ಲೋಕಾರೂಢಿ
ದೇಶದ ಬೆನ್ನೆಲುಬು ಕರಗಿದಾಗ…!
ಪ್ರತಿಯೊಂದು ದೇಶದ ಆರ್ಥಿಕತೆ ಆಯಾ ದೇಶದ ಒಂದು ಪ್ರಮುಖವಾದ ವಲಯದ ಮೇಲೆ ಅವಲಂಬಿತವಾಗಿರುತ್ತದೆ. ಅಂತಹ ವಲಯಗಳ ಏರುಪೇರಿನ ಮೇಲೆ ದೇಶದ ಆರ್ಥಿಕತೆಯ ವಿಶ್ಲೇಷಣೆಗಳು ಬದಲಾಗುತ್ತಾ ಹೋಗುತ್ತವೆ. ಬ್ಯಾಂಕಿಂಗ್, ಇಂಡಸ್ಟ್ರೀಸ್, ಪ್ರವಾಸೋದ್ಯಮ ಹೀಗೆ ಪ್ರತಿಯೊಂದು ದೇಶಕ್ಕೂ ಅದರದ್ದೇ ಆದ ಮಹತ್ವಪೂರ್ಣ ವಲಯಗಳಿವೆ. ಭಾರತದ ವಿಷಯಕ್ಕೆ ಬಂದರೆ ನಮ್ಮದು ಸಂಪೂರ್ಣ ಕೃಷಿ ಆಧಾರಿತವಾದದ್ದು. ಕೃಷಿ ನಮ್ಮ ನಾಡಿನ ಜೀವಾಳ. ಕೃಷಿಕ ಯಾ ರೈತ ನಮ್ಮ ಹೆಮ್ಮೆ. ಗ್ರಾಮಗಳ ಬೀಡಾಗಿರುವ ನಮ್ಮ ದೇಶ ಹಲವಾರು ವಿಶಿಷ್ಟತೆಗಳನ್ನು ಕಾಯ್ದುಕೊಂಡಿರುವುದು ಇದೇ ಕಾರಣಕ್ಕೆ.
ಅದೆಷ್ಟೋ ದೇಶಗಳ ಆರ್ಥಿಕತೆ ಮಕಾಡೆ ಮಲಗಿದಾಗಲೂ ಕೂಡ ಭಾರತ ಮಾತ್ರ ಎಂತಹ ಆರ್ಥಿಕ ಹೊಡೆತವನ್ನೂ ಸಮರ್ಥವಾಗಿ ಎದುರಿಸಿದ್ದು ಇದೇ ಕೃಷಿ ವಲಯದಿಂದಾಗಿ. ಇದೇ ಕಾರಣಕ್ಕೆ ನಮ್ಮ ದೇಶದ ರೈತನನ್ನು ‘ಬೆನ್ನೆಲುಬು ಬೆನ್ನೆಲುಬು’ ಎಂದು ಕರೆದು ಆತನ ಬೆನ್ನೆಲುಬೇ ಸವೆಯುವಂತೆ ಮಾಡಲಾಗಿದೆ.
ರೈತಾಪಿ ವರ್ಗ ಈ ದೇಶದಲ್ಲಿ ಅನಾದಿ ಕಾಲದಿಂದಲೂ ತನ್ನ ಅಸ್ತಿತ್ವವನ್ನು ಸಮರ್ಥವಾಗಿ ಛಾಪೊತ್ತುತ್ತಾ ಬಂದಿದೆ. ದೇಶದ ಸಾಂಸ್ಕøತಿಕ ರಂಗಕ್ಕೆ, ಸಂಪ್ರದಾಯ-ಪರಂಪರೆಗಳಿಗೆ ರೈತನ ಕೊಡುಗೆ ಅಪಾರವಾದದ್ದು. ಕೃಷಿಕ ತೋರುವ ನೈತಿಕ ರೀತಿ ರಿವಾಜುಗಳು ಉತ್ಕøಷ್ಟ ಮಟ್ಟದವು. ವಿಪರ್ಯಾಸ ನೋಡಿ, ಅಕ್ಷರಗಳ ಮೂಲಕ ಇಷ್ಟೆಲ್ಲ ಹೊಗಳಲ್ಪಡುವ ರೈತನ ಸ್ಥಿತಿ ಮಾತ್ರ ಇವತ್ತಿಗೆ ನಿಜಕ್ಕೂ ಚಿಂತಾಜನಕ. ಆರ್ಥಿಕ ಜರ್ಜರತೆ ಒಂದೆಡೆಯಾದರೆ, ಕೃಷಿಕೆ ಪೂರಕವಾದ ವಾತಾವರಣ ನಿಧಾನವಾಗಿ ನಿಧನವಾಗುತ್ತಿರುವುದು ರೈತರ ಚಿಂತೆಗೆ ಕಾರಣವಾಗಿದೆ. ದವಸ-ಧಾನ್ಯಗಳ ಬೆಲೆ ಗಗನಕ್ಕೇರುತ್ತಿದ್ದರೂ ರೈತನ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿಲ್ಲ! ಹಾಗಾದರೆ ದುಡ್ಡೆಲ್ಲ ಎಲ್ಲಿ ಹೋಗುತ್ತಿದೆ? ಬೆವರು ಸುರಿಸಿ ದುಡಿವ ರೈತನ ಬೆವರ ಹನಿ ಇಂಗಿ ಹೋಗುತ್ತಿರುವುದಾದರೂ ಎಲ್ಲಿ? ಈ ಎಲ್ಲ ಪ್ರಶ್ನೆಗಳನ್ನು ಕಾಲಕಾಲಕ್ಕೆ ಕೇಳುತ್ತಾ ಬಂದಿದ್ದರೂ ಉತ್ತರ ಕೊಡುವ ಧೈರ್ಯವನ್ನು ಯಾರೂ ತೋರುತ್ತಿಲ್ಲ. ಕೆಲವು ನೂರು ವರ್ಷಗಳ ಹಿಂದೆ ಭಾರತಕ್ಕೆ ಭೇಟಿ ನೀಡಿದ ವಿದೇಶಿ ಪ್ರವಾಸಿಗರ ಟಿಪ್ಪಣೆಗಳನ್ನು ಓದಿದರೆ ಆಗಿನ ಸಮಯದಲ್ಲಿ ಇಲ್ಲಿನ ರೈತರ ಸ್ಥಿತಿ ಎಷ್ಟು ಉತ್ತಮವಾಗಿತ್ತು ಎಂಬ ಮಾಹಿತಿ ಸಿಗುತ್ತದೆ. ಆದರೆ ಇಂದು ನಮ್ಮ ರೈತರ ಸ್ಥಿತಿ ಹೀಗೇಕೆ?
ಪ್ರತಿಬಾರಿ ಚುನಾವಣೆ ಎದುರಿಸುವ ಹೊತ್ತಿನಲ್ಲಿ ಪಕ್ಷಗಳು ಪ್ರಮುಖವಾಗಿ ಮುಂದಿಡುವ ಭರವಸೆಯೇ ‘ರೈತರ ಸಾಲ ಮನ್ನಾ’. ಇದೊಂದು ಓಟನ್ನು ಸೆಳೆಯುವ ಪ್ರಮುಖ ಅಸ್ತ್ರವಾಗಿದೆ. ರೈತರ ಇಂದಿನ ಅವಶ್ಯಕತೆ ಸಾಲಮನ್ನಾಕ್ಕಿಂತ ಹೆಚ್ಚಾಗಿ ಬೆಳೆದ ಬೆಳೆಗಳಿಗೆ ಉತ್ತಮವಾದ ಬೆಲೆ, ಬೆಳೆಗಳನ್ನು ಸಂರಕ್ಷಿಸಿಡಲು ಅಗತ್ಯವಾದ ಸೌಕರ್ಯಗಳು, ಬೆಳೆ ಬೆಳೆಯಲು ಆರ್ಥಿಕವಾಗಿ ಹೊರೆಯಾಗದಂತಹ ವಾತಾವರಣ. ಇದರ ಬದಲು ಕಣ್ಣೊರೆಸುವ ತಂತ್ರವಾಗಿ ಸಾಲಮನ್ನಾ ಮಾಡಿ, ಮತ್ತೆ ಚುನಾವಣೆ ಎದುರಾಗುವವರೆಗೆ ರೈತನೆಡೆಗೆ ಮುಖಮಾಡದ ಜನಪ್ರತಿನಿಧಿಗಳಿಗೆ ಏನನ್ನೋಣ? ಇದೆಲ್ಲಕ್ಕಿಂತ ಹೆಚ್ಚಿನದಾಗಿ ರೈತರ ಹೊಟ್ಟೆಯ ಮೇಲೆ ಹೊಡೆಯುತ್ತಿರುವುದು ‘ಇಂಡಸ್ಟ್ರಿಯಲೈಸೇಶನ್’ ಎಂಬ ಪೆಡಂಭೂತ! ಇಂಡಸ್ಟ್ರಿಯಲೈಸೇಶನ್ ಕುರಿತಂತೆ ತೋರುತ್ತಿರುವ ಅತಿಯಾದ ಆಸಕ್ತಿ ಕೃಷಿ ಕ್ಷೇತ್ರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರಲ್ಲಿ ಎರಡು ಮಾತಿಲ್ಲ.
ಉದ್ಯೋಗ ಸೃಷ್ಟಿ ಎಂಬ ಆಸೆ ತೋರಿಸುತ್ತಾ ಇಂದು ಅವಶ್ಯಕತೆಗಿಂತ ಹೆಚ್ಚು ಇಂಡಸ್ಟ್ರಿಯಲೈಸೇಶನ್‍ಗೆ ಮಣೆ ಹಾಕಲಾಗುತ್ತಿದೆ. ಹೆಚ್ಚು ಹೆಚ್ಚು ಕೈಗಾರಿಕೆಗಳು ಒಳನುಸುಳಿದಂತೆ ಅವುಗಳಿಗೆ ಜಾಗ ನೀಡುವ ನೆಪದಲ್ಲಿ ಕೃಷಿ ಭೂಮಿ ಕಡಿಮೆಯಾಗುತ್ತಿದೆ. ರೈತಾಪಿ ಮಕ್ಕಳೂ ಸಹ ಕೈಗಾರಿಕೆಗಳಲ್ಲಿ ದಿನಗೂಲಿ ಲೆಕ್ಕದಲ್ಲಿ ಕೆಲಸಕ್ಕೆ ಮುಂದಾಗುತ್ತಿದ್ದಾರೆ. ಹಾಗಾದರೆ ಉದ್ಯೋಗ ಸೃಷ್ಟಿ ಎಂದರೆ ಇದೇ ಏನು? ಸದ್ಯದ ಪರಿಸ್ಥಿತಿಯಲ್ಲಿ ದಿನಗೂಲಿ ಕೆಲಸ ಗಿಟ್ಟಿಸಿಕೊಂಡು ನಗುವ ಜನರು, ಮುಂದೊಂದು ದಿನ ಹಳಹಳಿಸುವ ಸ್ಥಿತಿ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲ. ಈ ಎಲ್ಲ ಅಪಸವ್ಯಗಳನ್ನು ತಡೆಯಲು ಕೃಷಿರಂಗಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡುವುದೊಂದೇ ದಾರಿ ಎನಿಸುತ್ತದೆ. ರೈತರ ಸಾಲ ಮನ್ನಾ ಮಾಡುವ ಬದಲು ಅದೇ ಹಣವನ್ನು ಬೆಳೆಗಳ ಮೌಲ್ಯವರ್ಧನೆಗೆ ಬಳಸಬಹುದು. ಇದರಿಂದಾಗಿ ರೈತರಿಗೂ ಒಳ್ಳೆಯ ಬೆಲೆ ದೊರಕಿ ಆರ್ಥಿಕವಾಗಿ ಸಬಲತೆ ಕಾಣಬಹುದು. ಸಾಧ್ಯವಾದಲ್ಲಿ ಹೋಬಳಿ ಮಟ್ಟದಲ್ಲೇ ಬೆಳೆಗಳನ್ನು ಸಂರಕ್ಷಿಸಿಡಲು ಅಗತ್ಯ ಸೌಕರ್ಯ ನೀಡಿದಲ್ಲಿ ಉತ್ತಮ ಬೆಲೆ ಬಂದಾಗ ರೈತ ತನ್ನ ದಾಸ್ತಾನನ್ನು ವಿಕ್ರಿ ಮಾಡಬಹುದು. ಜೊತೆಜೊತೆಗೆ, ರೈತ ಕೂಡ ಕೃಷಿಯನ್ನು ಒಂದು ಉದ್ಯಮ ಎಂದೇ ಪರಿಗಣಿಸಬೇಕು. ಆಗ ತಾನು ಮಾಡುವ ಕೆಲಸದಲ್ಲಿ ಒಂದು ಶಿಸ್ತನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಹಣಕಾಸು ನಿರ್ವಹಣೆಯನ್ನೂ ಸರಿಯಾದ ರೀತಿಯಲ್ಲಿ ಮಾಡಿ, ಲಾಭದಾಯಕವಾಗುವತ್ತ ಹೆಚ್ಚಿನ ಗಮನ ಹರಿಸಬೇಕು.
ಕೃಷಿ ಅಗಾಧವಾದ ಸಾಧ್ಯತೆಗಳನ್ನು ಹೊಂದಿರುವ ಕ್ಷೇತ್ರ. ಅದನ್ನು ಸರಿಯಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಇಂದಿನ ರೈತ ಯೋಚಿಸಬೇಕಿದೆ. ಹೊಸಬಗೆಯ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು, ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಲಾಭವನ್ನು ಪಡೆಯಲು ಶ್ರಮಿಸಬೇಕಿದೆ. ಪೂರಕವಾಗಿ, ಸರ್ಕಾರವೂ ಕೂಡ ಸಾಲಮನ್ನಕ್ಕಷ್ಟೇ ಸೀಮಿತವಾಗದೇ ರೈತರ ಬಲವರ್ಧನೆಗೆ ಅವಿರತ ಕೆಲಸ ಮಾಡಬೇಕಿದೆ. ಕೃಷಿಕ್ಷೇತ್ರಕ್ಕಾಗಿಯೇ ಪ್ರತ್ಯೇಕ ಬಜೆಟ್ ಮಂಡನೆ ಮಾಡಿದರೂ ಒಳ್ಳೆಯದೇ. ಎಲ್ಲಕ್ಕಿಂತ ಹೆಚ್ಚಾಗಿ ಕೃಷಿಕ್ಷೇತ್ರದ ಬಲವರ್ಧನೆ ದೇಶದ ಆರ್ಥಿಕತೆಯ ಬಲವರ್ಧನೆಯೂ ಹೌದು ಎಂಬ ಸತ್ಯವನ್ನು ಜನಪ್ರತಿನಿಧಿಗಳು ಮನಗಾಣಬೇಕಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401