ನೆಲದನಿ

ಯಕ್ಷಗಾನ ಸ್ತ್ರೀವೇಷಧಾರಿ ಬೇಳಂಜೆ ಸುಂದರ್ ನಾಯ್ಕ್ ಅವರ ಕಲಾ ಬದುಕಿನ ಸಂಕಥನ

Published

on

ರ್ನಾಟಕದ ಸಾಂಸ್ಕøತಿಕ ವೈಭವಕ್ಕೆ ಜಾನಪದ ಕ್ಷೇತ್ರದ ಕೊಡುಗೆ ಅಪಾರವಾಗಿದೆ. ಕನ್ನಡ ನಾಡು, ನುಡಿಯ ಶ್ರೀಮಂತಿಕೆಗೆ ಕೇವಲ ಶಿಷ್ಟ ಸಾಹಿತ್ಯವಷ್ಟೆ ಕಾರಣವಲ್ಲ. ಅದಕ್ಕಿಂತ ಮಹತ್ತರವಾದುದು ಪ್ರಾದೇಶಿಕ ಬದುಕಿನೊಂದಿಗೆ ಬೆರೆತು, ನೆಲಮೂಲದ ದೇಶಿ ಸೊಗಡನ್ನು ತೆರೆದಿಡುವ ಜನಪದ ಸಾಹಿತ್ಯವು ಕೂಡ ನಾಡು, ನುಡಿಯ ಹಿರಿಮೆ ಗರಿಮೆಯನ್ನು ಎತ್ತಿಹಿಡಿಯುವಲ್ಲಿ ಮಹತ್ತರ ಪಾತ್ರವನ್ನು ನಿರ್ವಹಿಸಿದೆ. ಜಾನಪದ ಪ್ರಕಾರವು ಪ್ರಾದೇಶಿಕವಾಗಿ ಭಿನ್ನತೆಯನ್ನು ಪಡೆದಿದೆ. ಆದರೂ ತನ್ನೊಳಗೆ ಪ್ರಾದೇಶಿಕತೆಯೊಂದಿಗೆ ವಿಶ್ವಾತ್ಮಕವಾಗಿ ತುಡಿಯುವ ಭ್ರಾತೃತ್ವ ಗುಣವನ್ನು ಕೇಂದ್ರಿಕರಿಸಿಕೊಂಡಿರುತ್ತದೆ. ಈ ಕಾರಣದಿಂದಾಗಿ ಶಿಷ್ಟ ಸಾಹಿತ್ಯದ ಸೀಮಿತ ಎಲ್ಲೆಯನ್ನು ಮೀರಿ, ಸಕಲತೆಯೊಂದಿಗೆ ಅನುಸಂಧಾನಗೊಳ್ಳುವ ವಿಶಿಷ್ಟ ಗುಣ ಸ್ವಭಾವವು ಜಾನಪದಕ್ಕಿದೆ. ಹೀಗಾಗಿ ಕನ್ನಡ ನಾಡು, ನುಡಿಯ ಶ್ರೀಮಂತಿಗೆ ಜಾನಪದದ ಕೊಡುಗೆ ಅಪಾರವಾಗಿದೆ.ಇಂತಹ ಜಾನಪದ ಸಿರಿವಂತಿಕೆಯ ಕಲೆಗಳಲ್ಲಿ ಯಕ್ಷಗಾನವು ಒಂದು ವಿಶಿಷ್ಟ ಪ್ರಕಾರವಾಗಿ ಗುರುತಿಸಿಕೊಂಡಿದೆ. ಇಂತಹ ಶ್ರೀಮಂತ ಜಾನಪದ ಕಲೆಯಾಗಿರುವ ಯಕ್ಷಗಾನದ ಅನನ್ಯತೆಯನ್ನು ಕಾಪಾಡಿಕೊಂಡು ಬಂದ ತಳಸಮುದಾಯದ ಕಲಾವಿದರಲ್ಲಿ ಸುಂದರ ನಾಯ್ಕ್ ಅವರು ಒಬ್ಬರಾಗಿದ್ದಾರೆ.

ಶ್ರೀಯುತ ಸುಂದರ ನಾಯ್ಕ್ ಅವರು ಶ್ರೀ ಕಾಮಿನಾಯ್ಕ್ ಮತ್ತು ಶ್ರೀಮತಿ ಸುಶೀಲಬಾಯಿ ದಂಪತಿಗಳ ಸುಪುತ್ರರಾಗಿ 1963 ರಲ್ಲಿ ಬೇಳಂಜೆ ಎಂಬಲ್ಲಿ ಜನಿಸಿದರು. ಸುಂದರ ನಾಯ್ಕ್ ಶಾಲಾ ಶಿಕ್ಷಣವನ್ನು ಐದನೇ ತರಗತಿಗೆ ಮೊಟಕುಗೊಳಿಸಿ, ಯಕ್ಷರಂಗ ಕ್ಷೇತ್ರದತ್ತ ಮುಖಮಾಡಿದರು. ಶ್ರೀಯುತರ ತಂದೆಯವರಾದ ಕಾಮಿನಾಯ್ಕ್ ಅವರು ಯಕ್ಷಗಾನ ಪ್ರವೃತ್ತಿಯಲ್ಲಿ ಮುಂದುವರೆದಿದ್ದು, ಇವರ ಪ್ರೇರಣೆಯಿಂದಾಗಿ ಸುಂದರನಾಯ್ಕ್ ಕೂಡ ಯಕ್ಷಗಾನ ಕ್ಷೇತ್ರದತ್ತ ಮುಖ ಮಾಡಿದರು. ಇವರ ವಂಶಜರಲ್ಲಿ ಬಹತೇಕರು ಯಕ್ಷಗಾನ ಪರಂಪರೆಯಿಂದಲೆ ಬಂದವರಾಗಿದ್ದಾರೆ. ಆದ್ದರಿಂದ ಈ ಕಲೆಯು ಇವರ ಮೇಲೆ ಬಾಲ್ಯದ ದಿನಗಳಿಂದಲೂ ತನ್ನ ಪ್ರೇರಣೆ ಮತ್ತು ಪ್ರಭಾವವನ್ನು ಬೀರಿದೆ. ಹೀಗಾಗಿ ಇದು ರಕ್ತಗತವಾಗಿ ಬಂದ ಕಲೆಯೂ ಹೌದು. ಇವರ ದೊಡ್ಡಪ್ಪ ಬೇಳಂಜೆ ತಿಮ್ಮಪ್ಪನಾಯ್ಕರು ಯಕ್ಷಗಾನ ಲೋಕದ ಚಿರಪರಿಚಿತ ಮದ್ದಳೆಗಾರರಾಗಿದ್ದರು. ಹಾಗೆಯೇ ಇವರ ಹತ್ತಿರದ ರಕ್ತ ಸಂಬಂಧಿಕರು ಹಾಗೂ ಬಾವನವರಾಗಿರುವ ಪೇತ್ರಿ ಮಾಧುನಾಯ್ಕರು ಯಕ್ಷಗಾನ ಕಲಾಲೋಕದ ಉತ್ತಮ ವೇಷಧಾರಿಗಳಾಗಿ ಗುರುತಿಸಿಕೊಂಡವರು. ಇವರೆಲ್ಲರ ಪ್ರೇರಣೆ ಮತ್ತು ಪ್ರಭಾವವು ಇವರ ಮೇಲೆ ಸಾಕಷ್ಟು ಪ್ರಭಾವವನ್ನು ಬೀರಿತು. ಇದರಿಂದ ಯಕ್ಷಗಾನ ಎಂಬುದು ವಂಶ ಪಾರಂಪರ್ಯದ ಕಲೆಯಾಗಿ ಇವರಿಗೆ ಲಭಿಸಿದೆ ಮತ್ತು ಸಿದ್ಧಿಸಿದೆ.ಸುಂದರನಾಯ್ಕ್ ಅವರು ಶಾಲಾ ಶಿಕ್ಷಣದಿಂದ ವಂಚಿತರಾಗಿ ಯಕ್ಷಗಾನ ಲೋಕದ ಕಡೆಗೆ ವಿಶೇಷವಾದ ಆಸಕ್ತಿಯನ್ನು ಗಳಿಸಿಕೊಂಡರು. ಈ ಕಲೆಯನ್ನು ಕಲೆಯುವುದಕ್ಕೆ ಯಾವುದೇ ಗುರುವನ್ನು ಹರಸಿಕೊಂಡು ಶ್ರೀಯುತರು ಅಲೆದಾಡಿರುವುದಿಲ್ಲ. ತಮ್ಮ ಮನೆಯಲ್ಲಿಯೇ ತಂದೆ ಹಾಗೂ ಇತರೆ ಸಂಬಂಧಿಕರು ಕಲಾವಿದರಾದ ಕಾರಣ ಈ ಕಲೆಯು ಸುಲಭವಾಗಿಯೇ ಲಭಿಸಿತು. ಸುಂದರನಾಯ್ಕ್ ಅವರು ತಮ್ಮಲ್ಲಿದ್ದ ಕಲಾಸಕ್ತಿಯಿಂದಾಗಿ ಹಲವಾರು ಕಡೆಗಳಲ್ಲಿ ಅಲೆದಾಡಿ, ಹಲವಾರು ಪ್ರದರ್ಶನಗಳನ್ನು ವೀಕ್ಷಿಸಿ, ನೋಡು ನೋಡುತ ಕಲೆಯನ್ನು ಕರಗತ ಮಾಡಿಕೊಂಡವರು. ಇವರಿಗೆ ತಂದೆಯವರು ಸಾಕಷ್ಟು ಪ್ರೇರಣೆ ಹಾಗೂ ಪ್ರೋತ್ಸಾಹವನ್ನು ನೀಡಿದರು. ಇದರಿಂದಾಗಿ ಈ ಕಲೆಯ ಬಗೆಗೆ ಇನ್ನಷ್ಟು ಆಸಕ್ತಿ ಮತ್ತು ಉತ್ಸಾಹ ಲಭಿಸಿತು.
ಶಾಲಾ ಶಿಕ್ಷಣಕ್ಕೆ ಐದನೇ ತರಗತಿಗೆ ವಿದಾಯ ಹೇಳಿರುವ ಸಂದರ್ಭದಲ್ಲಿ ಇದನ್ನು ಗಮನಿಸಿದಂತಹ ಶಂಕರನಾರಾಯಣ ಸಾಮಗರ ಪ್ರೇರಣೆ ಹಾಗೂ ಒತ್ತಾಸೆಗೆ ಪ್ರತಿಯಾಗಿ ತಮ್ಮ ಹದಿಮೂರನೇ ವಯಸ್ಸಿಗೆ ಯಕ್ಷಗಾನ ವೃತ್ತಿ ಜೀವನವನ್ನು ಆರಂಭಿಸಿದರು. ಇಲ್ಲಿಂದ ಆರಂಭವಾದ ಅವರ ಕಲಾ ಬದುಕು ವಿವಿಧ ಪಾತ್ರಗಳ ಮೂಲಕವಾಗಿ ಯಕ್ಷಗಾನ ಲೋಕದಲ್ಲೊಂದು ಮಹತ್ತರ ಸಾಧನೆಯತ್ತ ಮುಂದುವರೆಯಿತು. ಇವರಿಗೆ ಪ್ರಮುಖವಾದ ಕಲಾ ಪ್ರಪಂಚದ ಗುರುಗಳೆಂದರೆ ಇವರ ತಂದೆಯವರು ಒಬ್ಬರಾದರೆ, ಮತ್ತೊಬ್ಬರು ಬುಕ್ಕಿಗುಡ್ಡೆ ಮಹಾಬಲನಾಯ್ಕರು. ಇವರಿಬ್ಬರನ್ನು ತನ್ನ ಗುರುವಾಗಿ ಸ್ವೀಕರಿಸಿದ ಸುಂದರನಾಯ್ಕ್ ಈ ಕ್ಷೇತ್ರದಲ್ಲಿ ಮಹತ್ತರವಾದ ಸಾಧನೆಗೆ ಮುಂದಾದರು.

ಸುಂದರ ನಾಯ್ಕ್ ಅವರು ಯಕ್ಷಗಾನ ಕಲಾ ಪ್ರಕಾರವನ್ನು ಪ್ರವೇಶಿಸಿದ ತರುವಾಯದಲ್ಲಿ ಇವರು ಆಯ್ಕೆ ಮಾಡಿಕೊಂಡ ಪಾತ್ರದ ಪ್ರಕಾರವೆಂದರೆ ಅದು ಸ್ತ್ರೀವೇಷ. ಸ್ತ್ರೀವೇಷಧಾರಿಯಾಗಿಯೇ ತಮ್ಮ ನಿರಂತರವಾದ ಮೂವತ್ತೈದು ವರ್ಷಗಳ ಸೇವೆಯನ್ನು ಸಲ್ಲಿಸಿದರು. ಇವರು ಸ್ತ್ರೀವೇಷವನ್ನು ಆಯ್ದುಕೊಳ್ಳುವುದಕ್ಕೆ ಪ್ರಮುಖವಾದ ಕಾರಣವೆಂದರೆ, ಶ್ರೀಯುತರ ಆಂಗಿಕ ವಿನ್ಯಾಸ, ಸ್ವರ ನಿರೂಪಣೆ, ರಂಗನಡೆ, ಸ್ತ್ರೀವೇಷದ ಬಿರುಸು, ಸೆಡಕುಗಳು ಇವರನ್ನು ಹೆಚ್ಚು ಈ ಕ್ಷೇತ್ರಕ್ಕೆ ಆಕರ್ಷಿಸಿತು. ಸುಂದರನಾಯ್ಕ್ ಅವರು ಗಂಭೀರವಾದ ಭಾವಾಭಿವ್ಯಕ್ತಿಯ ಸ್ತ್ರೀಭೂಮಿಕೆಯಲ್ಲಿ ಇವರದು ವಿಶೇಷವಾದ ಛಾಪು. ಇವರಲ್ಲಿ ಅಂತರ್ಗತವಾಗಿರುವ ಈ ಮಹಿಳಾ ಕೌಶಲ್ಯಗಳು ಸ್ತ್ರೀಪಾತ್ರಕ್ಕೆ ನ್ಯಾಯ ಒದಗಿಸುವಂತಿತ್ತು. ಹೀಗಾಗಿ ಇವರು ಇದೇ ಪ್ರಕಾರದಲ್ಲಿ ಮುಂದುವರೆದು ದಿನದಿಂದ ದಿನಕ್ಕೆ ರಂಜನೀಯವಾದ ಶೈಲಿಯಲ್ಲಿ ಹಲವಾರು ಪ್ರದರ್ಶನಗಳನ್ನು ನೀಡುತ್ತ ಬಂದರು. ಹೀಗಾಗಿ ಸುಂದರನಾಯ್ಕ್ ಅವರು ಸ್ತ್ರೀವೇಷದ ಮೂಲಕವಾಗಿಯೇ ತಮ್ಮ ಕಲಾ ಸೇವೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ.
ಶ್ರೀಯುತ ಸುಂದರ ನಾಯ್ಕ್ ಅವರು ಹೆಸರಾಂತ ‘ಮಂದಾರ್ತಿ ಕಲಾ ಮೇಳ’ದಲ್ಲಿ ಹದಿನೆಂಟು ವರ್ಷಗಳ ನಿರಂತರವಾದ ಸೇವೆಯನ್ನು ಸಲ್ಲಿಸಿರುತ್ತಾರೆ. ನಂತರದಲ್ಲಿ ‘ಪೆರ್ಡೂರು ಕಲಾ ಮೇಳ’ದಲ್ಲಿ ಒಂಭತ್ತು ವರ್ಷಗಳ ಕಾಲ ಯಕ್ಷಸೇವೆಯನ್ನು ಸಲ್ಲಿಸಿ, ಸಾಕಷ್ಟು ಜನ ಮನ್ನಣೆ ಹಾಗೂ ಕೀರ್ತಿಯನ್ನು ಪಡೆದುಕೊಂಡಿರುತ್ತಾರೆ. ಹೀಗೆ ಮುಂದುವರೆದ ಕಲಾ ಸೇವೆಯು ಸಾಲಿಗ್ರಾಮದಲ್ಲಿ ಮೂರು ವರ್ಷಗಳು, ಗಾಲಾಡಿಯಲ್ಲಿ ಎರಡು ವರ್ಷ, ಹಾಗೆಯೇ ಕಮಲಶಿಲೆಯಲ್ಲಿ ಒಂದು ವರ್ಷಗಳ ಸೇವೆಯನ್ನು ಸಲ್ಲಿಸಿ ನಂತರದ ದಿನಮಾನಗಳಲ್ಲಿ ಹಿರಿಯಡಕದ ಕಲಾಮೇಳದಲ್ಲಿ ಎರಡು ವರ್ಷಗಳ ಕಾಲ ಸೇವೆಯನ್ನು ನೀಡಿರುತ್ತಾರೆ. ಇವರು ಸುಮಾರು ನಲವತ್ತು ವರ್ಷಗಳ ಕಾಲ ನಿರಂತರವಾದ ಕಲಾಬದುಕಿನ ಸೇವೆಯಲ್ಲಿ ಅನುಪಮವಾದ ಯಕ್ಷಕೃಷಿಯನ್ನು ಕೈಗೊಂಡಿರುತ್ತಾರೆ.

ಇವರ ಈ ಕಲಾ ಸೇವೆಯನ್ನು ಗಮನಿಸಿದಂತಹ ಹಲವಾರು ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿವೆ. ಹಲವಾರು ಗೌರವಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಹಾಗೆಯೇ ‘ಬಣ್ಣ ಬಣ್ಣದ ಬದುಕು ಚಲನಚಿತ್ರ ತಂಡ’ವು ಇವರ ಸಾಧನೆಯನ್ನು ಗಮನಿಸಿ, ಮೆಚ್ಚಿಕೆಯಿಂದಾಗಿ ಸನ್ಮಾನ ಪತ್ರವನ್ನು ನೀಡಿ ಗೌರವಿಸಿದೆ. ನಂತರದಲ್ಲಿ ಹಲವಾರು ಪ್ರಶಸ್ತಿಗಳು ಇವರ ಮುಡಿಗೇರಿವೆ. ಹೀಗೆ ಯಕ್ಷಗಾನ ಕಲಾ ಸೇವೆಗಾಗಿ ಶ್ರೀಯುತ ಸುಂದರ ನಾಯ್ಕ್ ಅವರಿಗೆ ಹಲವಾರು ಸನ್ಮಾನ, ಗೌರವ, ಪುರಸ್ಕಾರ ಹಾಗೂ ಪ್ರಶಸ್ತಿಗಳು ಲಭಿಸಿವೆ.
ಶ್ರೀಯುತ ಸುಂದರ ನಾಯ್ಕ್ ಅವರು ಪತ್ನಿ ಆಶಾ, ಮಕ್ಕಳಾದ ಸತೀಶ್, ಅನಿಲ ಹಾಗೂ ಶ್ಯಾಮರೊಂದಿಗೆ ಜೀವನವನ್ನು ಸಾಗಿಸುತಿದ್ದು, ಕಲೆಯನ್ನು ಒಂದು ಪ್ರವೃತ್ತಿಯಾಗಿ ಮುನ್ನಡೆಸಿಕೊಂಡು ಸಾಗುತ್ತಿದ್ದಾರೆ. ಹೀಗೆ ಕಲೆ ಮತ್ತು ಕಲಾವಿದನ ನಡುವಿನ ನಿರಂತರ ಕೊಂಡಿಯು ಇವರ ಮಧ್ಯೇ ಸುಮಾರು ನಲವತ್ತು ವರ್ಷಗಳಿಂದ ನಿರಂತರವಾಗಿ ಸಾಗಿಬಂದಿದೆ. ಇಂದಿಗೂ ಶ್ರೀಯುತ ಸುಂದರ್‍ನಾಯ್ಕ್ ಅವರು ಯಕ್ಷಗಾನ ಕಲಾರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡು ಮುನ್ನಡೆಯುತ್ತಿದ್ದಾರೆ. ಇವರದು ಕಲೆಯೊಂದಿಗೆ ನಿರಂತರವಾದ ಒಡನಾಟವಾಗಿದೆ. ಆದ್ದರಿಂದ ತಮ್ಮ ಇಳಿ ವಯಸ್ಸಿನಲ್ಲಿಯೂ ತುಂಬು ಹುಮ್ಮಸ್ಸಿನಿಂದ ಕಲೆಯೊಂದಿಗೆ ಸೆಣಸಾಟವನ್ನು ನಡೆಸುತ್ತಿದ್ದಾರೆ. ಇದು ಹೀಗೆ ಮುಂದುವರೆದು, ಇವರು ಯಕ್ಷಗಾನ ಕೃಷಿರಂಗಕ್ಕೆ ಇನ್ನಷ್ಟು ಸೇವೆಯನ್ನು ಕರುಣಿಸಲಿ ಎಂಬುದು ನಮ್ಮೆಲ್ಲರ ಹಾರೈಕೆ.

Leave a Reply

Your email address will not be published. Required fields are marked *

Trending

Exit mobile version