ನೆಲದನಿ

ಕಲೆಯ ಅನ್ನದಾತ : ಸಿದ್ಧಪ್ಪ ರೊಟ್ಟಿ ಎಂಬ ಕಲಾವಿದನ ಒಡಲದನಿ

Published

on

ಸಿದ್ಧಪ್ಪ ರೊಟ್ಟಿ

ಲೆ ಮತ್ತು ಕಲಾವಿದನ ನಡುವೆ ಬಹು ಅನ್ಯೋನ್ಯವಾದ ಬಂಧವೊಂದು ಸದಾ ಜಾಗೃತವಾಗಿರುತ್ತದೆ. ಈ ಬಂಧ ನಿಸ್ವಾರ್ಥ ಮತ್ತು ಪ್ರಾಮಾಣಿಕ ನೆಲೆಯಲ್ಲಿದ್ದಾಗ, ಈ ಬಂಧ ಗಟ್ಟಿಗೊಂಡು ಸಮಾಜಮುಖಿಯಾದ ಸಂಬಂಧಗಳನ್ನು ಎಣೆಯುವುದಕ್ಕೆ ಅನುವಾಗುತ್ತದೆ. ಕಲೆ, ಕಲಾವಿದ ಮತ್ತು ಸಮಾಜವೆಂಬ ಈ ತ್ರಿಕೋನ ಸರಣಿಯು ಭಾವನಾತ್ಮಕ ನೆಲೆಯಲ್ಲಿ ಗಟ್ಟಿಗೊಂಡಾಗ ಜೀವಪರವಾದ ಕಾಳಜಿಯನ್ನು ಜಗತ್ತಿಗೆ ನೀಡುವ ಮೂಲಕ, ಮಾನವ ಸಂಬಂಧಗಳನ್ನು ಮಾತ್ರವಲ್ಲದೆ ಜೀವಜಗತ್ತಿಗೆ ಮಿಡಿಯುವುದಕ್ಕೆ ಸಿದ್ಧಗೊಳ್ಳುತ್ತವೆ. ಹೀಗೆ ಕಲೆ, ಕಲಾವಿದ ಮತ್ತು ಸಮಾಜವನ್ನು ತನ್ನೊಳಗೆ ಬೆಸೆದುಕೊಂಡು, ತನ್ನ ಸೇವೆಯನ್ನು ಕಲೆ ಮತ್ತು ಅನ್ನದ ಮೂಲಕ ರಂಗಭೂಮಿ ಕ್ಷೇತ್ರಕ್ಕೆ ಧಾರೆಯೆರೆದವರಲ್ಲಿ ಸಿದ್ಧಪ್ಪ ರೊಟ್ಟಿಯವರು ಪ್ರಮುಖರಾಗಿದ್ದಾರೆ. 

ಶ್ರೀಯುತ ಸಿದ್ಧಪ್ಪ ರೊಟ್ಟಿಯವರು ಹಾವೇರಿ ಜಿಲ್ಲಾ ಹಾನಗಲ್ ತಾಲ್ಲೂಕಿನ ಶೇಷಗಿರಿ ಎಂಬ ಗ್ರಾಮದಲ್ಲಿ ಶ್ರೀ ಪುಟ್ಟಪ್ಪ ನಾಗಪ್ಪ ರೊಟ್ಟಿ, ಶ್ರೀಮತಿ ಈರಮ್ಮ ದಂಪತಿಗಳ ಪುತ್ರನಾಗಿ ಜನಿಸಿದರು. ಶ್ರೀಯುತ ಸಿದ್ಧಪ್ಪ ರೊಟ್ಟಿವರು ಬಾಲ್ಯದ ದಿನಗಳಿಂದಲೂ ಕಾಡುವ ಬಡತನದ ನಡುವೆ ಬೆಳೆದರೂ ತನ್ನೊಳಗೆ ಕಲಾ ಶ್ರೀಮಂತಿಕೆಯನ್ನು ಪೋಷಿಸಿಕೊಂಡು ಬಂದವರು. ವಿದ್ಯಾರ್ಥಿ ದೆಸೆಯಲ್ಲಿಯೇ ಸದರಿ ಗ್ರಾಮದಲ್ಲಿ ಸಮಾಜಿಕ ಕಳಕಳಿಯ ಜವಬ್ದಾರಿ ವಹಿಸಿಕೊಂಡು ಗಜಾನನ ಯುವಕ ಮಂಡಳಿ ಸ್ಥಾಪಿಸಿದ ಶ್ರೀಯುತ ಪ್ರಭು ಗುರಪ್ಪ ಮತ್ತವರ ಸಹಚರರ ಸಾರಥ್ಯದಲ್ಲಿ ನಡೆಯುತ್ತಿದ್ದ ಶಾಲಾ ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಸಿದ್ಧಪ್ಪನವರು ಸಕ್ರಿಯವಾಗಿ ಭಾಗವಹಿಸಿ ಕಲಾಭಿರುಚಿಯನ್ನು ಮೈಗೂಡಿಸಿಕೊಂಡರು. ಶ್ರೀಯುತ ಪ್ರಭು ಗುರಪ್ಪನವರ ಸಾಂಸ್ಕøತಿಕ ಗರಡಿಯಲ್ಲಿ ಬೆಳೆದ ಎರಡನೆ ತಲೆಮಾರಿನ ಕಲಾ ಪ್ರತಿಭೆ ಸಿದ್ಧಪ್ಪ ರೊಟ್ಟಿಯವರು. ಹೀಗಾಗಿ ಸಿದ್ಧಪ್ಪ ರೊಟ್ಟಿಯವರಿಗೆ ಕಲಾ ಬುನಾದಿಯ ನಿರ್ಮಾಣ ಪ್ರಭು ಗುರಪ್ಪನವರ ಸಾರಥ್ಯದಿಂದಲೆ ನಿರ್ಮಾಣಗೊಂಡಿದ್ದು ಎಂದರೆ ತಪ್ಪಾಗಲಾರದು.

ಶ್ರೀಯುತ ಸಿದ್ಧಪ್ಪ ರೊಟ್ಟಿಯವರು ಬಾಲ್ಯದ ದಿನಗಳಿಂದಲೂ ಬಡತನ ಮತ್ತು ಹಸಿವಿನ ಸೆಣಸಾದ ನಡುವೆ ತಮ್ಮ ಜೀವನವನ್ನು ನಿರ್ವಹಿಸಿಕೊಂಡು ಬಂದವರು. ತನ್ನ ಕೌಟುಂಬಿಕ ಬಡತನವನ್ನು ಕಲಾ ಶ್ರೀಮಂತಿಕೆಯ ಮೂಲಕ ಮೆಟ್ಟಿನಿಂತು, ತಾನು ಅನುಭವಿಸಿದ ಹಸಿವನ್ನು ನೀಗಿಸುವ ನೆಲೆಯಲ್ಲಿ ಕಲಾಸಕ್ತರಿಗೆ ಅನ್ನದಾತರಂತೆ ನಮ್ಮ ಮುಂದೆ ನಿಂತಿದ್ದಾರೆ. ಒಬ್ಬ ಕಲಾವಿದ ವ್ಯವಹಾರಿಕ ನೆಲೆಯಲ್ಲಿ ಮಾತ್ರ ತನ್ನ ಕಲೆಯನ್ನು ಸೀಮಿತಗೊಳಿಸಿಕೊಂಡಾಗ ಅವನೆಲ್ಲ ಕ್ರಿಯೆಗಳು ಆರ್ಥಿಕತೆಯ ಲೆಕ್ಕಾಚಾರದಿಂದ ಕೂಡಿರುತ್ತವೆ. ಆದರೆ ಸಿದ್ಧಪ್ಪನವರ ತಾತ್ವಿಕ ನಿಲುವುಗಳು ವ್ಯವಹಾರಿಕ ಜಗತ್ತಿನಿಂದ ಬಹುದೂರ ಉಳಿದಿವೆ. ಹೀಗಾಗಿಯೇ ಇಲ್ಲಿ ಸಿದ್ಧಪ್ಪನವರು ನಮ್ಮನ್ನೆಲ್ಲ ಆತ್ಮೀಯವಾಗಿ ಕಾಡುವ ವಿಶಿಷ್ಟವಾದ ಪ್ರತಿಭೆಯಾಗಿ ಕಂಡುಬರುತ್ತಾರೆ. ಶ್ರೀಯುತ ಸಿದ್ಧಪ್ಪ ರೊಟ್ಟಿ ಎಂಬ ಈ ಬಹುಮುಖಿ ವ್ಯಕ್ತಿತ್ವದ ಪ್ರತಿಭೆಯು ಬಹುಮುಖ್ಯವಾಗಿ ನಮಗೆ ಎರಡು ನೆಲೆಯಲ್ಲಿ ಎದುರಾಗುತ್ತಾರೆ. ಒಂದು, ತನ್ನಲ್ಲಿ ಅಂರ್ಗತವಾದ ಕಲೆಯ ಮೂಲಕ ಸಮಾಜವನ್ನು ತಿದ್ದುವ, ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಕಲಾವಿದನಾಗಿ ಮಾತ್ರವಲ್ಲದೆ ಒಬ್ಬ ಗುರುವಾಗಿ ನಮಗೆ ದರ್ಶನವಾಗುತ್ತಾರೆ. ಎರಡು, ಒಬ್ಬ ಕಲಾವಿದನಾಚೆ ಕಲಾಸಕ್ತರ ಹಸಿವ ನೀಗಿಸುವ ಅನ್ನದಾತರಾಗಿ ನಿಲ್ಲುತ್ತಾರೆ. ಇವೆರಡು ಮಾದರಿಗಳ ಸಂಗಮವೆ ‘ಸಿದ್ಧಪ್ಪ ರೊಟ್ಟಿ’ ಎಂದರೆ ಅತಿಶಯೋಕ್ತಿಯಾಗಲಾರದು.

ಶ್ರೀಯುತ ಸಿದ್ಧಪ್ಪನವರು ಒಬ್ಬ ಕಲಾವಿದನಾಗಿ ಬಾಲ್ಯದ ದಿನಗಳಲ್ಲಿಯೇ ಮೈದಳೆದವರು. ನಾಲ್ಕನೆ ತರಗತಿ ಓದುವ ಸಂದರ್ಭದಲ್ಲಿಯೇ ಒಂದು ನಾಟಕದಲ್ಲಿ ಮಾಸ್ತರನ ಪಾತ್ರ ಮಾಡಿ, ಆ ಪಾತ್ರಕ್ಕೆ ಜೀವ ತುಂಬಿದ ಕಾರಣ ಇವರನ್ನು ಊರಿನ ಜನತೆ ಇಂದಿಗೂ ಮಾಸ್ತರ ಎಂಬುದಾಗಿಯೇ ಸಂಬೋಧಿಸುತ್ತಾರೆ. ಹೀಗೆ ಆರಂಭವಾದ ಇವರ ನಾಟಕದ ಯಾತ್ರೆಯು ಹಲವಾರು ಸಾಮಾಜಿಕ, ಪೌರಾಣಿ ನಾಟಕಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವಂತೆ ಮಾಡಿದೆ. ಇವುಗಳ ಜೊತೆ ಜೊತೆಯಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವ ಹಲವಾರು ಬೀದಿ ನಾಟಕಗಳನ್ನು ಪ್ರದರ್ಶಿಸುವ ಮೂಲಕವಾಗಿ ತಮ್ಮ ಕಲಾ ಶ್ರೀಮಂತಿಕೆಯನ್ನು ಮೆರೆದಿದ್ದಾರೆ. ಕೇವಲ ಕಲೆಯಿಂದ ಜೀವನ ಸಾಗಿಸುವುದು ಕಷ್ಟಕರವಾದಾಗ ಬದುಕಿನ ಒಂದು ವೃತ್ತಿಯಾಗಿ ಹೋಟೆಲ್ ತೆರೆದುಕೊಂಡರು. ಈ ವೃತ್ತಿಯ ಜೊತೆಗೆ ಕಲೆಯ ನಂಟನ್ನು ಯಥಾವತ್ತಾಗಿ ಕಾಪಾಡಿಕೊಂಡು ಬಂದಿದ್ದಾರೆ. ಶೇಷಗಿರಿ ಒಂದು ಕುಗ್ರಾಮವಾದರು ಒಂದು ಸಂಘಟನಾತ್ಮಕವಾದ ಹೋರಾಟದಿಂದ ಜಾಗೃತ ಗ್ರಾಮವಾಗಿ ಅಭಿವೃದ್ಧಿಯ ಪಥದತ್ತ ಸಾಗುತ್ತಿದೆ. ಪ್ರಭು ಗುರಪ್ಪನವರ ಕನಸಿನ ಕೂಸಾಗಿ ರೂಪತಳೆದ ರಂಗಭೂಮಿಯು ಇಂದು ಪ್ರಪಂಚದ ಗಮನವನ್ನು ಶೇಷಗಿರಿಯತ್ತ ಸೆಳೆಯುವಂತೆ ಮಾಡಿದೆ. ಈ ರಂಗಭೂಮಿಯ ಹಾದಿಯಲ್ಲಿ ಪ್ರಭು ಗುರಪ್ಪನವರೊಂದಿಗೆ ಕೈ ಜೋಡಿಸಿದ ಸಿದ್ಧಪ್ಪನವರು ಇಲ್ಲಿಗೆ ಬರುವ ಕಲಾಸಕ್ತರೂ ಹಾಗೂ ರಂಗಾಸಕ್ತರನ್ನು ತಮ್ಮ ಮನೆಯ ಅತಿಥಿಗಳೆಂದು ಭಾವಿಸಿ, ಆದರ ಆತಿಥ್ಯವನ್ನು ನೀಡುವ ಮೂಲಕ ಅವರ ಹಸಿವನ್ನು ನೀಗಿಸುವ ಅನ್ನದಾತರಾಗಿ ತಮ್ಮ ಸೇವೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಈ ಸೇವೆಯಲ್ಲಿ ವ್ಯವಹಾರಿಕತೆ ಗೌಣವಾಗಿ, ಅವರ ಹೃದಯ ವೈಶಾಲ್ಯತೆ, ಕಲೆಯೊಂದಿಗಿನ ಭಾವನಾತ್ಮಕವಾದ ಸಂಬಂಧ ಎದ್ದು ಕಾಣುತ್ತದೆ.

ಶ್ರೀಯುತ ಸಿದ್ಧಪ್ಪ ರೊಟ್ಟಿಯವರ ಈ ಮಹತ್ತರವಾದ ಸೇವೆಗೆ ಅವರ ಶ್ರೀಮತಿ ಗೌರಮ್ಮನವರ ಸಹಕಾರವು ಪ್ರಚೋದಕ ಶಕ್ತಿಯಾಗಿ ಕಾರ್ಯನಿರ್ವಹಿಸಿದೆ. ಸಿದ್ಧಪ್ಪನವರ ಎಲ್ಲಾ ಕಾರ್ಯಗಳಿಗೆ ಪ್ರೋತ್ಸಾಹ ನೀಡುವ ಮೂಲಕವಾಗಿ ಬದುಕಿನ ಬಂಡಿಯನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ತಮ್ಮ ಸಂಬಂಧಿಗಳು ಸಿದ್ಧಪ್ಪ ನಾಟಕ ಮಾಡುತ್ತಾನೆಂದು ಮೂದಲಿಸಿದಾಗಲೂ ತನ್ನ ಗಂಡನ ನಡೆಯನ್ನು ಸಮರ್ಥಿಸಿಕೊಂಡು, ಸಿದ್ಧಪನವರ ಕಲಾ ಶ್ರೀಮಂತಿಕೆಗೆ ಬೆನ್ನೆಲುಬಾಗಿ ನಿಂತಿದ್ದಾರೆ. ತಮ್ಮ ಶ್ರೀಮತಿಯವರ ಈ ತಾಳ್ಮೆ ಮತ್ತು ಅವರ ಪ್ರೋತ್ಸಾಹವನ್ನು ವ್ಯಕ್ತಪಡಿಸುವ ಸಂದರ್ಭದಲ್ಲಿ ಸಿದ್ಧಪನವರು ಗದ್ಗದಿತರಾಗಿ, ಕಣ್ಣಂಚಲ್ಲಿ ನೀರು ತುಂಬಿಕೊಂಡಿದ್ದರು. ಈ ಸಂದರ್ಭದಲ್ಲಿ ಹೊರಬಂದ ಒಂದನಿ ಕಣ್ಣಿರು ಅವರ ಶ್ರೀಮತಿಯ ಪ್ರೋತ್ಸಾಹದ ಪ್ರತೀಕವಾಗಿತ್ತು. ಇಷ್ಟೇ ಸಾಕು ಅವರಿಬ್ಬರ ನಡುವಿನ ಭಾಂದವ್ಯದ ಸೆಲೆಯನ್ನು ಅರಿಯುವುದಕ್ಕೆ. ಶ್ರೀಯುತ ಸಿದ್ಧಪ್ಪನವರ ಕಲಾ ಸೇವೆಗೆ 2017 ರಲ್ಲಿ ‘ಸಿ.ಜಿ.ಕೆ’ ನಾಟಕ ಅಕಾಡೆಮಿ ಪ್ರಶಸ್ತಿ ಲಭಿಸಿದಾಗ ಇದು ಸಿದ್ಧಪ್ಪನವರಿಗೆ ಮಾತ್ರ ಸೇರಿದ ಫಲವಾಗಿರಲಿಲ್ಲ. ದಂಪತಿಗಳಿಬ್ಬರ ಸೇವೆಗೆ ಲಭಿಸಿದ ಫಲವಾಗಿತ್ತು. ಈ ದಂಪತಿಗಳಿಗೆ ಒಬ್ಬ ಮಗ ಮತ್ತು ಒಬ್ಬ ಮಗಳಿದ್ದು, ಮಗನು ಕೂಡ ತಂದೆಯ ಗುಣವನ್ನು ತನ್ನ ರಕ್ತದಲ್ಲಿ ಕರಗತ ಮಾಡಿಕೊಂಡು, ತನ್ನ ವಿದ್ಯಾರ್ಥಿ ಮಿತ್ರರಿಗೆ ನಾಟಕ ಕರಗತ ಮಾಡಿಸುವ ಜವಬ್ದಾರಿ ಹೊತ್ತು ತಂದೆ ಕೀರ್ತಿಯನ್ನು ಬೆಳಗುವತ್ತ ಮುನ್ನಡೆಯುತ್ತಿದ್ದಾರೆ.

ಶ್ರೀಯುತ ಸಿದ್ಧಪ್ಪ ರೊಟ್ಟಿಯವರದು ಮಣ್ಣ ಸೊಗಡಿನ ದೇಸಿ ಗುಣ. ನೆಲದ ಜೀವಪರವಾದ ಕಾಳಜಿ ಅವರಲ್ಲಿ ಸದಾ ಕ್ರಿಯಾಶೀಲವಾಗಿದೆ. ಈ ಮಣ್ಣದನಿ ಅವರಲ್ಲಿ ಮತ್ತಷ್ಟು ಹೊಸ ಕನಸುಗಳನ್ನು ಬಿತ್ತಿ ಬೆಳೆಯಲಿ. ಅವರು ಈ ಸಮಾಜಕ್ಕೆ ಮಾದರಿಯಾಗಿ ನಿಲ್ಲಲಿ. ಆ ಮೂಲಕ ರಂಗಭೂಮಿಗೆ ಆಶ್ರಯದಾತರಾಗಿ ನಿಲ್ಲಲಿ ಎಂಬುದು ನಮ್ಮ ಹಾರೈಕೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version