ನೆಲದನಿ

ನುಡಿಯ ಒಡಲು‌-03 | ಭಾಷಾ ವೈವಿಧ್ಯತೆಯನ್ನು ಕಾಪಾಡುವುದೆಂದರೇನು?

Published

on

Art : Nancy Merkle (America)
  • ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ಸ್ಮಿತೆ, ಸಂವಹನ, ಸಾಮಾಜಿಕ ಐಕ್ಯತೆ, ಶಿಕ್ಷಣ ಮತ್ತು ಅಭಿವೃದ್ಧಿ ಮೊದಲಾದವು ಹಲವು ಕಾರಣಗಳಿಗಾಗಿ ಜನರಿಗೆ ಬಹುಮುಖ್ಯ ವಿದ್ಯಮಾನವಾಗಿವೆ. ಈ ಎಲ್ಲ ಸಂಕೀರ್ಣ ಪರಿಣಾಮಗಳನ್ನು ಭಾಷೆಯ ಮೂಲಕ ಕಾಣಬಹುದು. ಈ ಲೋಕದಲ್ಲಿ ಭಾಷೆಯ ಮಹತ್ವ ಎಷ್ಟಿದೆಯೆಂದರೆ, ಇಡೀ ಮಾನವ ಕುಲದ ಅಸ್ತಿತ್ವ, ಪ್ರಜ್ಞೆ ಹಾಗೂ ಅರಿವಿನ ಮೂಲಚೂಲಗಳು ಪ್ರಕಟಗೊಳ್ಳುವುದೇ ಭಾಷೆಯ ಮೂಲಕ ಎಂಬ ಅಭಿಪ್ರಾಯಕ್ಕೆ ಸಮಾನವಾಗಿದೆ.

ಅಂದರೆ, ಮಾನವ ಸಮೂಹಗಳ ಎಲ್ಲ ವ್ಯಪಾರಗಳನ್ನು ಒಂದುಕಡೆಯಿಟ್ಟು ಇವುಗಳಿಗೆಲ್ಲ ಸಮಾನವಾಗಿ ಭಾಷೆಯನ್ನು ಇಡಬಹುದು. ಅಂತಹದೊಂದು ಮಹತ್ವದ ವಿದ್ಯಮಾನವಾಗಿ ಭಾಷೆ ನೆಲೆಗೊಂಡಿದೆ. ಆದ್ದರಿಂದ ಭಾಷೆಯ ಪ್ರಾಮುಖ್ಯತೆ ಮತ್ತು ಪ್ರಸ್ತುತತೆಯನ್ನು ಕುರಿತು ಕೇಳುವ ಪ್ರಶ್ನೆಗಳೇ ಅತ್ಯಂತ ಅಪ್ರಸ್ತುತವಾದಂತಹವು.

ಯಾವ ಒಂದು ವಿದ್ಯಮಾನವು ಬದುಕಿನ ಅತ್ಯಂತ ಅನಿವಾರ್ಯ ಸಂಗತಿಯಾಗಿರುತ್ತದೆಯೋ, ಅದು ಬಹುತೇಕ ಸನ್ನಿವೇಶದಲ್ಲಿ ಅತ್ಯಂತ ನಗಣ್ಯವಾಗಿ ಕಾಣುತ್ತದೆ. ಈಚೆಗೆ ಆರ್ಥಿಕ-ಔದ್ಯೋಗಿಕ ಮೊದಲಾದ ವಿದ್ಯಮಾನಗಳ ಪರಿಣಾಮವಾಗಿ ಭಾಷೆ ವಿಶೇಷವಾಗಿ ತಾಯ್ನುಡಿಗಳನ್ನು ನಗಣ್ಯಗೊಳಿಸಲಾಗಿದೆ.

ಜಾಗತೀಕರಣ ಪ್ರಕ್ರಿಯೆಗಳಿಂದಾಗಿ ದೇಶಿನುಡಿಗಳು, ತಾಯ್ನುಡಿಗಳು ಅತೀವ ಅಪಾಯಕ್ಕೆ ಈಡಾಗುತ್ತವೆ. ಈ ಅಪಾಯದ ತೀವ್ರತೆ ಎಷ್ಟಿದೆಯೆಂದರೆ, ಇಡೀ ಭಾಷೆಯೇ ಕಣ್ಮರೆಯಾಗುವ ಅಪಾಯಕ್ಕೆ ಒಳಗಾಗಿದೆ. ಭಾಷೆಗಳ ಚೈತನ್ಯ ಮಸುಕಾದಾಗ, ಸಾಂಸ್ಕೃತಿಕ ವೈಶಿಷ್ಟ್ಯಗಳು, ವೈವಿಧ್ಯತೆ ಹಾಗೂ ಈ ವೈವಿಧ್ಯತೆಯ ಇಡೀ ಚರಿಸ್ಮವೇ ಕಣ್ಮರೆಯಾಗುತ್ತದೆ.

ಇದರೊಟ್ಟಿಗೆ ನೆನಪು, ಅನನ್ಯ ಚಿಂತನಾ ಮಾದರಿಗಳು, ಅಭಿವ್ಯಕ್ತಿ ವಿಧಾನಗಳು ತಮ್ಮದೇ ಜೀವನಾನುಭವದ ಮೂಲಕ ದೊರೆಯಬಹುದಾದ ಅವಕಾಶಗಳೂ ಕಣ್ಮರೆಯಾಗುತ್ತವೆ. ಭಾಷೆಯೆಂಬುದನ್ನು ಬದುಕಿನ ಸರ್ವಸ್ವವನ್ನು ಒಳ್ಗೊಂಡಿರುವ ಸಂಪನ್ಮೂಲವನ್ನಾಗಿಯೇ ಪರಿಗಣಿಸಲಾಗಿದೆ. ಸಮೂಹಗಳ ಏಳ್ಗೆ, ಭವಿಷ್ಯ ಅಡಕವಾಗಿರುವುದು, ಆಯಾ ಸಮೂಹಗಳ ಭಾಷೆಯ ಬೆಳವಣಿಗೆ ಮತ್ತು ವಿಸ್ತರಣೆಯನ್ನು ಅವಲಂಬಿಸಿರುತ್ತವೆ.

ಜಗತ್ತಿನಾದ್ಯಂತ ಮಾತ್ನಾಡುವ ಅಂದಾಜು ಆರು ಸಾವಿರ ಭಾಷೆಗಳಲ್ಲಿ ಕನಿಷ್ಠವೆಂದರೂ ಶೇಕಡ 43% ರಷ್ಟು ಭಾಷೆಗಳು ಅಳಿವಿನಂಚಿನಲ್ಲಿವೆ. ಈ ಲೋಕದಲ್ಲಿ ಕೆಲವೇ ಕೆಲವು ಭಾಷೆಗಳಿಗೆ ಮಾತ್ರ ಶಿಕ್ಷಣ ನೀಡುವ ಸಾರ್ವಜನಿಕ ಕ್ಷೇತ್ರದಲ್ಲಿ ಕ್ರಿಯಾಶೀಲವಾಗಿ ವ್ಯವಹರಿಸುವುದಕ್ಕೆ ಅವಕಾಶಗಳು ದಕ್ಕಿರುತ್ತವೆ. ಇತ್ತೀಚಿನ ಡಿಜಿಟಲ್ ಜಗತ್ತಿನಲ್ಲಿ ನೂರಕ್ಕಿಂತ ಕಡಿಮೆ ಭಾಷೆಗಳನ್ನು ಬಳಸಲಾಗುತ್ತದೆ.

ಡಾ.ಮೇಟಿ ಮಲ್ಲಿಕಾರ್ಜುನ್, ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ಪರಿಣಾಮವಾಗಿ, ನಮ್ಮ ಬದುಕಿನುದ್ದಕ್ಕೂ, ನಮ್ಮ ಪರಿಸರವೇ ಆಗಿರುವ ನಮ್ಮ ನುಡಿಗಳು ನಿಸ್ಪ್ರಯೋಜಕವಾಗಿ ತೋರುತ್ತವೆ. ಇಂತಹ ಸನ್ನಿವೇಶದಲ್ಲಿ ತಾಯ್ನುಡಿಗಳ ಬಗಗೆ ನಮ್ಮಲ್ಲಿ ಎಚ್ಚರವನ್ನು ಮೂಡಿಸುವ ಸಾಕಷ್ಟು ಚಟುವಟಿಕೆಗಳು ನಮ್ಮ ಸುತ್ತಲೂ ನಡೆಯುತ್ತವೆ. ಆದರೆ ಈ ಎಲ್ಲ ಚಟುವಟಿಕೆಗಳ ಹಿಂದಿನ ಪ್ರೇರಣೆ ಮತ್ತು ಒತ್ತಾಸೆಯು ಪ್ರಭುತ್ವದ ಮೂಲಕ ಮುಂಚೂಣೆಗೆ ಬರದೇ, ಕೇವಲ ಯುನಿಸ್ಕೋ ಇಲ್ಲವೇ ಇಂತಹ ಇನ್ನ್ಯಾವುದೇ ಸಂಸ್ಥೆಗಳ ಮೂಲಕ ಚಾಲ್ತಿಗೆ ಬರುತ್ತವೆ.

ಅಂದರೆ ಭಾಷಾ ನೀತಿ ಅಥವಾ ಭಾಷಾ ಯೋಜನೆಗಳ ಮೂಲಕ ಭಾಷೆಗಳ ಬೆಳವಣಿಗೆ ಮತ್ತು ಅಳಿವಿನಂಚಿನಲ್ಲಿರುವ ಭಾಷೆಗಳನ್ನು ಉಳಿಸುವ ಹೊಣೆಗಾರಿಕೆ ಸಾರ್ವಜನಿಕ ಸಂಸ್ಥೆಗಳಿಗೆ ಇರಬೇಕಾಗುತ್ತದೆ. ಕೇವಲ ಸಾಮಾಜಿಕ ಕಾಳಜಿಗಳ ಪರಿಣಾಮದಿಂದ ಮಾತ್ರ ಭಾಷೆಗಳನ್ನು ಉಳಿಸಿ ಬೆಳೆಸುವುದೆಂದರೆ, ಅದೊಂದು ಆದರ್ಶದ ನೆಲೆಯಾಗಿ ಮಾತ್ರ ಕಾಣುತ್ತದೆ. ಹಾಗೂ ಬರೀ ಮೆಟಾಫಿಸಿಕಲ್ ಆಯಾಮವನ್ನು ಆರೋಪಿಸುವ ಮೂಲಕ ಭಾಷೆಗಳನ್ನು ಉಳಿಸಿ ಬೆಳೆಸುವ ಪ್ರಯತ್ನಗಳೂ ಕೂಡ ಅಷ್ಟೊಂದು ಪರಿಣಾಮಕಾರಿ ಪ್ರಭಾವವನ್ನು ಬೀರಲಾರವು.

ಬದುಕಿನ ಪ್ರತಿಯೊಂದು ವಿದ್ಯಮಾನವು ತನ್ನ ಆಗುವಿಕೆಯನ್ನು ಆಯಾ ಸಮುದಾಯದ ಭಾಷೆಯ ಮೂಲಕ ಪ್ರಕಟಿಸುತ್ತದೆ. ಹಾಗಂತ ಬದುಕಿಗೂ ಮತ್ತು ಭಾಷೆಗೂ ನಡುವೆ ಸಾವಯವ ಸಂಬಂಧ ಇರುತ್ತದೆಂದು ತೀರ್ಮಾನಿಸುವುದು ಸೂಕ್ತ ನಿಲುವಲ್ಲ. ಏಕೆಂದರೆ, ಭಾಷೆಯೆನ್ನುವುದು ಬದುಕಿನ ಪರಿಸರವನ್ನು ಕಾಪಿಡುವ ಹಾಗೂ ತಲೆಮಾರುಗಳಿಂದ ತಲೆಮಾರಿಗೆ ಸಂಚಿತ ಅನುಭವ ಮತ್ತು ತಿಳಿವಿನ ಬಗೆಗಳನ್ನು ರವಾನಿಸುತ್ತದೆ. ಆದರೆ ಹೀಗೆ ರವಾನಿಸುವ ಪ್ರಕ್ರಿಯೆಯ ಮೂಲಕವೇ ಭಾಷೆ ಮತ್ತು ಬದುಕಿನ ನಡುವೆ ಅವಿನಾಭಾವ ಸಂಬಂಧ ಏರ್ಪಡುತ್ತದೆ.

ಹೊರತು ಸಮುದಾಯ ಮತ್ತು ಭಾಷೆಗಳ ನಡುವಣ ನಂಟನ್ನು ರಕ್ತ ಸಂಬಂಧದ ನೆಲೆಯಲ್ಲಿ ನೋಡಲು ಸಾಧ್ಯವಿಲ್ಲ. ಹಾಗಂತ ಸಮೂಹಗಳ ಅಸ್ಮಿತೆಯನ್ನು ರೂಪಿಸುವಲ್ಲಿ ಮತ್ತು ಆಯಾ ಸಮೂಹಗಳ ವೈಚಾರಿಕ ಪರಂಪರೆಗಳನ್ನು ನೆಲೆಗೊಳಿಸುವಲ್ಲಿ ಭಾಷೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಈ ಮಹತ್ವದ ತೀವ್ರತೆ ಎಷ್ಟಿದೆಯೆಂದರೆ ಜನ ಸಮೂಹಗಳು ತಾವು ಸಿಲಿಕಿಕೊಂಡ ಬಂಧನಗಳಿಂದ, ವಿಮೋಚನೆ ಅವರಾಡುವ ಭಾಷೆಯಿಂದಲೇ ಸಾಧ್ಯ ಎನ್ನುವ ವಾಸ್ತವವನ್ನು ಮನಗಾಣುವ ಮಟ್ಟಿಗೆ ಇದು ವಿಸ್ತರಿಸಿದೆ.

ಅಂದರೆ, ಭಾಷೆ ಸ್ವ-ನಿರ್ಣಯಕ್ಕೆ (ಸೆಲ್ಫ್-ಡಿಟರ್ನಿಮೇಶನ್) ಸಂಬಂಧಿಸಿದ ವಿದ್ಯಮಾನ. ವಿಭಿನ್ನ ಹಂತಗಳಲ್ಲಿ ಇದರ ಅಂತರ್-ಸಂಬಂಧಿತ ವಿಧಾನಗಳು ಈ ಸ್ವ-ನಿರ್ಣಯದ ಬೇಡಿಕೆಗಳಿಗೆ ಸಂಬಂಧಿಸಿರುವುದನ್ನು ಕಾಣಬಹುದು. ಆದರೆ ಪ್ರಬಲ ಭಾಷೆಗಳು ನಿಯಂತ್ರಣ ಮತ್ತು ಪ್ರಾಬಲ್ಯದ ಪ್ರಮುಖ ಸಾಧನವಾಗಿ ಮಾತ್ರ ಬೆಳೆಯುತ್ತಿವೆ. ಈ ಬೆಳವಣಿಗೆ ದಿನದಿಂದ ದಿನಕ್ಕೆ ಇನ್ನಷ್ಟು ತೀವ್ರಗೊಳ್ಳುತ್ತಿದೆ ಎಂಬುದರ ವಾಸ್ತವ ನಮಗೆಲ್ಲ ಈಗ ಮನವರಿಕೆಯಾಗಿದೆ.

ಆದರೆ ತಾಯ್ನುಡಿಗಳ ಬಗೆಗಿನ ಪ್ರಾಮುಖ್ಯತೆಯನ್ನು ಅರಿಯುವ ನೆಲೆಗಳು ಇದೇ ವೇಗದಲ್ಲಿ ಬೆಳೆಯುತ್ತಿಲ್ಲ ಅನ್ನುವುದನ್ನು ಅಲ್ಲಗಳಿಯಲು ಆಗದು. ಇದೇ ಹಂತದಲ್ಲಿ ಭಾಷಿಕ ತಿರುವುವೊಂದು (ಲಿಂಗ್ವಿಸ್ಟಿಕ್ ಟರ್ನ್) ಮೈದಾಳುತ್ತದೆ. ಪರಿಣಾಮವಾಗಿ ಭಾಷಿಕ ಏಕೀಕರಣ ಇಲ್ಲವೇ ಏಕರೂಪಿತನದ ವಿನ್ಯಾಸಗಳು ಮತ್ತಷ್ಟು ಬಿಗಡಾಯಿಸಿದವು. ಆದರೆ ಈ ಏಕರೂಪೀಕರಣದ ಪ್ರಕ್ರಿಯೆಗೂ ಮತ್ತು ರಾಷ್ಟ್ರ ನಿರ್ಮಾಣದ ಪ್ರಕ್ರಿಯೆಗಳ ನಡುವೆ ಸಂಬಂಧವನ್ನು ಕಲ್ಪಿಸಲಾಗಿದೆ.

ಈ ಭಾಷಿಕ ಬಿಕ್ಕಟ್ಟನ್ನು ಆಧುನಿಕತೆಯ ಶುರುವಿನಿಂದಲೂ ಜಗತ್ತಿನಾದ್ಯಂತ ನಾವು ನೋಡಬಹುದು. ಈ ವಾದವನ್ನು ಇನ್ನೂ ನಿಚ್ಚಳಗೊಳಿಸಬೇಕೆಂದರೆ, ಜ್ಞಾನೋದಯದ (ಎನ್ಲೈಟ್ನಮೆಂಟ್) ಯುಗದಿಂದಲೂ ರಾಷ್ಟ್ರ ನಿರ್ಮಾಣದಲ್ಲಿ ಭಾಷೆಯ ಪಾತ್ರ ಅತ್ಯಗತ್ಯ. ಈ ಏಕರೂಪಗೊಳಿಸುವ ಬಗೆಗಳನ್ನು ನಮ್ಮ ಸನ್ನಿವೇಶದಲ್ಲಿಯೂ ರಾಷ್ಟ್ರೀಯತೆಯ ಪ್ರಮುಖ ಅಂಶವನ್ನಾಗಿ ನೋಡಲಾಗಿದೆ. ವಸಾಹತುಶಾಹಿ ರಚನೆಗಳನ್ನು ನಿರ್ವಹಿಸುವಲ್ಲಿ ಭಾಷೆ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಆದರೆ ಈ ವಿಧಾನ ಎಷ್ಟೊಂದು ಸಂಕೀರ್ಣವಾಗಿದೆ ಎಂದರೆ, ನಮ್ಮ ಸ್ವಂತಿಕೆಯ ಪ್ರಶ್ನೆಗಳು ಜಾಗ್ರತಗೊಳ್ಳಲು ಇಂಗ್ಲಿಶು ಭಾಷೆಯೇ ಕಾರಣವೆಂದು ಬಲವಾಗಿ ನಂಬಲಾಗಿದೆ. ಯಾವುದು ವಸಾಹತುಶಾಹಿ ಪ್ರಾಬಲ್ಯವನ್ನು ಬಲಪಡಿಸುವ ಅಸ್ತ್ರವಾಗಿತ್ತೋ, ಅದೇ ಭಾಷೆಯೂ ನಮ್ಮ ಬಿಡುಗಡೆಯ ಸಾಧನವೂ ಆಗಿದೆ ಎಂದು ನಂಬಲಾಗಿದೆ. ಈ ನಂಬಿಕೆಯ ಪರಿಣಾಮಗಳೇ ಇವತ್ತು ನಮ್ಮ ಮೇಲೆ ಸವಾರಿ ಮಾಡುತ್ತಿವೆ.

ಇಂಗ್ಲಿಶು ಕನ್ನಡದ ಮೇಲೆ ಸವಾರಿ ಮಾಡಿದರೆ, ಕನ್ನಡ ತನ್ನ ಕಕ್ಷಿಯಲ್ಲಿರುವ ಸಣ್ಣ ಸಣ್ಣ ಭಾಷೆಗಳ ಮೇಲೆ ಸವಾರಿ ಮಾಡುತ್ತಿದೆ. ಅಷ್ಟೆಯಲ್ಲದೆ ಅವುಗಳ ಅಸ್ತಿತ್ವವಕ್ಕೆ ದೊಡ್ಡ ಸವಾಲಾಗಿದೆ. ಕರ್ನಾಟಕದಲ್ಲಿ ಕನ್ನಡವೇ ಕಡ್ಡಾಯ ಎಂದಾದರೆ, ಭಾಷಿಕ ಸಹಬಾಳ್ವೆಯ ಪ್ರಶ್ನೆಯೇ ಇಲ್ಲ.

ಬಹುಸಂಖ್ಯಾತ ಭಾಷೆಗಳು ಅಥವಾ ವಸಾಹತುಶಾಹಿ ಭಾಷೆಗಳ ಮಾಧ್ಯಮದ ಮೂಲಕ ಅಲ್ಪಸಂಖ್ಯಾತ ಮಕ್ಕಳಿಗೆ ಶಿಕ್ಷಣವನ್ನು ನೀಡುವಲ್ಲಿ ಈ ಭಾಷೆಗಳು ಅತ್ಯಂತ ಶಕ್ತಿಯುತವಾದ ಹಾಗೂ ಏಕರೂಪಿತನದ ಶಕ್ತಿಯಾಗಿವೆ. ಹೀಗಾಗಿ ಏಕರೂಪಗೊಳಿಸುವ ಕಾರ್ಯವನ್ನು ಸಹಜವಾಗಿಯೇ ಈ ಭಾಷೆಗಳು ನಿಭಾಯಿಸುತ್ತವೆ.

ಆದರೆ ಭಾಷೆಯು ಪ್ರತಿ-ಆಧಿಪತ್ಯಗಳಿಗೆ ಮತ್ತು ಹಲವು ಹಂತಗಳಲ್ಲಿ ಸ್ವ-ನಿರ್ಣಯವನ್ನು ಪಡೆಯಲು ಒಂದು ಪ್ರಮುಖ ಸಾಧನವಾಗಿ ಮಾರ್ಪಟ್ಟಿರುವುದನ್ನೂ ನೋಡುತ್ತೇವೆ. ಮಾನಸಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಸಮುದಾಯವೊಂದು ಬಲಗೊಳ್ಳಲು ಅವರ ಭಾಷೆಗಳು ಎಷ್ಟು ಒತ್ತಾಸೆಯಾಗಬಲ್ಲವು ಅನ್ನುವುದನ್ನು ನಮ್ಮ ಭಾರತದ ಸನ್ನಿವೇಶದಲ್ಲಿ ಮನಗಾಣಬೇಕಿದೆ.

ಏಕೆಂದರೆ ಜಗತ್ತನ್ನು ನೋಡುವುದು, ಅರ್ಥೈಸುವುದು, ಅರ್ಥಮಾಡಿಕೊಳ್ಳುವುದು ಮತ್ತು ಬದಲಾಯಿಸುವುದು ಮೊದಲಾದ ಸಮೂಹಗಳ ಸಾರ್ವತ್ರಿಕ ಚಟುವಟಿಕೆಗಳಲ್ಲಿ ಭಾಷೆಯೇ ಮುಖ್ಯ. ನಿಜಕ್ಕೂ ನಮ್ಮ ಬದುಕಿನ ನಂಬಿಕೆಯ ಜಗತ್ತನ್ನು ರಚಿಸುವಲ್ಲಿ ಭಾಷೆಯೇ ಕೇಂದ್ರವಾಗಿದೆ ಎನ್ನುವ ಸಾಮಾಜಿಕ ವಾಸ್ತವವನ್ನು ನಾವು ಮತ್ತೆ ಮತ್ತೆ ಮನವರಿಕೆ ಮಾಡಿಕೊಳ್ಳಬೇಕು.

ಅಂದರೆ ಸಪೀರ್-ವೂರ್ಫ್ ಅವರ ವಾದವನ್ನು ಮಂಡಿಸುತ್ತಿಲ್ಲ. ಬದಲಾಗಿ ನಮ್ಮ ಭಾಷೆ ಎನ್ನುವ ವಿದ್ಯಮಾನವೇ ಎಷ್ಟೊಂದು ಪ್ರಮುಖವಾದದ್ದು ಎಂಬುದನ್ನು ಮಾತ್ರ ಹೇಳುತ್ತೇನೆ. ಜೀವ ಜಗತ್ತಿನಲ್ಲಿ ವೈವಿಧ್ಯತೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ನಾವು ಈಗಲಾದರೂ ಎದುರಾಗದೇ ಹೋದರೆ, ಬದುಕಿನ ಬಹುದೊಡ್ಡ ಬಿಕ್ಕಟ್ಟುಗಳನ್ನು ಇನ್ನೂ ಮುಂದೆ ನೋಡಬೇಕಾಗುತ್ತದೆ.

ಮುಂದುವರೆಯುವುದು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version