಗೆ ಉತ್ತಮ ಹಾಸ್ಯ ನಟ ಪ್ರಶಸ್ತಿ, ಕಲಾಕಲ್ಪ ಪ್ರಶಸ್ತಿ, ಸಮಾಜ ಸೇವಾರತ್ನ ಪ್ರಶಸ್ತಿ, ಕರ್ನಾಟಕ ಕಲಾರತ್ನ ಪ್ರಶಸ್ತಿ, ಯುವ ಸ್ಪೂರ್ತಿ ಚೇತನ ಪ್ರಶಸ್ತಿ, ಶ್ರೀ ಶಿವ ದಾಸಿಮಯ್ಯ ಸಾಹಿತ್ಯ ರತ್ನ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಇವರ ಮುಡಿಗೇರಿವೆ. ಇವರ ಈ ಎಲ್ಲಾ ಸಾಧನೆಗಳಿಗೆ ಇವರ ಶ್ರೀಮತಿಯವರಾದ ಜಯಶ್ರೀಯವರ ಸಹಕಾರ ಪ್ರಚೋದನೆಯನ್ನು ನೀಡಿದೆ. ಇವರ ಕಲಾಸೇವೆ ಮತ್ತು ಸಮಾಜ ಸೇವೆ ಹೀಗೆ ಮುಂದುವರೆಯಲಿ. ಶ್ರೀಯುತರ ಕುಟುಂಬಕ್ಕೆ ದೇವರು ಆರೋಗ್ಯ ಮತ್ತು ನೆಮ್ಮದಿಯನ್ನು ಕರುಣಿಸಲಿ ಎಂಬುದು ನಮ್ಮೆಲ್ಲರ ಹಾರೈಕೆ.

Leave a Reply

Your email address will not be published. Required fields are marked *

Trending

Exit mobile version