ನೆಲದನಿ
ರಂಗಭೂಮಿಯಲ್ಲೊಂದು ಯುವಪ್ರತಿಭೆ : ನೇತ್ರಾವತಿ ಎಂಬ ಕಲಾವಿದೆಯ ಸಂಕಥನ
ಕಲೆಯೆಂಬುದಕ್ಕೆ ಒಂದು ನಿರ್ದಿಷ್ಟವಾದ ಚೌಕಟ್ಟು ಇರುವುದಿಲ್ಲ. ಹಾಗೆಯೇ ಇದಕ್ಕೆ ಬಂಧನವು ಇರುವುದಿಲ್ಲ. ಹೀಗಾಗಿ ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ವಿಶಿಷ್ಟವಾದ ಕಲೆಯು ಅಂತರ್ಗತವಾಗಿರುತ್ತದೆ. ಇಂತಹ ಸುಪ್ತಕಲೆಗೆ ಪ್ರೇರಣೆ ಮತ್ತು ಪ್ರಚೋದನೆ ಸಿಕ್ಕಾಗ ಮಾತ್ರ ಅದು ತನ್ನ ಸತ್ವವನ್ನು ಅನಾವರಣಗೊಳಿಸಲಿಕ್ಕೆ ಸಹಕಾರಿಯಾಗುತ್ತದೆ. ಆದರೆ ಪ್ರೇರಣೆ, ಪ್ರಭಾವ ಮತ್ತು ಅವಕಾಶ ವಂಚನೆಯಿಂದಾಗಿ ಇದು ಎಷ್ಟೊ ಕಲಾ ಕುಸುರಿಗಳು ಎಲೆಮರೆಯ ಕಾಯಿಯಂತಿವೆ ಮಾತ್ರವಲ್ಲದೆ ಬಹುತೇಕ ಕಲಾ ಪ್ರತಿಭೆಗಳು ಅವಕಾಶ ವಂಚನೆಯಿಂದ ಕರಗಿಹೋಗಿವೆ. ಆದರೆ ಕಲಾ ಜಗತ್ತಿನೊಂದಿಗೆ ಬಾಲ್ಯದ ನಂಟು ಬೆಳೆಸಿಕೊಂಡ ನೇತ್ರಾವತಿ ಎಂಬ ಬಾಲ ಕಲಾವಿದೆಯು ರಂಗಭೂಮಿಯೊಂದಿಗೆ ನಿಕಟವಾದ ಬಾಂಧವ್ಯವನ್ನು ಬೆಳೆಸಿಕೊಂಡು ಇಂದು ಕಲಾ ಲೋಕಕ್ಕೆ ತನ್ನದೆ ಆದ ಕೊಡುಗೆ ನೀಡುವ ಹಂಬಲವೊತ್ತು ರಂಗಭೂಮಿಯತ್ತ ಮುನ್ನಡೆಯುತ್ತಿದ್ದಾರೆ. ಅವರ ಕಲಾ ಬದುಕಿನ ಒಂದಿಷ್ಟು ತುಣುಕುಗಳನ್ನು ಮೆಲುಕು ಹಾಕುವುದು ಪ್ರಸ್ತುತ ಲೇಖನದ ಆಶಯವಾಗಿದೆ.
ಕುಮಾರಿ ನೇತ್ರಾವತಿ ಅವರು ಏಪ್ರಿಲ್ 4, 1998 ರಂದು ಬಳ್ಳಾರಿ ಜಿಲ್ಲಾ ಹೊಸಪೇಟೆ ತಾಲ್ಲೂಕು ಮರಿಯಮ್ಮನಹಳ್ಳಿ ಎಂಬ ಗ್ರಾಮದಲ್ಲಿ ಶ್ರೀ ನಾರಾಯಣಪ್ಪ ಹಾಗೂ ಶ್ರೀಮತಿ ಗಂಗಮ್ಮ ದಂಪತಿಗಳ ಮಗಳಾಗಿ ಜನಿಸಿದರು. ಬಾಲ್ಯದ ದಿನಗಳಿಂದ ಕಾಡುವ ಬಡತನದ ಮಧ್ಯೇ ಬೆಳೆದ ನೇತ್ರಾವತಿಗೆ ಶಿಕ್ಷಣ ಪಡೆಯುವುದು ಕೂಡ ಕಷ್ಟ ಸಾಧ್ಯವಾಗಿರುತ್ತಿತ್ತು. ಇದಕ್ಕೆ ಕಾರಣ ಇವರ ತಂದೆ ತಾಯಿಗಳು ಜೀವನ ಸಾಗಿಸಲು ಕಬ್ಬು ಕಡಿಯುವ ಕೂಲಿಗಾಗಿ ದೂರದ ಊರುಗಳಿಗೆ ಹೊಲಸೆ ಹೋಗುತ್ತಿದ್ದರು. ಈ ಸಮಯದಲ್ಲಿ ತಮ್ಮ ಜೊತೆಗೆ ಮಗಳನ್ನು ಕರೆದುಕೊಂಡು ಹೋಗುವ ಕಾರಣ ಶಿಕ್ಷಣಕ್ಕೆ ಅಡ್ಡಿಯಾಗುತ್ತಿತ್ತು. ಇಂತಹ ಸಂದರ್ಭದಲ್ಲಿ ಇವರ ಮನೆಯ ಸಮೀಪವೇ ಇದ್ದ ಮಂಜಮ್ಮ ಜೋಗತಿ ಮತ್ತವರ ಸಂಗಡಿಗರೊಂದಿಗೆ ನೇತ್ರಾವತಿಯು ಹೆಚ್ಚು ಆಪ್ತತೆಯನ್ನು ಗಳಿಸಿಕೊಂಡು ಅವರ ಒಡನಾಟದಲ್ಲಿಯೇ ಹೆಚ್ಚು ಸಮಯನ್ನು ವಿನಿಯೋಗಿಸುತ್ತ ಬಂದರು. ಹೀಗಾಗಿ ಮಂಜಮ್ಮನ ಸಾಕು ಮಗಳಾದ ಗೌರಿಯೊಂದಿಗೆ (ಗೌರಮ್ಮ ಜೋಗತಿ) ನಿಕಟವಾದ ಬಾಂಧವ್ಯವನ್ನು ಬೆಳೆಸಿಕೊಂಡ ನೇತ್ರಾವತಿ ಬರುಬರುತ್ತ ಮಂಜಮ್ಮ ಜೋಗುತಿಯ ಮನೆಯ ಮಗಳಾಗಿ ನಡೆದುಕೊಂಡಳು. ನಂತರದ ದಿನಗಳಲ್ಲಿ ನೇತ್ರಾವತಿಯ ತಾಯಿಯಾದ ಗಂಗಮ್ಮನವರು ಖಾಯಿಲೆಗೆ ತುತ್ತಾಗಿ ಸಾವಿಗೆ ಶರಣಾದರು. ಇಂತಹ ಸಂದರ್ಭದಲ್ಲಿ ತಂದೆಯಿಂದ ಸರಿಯಾದ ಸ್ಪಂದನೆ ಸಿಗದ ಕಾರಣ ಮಂಜಮ್ಮ ಜೋಗತಿಯು ತನ್ನ ಹೃದಯ ವೈಶಾಲ್ಯತೆಯನ್ನು ಮೆರೆದು ಹೆತ್ತತಾಯಿಯ ಸ್ಥಾನವನ್ನು ತುಂಬುವ ಮೂಲಕ ನೇತ್ರಾಳಿಗೆ ಆಸರೆಯಾಗಿ ನಿಂತಿದ್ದಾರೆ.
ಮಂಜಮ್ಮ ಜೋಗತಿಯದ ಜೇನುಗೂಡಿನಂತಹ ಕೂಡು ಕುಟುಂಬ. ಇದು ಅನಾಥರಿಗೆ ಮತ್ತು ಆಶ್ರಯ ವಂಚಿತರಾದವರಿಗೆ ಅಭಯ ನೀಡುವ ತಾಣವಾಗಿದೆ. ಹೀಗಾಗಿ ನೇತ್ರಾವತಿಯಂತಹ ಎಷ್ಟೋ ಜೀವಗಳಿಗೆ ಇಲ್ಲಿ ಆಶ್ರಯ ಸಿಕ್ಕಿದೆ. ಹೀಗಾಗಿ ನೇತ್ರಾವತಿಯು ಕೂಡ ಈ ಮನೆಯ ಶಾಶ್ವತ ಸದಸ್ಯಳಾಗಿ, ಮಂಜಮ್ಮ ಜೋಗತಿ ಮಗಳಾಗಿ ತನ್ನ ನೆಲೆಯನ್ನು ಕಂಡುಕೊಂಡಳು. ಮಂಜಮ್ಮ ಜೋಗತಿ ಮತ್ತವರ ಒಡನಾಡಿಗಳು ರಂಗಭೂಮಿಯೊಂದಿಗೆ ಬಲವಾದ ನಂಟು ಹೊಂದಿದವರಾಗಿದ್ದಾರೆ. ಹೀಗಾಗಿ ಹಲವಾರು ವರ್ಷಗಳಿಂದ ಸಾಮಾಜಿಕ ಮತ್ತು ಪೌರಾಣಿ ನಾಟಕಗಳ ಮೂಲಕವಾಗಿ ತಮ್ಮ ಕಲಾ ಸೇವೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಹೀಗಾಗಿ ಇವರ ಒಡನಾಟದಲ್ಲಿಯೇ ಮುಂದುವರೆದ ನೇತ್ರಾವತಿಯೂ ರಂಗಭೂಮಿ ಹಾಗೂ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಮೊದಲು ಮರಿಯಮ್ಮಹಳ್ಳಿಯಲ್ಲಿ ಪ್ರದರ್ಶನಗೊಂಡ ‘ಕರಿಬಂಟ’ ಎಂಬ ನಾಟಕದ ಮೂಲಕ ರಂಗಲೋಕ ಪ್ರವೇಶಿಸಿದ ಇವರು ಇದರಲ್ಲಿ ಹಲವಾರು ಚಿಕ್ಕ ಚಿಕ್ಕ ಪಾತ್ರಗಳು ಮತ್ತು ದೇವಿಯಂತಹ ವಿಶಿಷ್ಟ ಪಾತ್ರದ ಮಾಲಕವಾಗಿ ರಂಗ ಪ್ರೇಕ್ಷಕರ ಮನಗೆದ್ದರು. ನಂತರದಲ್ಲಿ ಪೌರಾಣಿಕ ನಾಟಕವಾಗಿರುವ ‘ಶಿವಾರ್ಜುನರ ಯುದ್ಧ’ ಎಂಬ ನಾಟಕದಲ್ಲಿ ಸಹದೇವನ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿದ ಕೀರ್ತಿಯು ನೇತ್ರಾವತಿಗೆ ಸಲ್ಲುತ್ತದೆ.
ಹೀಗೆ ರಂಗಭೂಮಿಯೊಂದಿಗೆ ನಿರಂತರವಾದ ನಂಟನ್ನು ಬೆಳೆಸಿಕೊಂಡು ಬಂದಿರುವ ನೇತ್ರಾವತಿಗೆ ಈ ಕ್ಷೇತ್ರದಲ್ಲಿಯೇ ತನ್ನ ಸೇವೆಯನ್ನು ಸಲ್ಲಿಸಬೇಕೆಂಬ ಆದಮ್ಯ ಆಸೆಯಿಂದಾಗಿ ರಂಗಭೂಮಿಯೊಂದಿಗೆ ನಿರಂತರ ನಂಟು ಬೆಳೆಸಿಕೊಂಡಿದ್ದಾರೆ. ಇದರಿಂದಾಗಿ 2017-18ನೇ ಸಾಲಿನಲ್ಲಿ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಕನ್ನಡ ಪಠ್ಯವಾಗಿರುವ ‘ಬೋಳೆ ಶಂಕರ’ ಮತ್ತು ‘ಕೃಷ್ಣೆಗೌಡರ ಆನೆ’ ನಾಟಕಗಳಿಗೆ ಪದರ್ಶನ ನೀಡುವ ‘ಕಾಲೇಜು ಸಂಚಾರ’ ಕಾರ್ಯಕ್ರಮದಲ್ಲಿ ಸುಮಾರು 45 ದಿನಗಳ ನಿರಂತರ ಪ್ರದರ್ಶನ ನೀಡಿರುತ್ತಾರೆ. ಬೋಳೆಶಂಕರ ನಾಟಕದಲ್ಲಿ ಬೋಳೆಶಂಕರನ ಹೆಂಡತಿಯ ಪಾತ್ರವನ್ನು, ಕೃಷ್ಣೇಗೌಡರ ಆನೆ ನಾಟಕದಲ್ಲಿ ವೇಲಾಯುದನ ಹೆಂಡತಿ ಮತ್ತು ಸಾಮಾನ್ಯ ಜನರ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿರುತ್ತಾರೆ. ನಂತರದಲ್ಲಿ ಕರ್ನಾಟಕ ನಾಟಕ ಅಕಾಡೆಮಿಯಿಂದ ನಡೆಸಿರುವ ‘ಬೊಮ್ಮನಹಳ್ಳಿ ಕಿನ್ನರಿಜೋಗಿ’ ನಾಟಕದಲ್ಲಿ ‘ಜತ್ತಕ್ಕ’ನ ಪಾತ್ರಕ್ಕೂ ಜೀವತುಂಬಿದ ಕೀರ್ತಿಯು ನೇತ್ರಾವತಿಗೆ ಸಲ್ಲುತ್ತದೆ. ನಂತರದಲ್ಲಿ ‘ಮಾಯಕುರ್ಚಿ’ ಎಂಬ ನಾಟಕದಲ್ಲಿ ಸೂತ್ರಧಾರನಾಗಿ ಮತ್ತು ಮುಖ್ಯ ಪಾತ್ರವಾದ ನಾಟಕಕಾರ್ತಿಯಾಗಿಯೂ ತನ್ನ ಪಾತ್ರ ಪ್ರದರ್ಶನ ನೀಡಿರುತ್ತಾರೆ. ಹೀಗೆ ಮುಂದುವರೆದ ರಂಗಭೂಮಿಯ ನಂಟಿನಿಂದಾಗಿ ಹಲಾವರು ಕಡೆಗಳಲ್ಲಿ ರಂಗ ಪ್ರದರ್ಶನ ನೀಡಿರುತ್ತಾರೆ. ಇವರ ಈ ರಂಗ ಚಾತುರ್ಯತೆ ಮತ್ತು ಪಾತ್ರ ನಿರ್ವಹಣೆಯ ಕೌಶಲ್ಯವನ್ನು ಕಂಡು ಹಲವಾರು ಕಡೆಗಳಲ್ಲಿ ಇವರಿಗೆ ಅವಕಾಶಗಳು ಲಭಿಸಿವೆ. ಇದರಿಂದಾಗಿ ‘ಗೋಕರ್ಣದ ಗೌಡಸಾನಿ’ ಎಂಬ ನಾಟಕದಲ್ಲಿ ಮುಖ್ಯ ಪಾತ್ರಧಾರಿಯಾಗಿ ಗುರುತಿಸಿಕೊಂಡಿದ್ದಾರೆ. ಇದೇ ನಾಟಕದಲ್ಲಿ ಇವರ ಇಬ್ಬರು ಸಾಕುತಾಯಂದಿರುಗಳಾದ ಮಂಜಮ್ಮ ಮತ್ತು ಗೌರಿಯರು ಸೂಳೆಯರ ಪಾತ್ರದಲ್ಲಿ ನಾಟಕಕ್ಕೆ ಮೆರಗು ನೀಡಿರುತ್ತಾರೆ. ತಾಯಿ ಮಕ್ಕಳ ಈ ರಂಗಭೂಮಿ ಪ್ರದರ್ಶನವು ಇಂದು ನಿರಂತರವಾಗಿಯೇ ಸಾಗುತ್ತಿದೆ.
ಹೆತ್ತತಾಯಿಯನ್ನು ಕಳೆದುಕೊಂಡ ನೇತ್ರಾವತಿಗೆ ತಾಯಿ ಇಲ್ಲದ ಭಾವನೆಯು ಕಾಡದಂತೆ ಈ ಇಬ್ಬರು ತಾಯಂದಿರು ಅಭಯವಾಗಿ ನಿಂತಿದ್ದಾರೆ. ಈ ಇಬ್ಬರು ತಾಯಂದಿರು ಮಾತ್ರವಲ್ಲದೆ ಮಂಜಮ್ಮನ ಗೂಡೊಳಗಿನ ಹಲವಾರು ತಾಯಂದಿರ ಪ್ರೀತಿಯೂ ಕೂಡ ನೇತ್ರಳಿಗಿದೆ. ಈ ತಾಯಂದಿರ ಹಾರೈಕೆಯ ಮಧ್ಯೇ ರಂಗಭೂಮಿಯಲ್ಲಿಯೇ ಸಾಧಿಸುವ ಚಲವೊತ್ತು ಮುನ್ನಡೆಯುತ್ತಿದ್ದಾರೆ. ಪ್ರಸ್ತುತದಲ್ಲಿ ಬಿ.ಎ ಪದವಿಯನ್ನು ಪಡೆಯುತ್ತಿರುವ ಇವರು ಮುಂದೆ ರಂಗಾಯಣದಂತಹ ನಾಟಕ ಶಾಲೆಯಲ್ಲಿ ಅಧ್ಯಯನ ಮಾಡಿ, ರಂಗಭೂಮಿಯನ್ನು ಉಳಿಸಿ ಬೆಳೆಸುವ ಆಶಯವೊತ್ತಿದ್ದಾರೆ. ಇವರ ಈ ಪ್ರಯತ್ನಕ್ಕೆ ಶುಭವಾಗಲಿ. ಈ ತಾಯಂದಿರ ಆಶಿರ್ವಾದದಿಂದ ಮತ್ತಷ್ಟು ಉನ್ನತ ಮಟ್ಟಕ್ಕೆ ಸಾಗಲಿ ಎಂಬುಬು ನಮ್ಮೆಲ್ಲರ ಕನಸು ಮತ್ತು ಹಾರೈಕೆ…