ನೆಲದನಿ

ಬಡತನವ ಮೆಟ್ಟಿನಿಂತ ಯಕ್ಷಗಾನ ಭಾಗವತ: ಪರಮೇಶ್ವರ ನಾಯ್ಕ್ ಎಂಬ ಕಲಾದನಿ

Published

on

ಯಕ್ಷಗಾನ ಕಲಾವಿದ ಪರಮೇಶ್ವರ ನಾಯ್ಕ್

ಭಾರತದ ಬಹುತೇಕ ಜನಪದ ಕಲೆಗಳು ತಳ ಸಮುದಾಯಗಳಿಂದಲೆ ಜೀವಂತಿಕೆಯನ್ನು ಪಡೆದುಕೊಂಡಿವೆ. ಈಗಲೂ ಈ ಕಲೆಗಳು ತನ್ನ ಜೀವಂತಿಕೆಯನ್ನು ಪಡೆದುಕೊಂಡಿರುವುದು ಬಡತನದ ಬದುಕಿನಲ್ಲಿಯೇ. ಹೀಗಾಗಿ ಬಡತನ ಹಾಗೂ ಜನಪದ ಕಲೆಗಳಿಗೆ ನಿಕಟವಾದ ಸಂಬಂಧವೊಂದು ಬಿಡದ ನಂಟಾಗಿ ಬೆಳೆದುಕೊಂಡು ಬಂದಿದೆ. ಇಂತಹ ಜಾನಪದ ಕಲೆಗಳಲ್ಲಿ ಯಕ್ಷಗಾನವು ಒಂದು ಪ್ರಮುಖ ಕಲೆಯಾಗಿ ಬೆಳೆದುಕೊಂಡು ಬಂದಿದೆ. ಇಂತಹ ಯಕ್ಷಗಾನ ಕಲೆಯನ್ನು ತಮ್ಮ ಬದುಕಿನ ಭಾಗವಾಗಿ ಮುಂದುವರೆಸಿಕೊಂಡು ಬಂದಿರುವ ಕಲಾವಿದರಲ್ಲಿ ಪರಮೇಶ್ವರ ನಾಯ್ಕರು ಒಬ್ಬರಾಗಿದ್ದಾರೆ.

ಶ್ರೀಯುತ ಪರಮೆಶ್ವರ ನಾಯ್ಕರು ಅಕ್ಟೋಬರ್ 20, 1969 ರಲ್ಲಿ ಉತ್ತರ ಕನ್ನಡದ ಮಂಕೋಡ ಎಂಬಲ್ಲಿ ಜನ್ಮತಾಳಿದರು. ಶ್ರೀ ಕೆರಿಯ ನಾಯ್ಕ ಹಾಗೂ ಶ್ರೀಮತಿ ಗೌರಿಯವರ ಸುಪುತ್ರರಾಗಿದ್ದಾರೆ. ಇವರ ತಂದೆಗೆ ಒಂಭತ್ತು ಜನ ಮಕ್ಕಳು. ಇವರಲ್ಲಿ ನಾಲ್ಕು ಜನ ಗಂಡು ಹಾಗೂ ಐದು ಜನ ಹೆಣ್ಣು ಮಕ್ಕಳು. ಪರಮೇಶ್ವರ ನಾಯ್ಕ ಅವರ ತಂದೆವರು ತಮಗಿರುವ ಅಲ್ಪ ಪ್ರಮಾಣದ ಜಮೀನಿನಲ್ಲಿ ದುಡಿದು ಜೀವನ ಸಾಗಿಸುತ್ತಿದ್ದರು. ಇವರಿಗೆ ಆಶ್ರಯವಾಗಿ ತಾಯಿ ಗೌರಿ ಅವರು ಕೂಡ ಕೂಲಿ ಜೀವನ ನಡೆಸಿ ಮಕ್ಕಳನ್ನು ಸಾಕುತ್ತಿದ್ದರು. ಆದರೆ ಇದರಿಂದ ತಮ್ಮ ಮಕ್ಕಳನ್ನು ಸಾಕುವುದು ಕಷ್ಟವಾದಾಗ ತಮ್ಮ ಹಿರಿಯ ಮಗವಾದ ಪರಮೇಶ್ವರ ನಾಯ್ಕ ಅವರನ್ನು ಮೂರನೇ ತರಗತಿಗೆ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ, ಶ್ರೀಮಂತರ ಮನೆಯೊಂದರಲ್ಲಿ ಜೀತಕ್ಕೆ ನೇಮಿಸಲಾಗುತ್ತದೆ. ಮನೆಯಲ್ಲಿ ಸಾಕಷ್ಟು ಬಡತನದ ಕಾರಣ ತಮ್ಮ ವಿದ್ಯಾರ್ಥಿ ಜೀವನದಿಂದ ದೂರ ಸರಿದು ಧಣಿಗಳ ಮನೆಯಲ್ಲಿ ದನ ಕಾಯುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಈ ವೇಳೆಯಲ್ಲಿ ಪರಮೇಶ್ವರ ನಾಯ್ಕ ಅವರ ಅಂತರಾಳದಲ್ಲಿ ಯಕ್ಷಗಾನ ಕಲಾವಿದನೊಬ್ಬ ಮೊಳಕೆಯೊಡೆಯಲು ಪ್ರಾರಂಭಿಸುತ್ತಾನೆ. ದನ ಕರುಗಳನ್ನು ಮೇಯಿಸುವ ಕಾಯಕದ ಜೊತೆಯಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಆಸಕ್ತಿಯನ್ನು ಮೂಡಿಸಿಕೊಂಡ ಇವರು ರಾತ್ರಿಯ ವೇಳೆಯಲ್ಲಿ ತಮ್ಮ ಗ್ರಾಮದ ಸುತ್ತಮುತ್ತಲ ಊರುಗಳಲ್ಲಿ ಜರುಗುವಂತಹ ಯಕ್ಷಗಾನವನ್ನು ನೋಡುವುದಕ್ಕೆ ಹೋಗುತ್ತಿರುತ್ತಾರೆ. ಹೀಗೆ ಬೆಳೆದ ಹವ್ಯಾಸದಿಂದ ಸುಶ್ರಾವ್ಯವಾಗಿ ಭಾಗವಂತಿಕೆಯ ಹಾಡುಗಳನ್ನು ಪ್ರಯೋಗ ಮಾಡುತ್ತಾರೆ. ಇವರಲ್ಲಿ ಅಂತರ್ಗತವಾಗಿ ನೆಲೆಯೂರಿದ್ದ ಕಂಠಸಿರಿಯ ಮೂಲಕವಾಗಿ ಭಾಗವತಿಕೆ ಹಾಡುಗಳನ್ನು ಸುಂದರವಾಗಿ ಹಾಡುವುದಕ್ಕೆ ಪ್ರಯೋಗ ಮಾಡುತ್ತಾರೆ. ಪರಮೇಶ್ವರ ನಾಯ್ಕ ಅವರು ಯಾವೊಬ್ಬ ಗುರುವಿನ ಮಾರ್ಗದರ್ಶನವಿಲ್ಲದೆ ಸ್ವತಃ ಪರಿಶ್ರಮ ಹಾಗೂ ಆಸಕ್ತಯಿಂದಾಗಿ ಹಲವಾರು ಪದ್ಯಗಳನ್ನು ಕಂಠಪಾಠದ ಮೂಲಕವಾಗಿ ಕರಗತ ಮಾಡಿಕೊಳ್ಳುತ್ತಾರೆ. ಹೀಗೆ ಕಾಡುಹಕ್ಕಿಯಂತೆ ಸ್ವತಂತ್ರವಾಗಿ ಹಾಡು ಕಲಿತ ಪರಮೇಶ್ವರ ನಾಯ್ಕ ಅವರು ಸುಮಾರು ಹನ್ನೆರಡನೇ ವಯಸ್ಸಿಗೆ ಯಕ್ಷಗಾನ ಕ್ಷೇತ್ರದಲ್ಲಿ ತನ್ನದೆ ಆದ ವಿದ್ವತ್ತನ್ನು ಗಳಿಸಿಕೊಳ್ಳುತ್ತಾರೆ.

ಪರಮೇಶ್ವರ ನಾಯ್ಕ್ ಅವರು ಬಾಲ್ಯದಲ್ಲಿ ತಮ್ಮ ಮನೆಯಲ್ಲಿನ ಕೌಟುಂಬಿಕ ಬಡತನದ ಕಾರಣದಿಂದಾಗಿ ಸಿದ್ಧಾಪುರದ ಮಂಜುನಾಥ ಹೆಗಡೆಯವರ ಮನೆಯಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಮಂಜುನಾಥ ಹೆಗಡೆಯವರು ಹವ್ಯಾಸಿ ಭಾಗವತರಾಗಿದ್ದು, ಸಾಕಷ್ಟು ಯಕ್ಷಗಾನಗಳಲ್ಲಿ ಪ್ರದರ್ಶನ ನೀಡಿದ್ದರು. ಇವರ ಒಡನಾಟದಿಂದ ಪರಮೇಶ್ವರ ನಾಯ್ಕ್ ಅವರು ಕೂಡ ಈ ಕಲೆಯ ಗೀಳನ್ನು ಮೈಗೂಡಿಸಿಕೊಂಡು, ಮಂಜುನಾಥ ಹೆಗಡೆಯವರೊಂದಿಗೆ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಹೀಗೆ ಯಕ್ಷಗಾನದ ಹುಚ್ಚು ಹತ್ತಿಸಿಕೊಂಡ ಪರಮೇಶ್ವರ ನಾಯ್ಕ್ ಅವರು ಪದ್ಯಗಳನ್ನು ಕಂಠಪಾಠ ಮಾಡಿಕೊಂಡು ಹಾಡುವುದಕ್ಕೆ ಪ್ರಾರಂಭಿಸಿದರು. ಮಂಜುನಾಥ ಹೆಗಡೆಯವರ ತಂದೆಯವರಾದ ತಿಮ್ಮಪ್ಪ ಹೆಗಡೆಯವರು ಕೂಡ ಹೆಸರಾಂತ ಭಾಗವತರಾಗಿದ್ದು ಹಲವಾರು ಯಕ್ಷಗಾನ ಪ್ರಸಂಗಗಳನ್ನು ಬರೆದಿದ್ದರು. ಇಂತಹ ವಾತಾವರಣದಲ್ಲಿ ಬೆಳೆದ ಪರಮೇಶ್ವರ ನಾಯ್ಕ್ ಅವರಿಗೆ ಭಾಗವತಿಕೆಯ ಪ್ರೇರಣೆ ಪ್ರಭಾವವು ಈ ದಿನಗಳಲ್ಲಿ ಉಂಟಾಯಿತು. ಈ ಸಂದರ್ಭದಲ್ಲಿ ಪರಮೇಶ್ವರ ನಾಯ್ಕ್ ಅವರಿಗೆ ಕೇವಲ ಹನ್ನೆರಡು ವರ್ಷ ವಯಸ್ಸಾಗಿತ್ತು. ಕೌಟುಂಬಿಕ ಬಡತನವು ಇವರನ್ನು ಶಾಲಾ ಶಿಕ್ಷಣದಿಂದ ವಂಚಿತಗೊಳಿಸಿದರು ಸಹ, ಕಲಾ ಶಿಕ್ಷಣವು ಇವರ ಬದುಕಿಗೆ ವರವಾಗಿ ಪರಿಣಮಿಸಿತು. ಈ ಕಲೆಯೇ ಮುಂದೆ ಇವರ ಬಡತನದ ನಿವಾರಣೆಯ ಪ್ರಮುಖ ಅಸ್ತ್ರವಾಗಿ ಸಹಯಾಸ್ತವನ್ನು ನೀಡಿತು ಎಂದರೆ ತಪ್ಪಾಗಲಾರದು.

ಪರಮೇಶ್ವರ ನಾಯ್ಕ್‍ರವರು ಅಲ್ಲಿ ಇಲ್ಲಿ ನಡೆಯುವ ಯಕ್ಷಗಾನದ ಪ್ರದರ್ಶನಗಳನ್ನು ನೋಡಿ, ಕೇಳಿಯೇ ಹಲವಾರು ಪ್ರಸಂಗಗಳನ್ನು ಕಂಠಪಾಠ ಮಾಡಿಕೊಂಡಿದ್ದರು. ಚಿಕ್ಕವರಿದ್ದಾಗಲೇ ಇವರಲ್ಲಿ ಒಡಮೂಡಿರುವ ಕಂಠಸಿರಿಯನ್ನು ಗಮನಿಸಿದ ಆರ್ತಿಕಟ್ಟದ ಗಜಾನನ ಸಮಿತಿಯವರು ಇವರ ಕಂಠವನ್ನು ಗಮನಿಸಿ, ಇವರಿಂದ ಯಕ್ಷಗಾನ ಪ್ರಸಂಗಗಳನ್ನು ಹಾಡಿಸಿ, ಧ್ವನಿ ಮುದ್ರಿಕೆಯಲ್ಲಿ ದಾಖಲಿಸಿದರು. ಈ ಧ್ವನಿ ಮುದ್ರಿಕೆಯನ್ನು ಅನಂತರಾಯರು ಮತ್ತು ಶ್ರೀಕಾಂತರಾಯರು ಸೇರಿಕೊಂಡು ಉಪ್ಪರಿಗೆ ಮೇಲೆ ಹೋಗಿ ಹೆಸರಾಂತ ಯಕ್ಷಗಾನ ದಿಗ್ಗಜರಾದ ಕಾಳಿಂಗ ನಾವಡರಿಗೆ ಇವರ ಕಂಠವನ್ನು ಪರಿಚಯಿಸಿದರು. ಪರಮೇಶ್ವರ ನಾಯ್ಕ್ ಅವರ ಕಂಠಸಿರಿಯನ್ನು ಗಮನಿಸಿದ ಕಾಳಿಂಗ ನಾವಡರು ಇವರನ್ನು ಮೆಚ್ಚಿಕೊಂಡರು. ಆಗ ಪರಮೇಶ್ವರ ನಾಯ್ಕ್ ಅವರು ಓದಿರುವುದು ಕೇಲವ ಮೂರನೇ ತರಗತಿ ಮಾತ್ರ, ಆದರೆ ಯಕ್ಷಗಾನದ ಮೊದಲ ವೇಷ ಎಂದರೆ ಅದು ಭಾಗವತಿಕೆ. ಇದನ್ನು ನಿಭಾಯಿಸಲಿಕ್ಕೆ ಹತ್ತನೇ ತರಗತಿಯಾದರೂ ಓದಿದ್ದರೆ ಒಳ್ಳೆಯದು ಎಂಬುದಾಗಿ ಮಾತನಾಡಿಕೊಂಡರು. ಆದರೆ ಬಾಲ ಗೋಪಾಲದಿಂದ ಒಡ್ಡೋಲಗದವರೆಗೆ ನಿರ್ವಹಿಸಲಿಕ್ಕೆ ತೊಂದರೆ ಇಲ್ಲ ಎಂಬುದಾಗಿ ತೀರ್ಮಾನಿಸಿದರು. ನಂತರದಲ್ಲಿ ಇವರ ಕಂಠ ಮತ್ತು ಇವರಿಗಿರುವ ಆಸಕ್ತಿ, ಉತ್ಸಾಹವನ್ನು ಗಮನಿಸಿ ತಮ್ಮೊಂದಿಗೆ ಮಂಡಳಿಗೆ ಬರುವುದಾಗಿ ಕೇಳಿಕೊಂಡರು. ಆಗಿನ ಸಂದರ್ಭದಲ್ಲಿ ಜೀವನ ನಡೆಸುವುದು ಕಷ್ಟಕರವಾಗಿ ಕೆಲಸಕ್ಕೆ ಸೇರಿಕೊಂಡ ಪರಮೇಶ್ವರ ನಾಯ್ಕ್ ಅವರಿಗೆ ಕೆಲಸದ ಮನೆಯನ್ನು ತೊರೆದು ಬರುವಷ್ಟು ಶಕ್ತಿ ಮತ್ತು ಸಾಮಥ್ರ್ಯವಿರಲಿಲ್ಲ. ಆದ ಕಾರಣದಿಂದಾಗಿ ತಮ್ಮ ಕಷ್ಟವನ್ನು ಹೇಳಿಕೊಂಡು ವಿನಯನಾಗಿಯೇ ಇದನ್ನು ನಿರಾಕರಿಸಿದರು. ಆದರೂ ಕಲೆಯ ಬಗೆಗಿನ ಆಸಕ್ತಿ ಹಾಗೂ ಉತ್ಸಾಹ ಮಾತ್ರ ದಿನದಿಂದ ದಿನಕ್ಕೆ ವೃದ್ಧಿಸುತ್ತಲೆ ಇತ್ತು. ಇವರ ಕಂಠ ದಿನದಿಂದ ದಿನಕ್ಕೆ ಪಕ್ವಗೊಳ್ಳುತ್ತ ಸಾಗಿತು.

ಪರಮೇಶ್ವರ ನಾಯ್ಕ್ ಅವರು ತಮ್ಮ ಬಡತನದ ಬದುಕಿನ ನಡುವೆಯೇ ಹಲವಾರು ಯಕ್ಷಗಾನ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕವಾಗಿ ಇದರ ಬಗೆಗಿನ ಕಾಳಜಿಯನ್ನು, ತನ್ನೊಳಗಿನ ಕಲೆಯ ಹವ್ಯಾಸವನ್ನು ಹಾಗೆ ಮುಂದುವರೆಸಿಕೊಂಡು ಬಂದರು. ದನ ಕರುಗಳನ್ನು ಮೇಯಿಸುತ್ತಲೇ ಯಕ್ಷಗಾನ ಪದ್ಯಗಳನ್ನು ಹಾಡುತ್ತ ತಮ್ಮ ಜೀವನವನ್ನು ನಿರ್ವಹಿಸುತ್ತ ಬಂದರು. ಹೀಗೆ ದನಗಳನ್ನು ಕಾಯುತ್ತಿರುವ ಸಂದರ್ಭದಲ್ಲಿ ಕೃಷ್ಣಗೌಡ್ರು ಮಾದ್ಲುಮನೆ ಎಂಬ ಹವ್ಯಾಸಿ ಕಲಾವಿದರ ಜೊತೆಗೂಡಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕವಾಗಿ ಹಾಡುಗಾರಿಕೆಯನ್ನು ಗಟ್ಟಿಗೊಳಿಸಿಕೊಂಡರು. ನಂತರದಲ್ಲಿ ತಮ್ಮಲ್ಲಿ ಒಡಮೂಡುತ್ತಿರುವ ಕಲಾಸಕ್ತಿಯಿಂದಾಗಿ ಕೃಷ್ಣಜಿ ಬೇಡ್ಕಣೆ ಎಂಬುವವರು ಯಕ್ಷಗಾನ ತರಗತಿಗಳನ್ನು ನಡೆಸುತ್ತಿದ್ದರು. ಬಿಡುವಿನ ಸಮಯದಲ್ಲಿ ಇವರ ಬಳಿ ತೆರಳಿ ತರಬೇತಿಯನ್ನು ಪಡೆಯುವ ಮೂಲಕವಾಗಿ, ಇವರ ಬಳಿಯಲ್ಲಿಯೇ ಯಕ್ಷದೀಕ್ಷೆಯನ್ನು ಪಡೆದು, ಯಕ್ಷಗಾನ ಬದುಕಿನತ್ತ ಮುಖ ಮಾಡಿದರು. ಹೀಗೆ ಸುಮಾರು ದಿನಗಳ ಕಾಲ ಇವರ ತರಬೇತಿ ಶಾಲೆಯಲ್ಲಿ ಹವ್ಯಾಸ ನಡೆಸಿ, ಹಲವಾರು ತೆರನಾಗಿ ಕೌಶಲ್ಯವನ್ನು ಕರಗತ ಮಾಡಿಕೊಂಡರು. ಹೀಗೆ ಯಕ್ಷದೀಕ್ಷೆಯನ್ನು ಪಡೆದು, ಸರಾಗವಾಗಿ ಹಾಡುವುದನ್ನು ಕರಗತ ಮಾಡಿಕೊಂಡಿದ್ದ ಪರಮೇಶ್ವರ ನಾಯ್ಕ್ ಅವರು ಒಂದು ಕಡೆ ಅವಕಾಶಕ್ಕಾಗಿ ಕಾಯುತ್ತಿರುವ ಸಂದರ್ಭದಲ್ಲಿ ತಮ್ಮ ಸ್ನೇಹಿತರಾದ ಮಾದ್ಲುಮನೆ ಭಾಸ್ಕರ್‍ಗೌಡ ಎಂಬುವರೊಂದಿಗೆ ಒಮ್ಮೆ ಶಿರಸಿಯ ಮಾರಿಕಾಂಬ ಜಾತ್ರೆಗೆ ಆಗಮಿಸಿದರು. ಜಾತ್ರೆಯಲ್ಲಿ ಬಿಡಾರ ಹೂಡಿದ್ದ ಯಕ್ಷಗಾನ ಮಂಡಳಿಯತ್ತ ಇವರ ಗಮನವು ಕೇಂದ್ರಿಕೃತವಾಯಿತು. ಹೇಗಾದರೂ ಮಾಡಿ ಇವರ ಸ್ನೇಹ ಹಾಗೂ ವಿಶ್ವಾಸ ಗಳಿಸುವ ಮೂಲಕವಾಗಿ ಇವರ ಕಲಾ ಮಂಡಳಿಯಲ್ಲಿ ಅವಕಾಶ ಗಳಿಸಿಕೊಳ್ಳಬೇಕೆಂಬ ಹಂಬಲವೊಂದು ಇವರಲ್ಲಿ ಮೊಳಕೆಯೊಡೆಯಿತು. ಇದರಿಂದಾಗಿ ಈ ಮಂಡಳಿಯತ್ತ ನಡೆದರು. ಇಲ್ಲಿಯೂ ಕೂಡ ಪರಮೇಶ್ವರ ನಾಯ್ಕರು ತಮ್ಮ ಕಂಠಸಿರಿಯ ಮೂಲಕ ಕಂಪನಿ ಮಾಲಿಕರ ಜೀವನಶೆಟ್ಟಿಯವರ ಮನಗೆದ್ದು ತಮ್ಮ ಕಲಾ ಸೇವೆಯನ್ನು ಮುಂದುವರೆಸಿಕೊಂಡು ಬಂದರು.
ಶ್ರೀಯುತ ಪರಮೇಶ್ವರ ನಾಯ್ಕ್ ಅವರು ತಮ್ಮ ಬಾಲ್ಯದ ಹನ್ನೆರಡನೇ ವಯಸ್ಸಿನಿಂದಲೆ ಯಕ್ಷಗಾನ ಕಲೆಯ ಗೀಳನ್ನು ಮೈಗೂಡಿಸಿಕೊಂಡು ಬಂದವರು. ಅಂದಿನಿಂದ ಇಂದಿನವರೆಗೆ ನಿರಂತರವಾಗಿ ತಮ್ಮ ಸೇವೆಯನ್ನು ಯಕ್ಷಗಾನ ಕ್ಷೇತ್ರಕ್ಕೆ ಸಲ್ಲಿಸುತ್ತಿದ್ದಾರೆ. ಇವರ ಈ ಸೇವೆಯನ್ನು ಗಮನಿಸಿ ನಾಡಿನ ವಿವಿಧ ಭಾಗಗಳಲ್ಲಿ ಹಲವಾರು ಸನ್ಮಾನ ಹಾಗೂ ಗೌರವಗಳು ಇವರಿಗೆ ಲಭಿಸಿವೆ. ಇವರ ಸೇವೆಯನ್ನು ಗಮನಿಸಿ ಕಾನಗೋಡು, ಹಳ್ಳಿಬೈಲು, ಕಕ್ಕುಂಜೆ ಹಾಗೂ ವಿವಿಧೆಡೆಗಳಲ್ಲಿ ಹಲವಾರು ಸಂಘ ಸಂಸ್ಥೆಗಳು ಗೌರವಗಳು ಲಭಿಸಿವೆ. ಹಾಗೆಯೇ ಕರಾವಳಿ ಭಾಗದ ಹೆಸರಾಂತ ‘ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್’ ವತಿಯಿಂದಲೂ ಇವರಿಗೆ ಗೌರವ ಸನ್ಮಾನಗಳು ಲಭಿಸಿವೆ. ಹಾಗೆಯೇ ಸಿದ್ಧಾಪುರ ತಾಲ್ಲೂಕಿನ ತರಳಿಮಠದ ವತಿಯಿಂದ ‘ತರಳಿಮಠ’ ಪ್ರಶಸ್ತಿಯು ಶ್ರೀಯುತ ಪರಮೇಶ್ವರ ನಾಯ್ಕ್ ಅವರಿಗೆ ಲಭಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version