ಲೈಫ್ ಸ್ಟೈಲ್
ಲಾಲ್ ಬಾಗ್ ಬಗ್ಗೆ ನಿಮಗೆ ಗೊತ್ತಿರದ ಅಚ್ಚರಿ ಸಂಗತಿಗಳು..!
ಲಾಲ್‍ಬಾಗ್ ಎಂದರೆ ಎಲ್ಲರಿಗೂ ನೆನಪಾಗುವುದು ಅಲ್ಲಿನ ಗಾಜಿನಮನೆ, ದೊಡ್ಡ ಗಡಿಯಾರ, ವಿಧವಿಧ ಹೂವಿನ ಗಿಡಗಳ ತೋಟ, ಹಳೆದಾದ ಮರಗಳು ಹಾಗೂ ಸುಂದರವಾದ ಕೆರೆ ಮತ್ತು ಸುತ್ತಮುತ್ತಲಿನ ಪರಿಸರ. ಇನ್ನೂ ಹೆಚ್ಚಾಗಿ ನೆನಪಾಗುವುದು, ಪ್ರತಿ ವರ್ಷ ಸ್ವಾತಂತ್ರೋತ್ಸವ ಹಾಗೂ ಗಣರಾಜ್ಯ ದಿನೋತ್ಸವದ ಸಂದರ್ಭಗಳಲ್ಲಿ ಏರ್ಪಡಿಸಲಾಗುವ ಫಲಪುಷ್ಪ ಪ್ರದರ್ಶನಗಳು.
ಈ ಬಾರಿಯ ಫಲಪುಷ್ಪ ಪ್ರದರ್ಶನದ ಬಗ್ಗೆ ತಿಳಿಯುವ ಮುನ್ನ ಲಾಲ್‍ಬಾಗ್ ಬಗ್ಗೆ ಸ್ವಲ್ಪ ತಿಳಿಯೋಣ.
ಲಾಲ್‍ಬಾಗ್, ಬೆಂಗಳೂರಿನ ಹೃದಯ ಭಾಗದಲ್ಲಿ ಇದೆ. 240 ಎಕರೆ ಪ್ರದೇಶದ ಲಾಲ್‍ಬಾಗ್‍ನಲ್ಲಿ ಸುಮಾರು 1,854 ಬಗೆಯ ಗಿಡಗಳು ಇವೆ. ಹೈದರಾಲಿಯು ಇದನ್ನು 1760 ರಲ್ಲಿ ನಿರ್ಮಿಸಲು ಸೂಚಿಸುತ್ತಾನೆ. ಆದರೆ, ಇದನ್ನು ಈತನ ಮಗ ಟಿಪ್ಪು ಸುಲ್ತಾನ್ ಕಾಲದಲ್ಲಿ ಪೂರ್ಣಗೊಳಿಸಲಾಯಿತು. ಈ ಉದ್ಯಾನವನ್ನು ಅಭಿವೃದ್ಧಿಪಡಿಸಲು, ಹಲವಾರು ದೇಶಗಳಿಂದ ಸಸ್ಯಗಳು ಮತ್ತು ಮರಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಇದನ್ನು ಮೊಘಲ್ ಉದ್ಯಾನಗಳ ಮಾದರಿಯಲ್ಲಿ ಈ ಉದ್ಯಾನವನ್ನು ನಿರ್ಮಿಸಲು ನಿರ್ಧರಿಸಿದ್ದರು. ತುಮಕೂರು ಜಿಲ್ಲೆಯ, ಶಿರಾ ತಾಲ್ಲೂಕಿನಲ್ಲಿರುವ ಮೊಘಲ್ ಉದ್ಯಾನವು ಲಾಲ್‍ಬಾಗ್‍ನ ವಿನ್ಯಾಸಕ್ಕೆ ಮೂಲವಾಗಿದೆ.
ಲಾಲ್‍ಬಾಗ್‍ಗೆ, ಲಾಲ್‍ಬಾಗ್ ಎಂದು ಹೆಸರು ಬರಲು ಮೂರು ಕಾರಣಗಳಿವೆ ಎಂದು ಹೇಳಲಾಗುತ್ತದೆ. ಮೊದಲನೆಯದಾಗಿ, ಇತಿಹಾಸಕಾರ ಮನ್ಸೂರ್ ಅಲಿ ಹೇಳುವ ಪ್ರಕಾರ, ಶ್ರೀರಂಗಪಟ್ಟಣದಲ್ಲಿ ಇರುವ ಲಾಲ್‍ಮಹಲ್ ಅರಮನೆಯ ಹತ್ತಿರ ಇರುವ ತೋಟ, ಇದೇ ಮಾದರಿಯಲ್ಲಿ ಇರುವುದು. ಎರಡನೆಯದು ಹೈದರಾಲಿಯ ತಾಯಿ ಲಾಲ್‍ಬಾಯಿ ಅವರ ಹೆಸರು ಎಂದೂ ಕೆಲವರು ಹೇಳುತ್ತಾರೆ. ಮೂರನೆಯದಾಗಿ, ಲಾಲ್‍ಬಾಗ್‍ನಲ್ಲಿ ಬೆಳೆದಂತಹ ಕೆಂಪು ಗುಲಾಬಿಗಳಿಂದ ಆ ಹೆಸರು ಬಂದಿತು ಎನ್ನುತ್ತಾರೆ.
ಲಾಲ್ ಬಾಗ್‍ನಲ್ಲಿ ಪ್ರಮುಖವಾಗಿ ನೋಡಬೇಕಾಗಿರುವುದು
• ಗಾಜಿನ ಮನೆ-ಇದನ್ನು ಲಂಡನ್ನಿನ ಕ್ರಿಸ್ಟಲ್ ಪಾಲೇಸ್ ಮಾದರಿಯಲ್ಲಿದೆ. ಇದಕ್ಕೆ ರಾಜಕುಮಾರ ಅಲ್ಬರ್ಟ್ ವಿಕ್ಟರ್ ಅವರು ನವಂಬರ್ 30, 1898 ರಂದು ಅಡಿಗಲ್ಲು ಹಾಕಿದರು. ನಂತರದ ಮೇಲ್ವಿಚಾರಕ ಜೇಮ್ಸ್ ಕ್ಯಾಮರಾನ್ ಇದನ್ನು ನಿರ್ಮಿಸಿದರು.
• ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರ ಪ್ರತಿಮೆ.
• ಭಾರತದ ಮೊದಲ ಹುಲ್ಲಿನ ಗಡಿಯಾರ.
• ನೂರಾರು ವರ್ಷ ಅಪರೂಪದ ಹಳೆಯ ಮರಗಳ ದೊಡ್ಡದಾದ ಸಂಗ್ರಹ.
• 20 ಮಿಲಿಯನ್ ವರ್ಷ ಹಳೆಯ ಕೋನಿಫೆರಸ್ ಮರದ ಪಳವಳಿಕೆ.
• ಪರ್ಷಿಯಾ, ಅಫ್ಘಾನಿಸ್ತಾನ ಮತ್ತು ಪ್ರಾನ್ಸ್‍ನ ಹಲವಾರು ಅಪರೂಪದ ಸಸ್ಯಗಳು.
• 3000 ವರ್ಷಕ್ಕೂ ಹಳೆಯದಾದ ಬೃಹದಾಕಾರದ ಬಂಡೆ.
• ಸುಂದರವಾದ ಕೆರೆ.
ಫಲಪುಷ್ಪ ಪ್ರದರ್ಶನ
ಲಾಲ್‍ಬಾಗ್‍ನಲ್ಲಿ ಫಲಪುಷ್ಪ ಪ್ರದರ್ಶನವನ್ನು 1912 ರಲ್ಲಿ ಜಿ.ಹೆಚ್. ಕೃಂಬಿಗಲ್ ರವರು ಪ್ರಥಮವಾಗಿ ಪ್ರಾರಂಭಿಸಿದರು. ಈ ಸಾಲಿನಲ್ಲಿ ಹಮ್ಮಿಕೊಂಡಿರುವ ಫಲಪುಷ್ಪ ಪ್ರದರ್ಶನವು 208ನೇ ಪ್ರದರ್ಶನವಾಗಿದೆ.
ಈ ಬಾರಿ ಮುಖ್ಯವಾಗಿ ರಾಷ್ಟ್ರದ ಯೋಧರಿಗೆ ನಮನ ಸಲ್ಲಿಸಲು, ಭಾರತದ ಸಮಗ್ರ ರಕ್ಷಣಾ ವ್ಯವಸ್ಥೆಯನ್ನು 36 ಸದಸ್ಯರ ತಂಡ 9 ದಿನಗಳಲ್ಲಿ ಅನಾವರಣಗೊಳಿಸಿದೆ ಅಲ್ಲದೇ, ಕನ್ನಡ ಚಿತ್ರರಂಗಕ್ಕೆ 85 ವರ್ಷ ತುಂಬಿದ ಸವಿನೆನಪಿಗಾಗಿ ಗೌರವವನ್ನೂ ಸಹ ಸಲ್ಲಿಸಲಾಗಿದೆ.
ಗಾಜಿನ ಮನೆ ಪ್ರವೇಶಿಸುತ್ತಿದ್ದಂತೆಯೇ, ದೆಹಲಿಯ ಇಂಡಿಯಾ ಗೇಟ್ ಬಳಿಯಿರುವ ಯುದ್ಧ ಸ್ಮಾರಕ ‘ಅಮರ್ ಜವಾನ್ ಜ್ಯೋತಿ’ ಯ ಪ್ರತಿಕೃತಿಯನ್ನು ಇರಿಸಲಾಗಿದೆ. ಅದರ ಹಿಂಭಾಗದಲ್ಲಿ ಸಮುದ್ರ ಮಟ್ಟದಿಂದ 5753 ಮೀಟರ್ ಎತ್ತರದಲ್ಲಿರುವ ಸಿಯಾಚಿನ್ ಹಿಮಪರ್ವತವನ್ನು ಹೋಲುವ ಪ್ರತಿಕೃತಿಯನ್ನು ನಿರ್ಮಿಸಲಾಗಿದೆ.
ಆ ಪರ್ವತದ ಮುಂಭಾಗದಲ್ಲಿ, ಭೂ ಸೇನೆಯ ಯುದ್ಧ ಟ್ಯಾಂಕರ್, ವಾಯುಸೇನೆಯ ಯುದ್ಧ ವಿಮಾನ, ಹೆಲಿಕಾಪ್ಟರ್, ಫೈಟರ್ ಜೆಟ್‍ಗಳು, ನೌಕಾದಳದ ಸಮರ ನೌಕೆ, ದೇಶದ ಗಡಿ ರಕ್ಷಣಾ ಪಡೆಗೆ ಸಂಬಂಧಿಸಿದ ಮಾದರಿಗಳನ್ನು ಭತ್ತದ ಹುಲ್ಲು, ಥರ್ಮೋಕೋಲ್ ಮತ್ತು ಸಾವಿರಾರು ಹೂವುಗಳಿಂದ ಸಿಂಗರಿಸಲಾಗಿದೆ. ಹಾಗೆಯೇ ಸಿಯಾಚಿನ್‍ನಲ್ಲಿ ಸೇನೆಯ ಕಾರ್ಯಾಚರಣೆ ಬಗ್ಗೆ, ಕೊರೆಯುವ ಚಳಿಯಲ್ಲಿ ಸೈನಿಕರು ಕರ್ತವ್ಯ ನಿರತರಾಗಿರುವ ಬಗ್ಗೆ, ಹಿಮದಿಂದ ಕೂಡಿರುವ ಬೆಟ್ಟವನ್ನು ಸೈನಿಕರು ಹತ್ತುತ್ತಿರುವ ಮಾದರಿಗಳು ಎಲ್ಲರನ್ನೂ ಆಕರ್ಷಿಸುತ್ತಿದೆ.
ದೇಶ ಕಾಯುವ ಸಂದರ್ಭದಲ್ಲಿ, ಹಿಮದಡಿಯಲ್ಲಿ ಸಿಲುಕಿ ಮರಣ ಹೊಂದಿದ ವೀರ ಕನ್ನಡಿಗ, ಹನುಂತಪ್ಪ ಕೊಪ್ಪದ್ ರವರ ಧಾನ್ಯಗಳಿಂದ ರಚಿಸಲ್ಪಟ್ಟ ಭಾವಚಿತ್ರ ಹಾಗೂ ಅಕ್ಕಿಯಿಂದ ರಚಿಸಿರುವ ಭಾರತದ ತ್ರಿವರ್ಣ ಧ್ವಜವು ಎಲ್ಲರ ಕಣ್ಸೆಳೆಯುತ್ತದೆ. ಮುಂದುವರೆದು, ಶೌರ್ಯ ಚಕ್ರಗಳ ಬಗ್ಗೆ, ಸೈನಿಕರ ಸುಭಾಷಿತಗಳು ಹಾಗೂ ಇನ್ನಿತರೆ ಮಾಹಿತಿಗಳ ಫಲಕಗಳನ್ನೂ ಸಹ ಪ್ರದರ್ಶಿಸಲಾಗಿದೆ.
ಬೆಟ್ಟದ ಹಿಂಭಾಗದಲ್ಲಿ, ಕನ್ನಡ ಚಿತ್ರರಂಗಕ್ಕೆ 85 ವರ್ಷ ತುಂಬಿರುವುದರಿಂದ ಅದಕ್ಕೆ ಗೌರವ ಸಮರ್ಪಿಸಲು ಕೆಂಪು, ಬಿಳಿ, ಕೇಸರಿ ಗುಲಾಬಿಗಳನ್ನು ಹೆಚ್ಚಾಗಿ ಬಳಸಿ ಬೃಹತ್ ಗಾತ್ರದ ಕ್ಯಾಮರಾ, ಫಿಲ್ಮ್‍ರೋಲ್, ಕ್ಲಾಪ್ ಬೋರ್ಡ್ ಇನ್ನೂ ಮುಂತಾದುವುಗಳನ್ನು ನೋಡುಗರಿಗೆ ಆಕರ್ಷಿಸುವಂತೆ ನಿರ್ಮಿಸಲಾಗಿದೆ. ಚಿತ್ರೋದ್ಯಮದಲ್ಲಿ ತೆರೆಯ ಹಿಂದೆ ಕಾರ್ಯನಿರ್ವಹಿಸುವ ಎಲ್ಲಾ ತಂತ್ರಜ್ಞರಿಗೆ ನಮನ ಸಲ್ಲಿಸಲಾಗಿದೆ.
ಬೆಟ್ಟದ ಎಡಭಾಗದಲ್ಲಿ 12 ಅಡಿ ಎತ್ತರದ, 25 ಸಾವಿರ ಸೇವಂತಿಗೆ ಮತ್ತು ಕಾರ್ನೆಷಿಯ ಹೂವುಗಳನ್ನು ಬಳಸಿ ಬೃಹತ್ ಗಾತ್ರದ ಸಿಂಹದ ಪ್ರತಿಕೃತಿಯನ್ನು ನಿರ್ಮಿಸಲಾಗಿದೆ. ಈ ಸಿಂಹವು ಎಲ್ಲರಿಗೂ ಸೆಲ್ಫಿ ತೆಗೆದುಕೊಳ್ಳುವ ನೆಚ್ಚಿನ ತಾಣವಾಗಿದೆ. ಈ ಸಿಂಹದ ಹಿಂಭಾಗದಲ್ಲಿ ಊಟಿಯ ಫರ್ನ್ ಹಿಲ್‍ನ ಆರ್ಕಿಡ್ ಹೂವಿನ ಪರಿಮಳ ಹಾಗೂ ಸೌಂದರ್ಯ ಎಲ್ಲರ ಮನಸನ್ನು ಸೂರೆಗೊಳ್ಳುತ್ತದೆ.
ಗಾಜಿನ ಮನೆ ಒಳಗೆ ಸುತ್ತಲೂ ಬಾಲ್ಲ್‍ಮ್, ಸ್ಪೈದರ್ ಪ್ಲಾಂಟ್, ಆಂಟೋರಿಯನಂ, ಲಂಟಾನ್, ಅಸ್ಟರ್, ಕೆಲೆಂಡುಲಾ, ಸಾಲ್ವಿಯಾ, ಲಾಕ್ರ್ಸ್‍ಪರ್, ಡಯಾಂತನಿ, ಹೈಡ್ರಾಂಜಿಯಾ, ಜೆನಿಯಾ, ಚೆಂಡು ಹೂವು, ಹೀಗೆ ಹಲವು ಬಗೆಯ ಗಿಡಗಳು ಎಲ್ಲರ ಗಮನ ಸೆಳೆಯುತ್ತವೆ. ಹಿಮ್ಮೇಳದಲ್ಲಿ ಕೇಳುತ್ತಿದ್ದ, ಲಘು ಸಂಗೀತವು ಎಲ್ಲರ ಮನಸ್ಸಿಗೆ ಮೊದ ನೀಡುತ್ತದೆ.
ಗಾಜಿನ ಮನೆಯ ಸುತ್ತಲೂ 4 ವಿಭಾಗಗಳಲ್ಲಿ ಯುದ್ಧ ಟ್ಯಾಂಕರ್, ಕ್ಷಿಪಣಿ, ಸಮರ ನೌಕೆ, ಜೆಟ್ ಯುದ್ಧ ವಿಮಾನಗಳ ಮಾದರಿಯನ್ನು ಭತ್ತದ ಹುಲ್ಲಿನಿಂದ ಬೃಹದಾಕಾರವಾಗಿ ನಿರ್ಮಿಸಲಾಗಿದೆ.
ಗಾಜಿನ ಮನೆಯ ಹೊರಾಂಗಣದಲ್ಲಿ ಹೂವಿನಿಂದ ಮಾಡಿದ ಜಲಪಾತ, ನವಿಲು, ಹೃದಯಾಕಾರದ ಕಮಾನು, ಹೂವುಗಳ ತೂಗು ಗುಚ್ಛ ಕಣ್ಣಿಗೆ ಆನಂದವನ್ನು ನೀಡುತ್ತವೆ.
ಈ ಬಾರಿ ಇನ್ನೊಂದು ವಿಶೇಷವೆಂದರೆ ಲಾಲ್‍ಬಾಗ್ ಆವರಣದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧ ಮಾಡಲಾಗಿದೆ.
ಒಟ್ಟಾರೆ 2 ಕೋಟಿ ರೂ.ವೆಚ್ಚದಲ್ಲಿ, 1 ಲಕ್ಷ 20 ಸಾವಿರಕ್ಕೂ ಅಧಿಕ ಹೂಗಳನ್ನು ಬಳಸಿ ಗಾಜಿನ ಮನೆಯಲ್ಲಿ ಪುಷ್ಪ
ಪ್ರದರ್ಶನವನ್ನು ಅದ್ದೂರಿಯಾಗಿ ಆಯೋಜಿಸಲಾಗಿದೆ.
ಈ ಪ್ರದರ್ಶನವು ಆಗಸ್ಟ್ 4 ರಂದು ಪ್ರಾರಂಭಗೊಂಡಿದ್ದು, ಆಗಸ್ಟ್ 15 ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿದ್ದು, ಆಸಕ್ತರು ಒಮ್ಮೆ ಭೇಟಿ ನೀಡಿ ಆನಂದ ಹೊಂದಬಹುದಾಗಿದೆ.
-ಸೌಮ್ಯ ಅಶೋಕ್
ಬೆಂಗಳೂರು
ಸುದ್ದಿದಿನ.ಕಾಂ|ವಾಟ್ಸಾಪ್|9986715401