ನೆಲದನಿ
ನುಡಿಯ ಒಡಲು – 21 | ಮಾತು ಮತ್ತು ನೋಟಗಳ ವಿಭಜನೆ: ಸಂಕಥನಾ ವಿಶ್ಲೇಷಣೆ
- ಡಾ. ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕ, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ಮಾತು ಮತ್ತು ನೋಟಗಳ ನಡುವಣ ನಂಟನ್ನು ಕುರಿತು ಸಾಕಷ್ಟು ಚಿಂತನೆ, ಚರ್ಚೆಗಳು ಜಗತ್ತಿನಾದ್ಯಂತ ನಡೆಯುತ್ತಿವೆ. ಇವತ್ತಿಗೂ ಈ ಚರ್ಚೆಗಳು ಅತ್ಯಂತ ಪ್ರಸ್ತುತವಾಗಿಯೇ ಇರುತ್ತವೆ. ಕಾರಣವೇನಂದರೆ, ಮಾತನ್ನು ಕುರಿತು ನಡೆಯುತ್ತಿರುವ ಓದುಗಳು ಇವತ್ತಿಗೂ ನಿರಂತರವಾಗಿದ್ದರೂ, ಮಾತಿನ ಇಡೀ ಸ್ವರೂಪವನ್ನು ಅರಿಯಲು ನಮಗೆ ಸಾಧ್ಯವಾಗಿಲ್ಲ.
ಅದೇ ರೀತಿಯಾಗಿ ಮಾತು ಮತ್ತು ಲೋಕನೋಟಗಳ ನಡುವಣ ಸಂಬಂಧವನ್ನು ಕುರಿತು ಈಗಲೂ ನಡೆಯುತ್ತಿರುವ ಚರ್ಚೆಗಳಿಗೆ ಇನ್ನೂ ಯಾವುದೇ ಬಗೆಯ ನಿಚ್ಚಳವಾದ ತಾತ್ವಿಕ ವಿನ್ಯಾಸಗಳು ರೂಪುಗೊಂಡಿಲ್ಲ. ಹಾಗಾಗಿ ನುಡಿ, ಕಾಲ, ದೇಶ, ವ್ಯಕ್ತಿ ಮತ್ತು ಸಮೂಹಗಳ ನಡುವಿನ ಅಂತರ್ಸಂಬಂಧ ಗತಿತಾರ್ಕಿಕವಾದದ್ದು ಎಂದು ಕೆಲವು ಆಲೋಚನಾ ಕ್ರಮಗಳು ಹೇಳುತ್ತವೆ.
ಮತ್ತೆ ಇನ್ನೂ ಕೆಲವು ಮಾದರಿಗಳು ವಾದಿಸುವಂತೆ, ಈ ಸಂಬಂಧವು ಕೇವಲ ಭಾಷಿಕ ಕೇಂದ್ರಿತವಾದದ್ದು ಎಂದು ನಂಬುತ್ತವೆ. ಈ ಎರಡೂ ವಿನ್ಯಾಸಕ್ಕೆ ಹೊರತಾದ ಮಾದರಿಯೊಂದು ಇವತ್ತು ಅತ್ಯಂತ ಪ್ರಬಲವಾಗಿ ಬೆಳೆದಿದೆ. ಈ ಮಾದರಿಯ ಪ್ರಕಾರ ನುಡಿಯೆಂಬುದು ಮೂಲಭೂತವಾಗಿ ಗ್ರಹಿಕೆಗೆ ಸಂಬಂಧಿಸಿದ ವಿದ್ಯಮಾನ (ಕಾಗ್ನಿಟಿವ್ ಫಿನಾಮಿನಾನ್) ಆಗಿರುತ್ತದೆ. ಈ ತಿಳಿವಿನ ಪ್ರಕಾರ ನುಡಿ ಮತ್ತು ನೋಟಗಳ ನಡುವಣ ನಂಟಸ್ತಿಕೆ ವಿಶ್ವಾತ್ಮಕವಾದ ವಿನ್ಯಾಸವನ್ನು ಹೊಂದಿರುತ್ತದೆ ಎಂದಾಗುತ್ತದೆ.
ಅಂದರೇನಾಯ್ತು, ಕಾಲ, ದೇಶ ಹಾಗೂ ವ್ಯಕ್ತಿ ನೆಲೆಗಳಲ್ಲಿ ನುಡಿಯ ಮೂಲಕ ರೂಪುಗೊಳ್ಳುವ ಯಾವುದೇ ನೋಟಕ್ರಮವು ಕೂಡ ವಿಶ್ವಾತ್ಮಕ ಆಗಿರುತ್ತದೆ ಎಂದಾಯ್ತು. ಒಂದು ಪಕ್ಷ ಈ ನಿಲವೇ ದಿಟವಾಗಿದ್ದರೆ, ಮಾತು ಮತ್ತು ನೋಟಕ್ರಮಗಳ ನಡುವಿನ ವಿಭಜನೆ ಅತ್ಯಂತ ಸರಳವಾಗಿ ಕಾಣುತ್ತದೆ. ಅಂದರೆ ಮನುಷ್ಯನ ಗ್ರಹಿಕೆಯೆಂಬುದು ಜಗತ್ತಿನಾದ್ಯಂತ ಒಂದೇ ಬಗೆಯಲ್ಲಿ ನೆಲೆಪಡೆಯುತ್ತದೆ ಎಂದಾಗುತ್ತದೆ.
ಇಲ್ಲ ಈ ವಿಭಜನೆ ಇಷ್ಟೊಂದು ಸರಳವಾಗಿರಲು ಸಾಧ್ಯವಿಲ್ಲ ಎನ್ನುವುದನ್ನೂ ಇದೇ ಆಲೋಚನಾ ಕ್ರಮವೇ ತಿಳಿಸುತ್ತದೆ. ಅದೇನೆಂದರೆ, ವಿಶ್ವಾತ್ಮಕತೆ ಎಂಬುದು ಕೇವಲ ತತ್ವಗಳ (ಪ್ರಿನ್ಸಿಪಲ್ಸ್) ನೆಲೆಗೆ ಮಾತ್ರ ಸಂಬಂಧಿಸಿರುತ್ತದೆ ಹೊರತು ಅದು ವಿಕಲ್ಪಗಳಿಗೂ (ಪ್ಯಾರಮೀಟರ್ಸ್) ಸಂಬಂಧಿಸಲಾರದು ಎನ್ನುವ ತಿಳುವಳಿಕೆಯೂ ಕೂಡ ಈ ವಿನ್ಯಾಸದೊಳಗೆಯೇ ನಮಗೆ ದೊರೆಯುತ್ತದೆ.
ಅಂದರೆ ಮನುಷ್ಯ ಸಹಜವಾಗಿರುವ ಎಲ್ಲ ವಿದ್ಯಮಾನಗಳಲ್ಲಿಯೂ ಕೆಲವು ಸಮಾನವಾದ ರಚನೆಗಳು ಇರುವುದನ್ನು ಈ ತತ್ವಗಳು ತಿಳಿಸುತ್ತವೆ. ಆದರೆ ನುಡಿ, ಕಾಲ, ದೇಶ ಹಾಗೂ ವ್ಯಕ್ತಿಗಳ ನಡುವೇ ಪ್ರತ್ಯೇಕವಾದ, ವಿಶಿಷ್ಟವಾದ ಇಲ್ಲವೇ ದೇಶೀಯವಾದ ರಾಚನಿಕ ವಿನ್ಯಾಸಗಳು ಹೇಗೆ ಕಾರಣವಾಗುತ್ತವೆ ಎಂಬ ತಿಳುವಳಿಕೆಯನ್ನು ಈ ವಿಕಲ್ಪಗಳು ಮನವರಿಕೆ ಮಾಡುತ್ತವೆ. ಹಾಗಾಗಿ ನುಡಿ, ಆಲೋಚನೆ, ಸಂಸ್ಕೃತಿ, ವ್ಯಕ್ತಿ, ದೇಶ ಹಾಗೂ ಸಮಾಜಗಳ ನಡುವಣ ವಿಭಜನೆಯನ್ನು ಅರಿಯುವುದಕ್ಕೆ ನಮಗೆ ಮುಖ್ಯವಾಗಿ ಇಂತಹ ವಿಕಲ್ಪಗಳು ಸಹಾಯಕ್ಕೆ ಬರುತ್ತವೆ.
ನುಡಿ, ಮನಸ್ಸು ಹಾಗೂ ಸಮಾಜಗಳ ನಡುವಣ ನಂಟಸ್ತಿಕೆ ಎಷ್ಟೊಂದು ಸಂಕೀರ್ಣವಾದ ಸಂಗತಿ ಎಂಬುದನ್ನು ಈ ನಿಲುವುಗಳು ಸೂಚಿಸುತ್ತವೆ. ಮಾತು ಮತ್ತು ನೋಟಗಳ ನಡುವಣ ನಂಟಸ್ತಿಕೆ ಇವತ್ತು ಕೇವಲ ಸಾಮಾಜಿಕ ವರ್ತನೆಗೆ ಹಾಗೂ ಭಾಷಿಕ ರಚನೆಗೆ ಮಾತ್ರ ಸೀಮಿತಗೊಂಡಿಲ್ಲ. ಇದು ಮಾನಸಿಕ ವಿಕಾಸ ಹಾಗೂ ವ್ಯಕ್ತಿಯ ಮನಸ್ಸಿನಲ್ಲಿ ಜೈವಿಕವಾಗಿ ಹಾಗೂ ಸಹಜವಾಗಿಯೇ ಅಂತಸ್ಥವಾಗಿರುವ ಭಾಷಿಕ ವಿನ್ಯಾಸಕ್ಕೂ ಪೂರಕವಾಗಿ ಈ ನಂಟಸ್ತಿಕೆ ಹರಡಿಕೊಂಡಿರುತ್ತದೆ.
ಇದು ಬಹುತೇಕವಾಗಿ ರೂಪಕ ಇಲ್ಲವೇ ರೂಪಕಾತ್ಮಕ ನೆಲೆಯನ್ನು ಹೊಂದಿರುತ್ತದೆ. ಎಲ್ಲ ಸಮುದಾಯದ ಸದಸ್ಯರು ನೋಟಕ್ರಮಗಳಲ್ಲಿ ಬದುಕುವುದಷ್ಟೆಯಲ್ಲ, ಬದಲಾಗಿ ಈ ನೋಟಕ್ರಮಗಳ ರಚನೆಗಳನ್ನು ಕರಗತ ಮಾಡಿಕೊಳ್ಳುವ ಕೌಶಲಗಳನ್ನೂ ಹೊಂದಿರುತ್ತಾರೆ. ಆದ್ದರಿಂದ ಈ ವಸ್ತುವಿನ್ಯಾಸವು ಆಯಾ ನುಡಿಗಳಲ್ಲಿಯೇ ಪ್ರತಿಫಲನವಾಗುತ್ತದೆ. ನುಡಿಯೊಳಗೆಯೇ ಇಂತಹವೊಂದು ಹದಬೆರಕೆಯ ಆಯಾಮವಿರುತ್ತದೆ.
ನುಡಿಯಲ್ಲಿ ನಡೆಯುವ ಇಂತಹ ಹದಬೆರಕೆಯ ನೆಲೆಯನ್ನು ಕುರಿತು ಮಾತ್ನಾಡುವಾಗ, ನಮಗೆ ತೋರುವ ಪ್ರಮುಖ ಸಂಗತಿಯೇನಂದರೆ, ನುಡಿಯ ಕಾರಣದಿಂದಲೇ, ಮನುಷ್ಯರಿಗೆ ಇಂತಹವೊಂದು ಹದಬೆರಕೆಯ ಕಸುವು ನಮ್ಮ ಜೈವಿಕ ವಿನ್ಯಾಸದಲ್ಲಿಯೇ ನೆಲೆಗೊಂಡಿರುವುದು ಗೊತ್ತಾಗುತ್ತದೆ. ಇದೇ ಸನ್ನಿವೇಶದಲ್ಲಿಯೇ ಗೋಚರಿಸುವ ಮತ್ತೊಂದು ಸುಳಿವು ಏನೆಂದರೆ, ಬಹು ಬಗೆಯ ನೋಟಕ್ರಮಗಳನ್ನು ಪಡೆಯುವ ಅವಕಾಶವೂ ನಮಗೆ ಸಹಜವಾಗಿಯೇ ನಮ್ಮ ನಮ್ಮ ನುಡಿ ಪರಿಸರಗಳಲ್ಲಿ ಸಿಗುತ್ತವೆ.
ಹಾಗೇನೆ ನಮಗೆ ಬೇಕಾಗಿರುವ ನೋಟಕ್ರಮಗಳ ಇಲ್ಲವೇ ಪರಿಕಲ್ಪನೆಗಳ ಪ್ರಮಾಣದಲ್ಲಿ ನಮ್ಮದೆಯಾದ ಆಯ್ಕೆಗಳಿರುವುದು ಕೂಡ ವಿಶೇಷ. ಅಂದರೆ ಆಯಾ ನುಡಿ ಪರಿಸರದಲ್ಲಿ ಬದುಕುವ ಪ್ರತಿಯೊಬ್ಬರು ಕೂಡ ಸಮ ಪ್ರಮಾಣದ ಗ್ರಹಿಕೆಗಳನ್ನು ಪಡೆಯಲೇ ಬೇಕೆಂಬ ಯಾವುದೇ ಒತ್ತಾಯವಿರುವುದಿಲ್ಲ. ಹಾಗಾಗಿ ತಮ್ಮ ಬದುಕಿಗೆ ಅತ್ಯಂತ ಅಗತ್ಯವೆನಿಸುವ ನೋಟಕ್ರಮಗಳನ್ನು ಮಾತ್ರ ಪಡೆಯುವ ಈ ವಿನ್ಯಾಸವೇ ಮಾತು ಮತ್ತು ನೋಟಗಳ ನಡುವಣ ವಿಭಜನೆಗೆ ಕಾರಣವಾಗುತ್ತದೆ.
ಸಾಮಾಜಿಕ ಸಂವಹನವು ಲೀಲಾಜಾಲವಾಗಿ ಹಾಗೂ ಸಲೀಸಾಗಿ ನಡೆಯುವುದಕ್ಕೆ ಈ ನಿಲುವು ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತದೆ. ಇದರೊಟ್ಟಿಗೆ, ನೋಟಕ್ರಮಗಳನ್ನು ಭಾಷಿಕವಾಗಿ ವರ್ಗೀಕರಣಗೊಳಿಸುವ, ಆ ಇಡೀ ರಾಚನಿಕ ಪ್ರಕ್ರಿಯೆಯಲ್ಲಿಯೇ ಕ್ರಾಸ್‍ಲಿಂಗ್ವಿಸ್ಟಿಕ್ ವ್ಯತ್ಯಾಸಗಳು ಹೆಚ್ಚು ಪ್ರಬಲವಾಗಿರುತ್ತವೆ ಎಂಬುದು ಗಮನಾರ್ಹ ಸಂಗತಿ. ಹಾಗೂ ನೋಟಕ್ರಮಗಳ ಪ್ರತಿನಿಧಿಕರಣದಲ್ಲಿಯೂ ಈ ಕ್ರಾಸ್‍ಲಿಂಗ್ವಿಸ್ಟಿಕ್ ಮಾದರಿಗಳು ಅತ್ಯಂತ ನಿಚ್ಚಳವಾಗಿಯೇ ಕಾಣುತ್ತವೆ ಅನ್ನುವುದನ್ನೂ ಕೂಡ ಇಲ್ಲಿ ಮರೆಯಲು ಸಾಧ್ಯವಿಲ್ಲ.
ದಿಟ, ಈ ಕ್ರಾಸ್‍ಲಿಂಗ್ವಿಸ್ಟಿಕ್ ಮಾದರಿಗಳೇನು ನಮ್ಮಲ್ಲಿ ಯಾವುದೇ ಬಗೆಯ ಬೆರಗನ್ನುಂಟು ಮಾಡಲಾರವು. ಆದರೆ, ನೋಟಕ್ರಮಗಳಿಗೆ ನಾವು ಕಲ್ಪಿಸಿಕೊಳ್ಳಬಹುದಾದ ಯಾವುದೇ ಕಣ್ನೋಟಗಳ ವಿಧಾನಗಳ ಮೇಲೆ ಮನುಷ್ಯನ ನರತಂತು ವಿನ್ಯಾಸವು ಒಂದು ಬಗೆಯ ಒತ್ತಾಯವನ್ನುಂಟು ಮಾಡುತ್ತದೆ ಎಂಬ ದಿಟವನ್ನು ಅರಿಯಲು ಇವುಗಳು ಪೂರಕವಾಗಿರುತ್ತವೆ.
ನಮ್ಮ ಲೋಕಗ್ರಹಿಕೆಗಳನ್ನು ಕರಗತಗೊಳಿಸುವ ಸಂಕೀರ್ಣ ಭಾಷಿಕ ಸೂಚಿಗಳು, ವ್ಯವಸ್ಥೆಗಳು ಮತ್ತು ಉನ್ನತ ಮಟ್ಟದ ಸಾಹಿತ್ಯಕ ಹಾಗೂ ಕಲಾತ್ಮಕ ಚಳಕಗಳು ಮುಖ್ಯವಾಗಿ ಪ್ರಾಥಮಿಕ ನೋಟಗಳು ಹಾಗೂ ಮೂಲ ಅನುಭವವನ್ನು ನೆಲೆಯಾಗಿಸಿಕೊಂಡು ಮೈಪಡೆಯುತ್ತವೆ.
ನಾವು ಸಾಮೂಹಿಕವಾಗಿ ಬದುಕು ನಡೆಸುವ ಸನ್ನಿವೇಶದಲ್ಲಿ, ಯಾವುದೇ ದೇಶ ಇಲ್ಲವೇ ಗ್ರಹಿಕೆಯ ರಚನೆಗೆ ಸಂಬಂಧಿಸಿದ ಒಂದು ನಿರ್ಧಿಷ್ಟವಾದ ಹಾಗೂ ಏಕೈಕವಾದ ಇಲ್ಲವೇ ನಮ್ಮದೆಯಾದ ಒಂದು ನೋಟಕ್ರಮವನ್ನು ನಾವು ಹೊಂದಲಾರವು. ಏಕೆಂದರೆ, ಬಹುಜನರು ಬದುಕು ನಡೆಸುವ ಸನ್ನಿವೇಶದಲ್ಲಿ ಸಹಜವಾಗಿ ನೋಟಕ್ರಮಗಳು ಬಹುಸಂಕೀರ್ಣವಾದ ಲೋಕನೋಟಗಳಿಂದ ರೂಪುಗೊಂಡಿರುತ್ತವೆ. ಹಾಗಂತ ಅವುಗಳ ನಡುವೆ ಯಾವುದೇ ವ್ಯತ್ಯಾಸಗಳು ಇರಲಾರವು ಎಂದು ಮಾತ್ರ ಹೇಳಲು ಸಾಧ್ಯವಿಲ್ಲ.
ನುಡಿ ಬಳಕೆ ಸಾಮಾಜಿಕ ಬದುಕನ್ನು ಪಸರಿಸುವಂತೆ, ಆ ನುಡಿ ಬಳಸುವ ವಿಧಾನದಲ್ಲಿಯೇ ಈ ಸಾಮಾಜಿಕ ಬದುಕಿನ ವಿನ್ಯಾಸಗಳು ಕೂಡ ಅಂತಸ್ಥವಾಗಿರುತ್ತವೆ. ಬಹುತೇಕ ನುಡಿಯರಿಗರು ನುಡಿಯನ್ನು ಅದೊಂದು ಅಮೂರ್ತ ರಚನೆಯನ್ನಾಗಿ ಮಾತ್ರ ಪರಿಗಣಿಸಿರುತ್ತಾರೆ. ಅಂದರೆ ನುಡಿಯು ತನ್ನಷ್ಟಕ್ಕೆ ತಾನು ಸ್ವತಂತ್ರವಾಗಿ ನೆಲೆಗೊಂಡು ನಿರ್ಧಿಷ್ಟ ನುಡಿ ಬಳಕೆಯ ಸನ್ನಿವೇಶಗಳಿಗೆ ಮಾತ್ರ ಸೀಮಿತವಾಗಿರುತ್ತದೆ.
ಉದಾ.ಗೆ ಗಣಿತದ ಯಾವುದೇ ತಾರ್ಕಿಕ ರಚನೆಯು ನೇರವಾಗಿ ಸಮೂಹಗಳ ನಿರ್ಧಿಷ್ಟ ಸಮಸ್ಯೆಗಳಿಗೆ ಮಾತ್ರ ಅನ್ವಯವಾಗದೇ ಅದೊಂದು ಸ್ವತಂತ್ರ ಸೂತ್ರವಾಗಿ ರೂಪುಗೊಳ್ಳುತ್ತದೆ. ಆದರೆ ನುಡಿ ಬಳಕೆಯ ಒಂದೊಂದು ಅನುಭವ ಮತ್ತು ಪ್ರಯೋಗವು ಆಯಾ ನುಡಿ ಬಳಕೆಗೆ ಒಳಪಡುವ ವಲಯ ಹಾಗೂ ನಿಯೋಗಗಳಿಗೆ ಮಾತ್ರ ಸಂಬಂಧಿಸಿರುತ್ತವೆ.
ಹಾಗಾಗಿ ಪ್ರತಿಯೊಂದು ಸಂವಹನ ಕ್ರಿಯೆಯು ಕೂಡ ಒಂದೊಂದು ಸಾಮಾಜಿಕ ಸನ್ನಿವೇಶದಲ್ಲಿ ನೆಲೆಗೊಳ್ಳುತ್ತದೆ. ಹಾಗೂ ಭಾಷಿಕರು ಬಳಸು ಆಯಾ ಭಾಷಾ ರೂಪಗಳ ಮೇಲೆ ಈ ಸನ್ನಿವೇಶವು ತನ್ನ ಒತ್ತಾಯವನ್ನು ಹೇರುತ್ತದೆ. ಈ ಭಾಷಿಕರು ಸಾಮಾಜಿಕ ಸನ್ನಿವೇಶವನ್ನು ಹೇಗೆ ವ್ಯಾಖ್ಯಾನಿಸುತ್ತಾರೆ? ಇವರ ಗ್ರಹಿಕೆಗಳ ಬಗೆಗೆ ಬೇರೆಯವರಿಗೆ ಏನು ಗೊತ್ತಿರುತ್ತದೆ? ಅವರು ಹೇಗೆ ಇವುಗಳನ್ನು ಕುರಿತು ಯೋಚಿಸಬಲ್ಲರು? ಅವರು ಇವರ ಬಗೆಗೆ ಏನನ್ನು ಚಿಂತಿಸಬಲ್ಲರು ಮತ್ತು ನಂಬಬಲ್ಲರು? ಹಾಗೂ ತಮ್ಮ ಮತ್ತು ಬೇರೆಯವರ ಅಸ್ಮಿತೆಗಳ ಬಗೆಗೆ ಇವರು ಏನನ್ನು ಬಯಸುತ್ತಾರೆ ಎಂಬಿತ್ಯಾದಿ ಸಂಗತಿಗಳು, ಮಾತಿನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ರೂಪ ಮತ್ತು ಅರ್ಥಗಳ ಮೇಲೆ ಇವುಗಳು ಪರಿಣಾಮವನ್ನು ಬೀರುತ್ತವೆ.
ಆಯಾ ಸಾಮಾಜಿಕ ಮತ್ತು ಭಾಷಿಕ ಸನ್ನಿವೇಶಗಳನ್ನು ನೆಲೆಯಾಗಿಸಿಕೊಂಡು, ನೋಟಕ್ರಮಗಳ ತಿರುಳು (ಅರ್ಥ) ಪ್ರಸ್ತುತಗೊಳ್ಳುತ್ತದೆ. ಹಾಗೂ ಆಯಾ ಸನ್ನಿವೇಶಗಳಿಗೆ ಅನುಗುಣವಾಗಿ ನುಡಿಯಲ್ಲಿ ಮೈಪಡೆಯುವ ಈ ಎಲ್ಲ ನೋಟಕ್ರಮಗಳನ್ನು ವ್ಯಾಖ್ಯಾನಿಸಲಾಗುತ್ತದೆ.
ಅಂದರೆ ಹೇಳುಗ ಮತ್ತು ಕೇಳುಗರು ಜೊತೆಗೂಡಿ ತಾವು ಏನನ್ನು ಭಾವಿಸುತ್ತಾರೆ, ಏನನ್ನು ಗ್ರಹಿಸುತ್ತಾರೆ, ಏನನ್ನು ನೋಡುತ್ತಾರೆ ಹಾಗೂ ಸಂವಹನದ ಯಾವ ಹಂತವನ್ನು ಇವರು ತಲಪುತ್ತಾರೆ ಎಂಬೆಲ್ಲ ಸಂಗತಿಗಳು ಒಂದು ಪ್ರದೇಶದಲ್ಲಿ ಪ್ರಮುಖವಾಗುತ್ತವೆ. ಇಲ್ಲಿ, ಅಲ್ಲಿ, ಎಲ್ಲಿ, ಯಾವಾಗ, ಇದು, ಅದು ಮುಂತಾದ ಭಾಷಿಕ ಸೂಚಿಗಳು ಒಂದು ನಿರ್ಧಿಷ್ಟ ಕಾಲ ಮತ್ತು ದೇಶದ ವಿನ್ಯಾಸವನ್ನು ರೂಪಿಸುತ್ತವೆ.
ಮತ್ತು ಅಂತವೊಂದು ಸನ್ನಿವೇಶವನ್ನು ರೂಪಿಸುವ ಮುಕ್ತ ಅವಕಾಶವೂ ಈ ಭಾಷಿಕ ಸೂಚಿಗಳಲ್ಲಿ ಅಂತಸ್ಥವಾಗಿರುತ್ತದೆ. ಯಾವಾಗ ಹೇಳುಗ ಮತ್ತು ಕೇಳುಗರು ಒಂದು ದಿಟ ಪ್ರದೇಶವನ್ನು (ರಿಯಲ್ ಸ್ಪೇಸ್) ಪರಿಭಾವಿಸಲು, ಈಗ, ನಾಳೆ ಮತ್ತು ಕಳೆದ ವರುಷ ಮೊದಲಾದವುಗಳನ್ನು ಬಳಸುವುದನ್ನು ನೋಡಬಹುದು. ಉದಾ.ಗೆ ಬೇಂದ್ರೆಯವರ ಕವನವೊಂದರಲ್ಲಿ ಬಳಸಿರುವ ಇದಕ್ಕು, ಅದಕ್ಕು ಎದಕ್ಕು ಎಂಬೆಲ್ಲ ಸೂಚಕಗಳು ಕೇವಲ ಯಾವುದೇ ಒಂದು ಕಾಲ ಮತ್ತು ದೇಶಕ್ಕೆ ಮಾತ್ರ ಸೀಮಿತಗೊಂಡಿಲ್ಲ.
ಬದಲಾಗಿ ಆಯಾ ಕಾಲ ಮತ್ತು ದೇಶದ ಸನ್ನಿವೇಶಗಳಿಗೆ ಅನ್ವಯವಾಗುವ ಮುಕ್ತತೆ ಈ ಸೂಚಕಗಳಲ್ಲಿ ಇರುವುದನ್ನು ನೋಡಬಹುದು. ಹಾಗೂ ಪಂಪನ ಕಾವ್ಯದಲ್ಲಿ ಬಳಸಿರುವ ಎಷ್ಟೊಂದು ಅಭಿವ್ಯಕ್ತಿಗಳನ್ನು ನಮ್ಮ ಇವತ್ತಿನ ಸನ್ನಿವೇಶಕ್ಕೆ ಅನ್ವಯಿಸಿಕೊಂಡು ಮಾತ್ನಾಡುವಾಗ, ವ್ಯಕ್ತಿಗಳ ಹೆಸರುಗಳನ್ನು ಪರಿಗಣಿಸದೇ, ಆಯಾ ವ್ಯಕ್ತಿಗಳು ಪ್ರತಿನಿಧಿಸುವ ಸಾಮಾಜಿಕ ನೆಲೆ ಇಲ್ಲವೇ ಅಂತಸ್ತನ್ನು ಪರಿಗಣಿಸುತ್ತೇವೆ. ಯಾವುದೋ ಒಂದು ಕಾಲ್ಪನಿಕ ಪ್ರದೇಶದ (ಇಮ್ಯಾಜಿನ್ಡ್ ಸ್ಪೇಸ್) ಕಾಲ್ಪನಿಕ ನೆಲೆಯಿಂದ (ಇಮ್ಯಾಜಿನ್ಡ್ ಲೊಕೇಶನ್) ಬದುಕಿನ ನೋಟಗಳನ್ನು ಯಾವುದೇ ಒಬ್ಬ ಕಾಲ್ಪನಿಕ ಪಾಲುದಾರನಿಗೆ ಕಾಣಲು ಇಲ್ಲವೇ ತಲುಪಲು ಹೇಗೆ ಸಾಧ್ಯವಾಗುತ್ತದೆ.
ಅಂದರೆ ಹೇಳುಗ ಮತ್ತು ಕೇಳುಗ ಇವರಿಬ್ಬರೂ ಏನೆಲ್ಲವನ್ನೂ ಅರಿಯಲು, ಯೋಚಿಸಲು, ಗ್ರಹಿಸಲು ಹಾಗೂ ಪರಿಭಾವಿಸಲು ಸಾಧ್ಯವೋ, ಅದೆಲ್ಲವನ್ನೂ ಕಾಲ್ಪನಿಕವಾಗಿಯೇ ಪರಿಭಾವಿಸಲಾಗುತ್ತದೆ. ಏನೆಂದರೆ, ಮಾನಸಿಕ ನೆಲೆವೊಂದು (ಮೆಂಟಲ್ ಸ್ಪೇಸ್) ಏನೆಲ್ಲವನ್ನು ಒಳ್ಗೊಂಡಿರುತ್ತದೆ ಎನ್ನುವುದನ್ನು ಅರಿಯಲು ನಮಗೆಲ್ಲ ಸಾಧ್ಯವಾಗುವುದೇ ಮಾನಸಿಕವಾಗಿ ನೆಲೆಗೊಳ್ಳುವ ಇಂತಹ ಲೆಕ್ಕಾಚಾರಗಳಿಂದ ಮಾತ್ರ. ಹಾಗಾದರೆ, ಪ್ರತೀ ವ್ಯಕ್ತಿಯ ಮಾನಸಿಕ ನೆಲೆಯು ಪರಿಭಾವಿಸುವ ಯಾವುದೇ ವಿಚಾರ ಇಲ್ಲವೇ ನೋಟಕ್ರಮಗಳು, ಆಯಾ ವ್ಯಕ್ತಿಗೆ ಮಾತ್ರ ನಿರ್ಧಿಷ್ಟವಾಗಿರುತ್ತವೋ ಎಂಬ ಪ್ರಶ್ನೆಯೂ ಇಲ್ಲಿ ಎದುರಾಗುತ್ತದೆ.
ವಿಚಾರ ಇಲ್ಲವೇ ನೋಟಕ್ರಮಗಳು ವ್ಯಕ್ತಿ ವಿಶಷ್ಟತೆಯಿಂದ ಕೂಡಿರಲಾರವು. ಬದಲಾಗಿ ವ್ಯಕ್ತಿಗಳು ಈ ವಿಚಾರಗಳನ್ನು ಪರಿಭಾವಿಸುವ ಇಲ್ಲವೇ ನಿರ್ವಚಿಸುವ ವಿನ್ಯಾಸಗಳು ಮಾತ್ರ ಬೇರೆಯಾಗಿರುತ್ತವೆ. ಕಾಲ್ಪನಿಕ ಇಲ್ಲವೇ ದಿಟವಾದ ವ್ಯಕ್ತಿ, ಕಾಲ ಮತ್ತು ದೇಶಗಳನ್ನು ಪರಿಭಾವಿಸಲು ನಮಗೆ ಮುಖ್ಯವಾಗಿ ಡೈಯಕ್ಸಿಸ್‍ಗಳು (Deixis) ಒತ್ತಾಸೆಯಾಗಿರುತ್ತವೆ. ಡೈಯಕ್ಸಿಸ್‍ಗಳು ಮೂಲಕವೇ ನಾವು ಯಾವುದೇ ನುಡಿ ಪಠ್ಯಗಳಲ್ಲಿ ಸಂದರ್ಭಗಳನ್ನು ರೂಪಿಸಿಕೊಳ್ಳುತ್ತೇವೆ. ಈ ಸಂದರ್ಭಗಳೇ ನಮಗೆ ಕಾಲ, ದೇಶಗಳನ್ನು ಪರಿಭಾವಿಸಲು ಸೂಚಕಗಳಾಗಿರುತ್ತವೆ.
ಉದಾ.ಗೆ ನೀವು ದಯವಿಟ್ಟು ಇವತ್ತು ನಮ್ಮ ಮನೆಗೆ ಊಟಕ್ಕೆ ಬನ್ನಿ. ಈ ಉದಾಹರಣೆಯಲ್ಲಿರುವ ‘ನಮ್ಮ ಮನೆಗೆ’ ಎಂಬ ಉಲ್ಲೇಖವನ್ನು ಹೇಳುಗನು ಉಲ್ಲೇಖಿಸುವಾಗ, ಅವನು ಕಡ್ಡಾಯವಾಗಿ ತನ್ನ ಮನೆಯಲ್ಲಿಯೇ ಇರಬೇಕಾದ ಅಗತ್ಯವಿಲ್ಲ. ಮತ್ತು ಕೇಳುಗನಿಗೆ ಈ ಆಮಂತ್ರಣವನ್ನು ತನ್ನ ಮನೆಯಿಂದಲೇ ನೀಡುವ ಅಗತ್ಯವೂ ಕೂಡ ಇರುವುದಿಲ್ಲ. ಹಾಗೂ ಕೇಳುಗನು ಕೂಡ ಪ್ರತಿಯಾಗಿ, ಹ್ಞಾ! ಖಂಡಿತವಾಗಿ ನಾನು ನಿಮ್ಮ ಮನೆಗೆ ಊಟಕ್ಕೆ ಬರುತ್ತೇನೆ. ಎಂದು ಹೇಳುವಾಗಲೂ ಕೂಡ ಅವನು ಈ ಹೇಳುಗನ ಮನೆಗೆ ಬಂದು ಹೇಳುವ ಅವಶ್ಯಕತೆ ಇರವುದಿಲ್ಲ. ಅಂದರೆ ನುಡಿ ಸಾಮಗ್ರಿಗಳನ್ನು ಬಳಸುವಾಗ, ತಿರುಳುಗಳನ್ನು ಹೊರಡಿಸಲು ಬೇಕಾಗುವ ಅಂತರ್ಗತ ಸಾಮಗ್ರಿಗಳು ಅವುಗಳಲ್ಲಿ ಅಡಕವಾಗಿರುತ್ತವೆ.
ರಚನೆ ಹಾಗೂ ತಿರುಳು, ಈ ಎರಡೂ ನೆಲೆಗಳಿಂದಲೂ ನುಡಿ/ಮಾತು ಸಂದರ್ಭ ಮುಕ್ತವಾಗಿರುತ್ತದೆ. ಈ ಸಂದರ್ಭ ಮುಕ್ತತೆ ಕಾಲ-ದೇಶ-ವ್ಯಕ್ತಿಗಳನ್ನು ಮೀರಿ ನಿಲ್ಲುತ್ತದೆ. ಉದಾ.ಗೆ ಕುವೆಂಪು ಅವರು ತಮ್ಮ ಶ್ರೀ ರಾಮಯಣ ದರ್ಶನಂ, ಕೃತಿಯಲ್ಲಿ ಊರ್ಮಿಳೆಯಿಂದ, “ಕಡಲ್ಗಿದಿರ್ ಪನಿಗೇಂ ಪ್ರದರ್ಶನಂ” ಎಂಬ ಮಾತನ್ನು ಆಡಿಸುತ್ತಾರೆ. ಗಂಡನಿಗಾಗಿ ತಾನು ತಪಸ್ವಿನಿಯಂತೆ ಬದುಕಿದ್ದು ಪ್ರದರ್ಶನಕ್ಕಲ್ಲ ಎನ್ನುವ ಊರ್ಮಿಳೆಯ ಈ ಮಾತು ಸಾಂದರ್ಭಿಕವಾಗಿದ್ದರೂ, ಇದು ಸಂದರ್ಭ ಮುಕ್ತತೆಯನ್ನೂ ಪಡೆದಿರುತ್ತದೆ ಎಂಬುದು ಮಾತ್ರ ದಿಟ. ಯಾವುದೇ ಗುರಿರಹಿತ ಬದುಕಿನ ಯಾವುದೇ ಒಂದು ಕ್ರಿಯೆಯ ತಾತ್ಪರ್ಯವನ್ನು ಸೂಚಿಸಲು ಈ ಮಾತನ್ನು ಬಳಸಲು ಸಾಧ್ಯವಿದೆ.
ಕೇವಲ ಆಡಂಬರಕ್ಕಾಗಿ ಇಲ್ಲವೇ ಪ್ರದರ್ಶನಕ್ಕಾಗಿ ನಡೆಯುವ ಕ್ರಿಯೆಗಳನ್ನು ಟೀಕಿಸಲೂ ಕೂಡ ಈ ಮಾತನ್ನು ಬಳಸಬಹುದಾಗಿದೆ. ಪ್ರಾಥಮಿಕವಾಗಿ ನುಡಿಯೊಂದು ರಾಚನಿಕ ವ್ಯವಸ್ಥೆಯಾಗಿದ್ದರೂ ಕೂಡ, ಅದಕ್ಕೊಂದು ಅನಕೂಲಾತ್ಮಕ ನೆಲೆ ಇದ್ದೇ ಇರುತ್ತದೆ. ನುಡಿಯೊಂದಕ್ಕೆ ಈ ನೆಲೆಯೂ ಅತ್ಯಂತ ಮಹತ್ವದ ಸಂಗತಿಯಾಗಿರುತ್ತದೆ. ಅಂದರೆ, ಉಲಿ (ಧ್ವನಿ) ಮತ್ತು ತಿರುಳುಗಳ (ಅರ್ಥ) ನಡುವೆ ಯಾವುದೇ ಬಗೆಯ ತಾರ್ಕಿಕ ನಂಟಸ್ತಿಕೆ ಇರುವುದಿಲ್ಲ. ಉದಾ.ಗೆ ‘ಮರ’ ಎಂಬ ಪದದ ಉಲಿಗಳ ಮೊತ್ತಕ್ಕೂ ಅದು ನಿರೂಪಿಸುವ ತಿರುಳಿಗೂ ಯವುದೇ ಬಗೆಯ ನಂಟಿರುವುದಿಲ್ಲ. ಪ್ರತೀ ನುಡಿಯೊಳಗೆಯೇ ನಡೆಯುವ ಇಂತಹವೊಂದು ಹೊಂದಾಣಿಕೆಯ ನೆಲೆಯನ್ನೇ ನಾವು ಇಲ್ಲಿ ಅನಕೂಲಾತ್ಮಕವೆಂದು ಬಣ್ಣಿಸುತ್ತೇವೆ.
ನುಡಿ ತನ್ನಲ್ಲಿರುವ ಈ ಅನಕೂಲಾತ್ಮಕ ರಾಚನಿಕ ಸಾಮಗ್ರಿಗಳನ್ನು ಉಪಯೋಗಿಸಿಕೊಂಡೇ ಆಯಾ ಕಾಲ, ದೇಶ ಹಾಗೂ ವ್ಯಕ್ತಿಗಳಿಗೆ ಪೂರಕವಾಗುವ ಇಲ್ಲವೇ ಅಗತ್ಯವಾಗುವ ಸಂಕಥನಗಳನ್ನು ಕಟ್ಟುತ್ತಿರುತ್ತದೆ. ‘ಈ ಸಂಕಥನಗಳ ನಿರೂಪಣೆಯ ನುಡಿಯು ಕೂಡ ಕಣ್ಣಿನ ಓದಿಗೆ ಅನಕೂಲವಾಗುವಂತೆ ಇರುವ ಬದಲಾಗಿ ಕಿವಿಯ ಓದಿಗೆ ತಕ್ಕಂತೆ ಇರುತ್ತದೆ.
ಕಣ್ಣಿಗೆ ಕಾಣುವಂತೆ ಹೇಳುವುದಕ್ಕಿಂತ ಕಣ್ಣಿಗೆ ಕಟ್ಟುವಂತೆ ಹೇಳುವುದು ಈ ಸಂಕಥನಗಳ ದಾಟಿಯಾಗಿರುತ್ತದೆ’ (ಕೆವಿಎನ್:2010). ಮಾತು ಮತ್ತು ಮಾತಿನ ಮೂಲಕ ದೊರೆಯುವ ಒಂದೊಂದು ತಿರುಳು, ತಿಳಿವು ಹಾಗೂ ಹೊಳವುಗಳೆಲ್ಲವೂ ಅನುಭವದ ನೆಲೆಯನ್ನು ಪಡೆಯುತ್ತವೆ. ಮಾತು ಅನುಭವದ ಆಯಾಮವನ್ನು ಪಡೆದಕೂಡಲೇ, ಅದಕ್ಕೊಂದು ಸಂದರ್ಭ ಮುಕ್ತತೆಯು ಪ್ರಾಪ್ತವಾಗುತ್ತದೆ. ಇಂತಹ ವಿನ್ಯಾಸಗಳ ಕಾರಣವಾಗಿಯೇ ಮಾತು, ವ್ಯಕ್ತಿ, ಕಾಲ ಹಾಗೂ ದೇಶಗಳ ನಡುವೆ ವಿಭಜನೆಯೂ ಏರ್ಪಡುತ್ತದೆ ಎನ್ನುವುದು ಅತ್ಯಂತ ಮಹತ್ವದ ವಿದ್ಯಮಾನವಾಗಿದೆ.
ಆದರೆ ಸಾಮಾಜಿಕ ವಾಸ್ತವಗಳ ಮೂಲನೆಲೆಗಳು ಮೈಪಡೆಯುವುದು ಅಯಾ ನುಡಿಯಿಗರು (ಭಾಷಿಕರು) ತಾವಾಡುವ ನುಡಿಯ ತಿಳಿವಿನ ಮೂಲಕವೇ ಎಂಬುದು ಗಮನಾರ್ಹ. ಈ ವಿನ್ಯಾಸವು ಅತ್ಯಂತ ವ್ಯಾಪಕವಾಗಿರುತ್ತದೆ. ಮಾನಸಿಕ ಜಗತ್ತು ಮತ್ತು ಭೌತಿಕ ಜಗತ್ತಿನಲ್ಲಿರುವ ವಸ್ತುಗಳ-ವಿದ್ಯಮಾನಗಳ ತಿಳಿವನ್ನು ಈ ವಿನ್ಯಾಸವು ಒಳ್ಗೊಂಡಿರುತ್ತದೆ. ಈ ತಿಳಿವಿಗೆ ಎರಡು ಆಯಾಮಗಳು ಇರುತ್ತವೆ.
ಅಂದರೆ ಆಯಾ ತಿಳಿವು ಏನನ್ನು (ನಾಲೇಡ್ಜ್ ವ್ಹಾಟ್) ಸೂಚಿಸುತ್ತದೆ. ಹಾಗೂ ಆಯಾ ತಿಳಿವು ಹೇಗೆ (ನಾಲೇಡ್ಜ್ ಹೌ) ಸಮೂಹಗಳ ಒಡಲಲ್ಲಿ ನೆಲೆಗೊಳ್ಳುತ್ತದೆ ಎಂಬುದಾಗಿವೆ. ಆದರೆ ಈ ಎರಡೂ ತಿಳಿವಿನ ಆಯಾಮಗಳಲ್ಲಿ ಹಲವು ಬಗೆಯ ಸಾಮನ್ಯೀಕರಣದ (ಜನರ್ಯಾಲಿಟಿ) ನೆಲೆಗಳು ಹುದುಗಿರುತ್ತವೆ. ಹಾಗಾಗಿ ಒಂದೊಂದು ಪರಿಕಲ್ಪನಾತ್ಮಕ ತಿಳಿವು ಹಲವು ಆಯಾಮಗಳಿಂದ ಕೂಡಿರುತ್ತದೆ.
ಹಾಗೂ ಇಡಿತನದ ಮಾದರಿಗಳನ್ನು ಈ ಆಯಾಮಗಳು ನಿರಂತರವಾಗಿ ರೂಪಿಸುತ್ತವೆ. ಅಂದರೆ ಹಲವು ವಿಭಿನ್ನ ವಸ್ತುಗಳು ಹಾಗೂ ವಿದ್ಯಮಾನಗಳ ನಡುವಣ ಅಂತರ್ಸಂಬಂಧವನ್ನು ಗುರುತಿಸುವುದಾಗಿದೆ. ನುಡಿಯ ಮೂಲಕ ಮೈಪಡೆಯುವ ಪ್ರತಿಯೊಂದು ತಿಳಿವಿನ ಅವಿಭಾಜ್ಯ ಅಂಗವಾಗಿ ಇಂತಹ ಅಂತರ್ಸಂಬಂಧವು ನೆಲೆಗೊಳ್ಳುತ್ತದೆ.
ನುಡಿ ಸಾಮಗ್ರಿಗಳು ಕೇವಲ ಇಡಿತನವನ್ನು ಮಾತ್ರ ರೂಪಿಸದೇ ಬಿಡಿತನದ ಮೂಲಕ ಸಾಮಾಜಿಕ ಹಾಗೂ ಮಾನಸಿಕ ಪ್ರತ್ಯೇಕತೆಯನ್ನೂ ಸಂಘಟಿಸುತ್ತವೆ. ಅಸ್ಪೃಶ್ಯತೆಯಂತಹ ಅನುಭವವು ಶತಮಾನಗಳಿಂದ ಆಚರಣೆಯಲ್ಲಿದೆ. ಆದರೆ ಈ ಆಚರಣೆಯ ಸಾಮಾಜಿಕ ವಿನ್ಯಾಸದಲ್ಲಿ ಮಾತ್ರ ಬದಲಾವಣೆಯನ್ನು ಕಾಣಲು ಸಾಧ್ಯವೇ ಹೊರತು ಮಾನಸಿಕ ವಿನ್ಯಾಸದಲ್ಲಿ ಯಾವುದೇ ಬಗೆಯ ಪಲ್ಲಟವು ಇದುವರೆಗೂ ಏರ್ಪಟ್ಟಿರುವುದನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ.
ತಿರುಳಿನ ಇಲ್ಲವೇ ತಿಳಿವಿನ ಇಡಿತನದ ಸ್ವರೂಪದಲ್ಲಿಯೇ ಸಾಮಾಜಿಕ ಮತ್ತು ಮಾನಸಿಕ ಪ್ರತ್ಯೇಕತೆಯ ಚಹರೆಗಳು ಬಿಂಬಿತವಾಗುತ್ತವೆ. ತಿರುಳಿನ ಇಡಿತನದಲ್ಲಿರುವ ಅಂತರ್ಸಂಬಂಧದ ಆಯಾಮಗಳು ಇಂತಹ ಪ್ರತ್ಯೇಕತೆಯ ಕಾರಣದಿಂದ ಬಿಡಿಬಿಡಿಯಾಗಿ ನೆಲೆಗೊಳ್ಳುತ್ತವೆ. ಅಂದರೆ ಅಭಾದಿತ ಅನುಭವವು ಸಾಮಾಜಿಕ ಹಾಗೂ ಮಾನಸಿಕ ಇಡಿತವನ್ನಷ್ಟೆಯಲ್ಲದೇ ತಿರುಳಿನ ಐಕ್ಯತೆಯನ್ನೂ ಸೂಚಿಸುತ್ತದೆ.
ಆದರೆ ಸಮೂಹಗಳನ್ನು ಭಾದಿಸುವ ಯಾವುದೇ ಬಗೆಯ ಅನುಭವವೊಂದು ಐಕ್ಯತೆಯ ಸೂಚಕವಾಗಿರಲು ಸಾಧ್ಯವಿಲ್ಲ. ಈ ನಿಲುವು ಅತ್ಯಂತ ನಿಚ್ಚಳವಾಗಿ ನುಡಿ ಸಾಮಗ್ರಿಗಳ ಮೂಲಕ ಪ್ರಕಟವಾಗುತ್ತದೆ. ಅಂದರೆ ಮಾತಿನಲ್ಲಿ ಸಾಮಾಜಿಕ–ಮಾನಸಿಕ ಬಿರುಕುಗಳು ತಾವಾಗಿಯೇ ಏರ್ಪಡಲಾರವು ಎಂಬುದನ್ನು ಈ ಬಿಡಿತನದ ಆಯಾಮವು ಸೂಚಿಸುತ್ತದೆ. ಹಾಗಾಗಿ ಜಾತಿ ಮತ್ತು ಅಸ್ಪೃಶ್ಯತೆಯಂತಹ ಅನುಭವಗಳು ಇವತ್ತಿಗೂ ಸಹ ಪ್ರತ್ಯೇಕತೆಯ ಸೂಚಕಗಳಾಗಿ ನೆಲೆನಿಂತಿವೆ. ಪ್ರಜಾಸತ್ತಾತ್ಮಕ ನಿಲುವುಗಳು ಮಾತಿನ ಅವಿಭಾಜ್ಯ ಅಂಗವಾಗದೇ ಕೇವಲ ಉಲಿ ಮತ್ತು ತಿರುಳಿನ ನಡುವಣ ಸೂಚಿತ ಹಾಗೂ ಸೂಚಕ ನಂಟನ್ನು ವಿವರಿಸುವುದಕಷ್ಟೆ ಸೀಮಿತವಾಗಿವೆ.
ಇಂತಹ ಪ್ರತ್ಯೇಕತೆಯ ಕಾರಣಕ್ಕಾಗಿಯೇ ನುಡಿಯು ಎಲ್ಲ ಕಾಲದಲ್ಲಿಯೂ ಅತ್ಯಂತ ಪ್ರಬಲವಾದ ಅಸ್ಮಿತೆಯ ಸೂಚಕವಾಗಿ ನೆಲೆನಿಂತಿದೆ. ನುಡಿಯ ಮೂಲಕ ರೂಪುಗೊಳ್ಳುವ ಈ ಅಸ್ಮಿತೆಯೂ ಧರ್ಮದ ಮೂಲಕ ಪಡೆಯುವ ಅಸ್ಮಿತೆಗಿಂತಲೂ ಅತ್ಯಂತ ಪ್ರಬಲವಾಗಿರುತ್ತದೆ ಎಂಬುದು ಗಮನಾರ್ಹ. ಧರ್ಮವೂ ಕೂಡ ಸಮೂಹಗಳಲ್ಲಿ ಪ್ರತ್ಯೇಕತೆಯನ್ನು ಉಂಟುಮಾಡುವ ಬಹು ದೊಡ್ಡ ಅಸ್ತ್ರವಾಗಿದೆ ಎಂಬುದನ್ನೂ ಇಲ್ಲಿ ಯಾರು ಮರೆಯುವಂತಿಲ್ಲ.
ನುಡಿಯ ಸಂಘಟಿತ ಹಂತದಲ್ಲಿಯೇ ಪರಿಕಲ್ಪನಾತ್ಮಕತೆಯ ನೆಲೆಗಳು ಪರಸ್ಪರ ಸಂಬಂಧಿತ ಪರಿಕಲ್ಪನೆಗಳನ್ನು ಒಳಗೊಳ್ಳಬೇಕಾಗುತ್ತದೆ. ಆದರೆ ಇದೇ ಹಂತದಲ್ಲಿ ಮಾನಸಿಕ-ಸಾಮಾಜಿಕ ಬಿಡಿತನದದ ಇಲ್ಲವೇ ಪ್ರತ್ಯೇಕತೆಯ ಆಯಾಮಗಳು ಕೂಡ ಏರ್ಪಡುತ್ತವೆ. ಅಂದರೆ ಪರಸ್ಪರ ಸಂಬಂಧಿತ ಪರಿಕಲ್ಪನೆಗಳಲ್ಲಿ ಅಡಕವಾಗಿರುವ ಸಂಕೀರ್ಣತೆಯನ್ನು ಗ್ರಹಿಸುವ ಮೂಲಕ ಈ ಬಿಡಿತನದ ವಿನ್ಯಾಸಗಳನ್ನು ಅರಿಯುವ ಅಗತ್ಯವಿರುತ್ತದೆ.
ಏಕೆಂದರೆ ಮಾಹಿತಿಯೊಂದಕ್ಕಿಂತ ಹೆಚ್ಚು ಸಂಕೀರ್ಣವಾಗಿರುವ ವಸ್ತುಸ್ಥಿತಿಯೊಂದು ನುಡಿಯ ಅಭಿವ್ಯಕ್ತಿಗಳ ಮೂಲಕ ಸಹಜವಾಗಿ ಪ್ರತಿನಿಧಿಕರಣಗೊಳ್ಳುತ್ತದೆ. ಈ ಅಭಿವ್ಯಕ್ತಿಗಳನ್ನು ಅರ್ಥೈಸಿಕೊಳ್ಳುವುದೆಂದರೆ, ಆಯಾ ಮಾತುಗಳಲ್ಲಿ ಅತ್ಯಂತ ವ್ಯಾಪಕವಾಗಿ ಅಂತಸ್ಥವಾಗಿರುವ ಮಾಹಿತಿಗಳನ್ನು ಮಾತ್ರ ಅರಿಯುವುದಲ್ಲ. ಬದಲಾಗಿ ಅವುಗಳು ಸೂಚಿಸುವ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಮಾನಸಿಕ ವಿನ್ಯಾಸಗಳನ್ನೂ ತಿಳಿಯುವುದಾಗಿದೆ.
ಹಾಗಾಗಿ ಅಭಿವ್ಯಕ್ತಿಯೊಂದು ರೂಪುಗೊಳ್ಳುವುದೆಂದರೆ, ವಿಸ್ತಾರವದ ಮಾಹಿತಿಯೊಂದನ್ನು ಅಮೂರ್ತಗೊಳಿಸಿ ನೋಡುವ ಬಗೆಯಾಗಿರುತ್ತದೆ. ಹೀಗೆ ಒಂದು ವ್ಯವಸ್ಥಿತವಾದ ವಿಸ್ತಾರದಲ್ಲಿ ಹರಡಿಕೊಂಡಿರುವ ಒಟ್ಟು ನುಡಿಮೊತ್ತವೇ ಹಾಗೂ ಆಯಾ ಸನ್ನಿವೇಶಕ್ಕೆ ಅಗತ್ಯವಿರುವ ಮಾಹಿತಿಗಳ ಸಂಚಯವೇ ಸಂಕಥನಗಳಾಗಿ ರೂಪುಗೊಳ್ಳುತ್ತವೆ. ಇಂತಹ ಸಂಕಥನಗಳು ಬಹುತೇಕವಾಗಿ ಪ್ರತಿನಿಧಿಕರಣದ ಮಾದರಿಗಳಾಗಿ ರೂಢಿಯಲ್ಲಿರುತ್ತವೆ.
ಯಾವುದೇ ತಿಳುವಿನ ನಿರ್ವಚನೆಯ ವಿನ್ಯಾಸಗಳು ಕೂಡ ಇಂತಹ ಸಂಕಥನಗಳ ಸನ್ನಿವೇಶಗಳಲ್ಲಿಯೇ ಬೇರೂರಿತ್ತವೆ. ಹಾಗಾಗಿ ಕಾಲ, ದೇಶ ಮತ್ತು ವ್ಯಕ್ತಿಗಳಿಗೆ ಅನುಗುಣವಾದ ಸಂಕಥನಗಳು-ಸನ್ನಿವೇಶಗಳು ನಿರಂತರವಾಗಿ ವಿಕಾಸಗೊಳ್ಳುತ್ತವೆ. ಪರಿಣಾಮವಾಗಿ ಮಾತು ಮತ್ತು ಈ ಎಲ್ಲ ಸಂಕಥನ-ಸನ್ನಿವೇಶಗಳ ನಡುವೆ ಸಹಜವಾಗಿ ವಿಭಜನೆಗಳು ಕೂಡ ಏರ್ಪಡುತ್ತವೆ. ಆದ್ದರಿಂದ ಪ್ರಾದೇಶಿಕ (ಸ್ಪೇಶಿಯಲ್) ಕೇಂದ್ರಿತ ನೋಟಕ್ರಮಗಳು, ಪರಿಕಲ್ಪನಾತ್ಮಕ ಕೇಂದ್ರಿತ ನೋಟಕ್ರಮಗಳಕ್ಕಿಂತ ಭಿನ್ನವಾಗಿರುತ್ತವೆ.
ಏಕೆಂದರೆ, ಕೇಳುಗನ ತಿಳಿವು, ನಂಬಿಕೆ, ಭಾವನೆಗಳು, ಪ್ರೇರಣೆಗಳು ಮೊದಲಾದ ಸಂಗತಿಗಳನ್ನು ಪರಿಗಣನೆಗೆ ತೆಗೆದುಕೊಂಡು, ಹೇಳುಗನು ತನ್ನ ಸಂದೇಶಗಳನ್ನು ರೂಪಿಸುತ್ತಾನೆ. ಈ ಪ್ರಕ್ರಿಯೆಯೂ ಕಾಲ, ದೇಶ ಹಾಗೂ ವ್ಯಕ್ತಿಗಳ ನೆಲೆಯಲ್ಲಿ ನಿರಂತರವಾಗಿ ನಡೆಯುತ್ತದೆ. ಇಲ್ಲಿ ಕಾಲಿಕ (ಟೆಂಪೊರಲ್) ವಿನ್ಯಾಸಗಳು ಮಹತ್ವವನ್ನು ಪಡೆದುಕೊಳ್ಳುವುದು ಕೂಡ ಇದೇ ಕಾರಣಗಳಿಂದ.
ಅದಕ್ಕಾಗಿ ಡೆರಿಡಾ ಹೇಳುವ ಸೂಚಕ-ಸೂಚಿತಗಳ ನಡುವಣ ಅಪರಿಮಿತವಾದ ಅರ್ಥದ ನಂಟಸ್ತಿಕೆಯನ್ನು ಗುರುತಿಸಲೂ ಕೂಡ ಈ ಕಾಲ-ದೇಶ ಹಾಗೂ ವ್ಯಕ್ತಿಗಳಿಗೆ ಸಂಬಂಧಿಸಿದ ವಿನ್ಯಾಸಗಳೇ ಕಾರಣವಾಗುತ್ತವೆ. ಅಂದರೆ, ಅರ್ಥದಲ್ಲಿ ಉಂಟಾಗುವ ಭೇದಗಳಿಗೆ ಪ್ರಾದೇಶಿಕತೆ (ಸ್ಪೇಶಿಯಲ್) ಕಾರಣವಾದರೆ, ಅರ್ಥಗಳ ಪಲ್ಲಟ ಇಲ್ಲವೇ ಮುಂದೂಡಿಕೆಗೆ ಕಾಲಿಕ (ಟೆಂಪೊರಲ್) ವಿನ್ಯಾಸಗಳು ಕಾರಣವಾಗುತ್ತವೆ ಎಂಬ ಹೊಳವು ಡೆರಿಡಾನ ಚಿಂತನೆಗಳಲ್ಲಿ ಎದ್ದು ಕಾಣುತ್ತದೆ.
ಒಟ್ಟಿನಲ್ಲಿ ಮಾತು ಮತ್ತು ಕಾಲ, ದೇಶ ಹಾಗೂ ವ್ಯಕ್ತಿಗಳ ನಡುವಣ ವಿಭಜನೆಗೆ ಏನೆಲ್ಲ ಸಂಗತಿಗಳು ಕಾರಣವಾಗುತ್ತವೆ. ಈ ಸಂಗತಿಗಳಿಗೆ ನುಡಿ ಮತ್ತು ನುಡಿ ಸಾಮಗ್ರಿಗಳು ಮಾತ್ರ ಕಾರಣವಲ್ಲ. ಬದಲಾಗಿ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಮಾನಸಿಕ ವ್ಯಾಪಾರಗಳೂ ಕೂಡ ಕಾರಣವಾಗುತ್ತವೆ ಎನ್ನುವ ದಿಟವನ್ನು ಇಲ್ಲಿ ಅರಿಯಬಹುದಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243